ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬದಲಾವಣೆ ತರುವ ವ್ಯಕ್ತಿ ಆಯ್ಕೆ ಮಾಡಿ: ರಾಧಾಕೃಷ್ಣ

Srinivasa Murthy VN
Updated On : 28 Mar 2014, 11:06 am

ಹುಬ್ಬಳ್ಳಿ: ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಜನರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಜನಾಂದೋಲನದಲ್ಲಿರುವ ವ್ಯಕ್ತಿಗಳನ್ನು ಆಯ್ಕೆ ಮಾಡುವಂತಹ ಮನೋಭಾವನೆ ಮತದಾರರಲ್ಲಿ ಬೆಳೆಯಬೇಕಿದೆ ಎಂದು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಫಾರ್ ಇಂಡಿಯಾದ  ರಾಜ್ಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಇಂದು ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬೆಲೆ ಏರಿಕೆ, ನಿರುದ್ಯೋಗ, ಆದಾಯ ಕುಸಿತ, ಗುತ್ತಿಗೆ ಕಾರ್ಮಿಕ ಪದ್ಧತಿ, ನಗರಗಳತ್ತ ವಲಸೆ ಪ್ರಕ್ರಿಯೆಯಂತಹ ಅನೇಕ ಸಮಸ್ಯೆಗಳಿದ್ದರೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿಲ್ಲ.  ಈ ಎಲ್ಲ ಸಮಸ್ಯೆಗಳಿಗೆ ಮೂಲ ಬಂಡವಾಳಶಾಹಿ ವ್ಯವಸ್ಥೆ ದೇಶದಲ್ಲಿ ಕೆಲವೇ ವ್ಯಕ್ತಿಗಳು ಅಗರ್ಭ ಶ್ರೀಮಂತರಾಗಿದ್ದರೆ, ಇನ್ನುಳಿದ ಬಹುಪಾಲು ಜನಸಂಖ್ಯೆ ನಿತ್ಯ ಜೀವನಕ್ಕೂ ಪರದಾಡುವಂತಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಹುಪಾಲು ಜನರನ್ನು ಬಡತನಕ್ಕೆ ತಳ್ಳುತ್ತಿರುವ ಬಂಡವಾಳಶಾಹಿ ವ್ಯವಸ್ಥೆ ಮುಂದುವರಿಯಬೇಕೊ ಬೇಡವೋ ಎನ್ನುವುದನ್ನು ಮತದಾರರು ತೀರ್ಮಾನಿಸಬೇಕಿದೆ. ಬಂಡವಾಳ ಶಾಹಿ ವಿರುದ್ಧ ಹೋರಾಟ ಮಾಡುತ್ತಿರುವ ಎಸ್‌ಯುಸಿಐ ಒಟ್ಟಾರೆ ದೇಶದ 83 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ರಾಜ್ಯದ ಧಾರವಾಡ, ಗುಲ್ಬರ್ಗ, ಬೆಂಗಳೂರು ದಕ್ಷಿಣ, ರಾಯಚೂರು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ ಎಂದು ಹೇಳಿದರು.
ಅಭಿವೃದ್ಧಿ ಎಂದು ಪ್ರಚಾರಕ್ಕೆ ಇಳಿದಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಗುಜರಾತ್‌ನಲ್ಲಿ ಅಭಿವೃದ್ಧಿ ಇಲ್ಲ. ಕಾರ್ಪೋರೇಟ್ ಜಗತ್ತಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿದ್ದಾರೆಯೇ ವಿನಃ ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಮಹಾರಾಷ್ಟ್ರ, ಬಿಹಾರ ಮತ್ತು ಕೇರಳ ರಾಜ್ಯಗಳು ಗುಜರಾತ್‌ಗಿಂತ ಎಷ್ಟೋ ಪಾಲು ಮುಂದೆ ಇವೆ ಎಂದು ತಿಳಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಅಭ್ಯರ್ಥಿ ಗಂಗಾಧರ ಬಡಿಗೇರ, ಸ್ಥಳೀಯ ಸಮಸ್ಯೆಗಳನ್ನು ಇರಿಸಿಕೊಂಡು ಎಸ್‌ಯುಸಿಐ ಅನೇಕ ಹೋರಾಟಗಳನ್ನು ಮಾಡಿದೆ. ಹುಬ್ಬಳ್ಳಿ ನಗರದಲ್ಲಿ ಕೊಳಚೆ ನಿವಾಸಿಗಳ ಸ್ಥಳಾಂತರ ವಿರುದ್ಧ, ಹಳೇ ವಿದ್ಯಾರ್ಥಿಗಳ ನಿಧಿ ಹೆಸರಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸಂಗ್ರಹಣೆ ವಿರುದ್ಧ ಹೋರಾಟ ಮಾಡಿ ನಿಧಿ ಸಂಗ್ರಹಣೆ ತಡೆ ಹಿಡಿಯುವಂತೆ ಮಾಡಿದ್ದೇವೆ. ನಿರಂತರ ನೀರು ಪೂರೈಕೆ ಹೆಸರಿನಲ್ಲಿ ನಡೆದ ಖಾಸಗೀಕರಣ ವಿರುದ್ಧ ಎಸ್‌ಯುಸಿಐ ಹೋರಾಟ ಕೈಗೆತ್ತಿಕೊಂಡ ಪರಿಣಾಮ, ಖಾಸಗೀಕರಣಗೊಳ್ಳುತ್ತಿದ್ದ ನಿರಂತರ ನೀರು ಪೂರೈಕೆ ಯೋಜನೆ ಸ್ಥಗಿತಗೊಂಡಿದೆ ಎಂದರು.
ರಾಮಂಜನಪ್ಪ ಅಲ್ದಳ್ಳಿ, ಎಚ್.ಜಿ. ದೇಸಾಯಿ ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement