ಪರಿಷತ್ ಚುನಾವಣೆ ಸವಾಲಾಗಿ ಸ್ವೀಕರಿಸಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 24
ವಿಧಾನಪರಿಷತ್ಗೆ ನಾಲ್ಕು ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬೇಕಾದ ಸಹಾಯವನ್ನು ಮತ್ತಷ್ಟು ಹಕ್ಕಿನಿಂದ ಕೇಳಬಹುದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಅಂಗವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಪದಾಧಿಕಾರಿಗಳ ಮತ್ತು ಪ್ರಮುಖರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಜಯದಿಂದಾಗಿ ವಿಧಾನಪರಿಷತ್ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು. ಲೋಕಸಭೆ ಚುನಾವಣೆಯಂತೆಯೇ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಶ್ರಮಿಸಬೇಕು. ಈ ಚುನಾವಣೆಯನ್ನೂ ಸವಾಲಾಗಿ ಸ್ವೀಕರಿಸಬೇಕು ಎಂದರು.
ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಒಳಜಗಳದಲ್ಲಿಯೇ ತಲ್ಲೀನವಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಗದಂತಾಗಿದೆ. ಜೆಡಿಎಸ್ ಪರಿಸ್ಥಿತಿ ಲೆಕ್ಕಕ್ಕೆ ಇಲ್ಲದಂತಾಗಿದೆ. ಕಳೆದ ಒಂದು ವರ್ಷದ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು. ಆದರೆ, ನರೇಂದ್ರ ಮೋದಿ ಅವರ ಸಾಧನೆಯ ಮಾಹಿತಿಯನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸಿದ ಪರಿಣಾಮ ಮತ್ತು ಬಿಜೆಪಿಯ ಒಗ್ಗಟ್ಟಿನ ಶ್ರಮದಿಂದ ರಾಜ್ಯದಲ್ಲಿ ಬಿಜೆಪಿ ಮತ್ತೆ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಯಿತು ಎಂದು ತಿಳಿಸಿದರು.
ಇದಕ್ಕೂ ಮೊದಲು ಸಭೆ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಯಾವುದೇ ಚುನಾವಣೆ ಇರಲಿ ಗಂಭೀರವಾಗಿ ಪರಿಗಣಿಸುವ ಮೂಲಕ ಗೆಲವಿಗೆ ಪರಿಶ್ರಮಿಸಬೇಕು ಎಂದರು.
ರಾಜಿನಾಮೆ ನೀಡಲಿ: ಲೋಕಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ವಂತ ಜಿಲ್ಲೆ ಮೈಸೂರಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಮೋದಿ ಅಲೆ ಕರ್ನಾಟಕದಲ್ಲಿ ನಡೆಯುವುದಿಲ್ಲವೆಂದು ವ್ಯಂಗ್ಯವಾಡಿದ್ದ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಚುನಾವಣೆ ಫಲಿತಾಂಶ ತಕ್ಕ ಉತ್ತರ ನೀಡಿದೆ ಎಂದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸಂಪೂರ್ಣ ವೈಫಲ್ಯವಾಗಿರುವುದರಿಂದ ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಪಾಠ ಕಲಿತುಕೊಳ್ಳಬೇಕಿದೆ ಎಂದರು.
ಜನರು ಅತಿ ನಿರೀಕ್ಷೆಯನ್ನಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದು, ಜನರ ಆಶೋತ್ತರಗಳಂತೆ ನಡೆದುಕೊಳ್ಳಬೇಕಿದೆ ಎಂದ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆ ಅಂತರದಲ್ಲಿ ಗೆಲ್ಲುವಂತಾಗಲಿ ಎಂದರು.
ಪಶ್ಚಿಮ ಪದವೀಧರರ ಕೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಮಾತನಾಡಿ, ಚುನಾವಣೆ ಪ್ರಚಾರಕ್ಕೆ ಸಾಕಷ್ಟು ಸಮಯದ ಅಭಾವ ಇದೆ. ಆದಕಾರಣ ಪ್ರತಿಯೊಬ್ಬ ಕಾರ್ಯಕರ್ತ ತಾನೇ ಅಭ್ಯರ್ಥಿಯೆಂದು ಭಾವಿಸಿ ಪ್ರಚಾರ ನಡೆಸಬೇಕು ಎಂದು ಮನವಿ ಮಾಡಿದರು.
ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಅರವಿಂದ ಬೆಲ್ಲದ, ಸೋಮಣ್ಣ ಬೇವಿನಮರದ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಶಂಕರ ಪಾಟೀಲ ಮುನೇನಕೊಪ್ಪ, ಯು.ಬಿ. ಬಣಕಾರ, ರಾಮಣ್ಣ ಲಮಾಣಿ, ಶಿವಾನಂದ ಅಂಬಡಗಟ್ಟಿ, ಎಸ್.ಐ. ಚಿಕ್ಕನಗೌಡರ, ಶ್ರೀಶೈಲಪ್ಪ ಬಿದರೂರ, ಮೇಯರ್ ಶಿವು ಹಿರೇಮಠ, ಭಾರತಿ ಜಂಬಗಿ, ಎಂ. ನಾಗರಾಜ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ ಮತ್ತಿತರರು ಇದ್ದರು.
ಲಿಂಬಿಕಾಯಿ ಗೈರು
ಪಶ್ಚಿಮ ಪದವೀಧರರ ಕ್ಷೇತ್ರದಿಂದ ಈ ಹಿಂದೆ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ ಮೋಹನ ಲಿಂಬಿಕಾಯಿ ಗೈರು ಸಭೆಯಲ್ಲಿ ಎದ್ದು ಕಂಡಿತು. ಈ ಬಾರಿಯೂ ತಮಗೇ ಟಿಕೆಟ್ ಲಭಿಸುತ್ತದೆಂದು ಲಿಂಬಿಕಾಯಿ ಭಾವಿಸಿದ್ದರು. ಇದಕ್ಕಾಗಿ ಪ್ರಯತ್ನವನ್ನೂ ಮಾಡಿದ್ದರು. ಆದರೆ, ಎಸ್.ವಿ. ಸಂಕನೂರ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಮೋಹನ ಲಿಂಬಿಕಾಯಿ ಬಹಿರಂಗವಾಗಿಯೇ ಅಸಮಾಧಾನ ಹೊರಗೆಡವಿದ್ದರು. ಪಶ್ಚಿಮ ಪದವೀಧರರ ಕೇತ್ರದ ಚುನಾವಣೆ ಅಂಗವಾಗಿ ಶನಿವಾರ ನಡೆದ ಬಿಜೆಪಿ ಪದಾಧಿಕಾರಿಗಳ ಮತ್ತು ಪ್ರಮುಖ ವಿಶೇಷ ಸಭೆಯಲ್ಲಿ ಮೋಹನ ಲಿಂಬಿಕಾಯಿ ಗೈರು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲವೆಂಬ ಸಂಶಯಕ್ಕೆ ಎಡೆಮಾಡಿಕೊಟ್ಟಂತಿತ್ತು.
ಅಭ್ಯರ್ಥಿಯಾಗಿ ಸಂಕನೂರ
ಪಶ್ಚಿಮ ಪದವೀಧರರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಸಂಕನೂರ ಅವರನ್ನು ಒಮ್ಮತದಿಂದ ಆಯ್ಕೆಗೊಳಿಸಲಾಗಿದೆ. ಸಂಕನೂರ ಅವರಲ್ಲಿ ಗೆಲ್ಲುವ ಉತ್ಸಾಹವಿದೆ. ಕೆಲವರು ಟಿಕೆಟ್ ಆಕಾಂಕ್ಷಿಗಳಿದ್ದರಾದರೂ ಎಲ್ಲರೊಡನೆ ಮಾತುಕತೆ ನಡೆಸಲಾಗಿದೆ. ಮೋಹನ ಲಿಂಬಿಕಾಯಿ ಜತೆಗೂ ಚರ್ಚಿಸಲಾಗಿದೆ. ಟಿಕೆಟ್ ಸಿಗಲಿಲ್ಲವೆಂಬ ಬೇಸರ ಲಿಂಬಿಕಾಯಿ ಅವರಲ್ಲಿದೆಯೇ ಹೊರತು ಯಾವುದೇ ಅಪಸ್ವರ ಇಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಈ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಹಾಗೂ ಮುಂದಿನ ಸಭೆಗಳಲ್ಲಿ ಪಾಲ್ಗೊಳ್ಳುವುದಾಗಿ ಮೋಹನ ಲಿಂಬಿಕಾಯಿ ಹಾಗೂ ಮಾಜಿ ಸಚಿವ ಸಿ.ಎಂ. ಉದಾಸಿ ಮುಂಚೆಯೇ ತಿಳಿಸಿದ್ದರು. ಅದೂ ಅಲ್ಲದೇ, ಬಿಜೆಪಿಗೆ ಮರಳಿ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಯಾವುದೇ ಮುಖಂಡರಿಗೆ ಸ್ಥಾನಮಾನಗಳ ಬಗ್ಗೆ ಆಶ್ವಾಸನೆ ನೀಡಿರಲಿಲ್ಲ.
-ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ