ಅಮೇಠಿ ರಾಜಕಾರಣದ ಅಂತರಾಳ
ಉತ್ತರ ಪ್ರದೇಶದ ಮಧ್ಯಭಾಗದಲ್ಲಿರುವ ಅಮೇಠಿ ಎಂಬ ನೆಹರು...
ಉತ್ತರ ಪ್ರದೇಶದ ಮಧ್ಯಭಾಗದಲ್ಲಿರುವ ಅಮೇಠಿ ಎಂಬ ನೆಹರು-ಗಾಂಧಿ ಕುಟುಂಬದ ನೆಚ್ಚಿನ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧೆಯ ಜೋರು ತಾರಕಕ್ಕೇರಿದೆ. 2004ರಿಂದ ರಾಹುಲ್ ಗಾಂಧಿ ಈ ಕ್ಷೇತ್ರದಲ್ಲಿ ಗೆಲ್ಲುತ್ತಿದ್ದಾರೆ. ಅವರಿಗೆ ಆ ಕ್ಷೇತ್ರದಲ್ಲಿ ಕುಟುಂಬ ವೈಭವದ ಹಿನ್ನೆಲೆಯೂ ಇದೆ. ಈ ಹಿಂದೆ ಅಮೇಠಿಯಲ್ಲಿ ಸ್ಪರ್ಧಿಸಿ ಗೆದ್ದವರ ಸಾಲಿನಲ್ಲಿ ಅವರ ಕುಟುಂಬದ ಸೋನಿಯಾ ಗಾಂಧಿ,ರಾಜೀವ್ ಹಾಗೂ ಸಂಜಯ್ ಗಾಂಧಿ ಇದ್ದಾರೆ. ಆದರೆ ಈಗ 2014ರ ಸೆಣಸು ರಾಹುಲ್ ಅವರಿಗೆ ಹೆಚ್ಚಿನ ಸವಾಲನ್ನೇ ಒಡ್ಡಿದೆ.
ರಾಹುಲ್ ಗಾಂಧಿ ವಿರುದ್ಧ ಎರಡು ಪರಿಚಿತ ಮುಖಗಳು ಕಣದಲ್ಲಿವೆ. ಆಮ್ಆದ್ಮಿ ಪಕ್ಷದಿಂದ ಕವಿ ಹೃದಯದ ಅಭ್ಯರ್ಥಿ ಕುಮಾರ್ ವಿಶ್ವಾಸ್. ಪದಗಳನ್ನು ಚೆಂದವಾಗಿ ಪೊಣಿಸಿಡುವ ಕಲೆ ಇವರ ಸುತ್ತ ಜನ ಜಮಾಯಿಸುವಂತೆ ಮಾಡಿರುವುದನ್ನು ತಳ್ಳಿಹಾಕುವಂತಿಲ್ಲ. ಅಮೇಠಿಯಲ್ಲಿ ಅದಾಗಲೇ ಕೆಲವು ವಾರಗಳಿಂದ ಪ್ರಚಾರಾಂದೋಲನದಲ್ಲಿ ನಿರತರಾಗಿದ್ದಾರೆ ವಿಶ್ವಾಸ್. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವವರು ಸ್ಮೃತಿ ಇರಾನಿ. ಟಿವಿ ಮತ್ತು ಚಲನಚಿತ್ರಗಳಲ್ಲಿ ತಮಗಿರುವ ಮನರಂಜನಾ ಮೌಲ್ಯವನ್ನೇ ರಾಜಕೀಯಕ್ಕೆ ಬಂಡವಾಳವಾಗಿಸಿಕೊಳ್ಳುವವರ ಸಾಲಿನಲ್ಲಲ್ಲದೇ ಪ್ರತ್ಯೇಕವಾಗಿ ಅಸ್ತಿತ್ವ ಹೊಂದಿರುವವರು ಸಂಸದೆ- ನಟಿ ಇರಾನಿ. ತಮ್ಮ ರಾಜಕೀಯ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಇರಾನಿ, ಆಳ ತಿಳಿವಳಿಕೆಯ ಸಂಸದೆಯಾಗಿ, ಪ್ರಚಾರ ಪ್ರಮುಖಳಾಗಿ ಬಿಜೆಪಿಯ ಉದಯೋನ್ಮುಖ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಉಮೇದುವಾರಿಕೆ ಗಮನಿಸಬೇಕಾದ ಸಂಗತಿಯಲ್ಲ ಎಂಬಂತೆ ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ.
ಉತ್ತರ ಪ್ರದೇಶದ 2012ರ ವಿಧಾನಸಭೆ ಚುನಾವಣೆಯಲ್ಲಿ ಅಮೇಠಿಯ ಐದು ಕ್ಷೇತ್ರಗಳ ಪೈಕಿ ಎರಡನ್ನಷ್ಟೇ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈ ಮತಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ ಇತ್ತು ಮೀಟಿಂಗ್ ನಡೆಸಿದಾಗಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಇವೆಲ್ಲ ಅಮೇಠಿ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಹವಾಕ್ಕೆ ವ್ಯತಿರಿಕ್ತವಾದ ವಿದ್ಯಮಾನ. 2009ರ ಲೋಕಸಭೆ ಚುನಾವಣೆಯಲ್ಲಿ ಇಂಥ ಅಸಮಾಧಾನದ ನೆರಳೂ ಕಾಣಿಸಿಕೊಂಡಿರಲಿಲ್ಲ. ಇದು ಕಾಂಗ್ರೆಸ್ನೊಳಗೆ ಸ್ವಲ್ಪ ತಳಮಳವನ್ನು ಉಂಟುಮಾಡಿತು. ಆದರೆ, ಹೀಗೆ ಉದ್ಭವವಾಗಿರುವ ಪರಿಸ್ಥಿತಿ ಸ್ಥಳೀಯ ವಿಷಯಗಳಿಗೆ ಸಂಬಂಧಿಸಿದ್ದೇ ಹೊರತು ಸಂಸದರಾಗಿ ರಾಹುಲ್ ಗಾಂಧಿ ವಿರುದ್ಧದ ಜನಾಭಿಪ್ರಾಯ ಅಲ್ಲ ಎಂಬ ವಿವರಣೆಯನ್ನು ಕಂಡುಕೊಳ್ಳಲಾಯಿತು. ಅದೇನೇ ಇದ್ದರೂ ಅಮೇಠಿ ಅಧೀನದಲ್ಲಿ ಬರುವ ವಿಧಾನಸಭೆ ಕ್ಷೇತ್ರಗಳಲ್ಲಿ 2012ರ ಚುನಾವಣೆಯಲ್ಲಿ ವ್ಯಕ್ತವಾಗಿರುವ ಸ್ಪಂದನೆ, ಲೋಕಸಭೆ ಚುನಾವಣೆಗೂ ಮುಂಚೆ ಗಂಭೀರವಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂಬುದನ್ನಂತೂ ಸಾರಿದೆ.
ವಿಧಾನಸಭೆ ಚುನಾವಣೆಯ ಹಿನ್ನಡೆಯಿಂದ ಎಚ್ಚೆತ್ತ ಕಾಂಗ್ರೆಸ್ ಕೈಗೊಂಡ ಆಕ್ಷಣದ ಕ್ರಮವೇನೆಂದರೆ ಆ ಪ್ರದೇಶದ ಠಾಕೂರ್ ಸಮುದಾಯದ ನಾಯಕ ಸಂಜಯ್ ಸಿಂಗ್ ಅವರನ್ನು ಸಂಧಾನದ ಮೂಲಕ ಮೆತ್ತಗಾಗಿಸಿದ್ದು. ಅಮೇಠಿಯ ಹಳೆಯ ರಾಜಮನೆತನಕ್ಕೆ ಸೇರಿದ್ದ ಸಂಜಯ್ ಸಿಂಗ್ ಪಕ್ಷದಿಂದ ಪಕ್ಷಕ್ಕೆ ಮರಕೋತಿಯಾಡಿಕೊಂಡಿರುವವರು. ಅವರು ಬಿಜೆಪಿ ಜತೆಗೂ ಮಾತುಕತೆಯಲ್ಲಿದ್ದಾರೆಂಬ ವದಂತಿಯಿತ್ತು. ಬಿಜೆಪಿ ಅವರನ್ನು ಗಾಂಧಿ ಕುಟುಂಬದ ವಿರುದ್ಧ ಸ್ಪರ್ಧೆಗೆ ಬಳಸಿಕೊಳ್ಳುವುದರತ್ತ ಒಲವು ತೋರಿತ್ತು. ಆದರೆ ಕಾಂಗ್ರೆಸ್ ಅವರಿಗೆ ಇನ್ನೂ ಉತ್ತಮವಾದ, ಸುರಕ್ಷಿತ ಕೊಡುಗೆಯೊಂದನ್ನು ನೀಡಿ ತನ್ನತ್ತ ಸೆಳೆದುಕೊಂಡಿತು. ಅಸ್ಸಾಮ್ನಿಂದ ಅವರನ್ನು ರಾಜ್ಯಸಭೆ ಸಂಸದರನ್ನಾಗಿ ಮಾಡಲಾಯಿತು.
ಸಂಜಯ್ ಸಿಂಗ್ ಅವರನ್ನು ತನ್ನವನನ್ನಾಗಿಸಿಕೊಳ್ಳುವುದರ ಮೂಲಕ ಕಾಂಗ್ರೆಸ್ ತನ್ನ ಆತಂಕವನ್ನು ನಿವಾರಿಸಿಕೊಂಡಿತಾದರೂ, 'ಇದೇನೂ ಅವಶ್ಯವಿರಲಿಲ್ಲ. ಏಕೆಂದರೆ ಈ ಹಿಂದೆ ಇದ್ದಂತೆ ಸಂಜಯ್ ಸಿಂಗ್ ಗಮನಾರ್ಹ ಬಲವಾಗಿ ಉಳಿದುಕೊಂಡಿಲ್ಲ' ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಆರು ವರ್ಷಗಳ ರಾಜ್ಯಸಭೆ ಸದಸ್ಯತ್ವವನ್ನು ಸಂಜಯ್ಗೆ ನೀಡಿದ್ದು ಕಾಂಗ್ರೆಸ್ನ ಅವಸರದ ನಡೆ ಎಂದು ಟೀಕಿಸುವವರೂ ಇದ್ದಾರೆ.
ಅಂದಹಾಗೆ, ಸಮಾಜವಾದಿ ಪಕ್ಷವು ರಾಹುಲ್ ವಿರುದ್ಧ ಅಭ್ಯರ್ಥಿ ನಿಲ್ಲಿಸದಿರುವ ನಿರ್ಣಯ ಕೈಗೊಂಡಿದೆ. ಕಾಂಗ್ರೆಸ್ಗೆ ಲಾಭವಾಗಬೇಕಿದ್ದ ಈ ನಡೆ ಉಲ್ಟಾ ಹೊಡೆಯಲಿದೆಯಾ ಎಂಬ ಸಂಶಯವೂ ಈಗ ಕಾಡುತ್ತಿದೆ. ಎಸ್ಪಿ ಮತಗಳು ರಾಹುಲ್ ತೆಕ್ಕೆಗೆ ಎಂಬ ಲೆಕ್ಕಾಚಾರದಲ್ಲಿ ಅನುಸರಿಸಿದ ನಡೆ ಇದು. ಆದರೆ ಈ ಬಾರಿ ಮೋದಿ ನೇತೃತ್ವದಲ್ಲಿ ಉತ್ತರ ಪ್ರದೇಶದ ಹಿಂದುಳಿದ ವರ್ಗದವರನ್ನು ಸೆಳೆಯುವ ಕಾರ್ಯದಲ್ಲಿರುವ ಬಿಜೆಪಿಗೆ, ಸಾಂಪ್ರದಾಯಿಕವಾಗಿ ಎಸ್ಪಿಗೆ ಒಲಿಯುತ್ತಿದ್ದ ಕೆಲವು ಪಂಗಡಗಳ ಮತಗಳು ಹರಿದುಬರುವ ಸಾಧ್ಯತೆ ಇದೆ. ಈ ಬಗ್ಗೆ ಸ್ಪಷ್ಟ ಚಿತ್ರಣವೇನೂ ಲಭ್ಯವಿಲ್ಲವಾದರೂ ಕಾಂಗ್ರೆಸ್ ಪಾಲಿಗೆ ಎಸ್ಪಿ ಜತೆಗೆ ಮಾಡಿಕೊಂಡ ಒಳಒಪ್ಪಂದ ಎರಡಲುಗಿನ ಕತ್ತಿಯಾಗಿ ಕಾಡುವ ಲಕ್ಷಣಗಳನ್ನು ತಳ್ಳಿಹಾಕುವಂತಿಲ್ಲ.
ಮಹಾಯುದ್ಧ ಹತ್ತಿರವಾಗುತ್ತಿರುವ ಈ ಗಳಿಗೆಯಲ್ಲಿ ಅಮೇಠಿಯಲ್ಲಿ ಊಹಿಸಬಹುದಾದದ್ದು ಇಷ್ಟು: ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧವೇ ನಿಜಯುದ್ಧ. ಕುಮಾರ್ ವಿಶ್ವಾಸ್ ಪ್ರಚಾರಕಾರ್ಯ ಅದ್ಭುತವಾಗಿದೆಯಾದರೂ ಆಪ್ ಕಂಚಿನ ಪದಕಕ್ಕೆ ತೃಪ್ತಿಗೊಳ್ಳಬೇಕಾದೀತು. ರಾಹುಲ್ ಗಾಂಧಿಯವರು ಈ ಹಿಂದೆ ಯೋಜಿಸಿದ್ದಕ್ಕಿಂತ ಹೆಚ್ಚಿನ ಸಮಯವನ್ನು ಸ್ವಕ್ಷೇತ್ರ ಅಮೇಠಿಯಲ್ಲಿ ಕಳೆಯಬೇಕಾಗಿದೆ. ಕೆಲ ತಿಂಗಳುಗಳಿಂದ ಬಿಜೆಪಿ ತಳಮಟ್ಟದಲ್ಲಿ ಹಬ್ಬಿಸಿರುವ ಸಂಘಟನಾ ಶಕ್ತಿ ಹಾಗೂ ಸ್ಮೃತಿ ಇರಾನಿಯ ಚುಂಬಕ ವ್ಯಕ್ತಿತ್ವ ರಾಹುಲ್ ಗಾಂಧಿಯವರ ಮೇಲಿನ ಒತ್ತಡವನ್ನಂತೂ ಹೆಚ್ಚಿಸಿವೆ.
ಬಿಜೆಪಿ ಅಮೇಠಿಯನ್ನು ಗೆದ್ದುಕೊಂಡಿರುವುದು ಒಂದು ಬಾರಿ ಮಾತ್ರ. ಈ ಮೇಲೆ ಉಲ್ಲೇಖಿಸಿರುವ ಸಂಜಯ್ ಸಿಂಗ್ ಎಂಬ ವ್ಯಕ್ತಿ ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್ನ ಸತೀಶ್ ಶರ್ಮ ಅವರನ್ನು ಸೋಲಿಸುವುದು ಸಾಧ್ಯವಾಗಿತ್ತು. 1999ರಲ್ಲಿ ಅಮೇಠಿಯನ್ನು ಮತ್ತೆ ಗೆದ್ದುಕೊಂಡ ಸೋನಿಯಾ ಗಾಂಧಿಯವರು ಐದು ವರ್ಷಗಳ ನಂತರ ತನ್ನ ಮಗನಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರು. 1977ರಲ್ಲಿ ಸಂಜಯ್ ಗಾಂಧಿ ಅಮೇಠಿಯಲ್ಲಿ ಸ್ಪರ್ಧಿಸಿದಾಗಿನಿಂದ ಈವರೆಗೆ ನೆಹರು-ಗಾಂಧಿ ಕುಟುಂಬದ ಯಾರೊಬ್ಬರೂ ಆ ಕ್ಷೇತ್ರದಲ್ಲಿ ಸೋಲನ್ನೇ ಕಂಡಿಲ್ಲ. ಈ ಇತಿಹಾಸವನ್ನು ಗಮನದಲ್ಲಿರಿಸಿಕೊಂಡಾಗ ಈ ಬಾರಿಯೂ ಅಲ್ಲಿನ ಫೆವರಿಟ್ ರಾಹುಲ್ ಗಾಂಧಿಯವರೇ ಎಂಬುದು ಸುಳ್ಳಲ್ಲ. ಆದರೆ ಉತ್ತರ ಪ್ರದೇಶದ ಈವರೆಗಿನ ಸಂಪ್ರದಾಯವನ್ನು ಬದಲಿಸಲೆಂದೇ ಈ ಚುನಾವಣೆ ಪ್ರಯತ್ನಿಸುತ್ತಿರುವುದು ತಿಳಿದ ಸಂಗತಿ.
- ಅಶೋಕ್ ಮಲಿಕ್