ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಮೇಠಿಯಲ್ಲಿದೆಯೇ ರಾಹುಲ್ ಅಲೆ?

ಅಮೇಠಿ ಲೋಕಸಭಾ ಕ್ಷೇತ್ರದ ಕೂಢಾ ಅನ್ನೋ ಸಣ್ಣ ಗ್ರಾಮದ ಮನೆಯೊಂದರ ಅಂಗಳದಲ್ಲಿ ...

Mainashree
Updated On : 7 Apr 2014, 12:08 pm

ಅಮೇಠಿ ಲೋಕಸಭಾ ಕ್ಷೇತ್ರದ ಕೂಢಾ ಅನ್ನೋ ಸಣ್ಣ ಗ್ರಾಮದ ಮನೆಯೊಂದರ ಅಂಗಳದಲ್ಲಿ ಕುಳಿತು ಆಪ್ ಅಭ್ಯರ್ಥಿ ಕುಮಾರ್ ವಿಶ್ವಾಸ್ ಮಾತನಾಡುತ್ತಿದ್ದರು. ಕುಟುಂಬ ಸಮೇತ ಅಮೇಠಿಗೆ ಬಂದಿರುವ ಕುಮಾರ್ ವಿಶ್ವಾಸರ ಮಕ್ಕಳ ಅಡ್ಮಿಷನ್ನೂ ಇಲ್ಲೇ ಆಗಿದೆ. ಗೆಲ್ಲಲಿ - ಸೋಲಲಿ, ಅಮೇಠಿಯೇ ನನ್ನ ಕರ್ಮಭೂಮಿ ಎನ್ನುತ್ತಿದ್ದಾರೆ.
"ಸರಳವಾಗಿ ಗೆದ್ದು ಬರುವಂಥಾ ಇನ್ಯಾವುದಾದರೂ ಕ್ಷೇತ್ರ ಆರಿಸಿಕೊಳ್ಳಬಹುದಾಗಿತ್ತಲ್ವಾ? ರಾಹುಲ್ ಗಾಂಧಿ ವಿರುದ್ಧವೇ ತೊಡೆ ತಟ್ಟುವಂಥದ್ದೇನಿತ್ತು?" ಕೇಳಿದೆ. "ದೆಹಲಿಯಲ್ಲಿ ಸ್ಪರ್ಧಿಸಿದ್ದರೆ ಗೆದ್ದು ಬರೋದು ದೊಡ್ಡ ಮಾತಾಗಿರಲಿಲ್ಲ. ಮುಖ್ಯವಾಗಿ ಬೇರೆ ಯಾವ ಲೋಕಸಭಾ ಕ್ಷೇತ್ರದ ಜನರಿಗೆ ಆಗದಷ್ಟು ಅನ್ಯಾಯ ಇಲ್ಲಿನ ಜನರಿಗೆ ಆಗಿದೆ. ಗಾಂಧಿ ಕುಟುಂಬ ಎಂಬ ಭಾವನಾತ್ಮಕ ಆಟ ಆಡ್ತಾ ಜನರ ಬೆನ್ನಿಗೆ ಚೂರಿ ಇರಿಯಲಾಗಿದೆ. ಅದಕ್ಕೇ ಇಲ್ಲಿಗೆ ಬಂದಿದೀನಿ" ಅಂದರು. "ಬಿ.ಜೆ.ಪಿ.ಯಿಂದ ಸ್ಮೃತಿ ಇರಾನಿ ಅಮೇಠಿಗೆ ಬರ್ತಿದಾರೆ. ನಿಮ್ಮ ಲೆಕ್ಕಾಚಾರಕ್ಕೆ ಇದರಿಂದ ಹೊಡೆತ ಬೀಳುತ್ತದಾ?" ಎಂಬ ಪ್ರಶ್ನೆಗೆ- "ಅಮೇಠಿಯ ಜನ ಈಗಾಗಲೇ ರಾಹುಲ್ ಅನ್ನೋ ರಾಜಕೀಯ ನಟನಿಂದ ಬೇಸತ್ತಿದಾರೆ. ಈಗ ಇನ್ನೊಬ್ಬಳು ಟಿ.ವಿ ನಟಿಯನ್ನ ಬೆಂಬಲಿಸಿ ಜನರಿಗೆ ಆಗಬೇಕಾದದ್ದೇನೂ ಇಲ್ಲ. ಈ ಲೋಕಸಭಾ ಕ್ಷೇತ್ರದಲ್ಲಿ ಸಾವಿರದ ಇನ್ನೂರ ಐವತ್ತಾರು ಹಳ್ಳಿಗಳಿವೆ. ಅವುಗಳಲ್ಲಿ ಎಂಟುನೂರ ಐವತ್ತು ಹಳ್ಳಿಗಳನ್ನ ಸುತ್ತಿದೀನಿ. ಉಳಿದ ಹಳ್ಳಿ - ಹಳ್ಳಿ ಸುತ್ತುತೀನಿ. ಏನು ಮಾಡ್ತಾರೆ ಸ್ಮೃತಿ ಇರಾನಿ ಇಲ್ಲಿಗೆ ಬಂದು? ಇನ್ನು ರಾಹುಲ್ ಗಾಂಧಿ ಇಲ್ಲಿಗೆ ಬರೋದು ಒತ್ತಟ್ಟಿಗಿರಲಿ - ಈ ಹಳ್ಳಿಗಳ ಪೈಕಿ ಇಪ್ಪತ್ತು ಹಳ್ಳಿಗಳ ಹೆಸರನ್ನು ಒಂದೇ ಸಲ ಹೇಳಿಬಿಟ್ಟರೆ ನಾನು ನಾಮಪತ್ರವನ್ನೂ ಸಲ್ಲಿಸುವುದಿಲ್ಲ. ನೆನಪಾದಾಗೊಮ್ಮೆ ಬರ್ತಾರೆ, ಮುನ್ಶೀಗಂಜ್ನ ಗೆಸ್ಟ್ ಹೌಸ್ನಲ್ಲಿರ್ತಾರೆ, ತಮ್ಮ ದಲ್ಲಾಳಿಗಳನ್ನು ಕರೆಸಿಕೊಂಡು ಮಾತಾಡಿಸಿ ಕಳಿಸ್ತಾರೆ. ಐದಾರು ಹಳ್ಳಿಗಳಿಗೊಬ್ಬರಂತೆ ದಲ್ಲಾಳಿಗಳಿದ್ದಾರೆ ರಾಹುಲ್ಗೆ. ಪ್ರತಿ ಐದಾರು ಹಳ್ಳಿಗೊಂದರಂತೆ ಸಫಾರಿ ಕಾರು - ಮೂರ್ನಾಲ್ಕು ಪಲ್ಸರ್ ಬೈಕುಗಳು, ಎರಡು ಸರಕಾರಿ ಹ್ಯಾಂಡ್ ಪಂಪ್ಗಳು, ಇರುವ ಹತ್ತು ಗುಂಟೆಯಲ್ಲಿ ಕಟ್ಟಿದ ಒಂದು ಬಂಗಲೆ ಕಾಣಿಸುತ್ತೆ ನಿಮಗೆ. ಮುಲಾಜಿಲ್ಲದೇ ಹೇಳಬಹುದು ಅದು ಕಾಂಗ್ರೆಸ್ ಮುಖಂಡನ ಮನೆ ಅಂತ. ಅವರ ಮೂಲಕ ಒಂದು ಹಳ್ಳಿಗೆ ಮೂರ್ನಾಲ್ಕು ಲಕ್ಷದಂತೆ ಹಣ ತಲುಪಿಸಿಬಿಟ್ಟರೆ ಚುನಾವಣೆ ಗೆದ್ದುಬಿಡ್ತೀನಿ ಅಂದುಕೊಂಡಿದಾರೆ ಆತ" ಅಂದರು.
"ಏನೇ ಆದರೂ ಇಲ್ಲಿನ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಬಹಳ ಆಳವಾಗಿ ಬೇರೂರಿದೆ ಅಲ್ಲವಾ?" ಅನ್ನೋ ಪ್ರಶ್ನೆಗೆ, "ಯಾರು ಫಿರೋಜ್ ಗಾಂಧಿ ಕಾಲದಿಂದಲೂ ಮತದಾನ ಮಾಡುತ್ತಾ ಬಂದಿದ್ದಾರೋ ಅವರು ಹಾಗಿದ್ದಾರೆ. ಅವರನ್ನ ಬದಲಿಸೋದು ಕಷ್ಟ. ಆದರೆ, ಚುನಾವಣೆ ದಿನದ ಬಿಸಿಲು ಜಾಸ್ತಿ ಆದರೆ ಅವರು ಮನೆಯಿಂದ ಹೊರಗೆ ಬರೋದಿಲ್ಲ. (ನೆನಪಿರಲಿ, ರಾಯಬರೇಲಿ - ಅಮೇಠಿಗಳಲ್ಲಿ ಸರಾಸರಿ ಮತದಾನ ಶೇಕಡಾ 50 ರಷ್ಟೇ ಆಗೋದು). ಆದರೆ, ಹೊಸ ಪೀಳಿಗೆಗೆ, ತಮ್ಮ ಬೆನ್ನಿಗೆ ಚೂರಿ ಇರಿಯಲಾಗಿದೆ ಅಂತ ಅರ್ಥ ಆಗಿದೆ" ಎಂದರು.
 ಅಂಥದ್ದೊಂದು ಸಂಕ್ಷಿಪ್ತ ಸಂದರ್ಶನದ ನಂತರ ಮುಂದಿನ ಬಹಿರಂಗ ಸಭೆಗೆ ಹೊರಟು ನಿಂತರು ಕುಮಾರ್ ವಿಶ್ವಾಸ್. ಎರಡು ಕಾರು, ಒಂದು ತೆರೆದ ಜೀಪು, ಹತ್ತು ಹನ್ನೆರಡು ಬೈಕ್ಗಳು! ಪೂರೆರಾಹಿ ಅನ್ನೋ ಪಕ್ಕದ ಹಳ್ಳಿಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸಭೆ. ಸರಕಾರಿ ಆಸ್ಪತ್ರೆ ಒಂದು ಕಾಲದಲ್ಲಿ ಇತ್ತು. ಈಗ ಅದು ಬಂದಾಗಿ, ಕಟ್ಟಡ ಕುಸಿದು ಬಿದ್ದು ಗೋಡೆಗಳ ಮೇಲೆ ಹುಲ್ಲು ಬೆಳೆದಿದೆ. ಎಲ್ಲಾ ಸೇರಿದರೆ ಇನ್ನೂರು - ಮುನ್ನೂರು ಜನ. ಗನ್ ಫ್ಯಾಕ್ಟರಿ ಉದ್ಘಾಟನೆಗೆ ರಾಹುಲ್ ಬಂದಾಗ ಮಾಧ್ಯಮದವರು "ಅಮೇಠಿಯ ಜನರಿಗ್ಯಾಕೆ ನೌಕರಿ ಸಿಗೋದಿಲ್ಲ?" ಅಂತ ಕೇಳಿದ್ದರು. ಆಗವರು "ಇಲ್ಲಿನ ಜನ ಮೈಗಳ್ಳರು - ಮೈ ಬಗ್ಗಿಸಿ ದುಡಿಯೋರಲ್ಲ" ಅಂದುಬಿಟ್ಟಿದ್ದರು. ಅದನ್ನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಾ ವಿಶ್ವಾಸ್, "ನೀವು ಮೈಗಳ್ಳರಾದರೆ, ಇಲ್ಲಿ ಬಂಗಾರದಂಥ ಗೋದಿಯ ಫಸಲು ಬೆಳೆದು ನಿಂತಿದೆಯಲ್ಲ, ಇದನ್ನ 'ಅವರವ್ವ'(ಸೋನಿಯಾ) ಬಂದು ಬಿತ್ತಿದ್ಲಾ?" ಅಂತ ಕೇಳ್ತಾರೆ. "ಇಲ್ಲಿನ ರಸ್ತೆಗಳಲ್ಲಿ ಗರ್ಭಿಣಿಯರು ಹೋಗುತ್ತಿರುವಾಗ ಗರ್ಭಪಾತವಾಗಿ ಮಗು ಸತ್ತುಹೋದ ಉದಾಹರಣೆಗಳಿವೆ. ಸೋನಿಯಾ ಚಿಕಿತ್ಸೆಗೆ ಸಾವಿರದ ನಾನ್ನೂರು ಕೋಟಿ ನೀವು ಕೊಟ್ಟಿದೀರಿ. ನಿಮ್ಮ ಗರ್ಭ ರಸ್ತೆ ಪಾಲಾಗ್ತಿದೆ. ಇದಕ್ಕೆ ಕಾರಣನಾದ ರಾಹುಲ್ ಗಾಂಧಿಯ ಠೇವಣಿ ಜಪ್ತಾಗಬೇಕೋ, ಬೇಡವೋ?" ಅಂತ ಕೇಳಿದಾಗ ಮತ್ತೆ ಘೋಷಣೆ, ಕುಮಾರ್ ವಿಶ್ವಾಸ್ ಜಿಂದಾಬಾದ್.
 ಮೂಲೆಯೊಂದರಲ್ಲಿ ಕುಳಿತು ವಿಶ್ವಾಸ್ ಭಾಷಣವನ್ನು ಗಮನಕೊಟ್ಟು ಕೇಳುತ್ತಿದ್ದ ಒಬ್ಬ ವೃದ್ಧನನ್ನು ಕೇಳಿದೆ- "ಹೆಂಗೆ ಈ ಮನುಷ್ಯ?" ಥಟ್ಟಂತ ಆತನಿಂದ ಉತ್ತರ ಬಂತು, "ಕುಮಾರ್ ವಿಶ್ವಾಸ್ ಏಕ್ದಂ ಪ್ರಾಮಾಣಿಕ. ಇಂಥ ಮನುಷ್ಯನೊಬ್ಬ ಇನ್ನೂ ತನಕ ನಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಂತೇ ಇರಲಿಲ್ಲ" ಎಂದ. ಆದರೂ ಆ ವೃದ್ಧ ವಿಶ್ವಾಸ್ಗೆ ಮತ ಹಾಕುವುದಿಲ್ಲವಂತೆ. ಯಾಕೆ ಅಂತ ಕೇಳಿದಾಗ "ಅರೇ ಭಾಯಿ, ನಾನು ದಲಿತ. ಬಹುಜನ ಸಮಾಜ ಪಾರ್ಟಿಗೆ ನಮ್ಮ ಮತ. ಆದರೂ ಈ ಮನುಷ್ಯ(ವಿಶ್ವಾಸ್) ಗೆಲ್ಲಬೇಕು" ಅಂದ!
ಕುಮಾರ್ ವಿಶ್ವಾಸ್ ಸಭೆ ಮುಗಿಸಿಕೊಂಡು ಹೋದ ನಂತರ ಪೂರೆರಾಹಿಯ ಚಹಾದ ಅಂಗಡಿಯೊಂದಕ್ಕೆ ಹೋದ್ವಿ.
ಅಲ್ಲಿ ತಂಬಾಕು ತಿಕ್ಕುತ್ತಾ ನಿಂತಿದ್ದ ಮಧ್ಯವಸಯಸ್ಕರೊಬ್ಬರನ್ನ ಮೂಲಭೂತ ಸೌಕರ್ಯಗಳ ಬಗ್ಗೆ ವಿಚಾರಿಸಲಾಗಿ - "ರಾಹುಲ್ ನಮ್ಮ ಹಳ್ಳಿಗಳಲ್ಲಿ ವಿದ್ಯುತ್ ಕಂಬ ನಿಲ್ಲಿಸಿದರು. ಈಗ ಕರೆಂಟ್ ಕೊಡಬೇಕಾದದ್ದು ರಾಜ್ಯ ಸರಕಾರ. ಕೇಂದ್ರ ಸರಕಾರದ ಕೈಯಲ್ಲಿ ಹಳ್ಳಿ ರಸ್ತೆಗಳಿರೋದಿಲ್ಲ. ನಮ್ಮೂರಿನ ರಸ್ತೆಗಳನ್ನ ಅಖಿಲೇಷ್ ಯಾದವ್ ಸರಿ ಮಾಡಬೇಕು" ಅಂತ ವಾದಸರಣಿ ಮುಂದಿಟ್ಟರು.
ಅಲ್ಲಿ ಮಾತನಾಡಿದ ಹದಿನೈದಿಪ್ಪತ್ತು ಜನರ ಪೈಕಿ ಕಾಂಗ್ರೆಸ್ಗೆ ಮತ ಹಾಕ್ತೀವಿ ಅಂದವರ ಸಂಖ್ಯೆ ಜಾಸ್ತಿ ಇತ್ತು. ಆದರೆ ಅಭಿವೃದ್ಧಿ ಆಗಿದೆ ಅಂತ ಒಬ್ಬೇ ಒಬ್ಬ ಅನ್ನಲಿಲ್ಲ. ಆ ಕ್ಷೇತ್ರದಲ್ಲಿ ಅಮ್ಮನಷ್ಟು ಮಗ ಬೇರು ಬಿಟ್ಟಿಲ್ಲ ಅಥವಾ ರಾಹುಲ್ ಗಾಂಧಿ ಬೇರುಗಳು ಸಡಿಲವಾಗಿವೆ. ಅದಕ್ಕೆ ಕಾರಣ ಕುಮಾರ್ ವಿಶ್ವಾಸ್ ಅಂದರೆ ಅದು ಪೂರ್ತಿ ಸುಳ್ಳಲ್ಲ.

- ಅಜಿತ್ ಹನಮಕ್ಕನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement