ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕನಸಿನ ಕನ್ಯೆಗೆ ಒಲಿಯುತ್ತಾ ಮಥುರಾ?

ಮಥುರಾ ಹಿಂದೂಗಳ ಪುಣ್ಯಕ್ಷೇತ್ರ. ಕೃಷ್ಣನ ಜನ್ಮಸ್ಥಾನ. ಯಾದವರ ತವರೂರು.

Mainashree
Updated On : 8 Apr 2014, 2:52 am

ಮಥುರಾ ಹಿಂದೂಗಳ ಪುಣ್ಯಕ್ಷೇತ್ರ. ಕೃಷ್ಣನ ಜನ್ಮಸ್ಥಾನ. ಯಾದವರ ತವರೂರು. ಹದಿಮೂರುವರೆ ಲಕ್ಷ ಜನಸಂಖ್ಯೆ ಇರುವ ಈ ಲೋಕಸಭಾ ಕ್ಷೇತ್ರ ಈ ಬಾರಿ ಕೊಂಚ ಹೆಚ್ಚೇ ರಂಗೇರಿದೆ. ಕಾರಣ ಬಾಲಿವುಡ್‌ನ ಡ್ರೀಮ್‌ಗರ್ಲ್ ಹೇಮಮಾಲಿನಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಆರಂಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಇವರ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈಗ ಪರಿಸ್ಥಿತಿ ತಿಳಿಯಾಗಿದೆ. ಕನಸಿನ ಕನ್ಯೆಗೆ ಸ್ಪರ್ಧೆಯೊಡ್ಡಲು ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ಜಯಂತ್ ಚೌಧರಿ ರೆಡಿಯಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ 3.79 ಲಕ್ಷ ಮತಗಳಿಂದ ಭರ್ಜರಿ ಜಯಗಳಿಸಿದ ಈ ಯುವ ನಾಯಕ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಮೊಮ್ಮಗ ಹಾಗೂ ಕೇಂದ್ರ ಸಚಿವ ಅಜಿತ್‌ಸಿಂಗ್ ಅವರ ಪುತ್ರ. ಇವರು ರಾಷ್ಟ್ರೀಯ ಲೋಕದಳ ಪಕ್ಷದ ಕಾರ್ಯದರ್ಶಿಯೂ ಹೌದು.

ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷ ಚಂದನ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಎಸ್‌ಪಿಯ ಹಿರಿಯ ನಾಯಕರಾಗಿರುವ ಇವರಿಗೆ 'ಸ್ಥಳೀಯ' ಅನ್ನೋ ಪ್ಲಸ್‌ಪಾಯಿಂಟ್ ಇದೆ. ಆಮ್ ಆದ್ಮಿ ಪಕ್ಷದ ಅನುಜ್ ಜಾರ್ ತಮ್ಮ ಯುವ ಪಡೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಹುಜನ ಸಮಾಜವಾದಿ ಪಕ್ಷದ ಯೋಗೇಶ್ ದ್ವಿವೇದಿ ಅವರೂ ಸ್ಪರ್ಧೆಗೆ ಸಿದ್ಧಗೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಆರ್‌ಎಲ್‌ಡಿ ಜೊತೆ ಮೈತ್ರಿ ಮಾಡಿಕೊಂಡು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಇಲ್ಲಿನ ಮತದಾರರು ಈ ಚುನಾವಣೆಯ ಬಗ್ಗೆ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಹೊಂದಿದ್ದಾರೆ.

ಜಾತಿ ಲೆಕ್ಕಾಚಾರ ಹೇಗಿದೆ?: ಈ ಕ್ಷೇತ್ರದಲ್ಲೂ ಜಾತಿ ಲೆಕ್ಕಾಚಾರದ ಮೇಲೇನೆ ಚುನಾವಣಾ ಫಲಿತಾಂಶ ನಿರ್ಧಾರವಾಗುತ್ತೆ. ಇಲ್ಲಿ ಜಾಟ್, ಬ್ರಾಹ್ಮಣ ಹಾಗೂ ಠಾಕೂರ್ ಸಮುದಾಯ ನಿರ್ಣಾಯಕ ಪಾತ್ರವಹಿಸುತ್ತವೆ. ಈ ಲೋಕಸಭಾ ಕ್ಷೇತ್ರ ಐದು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಈ ಪೈಕಿ ಎರಡು ಆರ್‌ಎಲ್‌ಡಿ ತೆಕ್ಕೆಯಲ್ಲಿದ್ದರೆ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಹಾಗೂ ಬಿಎಸ್‌ಪಿ ತಲಾ ಒಂದು ಸ್ಥಾನ ಹೊಂದಿವೆ.

ದೇವಾಲಯಗಳ ನಗರಿ ಮಥುರಾದಲ್ಲಿ ಹೆಜ್ಜೆಹೆಜ್ಜೆಗೂ ದೇವಾಲಯಗಳು ಸಿಗ್ತವೆ. ಪ್ರತಿದಿನ ಸಾವಿರಾರು ಭಕ್ತರು ಭೇಟಿ ಕೊಡ್ತಾರೆ. ಯಮುನೆಗೆ ಪೂಜೆ ಸಲ್ಲಿಸ್ತಾರೆ. ಇಷ್ಟೆಲ್ಲಾ ಇದ್ರೂ ಕ್ಷೇತ್ರ ಮೂಲಭೂತ ಸೌಕರ್ಯಗಳಿಂದಲೇ ವಂಚಿತಗೊಂಡಿದೆ. ನಿರ್ವಹಣೆ ಇಲ್ಲದೆ ಯಮುನೆ ಕೊಳೆತು ನಾರುತ್ತಿದ್ದಾಳೆ. ರಸ್ತೆಗಳು ಹೊಂಡಗುಂಡಿಗಳಿಂದ ಕೂಡಿವೆ. ಆದ್ರೆ ಇದ್ಯಾವುದೂ ಇಲ್ಲಿಂದ ಆಯ್ಕೆಯಾಗಿ ಹೋಗೋ ಸಂಸದರಿಗೆ ಕಾಣೋದಿಲ್ಲ!

ಈ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಲು ಮುಖ್ಯಕಾರಣ ಹೊರಗಿವರು ಬಂದು ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗುವುದು. ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜಯಂತ್ ಚೌಧರಿ ಗೆದ್ದ ಬಳಿಕ ಇತ್ತ ಮುಖ ಸಹ ಹಾಕಿಲ್ಲ. ಅವರು ದೆಹಲಿಯನ್ನೇ ಹೆಚ್ಚಿನ ಸಮಯ ಕಳೆದ್ರು. ಹಾಗಾಗಿ ಮಥುರಾ ಅಭಿವೃದ್ಧಿ ಕಾಣದೆ ಬಡವಾಯ್ತು ಅನ್ನೋದು ಇಲ್ಲಿನ ಮಂದಿಯ ಬಲವಾದ ವಾದ.

ದೇಶದ ಅತೀ ದೊಡ್ಡ ತೈಲ ಸಂಸ್ಕರಣ ಘಟಕ ಹೊಂದಿರುವ ಮಥುರಾ ಲೋಕಸಭಾ ಕ್ಷೇತ್ರ ಸಕ್ಕರೆ ಕಾರ್ಖಾನೆಗಳಿಗೂ ಫೇಮಸ್. ಪ್ರವಾಸಿಗರು ಹಾಗೂ ಕೃಷಿಯನ್ನು ಜೀವನಾಧಾರವಾಗಿಸಿಕೊಂಡಿರುವ ಕ್ಷೇತ್ರದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಜನನಾಯಕರು ಪ್ರತಿ ಬಾರಿ ಮತದಾರರ ಕಿವಿಗೆ ನೀಟಾಗಿ ಹೂ ಮುಡಿಸುತ್ತಿದ್ದಾರೆ.
ನಾಯಕರ ಧೋರಣೆಗಳು, ಸಮಸ್ಯೆಗಳ ಸರಮಾಲೆಗಳಿಂದ ರೋಸಿ ಹೋಗಿರುವ ಮತದಾರರನ್ನು ಓಲೈಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರು ಹೊಸಹೊಸ ತಂತ್ರಗಳನ್ನ ರೂಪಿಸುತ್ತಿದ್ದಾರೆ. ಆದ್ರೆ ಇಲ್ಲಿ ಬಿಜೆಪಿ ಬಿಎಸ್‌ಪಿ ಹಾಗೂ ಆರ್‌ಎಲ್‌ಡಿ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಬಹುಸಂಖ್ಯಾತರಾಗಿರೋ ಜಾಟ್ ಸಮುದಾಯ ಆರ್‌ಎಲ್‌ಡಿಯ ಜಯಂತ್ ಚೌಧರಿ ಬೆಂಬಲಕ್ಕೆ ನಿಂತಿದೆ. ಇನ್ನು ಕನಸಿನ ಕನ್ಯೆಗೆ ಹೊರಗಿನವರು ಅನ್ನೋ ಪಟ್ಟ ಇದ್ರೂ ಹಿಂದುತ್ವ ಮತ್ತು ಮೋದಿ ಅಲೆಯ ಲಾಭ ಸಿಗಬಹುದು. ಜನ ತಾರೆಯನ್ನ ನೋಡಲು ಮುನ್ನುಗ್ಗುತ್ತಿದ್ದಾರೆ, ಆದ್ರೆ ಅದು ಮತವಾಗಿ ಬದಲಾಗೋ ಸಾಧ್ಯತೆ ಕಡಿಮೆ.

ಒಟ್ಟಾರೆ ಏಪ್ರಿಲ್ 24ಕ್ಕೆ ನಡೆಯಲಿರುವ ಚುನಾವಣೆಗೆ ಮಥುರಾ ಸಜ್ಜುಗೊಂಡಿದೆ. ಈ ಬಾರಿ ಮತದಾರ ಅಭಿವೃದ್ಧಿಗೆ ಮತ ಹಾಕ್ತಾನಾ ಅಥವಾ ಜಾತಿಗೆ ಜೋತು ಬೀಳ್ತಾನಾ ಅನ್ನೋದನ್ನ ಕಾದುನೋಡಬೇಕು.

- ವಿಜಯಲಕ್ಷ್ಮಿ ಶಿಬರೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement