ಕಾಂತಿಕಾರರ ಕ್ರಾಂತಿ
ತಾರೆಯೆಂದರೆ ಹಾಗೆ, ಅದು ಮಿನುಗುತ್ತದೆ, ನೋಡಲು ಸಿಗುತ್ತದೆ, ಮನಕೆ ಮುದ ನೀಡುತ್ತದೆ, ಆದರೆ ಹಿಡಿಯಲು ಮಾತ್ರ ಸಿಗುವುದಿಲ್ಲ. ಇದು ತಾರಾಮಣಿಯರ ವಿಷಯದಲ್ಲೂ ಹೊರತಲ್ಲ. ಅವರನ್ನು ನೋಡುವುದು ಕಣ್ಣಿಗೆ ಹಬ್ಬವೆಂದು ಭೇಟಿಯಾಗ ಹೊರಟಿರೋ ನಿಮ್ಮದು ಎಂದೆಂದೂ ಮುಗಿಯದ ಪಯಣ. ಈ ನಿಲುಕದ ನಕ್ಷತ್ರಗಳು ಮೇಕಪ್ ತೆಗೆದರೆ ಹೇಗಿರುತ್ತಾರೆಂದು ಎಂದಾದರೂ ನೋಡಿದ್ದೀರಾ? ಶೂಟಿಂಗ್ ಸಮಯದಲ್ಲೂ ಕಾಂತಿ ಕುಗ್ಗದಿರಲು ಬಿಸಿಲಿಗಡ್ಡ ಛತ್ರಿ ಹಿಡಿಸಿಕೊಳ್ಳುತ್ತಾರೆ. ತಮ್ಮ ಡಯಟ್ ವ್ಯತ್ಯಾಸಗೊಳ್ಳದಿರಲಿ ಎಂದು ಅಡುಗೆಯವರನ್ನೂ ಜೊತೆಗೇ ಕರೆದುಕೊಂಡು ತಿರುಗುತ್ತಾರೆ. ಇಲ್ಲವೇ ಸ್ಟಾರ್ ಹೊಟೇಲ್ಗಳಲ್ಲಿ ಊಟ ಮಾಡುತ್ತಾರೆ. ನಿತ್ಯ ಜಿಮ್ನಲ್ಲಿ ಮುಳುಗಿ, ಫಿಗರ್ ಮೆಂಟೇನ್ ಮಾಡ್ತಾರೆ. ಕಾರಿನ ಕರಿಗಾಜನ್ನು ಮುಚ್ಚಿಕೊಂಡೇ ಸದ್ದಿಲ್ಲದೆ ಊರೂರು ಅಲೆಯುತ್ತಾರೆ. ಇಂಥ ಈ ಏಳು ಮಲ್ಲಿಗೆ ತೂಕದ ರಾಜಕುಮಾರಿಯರು ಬೀದಿಗೆ ಬಂದಿದ್ದಾರೆ!
ಮಂಡ್ಯದಲ್ಲಿ ರಮ್ಯಾ ಮೇಡಂ ಸಿಂಪಲ್ ಆಗ್ ಒಂದ್ ಕಾಟನ್ ಚೂಡಿ ಹಾಕ್ಕೊಂಡ್ ಬಿಸಿಲಾದರೇನು ಮಳೆಯಾದರೇನು 'ಕೈ' ಹಿಡೀದ್ರೆ ನೀವು... ಗೆದ್ದೇನು ನಾನು.. ಎಂದು ಹಾಡ್ತಾ ಹಾಡ್ತಾ ರೋಡ್ಶೋ ಮಾಡ್ತಿದ್ದಾರೆ. 40 ಡಿಗ್ರಿ ಸುಡುತ್ತಿರುವ ಸೂರ್ಯನಿಗೆ ನೆತ್ತಿ ಒಡ್ಡಿ, ಮಂಡ್ಯಕ್ಕಾಗಿ ಬೆವರು ಹರಿಸಿದ್ದೀನಿ. 'ನಾನು ಸಮಾಜಸೇವಕಿ... ನನ್ನ ನಂಬಿ ಪ್ಲೀಸ್' ಅಂತ ಹೋದಲೆಲ್ಲ ಅಲವತ್ತುಕೊಳ್ತಾ ಇದಾರೆ. ಮೋದಿ ಟೀ ಮಾರ್ತಿದ್ರು ಅನ್ನೋ ಕಾರಣಕ್ಕೆ 'ಎಕ್ಸ್ಕ್ಯೂಸ್ ಮಿ' ನಾನಿನ್ ಟೀ ಕುಡಿಯೋಲ್ಲ ಅಂದು, ದಾರಿ ಬದಿ ಕಾಫಿನ ಮುಖ ಸಿಂಡರಿಸದೆ ಸೇವಿಸಿ ನಂದು 'ಲವ್ ಆನ್ ಮಂಡ್ಯ' ಎನ್ನುತ್ತಿದ್ದಾರೆ. ಈಗ ಕಾರ್ಯಕರ್ತರ 'ಜೊತೆ ಜೊತೆಯಲಿ' ನಡೆದು ಮುಸುಕಿನಿಂದ ಶುರುಮಾಡಿ 'ಮುಸ್ಸಂಜೆಮಾತು' ಮುಗಿಸುವ ತನಕವೂ ಹೋದಲ್ಲೆಲ್ಲ ಜಸ್ಟ್ ಮತ ಮಾತೇ. ಇನ್ನು ಮುಂದೆ ಚಿತ್ರಗಳಲ್ಲಿ ಅಭಿನಯಿಸಲ್ಲ. ಇನ್ನೇನಿದ್ದರೂ ಫುಲ್ಟೈಂ ರಾಜಕೀಯ ಎಂದಿದ್ದಾಳೆ. ಇದರಲ್ಲಿ ನಟನೆ ಎಷ್ಟೋ, ರಾಜಕೀಯ ಎಷ್ಟೋ ಗೊತ್ತಿಲ್ಲ. ಆದರೆ ಬಣ್ಣ ಕಳಚಿರೋದಂತೂ ಸತ್ಯ. ಮೇಕಪ್ ಇಲ್ಲದೆ, ಮೈ ಕಪ್ಪಾಗುವ ಭಯ ತೋರಿಸಿಕೊಳ್ಳದೆ ಜನಸಾಮಾನ್ಯರ ಸಂಕಷ್ಟಗಳಿಗೆ 'ದಿವ್ಯಸ್ಪಂದನೆ' ನೀಡುವ ಭರವಸೆ ಈ ಬಾರಿ ರಮ್ಯಾಳ ಕೈ ಹಿಡಿಯುತ್ತಾ?
ಇನ್ನು ಪಂಜಾಬ್ನಲ್ಲಿ ಪ್ರತಿಸ್ಪರ್ಧಿಗಳಾಗಿರುವ ಡಿಂಪಲ್ ನಟಿಯರಿಬ್ಬರು ಕಾಂಪಿಟೇಶನ್ ಮೇಲೆ ನಾ ಸಿಂಪಲ್, ನಾ ಸಿಂಪಲ್ ಎಂದು ತೋರಿಸಿಕೊಳ್ಳುತ್ತ ಬಣ್ಣ ಹಚ್ಚದೆ ಚುನಾವಣಾ ಕಣಕ್ಕೆ ರಂಗು ತಂದಿದ್ದಾರೆ. ಟೈಂ ಇಲ್ಲಾಂದ್ರೆ ಬಿಸ್ಕೆಟ್ ತಿಂದ್ಕೊಂಡು, ಇದ್ದಾಗ ರೋಡ್ಸೈಡ್ ಪರೋಟ ತಿನ್ಕೊಂಡು ತನ್ನ ಬುಲೆಟ್ನಲ್ಲಿ ಊರೂರು ಸುತ್ತುತ್ತಾ 'ಬುಲೆಟ್ರಾಣಿ' ಎನಿಸಿಕೊಂಡಿರುವ ಮಾಜಿ ಮಿಸ್ ಇಂಡಿಯಾ ಗುಲ್ ಪನಾಗ್ ಆಮ್ ಆದ್ಮಿ ಹೆಸರಿಗೆ ನ್ಯಾಯ ಒದಗಿಸಲು ಹರಸಾಹಸ ಮಾಡುತ್ತಿದ್ದಾಳೆ. ಈ ತಾರೆ ಜಮೀನ್ಗೆ ಇಳಿದದ್ದು ಕಂಡು ಹೋದಲೆಲ್ಲ ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳುತ್ತಿದ್ದರೂ ಯಾರನ್ನೂ ದೂರ ತಳ್ಳದೆ ಎಲ್ಲರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದಾಳೆ. ತಾನು ತೆಗೆಸಿಕೊಳ್ಳುವ ಒಂದು ಫೋಟೋ ನೂರು ಕಡೆ ಶೇರ್ ಆಗಿ, ನೂರಾರು ಜನರ ಕಣ್ಣಿಗೆ ಬಿದ್ದು, ತನಗೆ ಮತ ತರುವಲ್ಲಿ ಸಹಾಯಕವಾಗುತ್ತದೆ ಎಂಬುದು ಅವಳ ರಾಜಕೀಯ ಲೆಕ್ಕಾಚಾರ. ಇನ್ನು ಪ್ರತಿಸ್ಪರ್ಧಿ ಕಿರಣ್ ಖೇರ್ ಕೂಡಾ ಎದುರಿಗೆ ಸಿಗುವ ಯಾವುದೇ ಮತದಾರರನ್ನು ಮಾತನಾಡಿಸದೆ ಮುಂದೆ ಸಾಗುವುದಿಲ್ಲ. ಆದರೆ ಮೊನ್ನೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸುವಾಗ ಹೆಗಲ ಮೇಲೆ ಕೈ ಹಾಕಿದ ಕಾರ್ಯಕರ್ತನೊಬ್ಬನಿಗೆ ಸ್ಥಳದಲ್ಲೇ ಬೆವರಿಳಿಸಲೂ ಹಿಂದೆ ಬೀಳಲಿಲ್ಲ. ಮೇಕಪ್ಗೆ ಡೋಂಟ್ 'ಕೇರ್' ಎಂದಿರುವ ಕಿರಣ್ ಕೆನ್ನೆಗುಳಿಯಲ್ಲಿ ಕಮಲ ಅರಳುವುದೇ? 'ಹೊರಗಿನವರು' ಎಂಬ ಅಸಮಾಧಾನದ ಕುರಿತ ಪ್ರಶ್ನೆಗಳಿಗೆ ನನ್ನ ಗಂಡನನ್ನು 45 ವರ್ಷಗಳ ಹಿಂದೆ ಪ್ರೀತಿಸಿದ್ದು ಇದೇ ನೆಲದಲ್ಲಿ, ಅಲ್ಲದೆ ನಾನು 'ಮಮ್ಮಿ ಪಂಜಾಬಿ' ಎಂಬ ಚಿತ್ರದಲ್ಲೂ ನಟಿಸಿದ್ದೇನೆ. ಇದೀಗ ನನ್ನ ಮಮ್ಮಿಯೂ ಪಂಜಾಬ್ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.
ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಕಮಲ ಹಿಡಿದು ನಿಂತಿರುವ, ತನ್ನ 65ನೇ ವರ್ಷದಲ್ಲೂ ಸೌಂದರ್ಯರಾಣಿಯಂತೆ ಕಂಗೊಳಿಸುವ ಹೇಮಮಾಲಿನಿ ಆಡಿ ಕಾರಿನ ತಲೆಬುರುಡೆಯ ಮುಚ್ಚಳ ತೆಗೆದು ಮುಖದರ್ಶನ ಕೊಡುತ್ತಿದ್ದಾರಾದರೂ ಕಾರಿನಿಂದಿಳಿಯುತ್ತಿಲ್ಲ. ಆದರೆ ಕನಸಿನ ಕನ್ಯೆಯನ್ನು ನನಸಲ್ಲಿ ನೋಡುವ ಸೌಭಾಗ್ಯಕ್ಕೇ ಮಥುರಾ ಮತದಾರ ಸಂತೃಪ್ತನಾಗಬಹುದೇನೋ.
ಉತ್ತರ ಪ್ರದೇಶದ ಮೀರತ್ನಲ್ಲಿ ಸ್ಪರ್ಧೆಗಿಳಿದಿರುವ ನಟಿ ನಗ್ಮಾ ಜೈಸಲ್ಮೇರ್ನ ರಾಜವಂಶದ ಕುಡಿ. ಚಿತ್ರರಂಗದಲ್ಲಿ ಕೆಲಸವಿಲ್ಲದೆ ಖಾಲಿ ಕೂತಿದ್ದ ಈಕೆ ಈಗ ಕಾಂಗ್ರೆಸ್ ಪ್ರಚಾರದಲ್ಲಿ ಬ್ಯುಸಿ. ಈಕೆ ಎಷ್ಟೇ ಸಿಂಪಲ್ಲಾಗಿ ಮೀರತ್ನ ಕೇರಿಗಳಲ್ಲಿ ನಡೆದರೂ ಹೋದಲ್ಲೆಲ್ಲ ಕಾರ್ಯಕರ್ತರು, ಅಭಿಮಾನಿಗಳು 'ಮುತ್ತು'ತ್ತಿದ್ದಾರೆ. ಎಷ್ಟು ಮುತ್ತುಗಳು ಮತವಾಗಿ ಪರಿವರ್ತನೆ ಹೊಂದುವುದೋ ಕಾದು ನೋಡಬೇಕಿದೆ. ಪ್ರಚಾರ ಮಾಡ್ತಾ ಮಾಡ್ತಾ ನಗ್ಮಾ ಕಲರ್ ಕೂಡ ಕಪ್ಪಾಗಿದೆ.
ಆಯೋಗದ ಮೇಲೊಂದು ಕೇಸ್ ಹಾಕೋಣವೇ?
-ರೇಶ್ಮಾ ರಾವ್