ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದಸ್ ರಾಜಕೀಯ

Lingaraj Badiger
Updated On : 14 Apr 2014, 4:10 am

-29 ರಾಜ್ಯಗಳು, ಸ್ಥಾನಗಳು 543
-5 ವರ್ಷ ಅಧಿಕಾರಕ್ಕೆ 10 ಸೂತ್ರಗಳು


ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬಿದ್ದ ಮಳೆಗಿಂತ ದೇಶದಲ್ಲಿ ಮತ ಸಮರ ಜೋರಾಗಿದೆ. ಐದು ವರ್ಷಗಳ ಅಧಿಕಾರಕ್ಕಾಗಿ ಹತ್ತಾರು ತಂತ್ರಗಳು. ಅಥವಾ 'ಹತ್ತು' ಸೂತ್ರ ಎನ್ನಬಹುದು. ಅಂದರೆ ಈ ತಂತ್ರಗಾರಿಕೆಯ ನಾಯಕರ ಅಧಿಕಾರ ಮಾತ್ರವಲ್ಲ, ದೇಶದ ರಾಜಕೀಯ ದಿಕ್ಕನ್ನೇ ನಿರ್ಣಯಿಸುವ ಶಕ್ತಿ ಇರುವುದು ಕೇವಲ 10 ರಾಜ್ಯಗಳಿಗೆ ಎಂಬುದು ಗೊತ್ತೇ? ಅಚ್ಚರಿ ಎನಿಸಿದರೂ ಇದು ರಾಜಕೀಯ ವಠಾರದ ಲೆಕ್ಕಾಚಾರ. ದೇಶದಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗಲೂ ದೆಹಲಿ ಕಣ್ಣು ಈ ಹತ್ತು ರಾಜ್ಯಗಳತ್ತ ತಿರುಗುತ್ತದೆ.
ಚುನಾವಣಾ ಕಾವಿನ ಭಾಗವಾಗಿ ಆಂಧ್ರದ ಟಿಡಿಪಿ ನರೇಂದ್ರ ಮೋದಿ ಜೊತೆ ಕೈ ಜೋಡಿಸಿದೆ. ತಮಿಳುನಾಡಿನ ಕರುಣಾನಿಧಿ ಪಾರ್ಟಿ ಮೋದಿಗೆ ಜೊತೆ ಸೇರಬೇಕು ಎನ್ನುವ ಹೊತ್ತಿನಲ್ಲೇ ಆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ. ಈ ನಡುವೆ ಕರ್ನಾಟಕದಲ್ಲೂ ಬಿಎಸ್‌ಆರ್, ಕೆಜೆಪಿ ಪಕ್ಷಗಳು ಬಿಜೆಪಿಗೆ ಜೈ ಎಂದಿವೆ. ಕೇವಲ ಆಂಧ್ರ, ಕರ್ನಾಟಕ, ತಮಿಳುನಾಡು ಮಾತ್ರವಲ್ಲ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಲ, ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ದೇಶದ ರಾಜಕೀಯ ದಿಕ್ಕನ್ನು ಬದಲಾಯಿಸುವ ರಾಜ್ಯಗಳಾಗಿ ಪೊಲಿಟಿಕಲ್ ಡೈರಿಯಲ್ಲಿ ಕಾಯಂ ಆಗಿ ನಮೂದಾಗಿವೆ. ಹೀಗಾಗಿ ದೇಶದ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತಿ ಚುನಾವಣೆಯ ಸಂದರ್ಭದಲ್ಲೂ ಈ ರಾಜ್ಯಗಳತ್ತ ಮುಖ ಮಾಡುತ್ತವೆ. ಯಾಕೆಂದರೆ ದೆಹಲಿಯ ಕುರ್ಚಿಯಲ್ಲಿ ಯಾರು ಕೂರಬೇಕು ಎನ್ನುವ ವಿಚಾರದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುವುದು ಈ ರಾಜ್ಯಗಳ ಮತದಾರರೇ.

ಈಗಾಗಲೇ ನಾಲ್ಕು ಹಂತಗಳಲ್ಲಿ ಕೆಲವು ಕಡೆ ಚುನಾವಣೆ ಕಸರತ್ತು ಮುಗಿದಿದೆ. ದೆಹಲಿ ಪೀಠದಲ್ಲಿ ಕೂರಲು ಬೇಕಾದ ಮ್ಯಾಜಿಕ್ ನಂಬರ್ 272 ಯಾರಿಗೆ ಒಲಿಯುತ್ತವೆ ಎನ್ನುವ ಕುತೂಹಲ ಒಂದಡೆಯಾದರೆ, ಅಧಿಕಾರಕ್ಕಾಗಿ ಕಾದು ಕೂತ ಪಕ್ಷಗಳು ಮಿಲನ ವ್ಯವಹಾರಕ್ಕೆ ಇಳಿದಿವೆ. ಈ ಬಾರಿ ಒಂದೇ ಪಕ್ಷಕ್ಕೆ ಬಹುಮತ ಸಿಗುವುದು ಸಾಧ್ಯವಿಲ್ಲ ಎನ್ನುವ ಮಾತು ರಾಜಕೀಯ ಪಂಡಿತರದ್ದು. ಹೀಗಾಗಿ ಪ್ರತಿ ರಾಜ್ಯದ ಪ್ರಾದೇಶಿಕ ಪಕ್ಷಗಳ ಬೆಂಬಲ, ಅಲ್ಲಿನ ಒಂದೊಂದು ಸೀಟು ಕೂಡ ದೆಹಲಿಯ ದೊರೆಯಾಗಲು ಹೊರಟವರಿಗೆ ಮುಖ್ಯ. ಈ ಕಾರಣಕ್ಕೆ ಆಂಧ್ರ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಲ, ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಪ್ರಾಮುಖ್ಯ ಪಡೆದುಕೊಂಡಿವೆ.
ದೇಶದ 543 ಲೋಕಸಭಾ ಸ್ಥಾನಗಳ ಪೈಕಿ 400 ಸ್ಥಾನಗಳು ಈ ಹತ್ತು ರಾಜ್ಯಗಳಲ್ಲೇ ಕೇಂದ್ರೀಕೃತವಾಗಿವೆ. ಆ ಸ್ಥಾನಗಳಲ್ಲಿ ಎರಡು ಬೃಹತ್ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಕೆಲವನ್ನು ಆವರಿಸಿಕೊಂಡಿವೆ. ಉಳಿದಂತೆ 400ರಲ್ಲಿ ಬಹುತೇಕ ಸ್ಥಾನಗಳಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಅರ್ಭಟಿಸುತ್ತವೆ. ಯಾಕೆಂದರೆ ಆ ರಾಜ್ಯಗಳಲ್ಲಿ ಮರಿ ಪಕ್ಷಗಳದ್ದೇ ಹವಾ. ಹೀಗಾಗಿ ಡೆಲ್ಲಿ ಅಧಿಕಾರದ ಕನಸುಗಾರರಿಗೆ ಈ ಹತ್ತು ರಾಜ್ಯಗಳ ಜೊತೆ ಸೇತುವೆ ಕಟ್ಟಿಕೊಳ್ಳುವ ಅನಿವಾರ್ಯತೆ ಇದೆ. ಈ ಹತ್ತು ರಾಜ್ಯಗಳ ಮತದಾರರು ಯಾವ ಪಕ್ಷಕ್ಕೆ ಅಥವಾ ಯಾವ ಕೂಟಕ್ಕೆ ಮತ ಹಾಕುತ್ತಾರೋ ಅವರೇ ಕೇಂದ್ರದಲ್ಲಿ ದೊರೆಯಾಗುತ್ತಾರೆ.

ಉತ್ತರ ಪ್ರದೇಶ
ಕೇಂದ್ರ ಅಧಿಕಾರದ ಚಕ್ರಕ್ಕೆ ಮುಖ್ಯ ಗಾಲಿಯಾಗುವಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಉತ್ತರ ಪ್ರದೇಶ. 80 ಲೋಕಸಭಾ ಸ್ಥಾನಗಳನ್ನು ಒಳಗೊಂಡಿರುವ ಉತ್ತರ ಪ್ರದೇಶ ದೆಹಲಿ ಅಧಿಕಾರ ಪೀಠಕ್ಕೆ ತುಂಬಾ ಸನಿಹದಲ್ಲೇ ಇದೆ. 2009 ಚುನಾವಣೆಯಲ್ಲಿ ಕಾಂಗ್ರೆಸ್ 21, ಸಮಾಜವಾದಿ ಪಾರ್ಟಿ 23, ಬಿಎಸ್‌ಪಿ 20, ಬಿಜೆಪಿ 10, ಆರ್‌ಜೆಡಿ 5 ಸ್ಥಾನ ತಮ್ಮದಾಗಿಸಿಕೊಂಡವು. ಬಿಜೆಪಿ ಈ ರಾಜ್ಯದಲ್ಲಿ 40ರಿಂದ 45 ಸ್ಥಾನಗಳಲ್ಲಿ ಗೆಲುವು ದಾಖಲಿಸದೆ ಹೋದರೆ ನರೇಂದ್ರ ಮೋದಿಯ ಪ್ರಧಾನಿ ಕನಸು ಭಗ್ನವಾಗುವ ಸಾಧ್ಯತೆ ಇವೆ. ಇದನ್ನು  ದೃಷ್ಟಿಯಲ್ಲಿಟ್ಟುಕೊಂಡೇ ಮೋದಿ, ವಾರಣಾಸಿಯನ್ನೇ ತಮ್ಮ ಅಖಾಡವನ್ನಾಗಿಸಿಕೊಂಡಿರುವುದು. ಇಲ್ಲಿ ಮೀಸಲಾತಿ ಲೆಕ್ಕಾಚಾರದಲ್ಲಿ ಪ್ರಭಾವ ಬೆಳೆಸಿಕೊಳ್ಳಲು ಮುಂದಾಗುತ್ತಿದ್ದ ಕಾಂಗ್ರೆಸ್‌ಗೆ ಈ ಬಾರಿ ಮೀಸಲಾತಿ ಕನಸು ದಕ್ಕಿಲ್ಲ. ಮತ್ತೊಂದು ಕಡೆ ಎಸ್‌ಪಿ ಪ್ರಭಾವ ಕಡಿಮೆಯಾಗುತ್ತಿದೆ. ಹೀಗಾಗಿ ಬಿಜೆಪಿಯ ಗೆಲುವಿನ ನಗೆ ಹೆಚ್ಚಾಗಿದೆ.

ಮಹಾರಾಷ್ಟ್ರ
ಇಲ್ಲಿ 48 ಸ್ಥಾನಗಳು ಇವೆ. ಕಳೆದ ಬಾರಿ ಕಾಂಗ್ರೆಸ್ ಹಾಗೂ ಎಸ್‌ಪಿ ಮೈತ್ರಿ ಕೂಟ 25, ಬಿಜೆಪಿ ಮತ್ತು ಶಿವಸೇನೆ ಕೂಟ 20 ಸ್ಥಾನ ಗೆದ್ದುಕೊಂಡವು. ಈಗ ಮಹಾರಾಷ್ಟ್ರದಲ್ಲಿ ಯಾವ ಪಕ್ಷಕ್ಕೂ ಅಧಿಕಾರ ಸುಲಭವಾಗಿ ದಕ್ಕುವ ಸಾಧ್ಯತೆ ಕಡಿಮೆ. ಕಾಂಗ್ರೆಸ್ ಮತ್ತು ಎಸ್‌ಪಿ ಆಡಳಿತ ವೈಫಲ್ಯಗಳನ್ನು ಜನಕ್ಕೆ ಹೇಳುತ್ತಿದ್ದರೂ ಬಿಜೆಪಿ ಮತ್ತು ಶಿವಸೇನಾ ಕೂಟಕ್ಕೆ ಗೆಲುವು ಮರುಭೂಮಿಯಲ್ಲಿ ನೀರು ಕಂಡಷ್ಟೇ ತ್ರಾಸ. ಅಲ್ಲದೆ ರಾಜ್‌ಠಾಕ್ರೆ ನೇತೃತ್ವದ ಮಹಾರಾಷ್ಟ ನವನಿರ್ಮಾಣ ಸೇನೆ ಒಂದು ಕಡೆ ಗರ್ಜಿಸುತ್ತಿದೆ. ಠಾಕ್ರೆ ಪಕ್ಷಕ್ಕೆ ಬಹುಮತ ಬಾರದಿದ್ದರೂ ಮತಗಳನ್ನು ಡಿವೈಡ್ ಮಾಡುವ ಅವಕಾಶ ಹೆಚ್ಚಾಗಿವೆ.

ಆಂಧ್ರಪ್ರದೇಶ
ಆಂಧ್ರ ಎರಡು ರಾಜ್ಯಗಳಾಗಿವೆ. ಒಟ್ಟು ಇರುವ 42 ಸ್ಥಾನಗಳ ಪೈಕಿ ಸೀಮಾಂಧ್ರಕ್ಕೆ 25, ತೆಲಗಾಂಣಕ್ಕೆ 17 ಸ್ಥಾನಗಳು ಸೇರಿವೆ. ಈ ಹಿಂದೆ ವೈಎಸ್‌ಆರ್ ಇದ್ದಾಗ ಕಾಂಗ್ರೆಸ್ 33, ಟಿಡಿಪಿ 6, ಟಿಆರ್‌ಎಸ್ 2, ಎಂಐಎಂ 1 ಸ್ಥಾನಗಳಲ್ಲಿ ಗೆದ್ದವು. ರಾಜಕೀಯ ಈಗ ಸಾಕಷ್ಟು ಬದಲಾಗಿದೆ. ಟಿಡಿಪಿ ಈಗಾಗಲೇ ಮೋದಿ ಜೊತೆ ಸೇರಿದೆ. ಮತ್ತೊಂದು ಕಡೆ ಟೆಸ್ಟ್ ಟ್ಯೂಬ್ ಬೇಬಿಯಂತೆ ಹುಟ್ಟಿಕೊಂಡ ನಟ ಪವನ್ ಕಲ್ಯಾಣ್‌ರ ಜನಸೇನಾ ಪಕ್ಷ ಕೂಡ ಮೋದಿಗೆ ಜೈ ಎಂದಿದೆ. ಕಾಂಗ್ರೆಸ್ ಸೇರುತ್ತದೆ ಎಂದುಕೊಂಡಿದ್ದ ಟಿಆರ್‌ಎಸ್ ಸೋನಿಯಾ ಗಾಂಧಿಗೆ ಟಾಟಾ ಮಾಡಿದೆ. ಆಂಧ್ರ ವಿಭಜನೆಯಿಂದ ಸೀಮಾಂಧ್ರದ ಜನ ಎಲ್ಲ ಪಕ್ಷಗಳನ್ನು ಖಳನಾಯಕರಂತೆ ನೋಡುತ್ತಿದ್ದಾರೆ. ಎರಡು ಭಾಗದ ಮತದಾರರ ಭಾವನೆಗಳನ್ನು ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ವೈಎಸ್‌ಆರ್ ಕಾಂಗ್ರೆಸ್‌ನ ಜಗನ್‌ಮೋಹನ್ ರೆಡ್ಡಿ ಯಾರಿಗೆ ಜೈ ಎನ್ನುತ್ತಾರೋ ಗೊತ್ತಿಲ್ಲ.

ಪಶ್ಚಿಮಬಂಗಾಲ
42 ಸ್ಥಾನಗಳನ್ನು ಒಳಗೊಂಡಿರುವ ಪಶ್ಚಿಮಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನದ್ದೇ ಹೆಚ್ಚು ಅಬ್ಬರ. ಕಳೆದ ಬಾರಿ ತೃಣಮೂಲ ಕಾಂಗ್ರೆಸ್ 19, ಸಿಪಿಎಂ 9, ಕಾಂಗ್ರೆಸ್ 6, ಬಿಜೆಪಿ 1ರಲ್ಲಿ ಗೆಲುವು ಕಂಡಿತು. ಈ ಬಾರಿಯೂ ತೃಣಮೂಲ ಕಾಂಗ್ರೆಸ್ ಪ್ರಭಾವ ಇಲ್ಲಿ ಹೆಚ್ಚಾಗಿದೆ. 25ರಿಂದ 30 ಸ್ಥಾನ ದೀದಿ ಕೈ ಸೇರುವ ಸಾಧ್ಯತೆಗಳಿವೆ ಎನ್ನುತ್ತವೆ ಇಲ್ಲಿನ ಸಮೀಕ್ಷೆಗಳು. ಆದರೆ, ದೀದಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ಸೂಚಿಸಲಿದ್ದಾರೆಯೇ? ಹೀಗೊಂದು ಚರ್ಚೆ ನಡೆಯುತ್ತಿದೆ.

ಬಿಹಾರ
ಪ್ರಾದೇಶಿಕ ಪಕ್ಷಗಳ ಅಡ್ಡೆ ಬಿಹಾರ. 40 ಲೋಕಸಭಾ ಸ್ಥಾನಗಳನ್ನು ಒಳಗೊಂಡಿರುವ ಬಿಹಾರದಲ್ಲಿ ಆರ್‌ಜೆಡಿ, ಜೆಡಿಯು, ಎಲ್‌ಜೆಪಿ ಮುಂತಾದ ಪಕ್ಷಗಳದ್ದೇ ಅಬ್ಬರ. ಪ್ರಸ್ತುತ ಜೆಡಿಯು ಅಧಿಕಾರ ಪಕ್ಷವಾಗಿದ್ದು, ಬಿಜೆಪಿ ಜೊತೆ ಕಿತ್ತಾಡಿ ಎನ್‌ಡಿಎ ಕೂಟದ ಹೊರಬಂದಿದೆ. ಮೋದಿ ಪ್ರಭಾವ ಈ ಬಾರಿ ಹೆಚ್ಚಾಗಿದೆ. ಅಲ್ಲದೆ ಬಿಜೆಪಿ ಎಲ್‌ಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಕೂಡ ಅಧಿಕಾರ ಪಕ್ಷಕ್ಕೆ ಪ್ರತಿಕೂಲವಾಗಿ ಪರಿಣಮಿಸಿದೆ. ಇನ್ನು ಲಾಲು ಪ್ರಸಾದ್ ಯಾದವ್‌ರ ಪ್ರಭಾವ, ಆರ್‌ಜೆಡಿಗೆ ಇರುವ ವೋಟ್ ಬ್ಯಾಂಕ್‌ನಿಂದ ಕಾಂಗ್ರೆಸ್ 'ಬಿಹಾರ ತನ್ನದೇ' ಎನ್ನುವ ಭಾವನೆಯಲ್ಲಿದೆ.

ಮಧ್ಯಪ್ರದೇಶ
ಮಧ್ಯಪ್ರದೇಶ 29 ಸ್ಥಾನಗಳನ್ನು ಒಳಗೊಂಡಿದೆ. ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದರ ಪ್ರಭಾವ ಲೋಕಸಭಾ ಚುನಾವಣೆ ಮೇಲೆ ಬೀರಲಿದೆ ಎಂಬುದು ರಾಜಕೀಯ ಲೆಕ್ಕಾಚಾರ. ಜೊತೆಗೆ ಮೋದಿ ಪ್ರಭಾವ ಇದೆ. ಆದರೆ, ಇಲ್ಲಿ ಎಸ್‌ಸಿ, ಎಸ್‌ಟಿಗಳ ಮತ ಬ್ಯಾಂಕ್ ದೊಡ್ಡ ಮಟ್ಟದಲ್ಲಿರುವ ಕಾರಣ ಕಾಂಗ್ರೆಸ್ ಕೂಡ ತನ್ನ ಆಟ ತೋರಿಸುವ ತಯಾರಿ ನಡೆಸಿಕೊಂಡಿದೆ.

ತಮಿಳುನಾಡು
ಮತ್ತೊಂದು ಪ್ರಾದೇಶಿಕ ಪಕ್ಷಗಳ ಬೀಡು ತಮಿಳುನಾಡು. ತಲೈವರ್, ಪುರಚ್ಚಿ ತಲೈವಿ, ಅಮ್ಮ, ಅಣ್ಣ... ಇವರ ಪ್ರಭಾವದಲ್ಲಿ ಸಿಲುಕಿರುವ ತಮಿಳು ಮತದಾರರು ಈ ಬಾರಿ ಯಾರಿಗೆ ಗೆಲುವಿನ ಮಾಲೆ ಹಾಕುತ್ತಾರೋ ಗೊತ್ತಿಲ್ಲ. ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ಪ್ರಧಾನ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು ಇಲ್ಲಿ 39 ಸ್ಥಾನಗಳಿವೆ. ಡಿಎಂಕೆ 18, ಎಐಎಡಿಎಂ 9, ಕಾಂಗ್ರೆಸ್ 8 ಸ್ಥಾನಗಳನ್ನು ಕಳೆದ ಬಾರಿ ತಮ್ಮದಾಗಿಸಿಕೊಂಡವು. ಕರುಣಾನಿಧಿ ಪುತ್ರ ಅಳಗಿರಿ ಬಂಡಾಯ ಅಧಿಕಾರದಲ್ಲಿರುವ ಜಯಲಲಿತಾ ಪಕ್ಷಕ್ಕೆ ವರವಾಗಿ ಪರಿಣಮಿಸಿದರೂ ಬಿಜೆಪಿ ಎಂಡಿಎಂಕೆ, ಡಿಎಂಡಿಕೆ, ಪಿಎಂಕೆಯಂತ ಸಣ್ಣ ಪುಟ್ಟ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಅಮ್ಮನ ಪಕ್ಷ ಚಿಂತೆಯಲ್ಲಿ ಮುಳಗಿದೆ. ಇನ್ನು ಕಾಂಗ್ರೆಸ್ ಒಂಟಿಯಾಗಿ ತಮಿಳು ಸಿಂಹಗಳ ನಾಡಿನಲ್ಲಿ ಹೋರಾಟಕ್ಕಿಳಿದಿದೆ. ಆದರೂ ತೃತೀಯ ರಂಗ ಅಸ್ತಿತ್ವಕ್ಕೆ ಬಂದು ತಾನೇ ಪ್ರಧಾನಿಯಾಗುತ್ತೇನೆಂಬ ಕನಸು ಅಮ್ಮನನ್ನು ಬಿಡದೆ ಕಾಡುತ್ತಿದೆ. ಹೀಗಾಗಿ ಶತಾಯಗತಾಯ ತಮಿಳುನಾಡಿನಲ್ಲಿ ಗೆದ್ದು ತೋರಿಸುವ ಉಮೇದು ಅಮ್ಮನದ್ದು.

ಕರ್ನಾಟಕ
ಒಟ್ಟು 28 ಲೋಕಸಭಾ ಸ್ಥಾನಗಳನ್ನು ಒಳಗೊಂಡಿರುವ ಕರ್ನಾಟಕ ಮಹತ್ವದ ಪಾತ್ರ ವಹಿಸಲಿದೆ. ಕಳೆದ ಲೋಕಸಭಾ ಚುನಾವಣೆ, ಈ ಬಾರಿಯೂ ಚುನಾವಣೆಗಳ ನಡುವೆ ರಾಜ್ಯದಲ್ಲಿ ಸಾಕಷ್ಟು ಬೆಳವಣಿಗಳು ನಡೆದಿವೆ. ಅಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 3 ಸ್ಥಾನಗಳನ್ನು ಗೆದ್ದುಕೊಂಡವು. ಆದರೆ, ಕಮಲದೊಳಗಿನ ಆಂತರಿಕ ಸಂಘರ್ಷದಿಂದ 2013ರ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ವರವಾಯಿತು. ಅದೇ ಉತ್ಸಾಹದಲ್ಲಿರುವ ಕಾಂಗ್ರೆಸ್ ಸೋನಿಯಾ ಗಾಂಧಿ ಹಾಗೂ ರಾಹುಲ್‌ಗಾಂಧಿ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಬಿ.ಎಸ್.ಶ್ರೀರಾಮುಲು ಪಕ್ಷಕ್ಕೆ ಮರಳಿರುವುದು ಬಿಜೆಪಿಗೆ ಕೊಂಚ ಮಟ್ಟಿಗೆ ವರ. ಇನ್ನು ಜೆಡಿಎಸ್ ಪ್ರಭಾವ ಪ್ರದರ್ಶಿಸುವ ಸಾಹಸ ಮಾಡುತ್ತಿದ್ದರೂ, ಹೆಚ್ಚು ಸ್ಥಾನಗಳು ತಮ್ಮದಾಗಬಹುದು ಎನ್ನುವ ಕನಸು ಕಾಂಗ್ರೆಸ್ ಪಾಳೆಯದ್ದು. ಹಾಗೆ ಬಿಜೆಪಿಗೂ ಸಹ ಮೋದಿ ಆಶಾಕಿರಣವಾಗಿದ್ದಾರೆ.

ಗುಜರಾತ್
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ರಾಜ್ಯ. ಮೂರು ಬಾರಿ ಮೋದಿಗೆ ಸಿಎಂ ಪಟ್ಟ ಕೊಟ್ಟ ಮತದಾರರು. ಆದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಇಲ್ಲಿ ಗಟ್ಟಿ ಸ್ಪರ್ಧೆ ನೀಡಿದೆ. 26 ಸ್ಥಾನಗಳ ಪೈಕಿ 15 ಬಿಜೆಪಿ ಪಾಲಿಗೆ ಬಂದರೆ, 11 'ಕೈ'ವಶವಾದವು. ಆದರೆ, ಈ ಬಾರಿ ತಮ್ಮೂರಿನವ ಪ್ರಧಾನಿಯಾಗಲಿ ಎಂಬುದು ಗುಜರಾತ್ ಮತದಾರರ ಅಭಿಪ್ರಾಯ. ಸಹಜವಾಗಿ ಬಿಜೆಪಿಗೆ ಇಲ್ಲಿ ಹೆಚ್ಚು ಸ್ಥಾನಗಳು ಸಿಗಬಹುದು.

ರಾಜಸ್ಥಾನ
ರಾಜಸ್ಥಾನ 25 ಸ್ಥಾನಗಳನ್ನು ಒಳಗೊಂಡಿದೆ. ಸದ್ಯ ಇಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ಪಕ್ಷಕ್ಕೆ ಹೆಚ್ಚು ಒಲವು ಇರುವಂತೆ ವಿರೋಧವು ಇರುವುದು ಸಹಜ. ಕನಿಷ್ಠ 23 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಹಠದಿಂದ ಬಿಜೆಪಿಗೆ ಮೈದಾನಕ್ಕಿಳಿದಿದೆ. ಆದರೆ, 2009ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿಗೆ ಆಗ ಸಿಕ್ಕಿದ್ದು ಕೇವಲ 4 ಸ್ಥಾನಗಳು ಮಾತ್ರ. ಉಳಿದಂತೆ 20 ಸ್ಥಾನಗಳು ಕಾಂಗ್ರೆಸ್ ಪಾಲಾದವು. ಈ ಹಳೆ ಗೆಲುವನ್ನು ಗಮನದಲ್ಲಿಟ್ಟುಕೊಂಡಿರುವ ಕಾಂಗ್ರೆಸ್ ಕೂಡ 25 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.

-ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement