ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ಸೌಧಾ'ಘರ್ 'ಸೌಧಾ'ಘರ್

Lingaraj Badiger
Updated On : 16 Apr 2014, 4:17 am

ಇಂದು ಲೋಕಸಭಾ ಚುನಾವಣೆ. ಪಾರ್ಲಿಮೆಂಟ್ ಭವನದೊಳಗೆ ಸೀಟು ಕಾಯ್ದಿರಿಸುವ ದಿನ. ಎಲ್ಲರ ಕಣ್ಣು ಸಂಸತ್ ಭವನದತ್ತ ನೆಟ್ಟಿರುವ ಹೊತ್ತಿನಲ್ಲಿ ವಿಧಾನಸಭಾ ಭವನಗಳ ಬಗ್ಗೆ ಒಮ್ಮೆ  ಕಣ್ಣಾಯಿಸಿದರೆ ಹೇಗೆ? ರಾಜ್ಯದ ರಾಜಕೀಯ ಶಕ್ತಿಕೇಂದ್ರಗಳು ಕೂಡ ಈಗ ಲೋಕಸಭಾ ಲೆಕ್ಕಾಚಾರದಲ್ಲಿ ಮಗ್ನ. ಇಲ್ಲಿ ಈಗ  ರಾಜಕೀಯ ಚಟುವಟಿಕೆಗಳಿಗೆ ಕೊಂಚ ವಿರಾಮ. ಹಾಗಾಗಿ ವಿಧಾನಭವನಗಳು ಕೂಲ್ ಕೂಲ್. ಒಂದು ಸತ್ಯ ಒಪ್ಪಿಕೊಳ್ಳಿ. ರಾಜಕೀಯದೆಡೆಗೆ ಅಸಹ್ಯವಿದ್ದರೂ, ರಾಜಕಾರಣಿಗಳೆಡೆಗೆ ಆಕ್ರೋಶವಿದ್ದರೂ, ನಮಗ್ಯಾರಿಗೂ ವಿಧಾನಸೌಧದ ಮೇಲಿನ ಆಕರ್ಷಣೆ ಕಡಿಮೆ ಆಗಿಯೇ ಇಲ್ಲ. ಹೌದು ತಾನೇ? ಈ ಆಕರ್ಷಣೆ ರಾಜಕೀಯದೆಡೆಗಿನದ್ದಲ್ಲ. ಆ ಕಟ್ಟಡದ ವಾಸ್ತುಶಿಲ್ಪ ಸೌಂದರ್ಯದ ಮೇಲಿನದ್ದು. ಇಂದಿಗೂ ವಿಧಾನಸೌಧ ಅಂದರೆ ಕೇವಲ ಕರ್ನಾಟಕದವರಿಗಲ್ಲ, ಭಾರತದವರಿಗಲ್ಲ, ವಿದೇಶೀಯರಿಗೂ ಮತ್ತೆ ಮತ್ತೆ ನೋಡಬೇಕೆನಿಸುವ ಭವ್ಯಭವನ. ಅದನ್ನು ಪ್ರೇಕ್ಷಣೀಯ ಸ್ಥಳ ಎಂಬಂತೆಯೇ ಪರಿಗಣಿಸಲಾಗುತ್ತದೆ. ವಿಧಾನಸೌಧ ವೀಕ್ಷಣೆ, ಅದರೊಂದಿಗೆ ಫೋಟೋ ಯಾವತ್ತಿಗೂ ಪ್ರವಾಸಿಗಳ ಪಾಲಿನ ಸ್ಮರಣೀಯ ಘಳಿಗೆಗಳೇ. ಕರ್ನಾಟಕದ ಪಾಲಿಗೆ ವಿಧಾನಸೌಧ ಇದ್ದಂತೆ ಪ್ರತಿರಾಜ್ಯಕ್ಕೂ ಒಂದು ವಿಧಾನಸೌಧ ಇರಲೇಬೇಕಲ್ಲವೇ? ಅಲ್ಲಿನ ವಿಧಾನಸೌಧಗಳು ಹೇಗಿರಬಹುದು ಎಂದು ಹುಡುಕಿದಾಗ ಕೆಲವು ರಾಜ್ಯದ ವಿಧಾನಭವನಗಳು ಕೆಂಗಲ್ ಹನುಮಂತಯ್ಯನವರ ಈ ಶಿಲ್ಪವನ್ನು ಮೀರಿಸುವಂತಿದ್ದರೆ, ಕೆಲವು ರಾಜ್ಯದ ಕಟ್ಟಡಗಳು ಮಾಮೂಲಿ ಸರ್ಕಾರಿ ಬಿಲ್ಡಿಂಗ್‌ನಂತೆ ನೀರಸವಾಗಿ ಕಂಡುಬಂದವು. ಇನ್ನು ಕೆಲವು ನಮ್ಮ  ವಿಧಾನಸೌಧದ ಪೇಲವ ನಕಲಿನಂತೆ ಕಂಡವು. ಮೂವತ್ತೈದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ನಮ್ಮ ದೇಶದ ಕೆಲವು ವಿಧಾನಭವನಗಳ ಚಿತ್ರಪರಿಚಯ ಇಲ್ಲಿದೆ.

ವಿಧಾನ ಸೌಧ-ಕರ್ನಾಟಕ
ಹಲವು ವಿದೇಶಿ ವಾಸ್ತುಶಿಲ್ಪಗಳ ಪ್ರೇರಣೆಯಿಂದ ಕೆಂಗಲ್ ಹನುಮಂತಯ್ಯನವರ ಕನಸಿನ ಸೌಧ 1956ರಲ್ಲಿ ವಿಧಾನಸೌಧವಾಗಿ ತಲೆಯೆತ್ತಿ ನಿಂತಿತು. ಗ್ರಾನೈಟ್ ಕಲ್ಲುಗಳಿಂದ ಕಟ್ಟಲ್ಪಟ್ಟಿರುವ ಈ ಮಂದಿರ 2300್ಢ1150ಅಡಿಗಳಿದ್ದು ದೇಶದ ಅತಿದೊಡ್ಡ ವಿಧಾನಭವನ ಎಂಬ ಹಿರಿಮೆ ಗಳಿಸಿದೆ. ಪಕ್ಕದಲ್ಲೇ ವಿಧಾನಸೌಧದ ನಕಲು ವಿಕಾಸ ಸೌಧ ಕಟ್ಟಿದರೂ ಕೂಡ ವಿಧಾನಸೌಧದ ಅಂದ ಅದರಲ್ಲಿ ಮೂಡಲೇ ಇಲ್ಲ!

ಹೈದರಾಬಾದ್-ಆಂಧ್ರಪ್ರದೇಶ
ಹಳೆ ಹೈದರಾಬಾದಿನಲ್ಲಿರೋ ಟೌನ್ ಹಾಲ್ ಕಟ್ಟಡವೇ ಆಂಧ್ರದ ವಿಧಾನಮಂದಿರ. ನಿಜಾಮರ ಕಾಲದ ಈ ಕಟ್ಟಡ 1913ರಲ್ಲಿ ಕಟ್ಟಿದ್ದು. 295 ಸದಸ್ಯರಿಗೆ ಸ್ಥಳಾವಕಾಶ ಇರುವ ಈ ಕಟ್ಟಡ ಇದೀಗ ನವೀಕರಣಗೊಂಡು ಇನ್ನಷ್ಟು ದೊಡ್ಡದೂ ಆಗಿದೆ. ಹೊಸ ವಿಧಾನಭವನದ ಮುಂದೆ ಇರುವ 22ಅಡಿ ಎತ್ತರದ ಕಂಚಿನ ಮಹಾತ್ಮಾ ಗಾಂಧಿ ಪ್ರತಿಮೆ ಇಲ್ಲಿನ ವಿಶೇಷತೆ.

ಮುಂಬೈ -ಮಹಾರಾಷ್ಟ್ರ
ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್ ಬಳಿ ಇರುವ ಈ ವಿಧಾನಭವನ,  ಹಲವು ಬಾರಿ ಉಗ್ರರ ಸಂಚಿನ ಲಿಸ್ಟಿನಲ್ಲಿ ಬಂದಿದೆ. ಅದೃಷ್ಟವಶಾತ್ ಈವರೆಗೆ ಯಾವುದೇ ದಾಳಿ ಅಥವಾ ಹಾನಿ ಆಗಿಲ್ಲ.

ಇಟಾನಗರ-ಅರುಣಾಚಲ ಪ್ರದೇಶ
ಚಿಕ್ಕರಾಜ್ಯ-ಚಿಕ್ಕ ಅಸೆಂಬ್ಲಿ ಬಿಲ್ಡಿಂಗ್
1987ರ ನಂತರ 60 ಸದಸ್ಯರ ಮನೆಯಾದರೂ ಇದು ಮಿನಿಸೌಧವೇ!

ಗೌಹಾತಿ -ಅಸ್ಸಾಂ
39 ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲೇ ವಿಧಾನಮಂಡಲ ಕಲಾಪ ನಡೆಸಿದ ಅಸ್ಸಾಮಿಗೆ ಇದೀಗ ಸ್ವಂತ ವಿಧಾನಸೌಧದ ಭಾಗ್ಯ ದೊರಕಿದೆ. 234 ಕೋಟಿ ರುಪಾಯಿ ವೆಚ್ಚದ ಈ ಭವನದಲ್ಲಿ ಶಾಸಕರ ಕೊಠಡಿಗಳು ವಿಶ್ರಾಂತಿಗೃಹಗಳು, ಸರ್ಕಾರಿ ಕಚೇರಿಗಳು ಹೀಗೆ ಹತ್ತು ಹಲವು ಸೌಲಭ್ಯಗಳು ಒಂದೇ ಕಡೆ ನೆಲೆಗೊಂಡಿವೆ.

ಪಟ್ನಾ -ಬಿಹಾರ್
ಇಲ್ಲಿ ವಿಧಾನಭವನದ ಹೆಸರು ಗ್ರೀನ್ ಲೆಜಿಸ್ಲೇಚರ್ ಕಾಂಪ್ಲೆಕ್ಸ್ ಎಂದು. 2012ರಲ್ಲಿ ಉದ್ಘಾಟನೆಯಾದ ಈ ಕಟ್ಟಡದ ನಿರ್ಮಾಣ ವೆಚ್ಚ ಒಟ್ಟು 140 ಕೋಟಿ. ಮುಖ್ಯಮಂತ್ರಿ ನಿತೀಶ್‌ಕುಮಾರ್  ರಿಂದ ಶಂಕುಸ್ಥಾಪನೆಯಾಗಿದ್ದರಿಂದ ಮಾಜಿ ಸಿಎಂ ಲಾಲೂಪ್ರಸಾದ್‌ರಲ್ಲಿ ಅಸೂಯೆ ಮೂಡಿ ವಿವಾದವಾಗಿತ್ತು ಎಂದೂ ವರದಿಯಾಗಿತ್ತು.

ಜೈಪುರ -ರಾಜಸ್ಥಾನ
ಕರ್ನಾಟಕದ ವಿಧಾನಸೌಧ ಹೊರತುಪಡಿಸಿದರೆ, ಭಾರತದ ಅತ್ಯುತ್ತಮ ವಿಧಾನಭವನ ರಾಜಸ್ಥಾನದ್ದು ಅಂದರೆ ತಪ್ಪಾಗದು. ಜೈಪುರದ ಜ್ಯೋತಿನಗರದ ಈ ಮಹಲು ಪೂರ್ಣವಾಗಿದ್ದು 2001ರಲ್ಲಿ. ಎಂಟು ಮಹಡಿಯ ಈ ಬಂಗಲೆ ನೂರನಲವತ್ತೈದು ಅಡಿ ಎತ್ತರವಿದೆ. ಇದೂ ಕೂಡ ಜೈಪುರದ ಒಂದು ಪ್ರೇಕ್ಷಣೀಯ ಸ್ಥಳವೆಂದೇ ಪ್ರಸಿದ್ಧವಾಗಿದೆ.

ಗೋವಾ
ಬ್ರಿಟಿಷ್ ಸಂಸ್ಕೃತಿಯನ್ನೇ ಹೆಚ್ಚು ಮೈಗೂಡಿಸಿಕೊಂಡಿದ್ದ ಗೋವಾ, ರಾಜ್ಯವೆನಿಸಿಕೊಳ್ಳುವ ಮೊದಲೇ ಈ ಕಛೇರಿ ಸೆಕ್ರೆಟರಿಯಟ್ ರೂಪದಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಗಾಂಧಿನಗರ್-ಗುಜರಾತ್
900 ಸದಸ್ಯರು ಕೂರಬಲ್ಲ ಈ ಭವ್ಯಸೌಧದ ಛಾವಣಿ ಅಷ್ಟಕೋನದ ಮಾದರಿಯಲ್ಲಿದೆ. ಮೇಲಿನಿಂದ ಸೂರ್ಯನ ಬೆಳಕು ತೂರಿಬರುವಂತೆ ಅವಕಾಶ ಕಲ್ಪಿಸಲಾಗಿದೆ.

ಭೋಪಾಲ್-ಮಧ್ಯಪ್ರದೇಶ
ಸಾಂಚಿ ಬೌದ್ಧ ಸ್ತೂಪ ಮಾದರಿಯಲ್ಲಿ ಗುಂಬಜ್ ಮಾಡಿ ಕಟ್ಟಿರುವ ಭೋಪಾಲ್ ವಿಧಾನಸೌಧ ಅಲ್ಪಸ್ವಲ್ಪ ಬೆಂಗಳೂರಿನ ವಿಧಾನಸೌಧದಿಂದಲೂ ಪ್ರೇರಣೆ ಪಡೆದಿದೆ.

ಶಿಮ್ಲಾ-ಹಿಮಾಚಲಪ್ರದೇಶ
ಸ್ವಾತಂತ್ರಪೂರ್ವದ ಈ ಕಟ್ಟಡಕ್ಕೆ ಬ್ರಿಟಿಷರ ಕಾಲದಿಂದಲೇ ಮಹತ್ವವಿತ್ತು. ಶಿಮ್ಲಾವನ್ನು ಬೇಸಿಗೆ ರಾಜಧಾನಿ ಎಂದು ಹೆಸರಿಸಿದ್ದ ಆಂಗ್ಲರು ಈ ಸೌಧವನ್ನು ಅವರ ಮಾದರಿಯಲ್ಲೇ ನಿರ್ಮಿಸಿದ್ದರು.

ರಾಂಚಿ- ಜಾರ್ಖಂಡ್
ಧೋನಿಯ ತವರೂರು ರಾಂಚಿ. ಹೊಸರಾಜ್ಯವಾಗಿ ರೂಪುಗೊಂಡು ಕೆಲವೇ ವರ್ಷಗಳಾದ್ದರಿಂದ, ರಾಂಚಿಯಲ್ಲಿನ್ನೂ ಹೊಸ ವಿಧಾನಸೌಧದ ನಿರ್ಮಾಣವಾಗಿಲ್ಲ. ಹಳೆಯದೊಂದು ಕಟ್ಟಡದ್ದಲ್ಲೇ ಇನ್ನೂ ಕಾರ್ಯಕಲಾಪ ಜಾರಿಯಲ್ಲಿದೆ.

ತಿರುವನಂತಪುರಂ-ಕೇರಳ
ಇಲ್ಲಿ ಮಂದಿರವನ್ನು ನಿಯಮಸಭಾ ಎಂದು ಕರೆಯಲಾಗುತ್ತದೆ. 1998ರಲ್ಲಿ ನಿರ್ಮಾಣವಾದ ಈ ಕಟ್ಟಡ ಏಷ್ಯಾದಲ್ಲೇ ಅತಿ ದೊಡ್ಡ ಅಸೆಂಬ್ಲಿ ಹಾಲ್ ಇರುವ  ವಿಧಾನಸೌಧ.ಮೊತ್ತಮೊದಲ ಬಾರಿಗೆ ಸೆಂಟ್ರಲೀ ಏರ್‌ಕಂಡಿಷನ್ ವ್ಯವಸ್ಥೆ ಹೊಂದಿದ ಖ್ಯಾತಿ.

ಇಂಫಾಲ್-ಮಣಿಪುರ
ಕೃತಕ ಸರೋವರದಿಂದ ಆವೃತವಾಗಿರೋ ಈ ಸುಂದರ ಭವನ ಉದ್ಘಾಟನೆಯಾಗಿದ್ದು 2011ರ ಡಿಸೆಂಬರ್ 3ರಂದು. ಭಯೋತ್ಪಾದಕರ ದಾಳಿಯಿಂದ ಸ್ವಲ್ಪಮಟ್ಟಿನ ಸೆಕ್ಯೂರಿಟಿಗಾಗಿ, ಈ ಸರೋವರದ ನಿರ್ಮಾಣ.

ಐಜ್ವಾಲ್-ಮಿಜೋರಾಂ
ರಾಜಭವನದ ಪಕ್ಕದಲ್ಲೇ ವಿಧಾನಭವನವಿರುವುದು ಇಲ್ಲಿನ ವಿಶೇಷ.

ಕೋಹಿಮಾ- ನಾಗಾಲ್ಯಾಂಡ್
1957ರಿಂದ ಅಸ್ತಿತ್ವದಲ್ಲಿರೋ ಅಸೆಂಬ್ಲಿಯ ಕಟ್ಟಡ ಅಂಥಾ ವಿಶೇಷವಾಗೇನೂ ಇಲ್ಲದಿದ್ದರೂ ವಿಶಾಲವಾಗಿರೋದು ನಿಜ.

ಭುವನೇಶ್ವರ-ಒಡಿಶಾ
ಸುತ್ತ ಫರ್ಲಾಂಗುಗಟ್ಟಲೇ ಹಸಿರು ಹುಲ್ಲುಹಾಸು, ಗಿಡಮರಗಳಿಂದ ಕಂಗೊಳಿಸುವ  ಭವ್ಯ ಸೌಧ, ಅಮೇರಿಕಾದ ವೈಟ್‌ಹೌಸ್, ನಮ್ಮ ಪಾರ್ಲಿಮೆಂಟ್ ಭವನ ಎರಡನ್ನೂ ನೆನಪಿಸುತ್ತದೆ.

ಗ್ಯಾಂಗ್‌ಟಕ್-ಸಿಕ್ಕಿಂ
ಸಿಕ್ಕಿಂನ ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಲ್ಪಟ್ಟಿರುವ ಇದು ಮೂರಂತಸ್ತು ಹೊಂದಿದ್ದು,  ನಡುವೆ ವೃತ್ತಾಕಾರವಿದ್ದು, ಸುತ ಅಷ್ಟಕೋನಾಕೃತಿಯಿದೆ.

ಅಗರ್ತಲಾ- ತ್ರಿಪುರ
ಮೈಸೂರಿನ ಲಲಿತಮಹಲ್ ಪ್ಯಾಲೇಸ್ ನೆನಪಿಸುವ ಈ ಶ್ವೇತಭವನ,  ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿದೆ.

ಚೆನ್ನೈ-ತಮಿಳುನಾಡು
1952ರಲ್ಲಿ ನಿರ್ಮಿಸಿದ್ದ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಅಸೆಂಬ್ಲಿ,  ಕೆಲ ವರ್ಷಗಳಲ್ಲಿ ಹೊಸ ಕಟ್ಟಡಕ್ಕೆ ಶಿಫ್ಟ್ ಆಯ್ತು. ಕಾರಣ ಹೆಚ್ಚಾದ ಸದಸ್ಯಬಲ.

-ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement