ತೊಗಾಡಿಯಾ ಹಾಗೆ ಹೇಳಿಯೇ ಇಲ್ವಂತೆ!
ಹಿಂದೂಗಳ ಬಾಹುಳ್ಯವಿರುವ ಪ್ರದೇಶದಲ್ಲಿ ಮುಸ್ಲಿಮರಿಗೆ ಆಸ್ತಿ ಖರೀದಿಗೆ ಅವಕಾಶ ನೀಡಬೇಡಿ...
ನವದೆಹಲಿ: ಹಿಂದೂಗಳ ಬಾಹುಳ್ಯವಿರುವ ಪ್ರದೇಶದಲ್ಲಿ ಮುಸ್ಲಿಮರಿಗೆ ಆಸ್ತಿ ಖರೀದಿಗೆ ಅವಕಾಶ ನೀಡಬೇಡಿ ಎಂದು ಪ್ರವೀಣ್ ತೊಗಾಡಿಯಾ ಹೇಳಿಯೇ ಇಲ್ಲ ಎಂದು ಆರೆಸ್ಸೆಸ್ ಸ್ಪಷ್ಟಪಡಿಸಿದೆ.
'ನಾನು ಈ ಕುರಿತು ತೊಗಾಡಿಯಾ ಜತೆ ಮಾತನಾಡಿದ್ದೇನೆ. ಅವರು ಆ ರೀತಿ ಹೇಳಿಯೇ ಇಲ್ಲ ಎಂದಿದ್ದಾರೆ. ಯಾವುದೇ ಸ್ವಯಂಸೇವಕ ಈ ರೀತಿಯ ವಿಭಜನೆಯ ಹೇಳಿಕೆ ನೀಡುವುದಿಲ್ಲ. ಆರೆಸ್ಸೆಸ್ನವರು ಎಲ್ಲರನ್ನೂ ಒಂದೇ ರೀತಿ ನೋಡುತ್ತಾರೆ. ನಮ್ಮದು ಒಂದೇ ದೇಶ ಒಂದೇ ಜನ ಎನ್ನುವ ಸಿದ್ಧಾಂತ ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಹೇಳಿದ್ದಾರೆ.
ದೂರ ಉಳಿದ ಬಿಜೆಪಿ: ತೊಗಾಡಿಯಾ ವಿವಾದದಿಂದ ದೂರ ಉಳಿಯಲು ಬಿಜೆಪಿ ನಿರ್ಧರಿಸಿದೆ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಬಿಜೆಪಿ ಮುಖಂಡರು ನಿರಾಕರಿಸಿದ್ದಾರೆ.
ಪ್ರತಿಭಟನೆಯಲ್ಲೂ ತೊಗಾಡಿಯಾ ಭಾಗಿ
ಗುಜರಾತ್ನ ರಾಜ್ಕೋಟ್ನಲ್ಲಿ ಮುಸ್ಲಿಂ ಉದ್ಯಮಿಯೊಬ್ಬರು ಖರೀದಿಸಿದ ಜಾಗದ ಎದುರು ನಡೆಸಲಾದ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದ ತೊಗಾಡಿಯಾ ನಂತರ ಆ ಉದ್ಯಮಿಗೆ ಜಾಗ ಖಾಲಿ ಮಾಡುವಂತೆ 48 ಗಂಟೆಗಳ ಗಡುವನ್ನೂ ನೀಡಿದ್ದರು ಎಂದು ಹೇಳಲಾಗಿದೆ. ಇದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ.
ಅಕಾಲಿದಳದಿಂದಲೂ ಖಂಡನೆ
ತೊಗಾಡಿಯಾ ಹೇಳಿಕೆಗೆ ಬಿಜೆಪಿ ಮಿತ್ರಪಕ್ಷ ಅಕಾಲಿದಳದಿಂದಲೂ ಖಂಡನೆ ವ್ಯಕ್ತವಾಗಿದೆ. ಈ ರೀತಿಯ ಭಾಷೆಯಲ್ಲಿ ಮಾತನಾಡುವವರು ಯಾರೇ ಆಗಿದ್ದರೂ ಅವರಿಗೆ ನಮ್ಮ ಸಮಾಜದಲ್ಲಿ ಅವಕಾಶ ಇಲ್ಲ. ಇಂಥವರನ್ನು ಪಕ್ಷದಿದ ಹೊರ ಹಾಕಬೇಕು ಎಂದು ಅಕಾಲಿದಳ ಅಭಿಪ್ರಾಯ ವ್ಯಕ್ತಪಡಿಸಿದೆ.
ಟೇಪ್ ಆಲಿಸಿದ ಬಳಿಕ ಕ್ರಮ
ತೊಗಾಡಿಯಾ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ತೊಗಾಡಿಯಾ ಧ್ವನಿ ಮುದ್ರಿತ ಟೇಪ್ ನೀಡುವಂತೆ ಗುಜರಾತ್ನ ಚುನಾವಣಾ ಆಯುಕ್ತರಿಗೆ ಸೂಚಿಸಿದೆ. ತೊಗಾಡಿಯಾ ಹೇಳಿಕೆಯನ್ನು ಆಲಿಸಿದ ಬಳಿಕ ಆಯೋಗ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಭಾವನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ತೊಗಾಡಿಯಾ ಯಾವತ್ತೂ ವಿಷಕಾರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ದೇಶದ ಏಕತೆ ಮತ್ತು ಸಮಗ್ರತೆಯಲ್ಲಿ ನಂಬಿಕೆ ಇರಿಸದ ಒಂದು ವರ್ಗಕ್ಕೆ ಸೇರಿದ ವ್ಯಕ್ತಿ ಅವರು. ಈ ರೀತಿಯ ವ್ಯಕ್ತಿಗಳ ಬಗ್ಗೆ ಏನು ಹೇಳಲು ಸಾಧ್ಯ?
- ಕಪಿಲ್ ಸಿಬಲ್, ಕಾಂಗ್ರೆಸ್ ಮುಖಂಡ
ಪ್ರವೀಣ್ ತೊಗಾಡಿಯಾರನ್ನು ಆಸ್ಪತ್ರೆಗೆ ಸೇರಿಸಬೇಕು. ಈ ರೀತಿಯ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆ.
- ರಶೀದ್ ಅಳ್ವಿ, ಕಾಂಗ್ರೆಸ್ ನಾಯಕ