6ನೇ ಹಂತಕ್ಕೆ ಪ್ರಚಾರ ಅಂತ್ಯ
ನವದೆಹಲಿ: ಗುರುವಾರ 6ನೇ ಹಂತದ ಮತದಾನ ನಡೆಯಲಿರುವ 12 ರಾಜ್ಯಗಳ 117 ಕ್ಷೇತ್ರಗಳಲ್ಲಿ ಮಂಗಳವಾರ ಪ್ರಚಾರ ಅಂತ್ಯಗೊಂಡಿದೆ. ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಈಗ ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಲು ಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್, ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ, ಎಸ್ಪಿ ಮುಖ್ಯಸ್ಥ ಮುಲಾಯಂ ಮತ್ತಿತರ ಘಟಾನುಘಟಿಗಳ ಹಣೆಬರಹವನ್ನು ಗುರುವಾರ ಮತದಾರರು ಬರೆಯಲಿದ್ದಾರೆ.
ಮೋದಿ ಬಂದರೆ ಪಾಕ್ ನಾಶ
ನವದೆಹಲಿ: ಮೋದಿ ಪ್ರಧಾನಿಯಾದರೆ ಆರು ತಿಂಗಳಲ್ಲಿ ಪಾಕಿಸ್ತಾನವನ್ನು ನಾಶ ಮಾಡುತ್ತಾರೆ ಎಂದು ಶಿವಸೇನೆ ನಾಯಕ ರಾಮದಾಸ್ ಕದಂ ಅಬ್ಬರಿಸಿದ್ದಾರೆ. ಕದಂ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. 'ಮುಂಬೈನ ಆಜಾದ್ ಮೈದಾನದಲ್ಲಿ 5 ಲಕ್ಷ ಮುಸ್ಲಿಮರು ಸೇರಿಕೊಂಡು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಾರೆ, ಮಹಿಳಾ ಪೊಲೀಸರಿಗೆ ಕಿರುಕುಳ ನೀಡುತ್ತಾರೆ. ಮಹಾರಾಷ್ಟ್ರದಲ್ಲೇ ಇಂಥ ಕೃತ್ಯ ನಡೆಸುತ್ತಾರೆ ಎಂದಾದರೆ ಅವರಿಗೆ ಮೋದಿ ತಕ್ಕ ಪಾಠ ಕಲಿಸುತ್ತಾರೆ' ಎಂದಿದ್ದರು. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದಾರೆ ಕದಂ.
ಕೋಮುವಾದಿಗಳಾಗಿ: ಇಲ್ಮಿ
ನವದೆಹಲಿ: ' ಮತ ಹಾಕುವ ಸಂದರ್ಭದಲ್ಲಿ ನಿಮ್ಮ ಹಿತ ಕಾಯಲು ಕೋಮುವಾದಿಗಳಾಗಿ' ಹೀಗೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಆಮ್ ಆದ್ಮಿ ಪಕ್ಷದ ನಾಯಕಿ ಶಾಜಿಯಾ ಇಲ್ಮಿ. ಗಾಜಿಯಾಬಾದ್‌ನ ಅಭ್ಯರ್ಥಿಯೂ ಆಗಿರುವ ಅವರು ಮುಸ್ಲಿಮರು ತೀರಾ ಜಾತ್ಯತೀತ ದೃಷ್ಟಿಯುಳ್ಳವರಾಗಿರುವ ಹಿನ್ನೆಲೆಯಲ್ಲಿ ಸಮುದಾಯದ ಮತಗಳು ವಿಭಜನೆಯಾಗುತ್ತವೆ. ಬೇರೆ ಬೇರೆ ಪಕ್ಷಗಳಿಗೆ ತಮ್ಮದೇ ಆದ ವೋಟ್ ಬ್ಯಾಂಕ್ ಇದೆ. ಮುಸ್ಲಿಮರ ಮತ ಹಂಚಿಕೆಯಾಗುವುದರಿಂದ ಎಲ್ಲರೂ ತಮ್ಮ ಸಮುದಾಯದ ಬಗ್ಗೆ ಮಾತ್ರ ಯೋಚಿಸಬೇಕು ಎಂದಿದ್ದಾರೆ. ಕೇಜ್ರಿವಾಲ್ ನಮ್ಮವರೇ, ಆದ್ದರಿಂದ ಎಎಪಿಗೆ ಮತ ಹಾಕಿ ಎಂದು ಇಲ್ಮಿ ಹೇಳಿದ್ದಾರೆ.
ಪಾಕ್: ಬಿಜೆಪಿ ವೆಬ್‌ಸೈಟ್ ಬ್ಲಾಕ್
ಇಸ್ಲಾಮಾಬಾದ್: ಪಾಕಿಸ್ತಾನದ ಜನತೆಗೆ ಬಿಜೆಪಿ ವೆಬ್‌ಸೈಟ್ ವೀಕ್ಷಿಸುವ ಅವಕಾಶವಿಲ್ಲ. ಪಾಕಿಸ್ತಾನದಲ್ಲಿ ತನ್ನ ವೆಬ್‌ಸೈಟ್ ಲಭ್ಯವಾಗದಂತೆ ಅದನ್ನು ಬಿಜೆಪಿ ಲಾಕ್ ಮಾಡಿದೆ. ವೆಬ್‌ಸೈಟ್‌ನಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಗ್ಗೆ ಹಲವು ಮಾಹಿತಿಯಿದ್ದು, ಆ ಪೋರ್ಟಲ್ ಪಾಕಿಸ್ತಾನೀಯರು ವೀಕ್ಷಿಸದಂತೆ ಅದನ್ನು ಲಾಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಚ್ಛೇದನ ವಿಚಾರ ಬಹಿರಂಗ
ಪಟನಾ: ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್‌ವಿಲಾಸ್ ಪಾಸ್ವಾನ್ ಅವರು 1981ರಲ್ಲಿ ತಾನು ಮೊದಲ ಪತ್ನಿಗೆ ವಿಚ್ಛೇದನ ನೀಡಿರುವುದಾಗಿ ಮೊತ್ತಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಬಿಹಾರದ ಹಜೀಪುರ ಕ್ಷೇತ್ರದಿಂದ ಪಾಸ್ವಾನ್ ಸ್ಪರ್ಧಿಸುತ್ತಿದ್ದಾರೆ. ಅವರು ಅಫಿಡವಿಟ್‌ನಲ್ಲಿ ತಮ್ಮ ಮೊದಲ ಪತ್ನಿಯ ಹೆಸರು ಸೇರಿಸಿಲ್ಲ ಎಂಬ ವಿಚಾರವನ್ನೆತ್ತಿ ಜೆಡಿಯು ಅಭ್ಯರ್ಥಿ ವಿವಾದ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಸ್ವಾನ್ ಅವರು ತಮ್ಮ ಮೊದಲ ಪತ್ನಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಗೆಲ್ಲಿಸಿದ್ರೆ ಮದುವೆ ಮಾಡಿಸುವೆ
ಬರ್ಪೇಟಾ: 'ನೀವು ನನ್ನನ್ನು ಗೆಲ್ಲಿಸದರೆ ನಾನೂ ಮದುವೆಯಾಗುವೆ. ನಿಮಗೂ ಮದುವೆ ಮಾಡಿಸುವೆ'. ಅಸ್ಸಾಂನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರಿಗೆ ಇಂತಹ ಆಶ್ವಾಸನೆ ನೀಡಿದ್ದಾರೆ. ಕಮಾಲುದ್ದೀನ್(66) ಈಗಲೂ ಅವಿವಾಹಿತ. ಚುನಾವಣೆಯಲ್ಲಿ ಗೆಲ್ಲುವವರೆಗೂ ಮದುವೆಯಾಗಲ್ಲ ಎಂದು ಶಪಥ ಮಾಡಿದ್ದಾರೆ. ಈವರೆಗೆ 7 ಬಾರಿ ಸೋಲುಂಡಿದ್ದಾರೆ. ಈ ಬಾರಿಯೂ ಕಣಕ್ಕಿಳಿದಿರುವ ಅವರು ಗೆಲ್ಲುವ ವಿಶ್ವಾಸದಲ್ಲಿದ್ದು ಮದುವೆಯಾಗುವ ಕನಸು ಕಾಣುತ್ತಿದ್ದಾರೆ.
ಯೋಗ ಶಿಬಿರ ದುರ್ಬಳಕೆ ಸಲ್ಲ
ನವದೆಹಲಿ: ಯೋಗ ಶಿಬಿರಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸುತ್ತಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಅಂತಹ ಶಿಬಿರಗಳಿಗೆ ಅವಕಾಶ ನೀಡದಿರಿ ಎಂದು ಜಿಲ್ಲಾ ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ. ಯೋಗಗುರು ಬಾಬಾ ರಾಮ್‌ದೇವ್ ಅವರು ತಮ್ಮ ಯೋಗ ಶಿಬಿರಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ಹಲವು ರಾಜಕೀಯ ಪಕ್ಷಗಳು ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಆಯೋಗ ಈ ಆದೇಶ ನೀಡಿದೆ.
ಮುಸ್ಲಿಮರು ಬಿಜೆಪಿಗೆ ಹೆದರ್ಬೇಕಿಲ್ಲ
ಕಾನ್ಪುರ: ಮುಸ್ಲಿಮರು ಬಿಜೆಪಿಗೆ ಹೆದರಬೇಕಾಗಿಲ್ಲ. ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯದಲ್ಲೂ ಕೋಮುಗಲಭೆ ಆಗದಿರುವುದು ಇದನ್ನು ದೃಢಪಡಿಸುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಹೇಳಿದ್ದಾರೆ. ಕಾನ್ಪುರದಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೋಶಿ, ಇತರೆ ಪಕ್ಷಗಳು ಮುಸ್ಲಿಮರಲ್ಲಿ ಬಿಜೆಪಿ ಬಗ್ಗೆ ಭಯ ಹುಟ್ಟಿಸಿ ಮತಬ್ಯಾಂಕ್ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಯುಪಿಎ ಅಸ್ತಿತ್ವ ಕಳೆದುಕೊಳ್ಳಲ್ಲ
ಮುಂಬೈ: ಚುನಾವಣೆ ಬಳಿಕವೂ ಯುಪಿಎ ಅಸ್ತಿತ್ವದಲ್ಲಿರಲಿದೆ. ಆದರೆ, ಕಾಂಗ್ರೆಸ್‌ನ ಬಲದ ಮೇಲಲ್ಲ. ಇತರೆ ಪಕ್ಷಗಳೂ ಮೈತ್ರಿಕೂಟದಲ್ಲಿ ಮುಖ್ಯ ಪಾತ್ರವಹಿಸಲಿವೆ...! ಹೀಗೆಂದವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್. ಒಂದು ವೇಳೆ ಈ ಚುನಾವಣೆ ಬಳಿಕ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೂ ಯುಪಿಎ ಮೈತ್ರಿಕೂಟ ಮೊದಲಿನಂತೆ ಒಂದಾಗಿ ಇರಲಿದೆ ಎಂದು ಪವಾರ್ ಹೇಳಿದ್ದಾರೆ. ಕಾಂಗ್ರೆಸ್‌ಗೆ ಹಿನ್ನಡೆ ಹೊಸತಲ್ಲ. ಅದು ಅನೇಕ ಬಾರಿ ಹಿನ್ನಡೆಗೆ ಒಳಗಾಗಿದೆ. ಅದೇ ರೀತಿ ಮತ್ತೆ ಮತ್ತೆ ಚೇತರಿಸಿಕೊಳ್ಳುತ್ತಲೂ ಇದೆ. ಅದೊಂದು ರೀತಿಯಲ್ಲಿ ವಿಚಿತ್ರ ಪಕ್ಷ. ಹಿನ್ನಡೆ, ಮುನ್ನಡೆ ಅದಕ್ಕೆ ಹೊಸದಲ್ಲ ಎಂದು ಪವಾರ್ ಹೇಳಿದ್ದಾರೆ.
ರಾಹುಲ್‌ಗೆ ಭೇಷ್: ರಾಹುಲ್ ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ. ಸಾಕಷ್ಟು ಪ್ರವಾಸ ಮಾಡುತ್ತಿದ್ದಾರೆ, ಅನೇಕ ರ್ಯಾಲಿಗಳಲ್ಲಿ ಭಾಷಣ ಮಾಡುತ್ತಿದ್ದಾರೆ. ಮುಂದೆ ಉತ್ತಮ ನಾಯಕರ ತಂಡವೊಂದು ರಾಹುಲ್ ಅಡಿ ಕೆಲಸ ಮಾಡಲಿದೆ ಎಂದು ಪವಾರ್ ಹೇಳಿದ್ದಾರೆ.
ಈತನಿಗೆ ಸೋಲೇ ಗೆಲವು!
ವಾರಾಣಸಿ: ಎಲ್ಲ ಅಭ್ಯರ್ಥಿಗಳೂ ಮನೆ ಮನೆಗೆ ತೆರಳಿ, ಮತದಾರರ ಕಾಲು ಹಿಡಿದಾದರೂ, 'ದಯವಿಟ್ಟು ನನಗೆ ಮತನೀಡಿ' ಎಂದು ಕೋರುವುದನ್ನು ನೀವು ನೋಡಿರುವಿರಿ. ಆದರೆ ಇಲ್ಲೊಬ್ಬ ಅಭ್ಯರ್ಥಿ ಮಾತ್ರ 'ದಯವಿಟ್ಟು ನನಗೆ ಮತ ನೀಡದಿರಿ', 'ನಾನೇ ನನಗೆ ವೋಟು ಹಾಕಲ್ಲ' ಅಂತಿದ್ದಾರೆ!
ವಾರಾಣಸಿಯಲ್ಲಿ ಕಣಕ್ಕಿಳಿದಿರುವ ನರೇಂದ್ರನಾಥ್ ದುಬೆ ಎಂಬುವರ ಕಥೆಯಿದು. ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ನರೇಂದ್ರಗೆ ವೋಟು ಬೇಕಾಗಿಲ್ವಂತೆ, ಬರೀ ದಾಖಲೆ ಬೇಕಂತೆ.
ಹೌದು. ಗಿನ್ನೆಸ್ ದಾಖಲೆಗಾಗಿ ಈ ನರೇಂದ್ರ ಇಂತಹ ಕಿತಾಪತಿಗಳನ್ನೆಲ್ಲ ಮಾಡುತ್ತಿದ್ದಾರೆ. ಇವರು ಚುನಾವಣೆಗೆ ಸ್ಪರ್ಧಿಸಿರುವ ಪ್ರಮುಖ ಉದ್ದೇಶವೇ ಸೋಲೋದು. ಅತಿ ಹೆಚ್ಚು ಬಾರಿ ಸೋಲು ಕಂಡ ಅಭ್ಯರ್ಥಿ ಎಂಬ ದಾಖಲೆ ಬರೆಯುವುದಕ್ಕಾಗಿ ನರೇಂದ್ರ ಕಣಕ್ಕಿಳಿದಿದ್ದಾರೆ. 1984ರಿಂದ ಇಲ್ಲಿಯವರೆಗೂ ಮುನ್ಸಿಪಲ್ ಚುನಾವಣೆಯಿಂದ ಹಿಡಿದು ರಾಷ್ಟ್ರಪತಿ ಚುನಾವಣೆವರೆಗೂ ಸ್ಪರ್ಧಿಸುತ್ತಾ ಬಂದಿದ್ದಾರೆ. 40 ಬಾರಿ ಸೋಲು ಕಂಡಿದ್ದಾರೆ.