ಸ್ನೇಹಿತರಿಗೆ ಸಾವಿರಾರು ಎಕ್ರೆ ಭೂಮಿ ಹಂಚಿದ ಮೋದಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತೊಂದು..
ರಾಯ್ಬರೇಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಮೋದಿ ಅವರ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಪ್ರಿಯಾಂಕಾ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿ ಅವರು ಗುಜರಾತ್ನಲ್ಲಿ ಸಾವಿರಾರು ಎಕರೆ ಭೂಮಿಯನ್ನು ತಮ್ಮ ಗೆಳೆಯರಿಗೆ ಕಡಿಮೆ ದರದಲ್ಲಿ ನೀಡಿದ್ದಾರೆ. ಅವರು ದೇಶವನ್ನು ತರಗತಿಯ ರೀತಿ ನೋಡುತ್ತಾರೆ ಎಂದು ಆರೋಪಿಸಿದ್ದಾರೆ.
ರಾಯ್ಬರೇಲಿಯಲ್ಲಿ ಶುಕ್ರವಾರ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಅವರ 'ಎಬಿಸಿಡಿ' ಮತ್ತು 'ಆರ್ಎಸ್ವಿಪಿ' ಟೀಕೆಗಳಿಗೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬದಲು ಅವರು ಜನರಿಗಾಗಿ ಏನೇನು ಯೋಜನೆ ಹಮ್ಮಿಕೊಂಡಿದ್ದಾರೆ ಎನ್ನುವ ಕುರಿತು ಮಾಹಿತಿ ನೀಡಲಿ ಎಂದಿದ್ದಾರೆ ಪ್ರಿಯಾಂಕಾ.
ಪ್ರಿಯಾಂಕಾ ಚಾಟಿ
* ಕೆಲವೊಮ್ಮೆ ಎಬಿಸಿಡಿ, ಕೆಲವೊಮ್ಮೆ ಆರ್ಎಸ್ವಿಪಿ (ರಾಹುಲ್, ಸೋನಿಯಾ, ವಾದ್ರಾ, ಪ್ರಿಯಾಂಕಾ). ಮತ್ತೆ ಕೆಲವೊಮ್ಮೆ 'ಡಿ' ಅಂದ್ರೆ ದೇಶ ಸಿ (ಕೌ)ಅಂದ್ರೆ ದನ ಎಂದು ಹೇಳುತ್ತಿರುತ್ತಾರೆ ಅವರು (ಮೋದಿ). ದಯವಿಟ್ಟು ಇನ್ನಾದರೂ ಅದನ್ನು ನಿಲ್ಲಿಸುತ್ತೀರಾ?
* ನೀವು ಪ್ರಾಥಮಿಕ ಶಾಲೆ ಮಕ್ಕಳಿಗೆ ಪಾಠ ಮಾಡುತ್ತಿಲ್ಲ. ಬದಲಾಗಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದೀರಿ ಎನ್ನುವುದು ನೆನಪಿರಲಿ.
* ಮೋದಿ ಅವರ ಗುಜರಾತ್ ಮಾದರಿ ಏನೆಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಅಲ್ಲಿ ನೀವು ಸಾವಿರಾರು ಎಕರೆ ಭೂಮಿಯನ್ನು ನಿಮ್ಮ ಸ್ನೇಹಿತರಿಗೆ ಹಂಚಿದ್ದೀರಿ.
* ತಮ್ಮ ಅಭಿವೃದ್ಧಿ ಮಾದರಿಯಡಿ ಗುಜರಾತ್ನಲ್ಲಿ ರೈತರು ಮತ್ತು ಕಾರ್ಮಿಕರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಮೋದಿ ವಿವರಿಸಬೇಕು. ಮಹಿಳೆಯರಿಗೆ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸಬೇಕು.
* ನಿಮ್ಮ ಶುದ್ಧ ರಾಜಕೀಯ ಏನೆಂಬುದು ಜನರಿಗೆ ಗೊತ್ತು. ಇದಕ್ಕೆ ನಿನ್ನೆ ನಾಮಪತ್ರ ಸಲ್ಲಿಸುವಾಗ ನಿಮ್ಮ ಪಕ್ಕದಲ್ಲೇ ನಿಂತು ಸಾರ್ವಜನಿಕರತ್ತ ಕೈಬೀಸುತ್ತಿದ್ದ ವ್ಯಕ್ತಿಯೇ ಸಾಕ್ಷಿ.
* ರಾಜಕೀಯ ನಾಯಕರ ಅಹಂಕಾರದಿಂದಾಗಿ ಜನರನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿಲ್ಲ.
ಮೋದಿ ಹೇಳಿದ್ದು
* ರೈತರಿಗೆ ಅನುಕೂಲ ಆಗುವಂತೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗುವುದು. ಯಾರಿಗೂ ರೈತರನ್ನು ಲೂಟಿ ಮಾಡಲು ಬಿಡುವುದಿಲ್ಲ.
* ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರೈತರ ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡುತ್ತಿರಲಿಲ್ಲ.
* ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಜಾರಿಯಲ್ಲಿದ್ದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರೀತಿಯಲ್ಲಿ ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆಯನ್ನೂ ಜಾರಿ ತರಲಾಗುವುದು.
* ದೇಶದಲ್ಲಿ ಯುದ್ಧದ ವೇಳೆ ಗಡಿಯಲ್ಲಿ ಪ್ರಾಣತೆತ್ತ ಜವಾನರಿಗಿಂತ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಯೇ ಹೆಚ್ಚಿದೆ.
* ಭಯೋತ್ಪಾದಕರು ನಮ್ಮ ಜವಾನರನ್ನು ಹತ್ಯೆ ಮಾಡುತ್ತಿದ್ದರೆ ನಮ್ಮ ಸರ್ಕಾರ ಮೂಕ ಪ್ರೇಕ್ಷಕನಂತೆ ನೋಡುತ್ತಿದೆ.