ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಹೆಸರು ನಾಪತ್ತೆ: ದೇಶದ ಕ್ಷಮೆ ಕೋರಿದ ಆಯೋಗ

Vishwanath S
Updated On : 26 Apr 2014, 12:57 pm

ನವದೆಹಲಿ/ಮುಂಬೈ: ಮುಂಬೈ ಮತ್ತು ಪುಣೆ ಸೇರಿದಂತೆ ದೇಶದ ಹಲವೆಡೆ ಮತದಾರರ ಪಟ್ಟಿಯಿಂದ ಸಾವಿರಾರು ಮಂದಿಯ ಹೆಸರು ಬಿಟ್ಟು ಹೋಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಕೇಂದ್ರ ಚುನಾವಣಾ ಆಯೋಗ ಕ್ಷಮೆಯಾಚಿಸಿದೆ. ಮತ್ತೊಂದೆಡೆ ಈ ನಿರ್ಲಕ್ಷ್ಯ ಖಂಡಿಸಿ ಸೋಮವಾರ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಹಲವರು ಚಿಂತನೆ ನಡೆಸಿದ್ದಾರೆ.
ಪ್ರಮುಖರ ಹೆಸರೇ ನಾಪತ್ತೆ: ವಾಣಿಜ್ಯ ನಗರಿ ಮುಂಬೈನಲ್ಲಿ ಶೇ.53ರಷ್ಟು ಮತದಾನವಾಗಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪಾರಖ್, ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ, ಮರಾಠಿ ನಟ ಅತುಲ್ ಕುಲಕರ್ಣಿ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಸಾವಿರಾರು ಮಂದಿ ಮತ ಹಾಕಲು ಸಾಲು ನಿಂತಿದ್ದರು. ಆದರೆ ಮತಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ದುದರಿಂದ ಹಕ್ಕು ಚಲಾವಣೆ ಮಾಡದೆ ಹಿಂತಿರುಗಿದ್ದರು. ಈ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಣೆಯಲ್ಲಿ 1 ಲಕ್ಷ ಹೆಸರಿಲ್ಲ: ಪುಣೆಯಲ್ಲಿ ಸುಮಾರು 1 ಲಕ್ಷ ಮಂದಿ ಹೆಸರು ಮತಪಟ್ಟಿಯಿಂದ ನಾಪತ್ತೆಯಾಗಿದೆ. ಈ ಬಗ್ಗೆ ಅಲ್ಲಿನ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪುಣೆಯಲ್ಲಿ ಮತ್ತೊಮ್ಮೆ ಮತದಾನ ನಡೆಸಬೇಕು ಎಂದು ಒತ್ತಾಯಿಸಲಾಗಿದೆ. ಔರಂಗಾಬಾದ್, ನಾಸಿಕ್‌ನಲ್ಲೂ ಇದೇ ರೀತಿಯ ಸಮಸ್ಯೆ ಕಂಡುಬಂದಿದೆ.
ಕ್ಷಮೆ ಯಾಚನೆ: ಮಹಾರಾಷ್ಟ್ರದಲ್ಲಿನ ಬೆಳವಣಿಗೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಕ್ಷಮೆಯಾಚಿಸಿದೆ. ಈ ವರ್ಷ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯುವ ಮುನ್ನ ಎಲ್ಲ ಲೋಪಗಳನ್ನು ಸರಿಪಡಿಸಲಾಗುತ್ತದೆ ಎಂದು ಚುನಾವಣಾ ಆಯುಕ್ತ ಎಚ್.ಎಚ್.ಬ್ರಹ್ಮ ತಿಳಿಸಿದ್ದಾರೆ. ಫಲಿತಾಂಶ ಪ್ರಕಟಿಸಿದ ಬಳಿಕ ಮತ್ತೆ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳು ತಮ್ಮ ಹೊಣೆ ನಿರ್ವಹಿಸದೇ ಇದ್ದುದರಿಂದ ಈ ಲೋಪವಾಗಿದೆ ಎಂದು ಎಚ್.ಎಸ್.ಬ್ರಹ್ಮ ತಿಳಿಸಿದ್ದಾರೆ. ಸ್ಥಳೀಯ ಮಟ್ಟದ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿದ್ದುದೇ  ಇದಕ್ಕೆ ಕಾರಣ ಎಂದು ಅವರು ದೂರಿದ್ದಾರೆ.
ಮತ ಹಾಕುವುದಕ್ಕಾಗಿ ಗುರುತಿನ ಚೀಟಿ ಜತೆಗೆ ಸಾಲಿನಲ್ಲಿ ನಿಂತಿದ್ದೆ. ಮತಗಟ್ಟೆಗೆ ಹೋದಾಗ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಹೀಗಾಗಿ ಹಕ್ಕು ಚಲಾಯಿಸಲು ಅಸಾಧ್ಯವಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾನು ದೂರು ನೀಡಿದ್ದೇನೆ.
- ದೀಪಕ್ ಪಾರಖ್, ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವ ಬಗ್ಗೆ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರು ಯಾಕೆ ಈ ರೀತಿ ವರ್ತಿಸುತ್ತಿದ್ದಾರೋ ಗೊತ್ತಿಲ್ಲ. ಮತಗಟ್ಟೆಗೆ ತೆರಳುವ ಮುನ್ನ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಬಹುದಿತ್ತು. ವಿಮಾನ ಏರುವ ಮುನ್ನ ಪ್ರಯಾಣಿಕರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಅವರು ನೋಡಿಕೊಳ್ಳುವುದಿಲ್ಲವೇ?
-ಪೃಥ್ವಿರಾಜ್ ಚೌಹಾಣ್, ಮಹಾರಾಷ್ಟ್ರ ಮುಖ್ಯಮಂತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement