ತೃತೀಯ ರಂಗದ ಜತೆ 'ಕೈ' ಸಖ್ಯ: ಸಲ್ಮಾನ್, ಚಿದು ಭಿನ್ನರಾಗ
ಚುನಾವಣೆಯ ಬಳಿಕ ತೃತೀಯ ರಂಗದ ಜತೆ ಕಾಂಗ್ರೆಸ್ ಸಖ್ಯದ...
ಫರೂಖಾಬಾದ್/ನವದೆಹಲಿ: ಚುನಾವಣೆಯ ಬಳಿಕ ತೃತೀಯ ರಂಗದ ಜತೆ ಕಾಂಗ್ರೆಸ್ ಸಖ್ಯದ ವಿಚಾರ ಗೊಂದಲಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರ ರಚಿಸುವುದನ್ನು ತಡೆಯುವುದಕ್ಕಾಗಿ ತೃತೀಯ ರಂಗದ ಜತೆ ಕೈಜೋಡಿಸಲು ಕಾಂಗ್ರೆಸ್ ಸಿದ್ಧವಿದೆ ಎಂದು ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚೌಹಾಣ್ ಹೇಳಿದ ಬೆನ್ನಲ್ಲೇ ಅದೇ ಮಾತನ್ನು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಪುನರುಚ್ಚರಿಸಿದ್ದಾರೆ. ಆದರೆ, ವಿತ್ತ ಸಚಿವ ಚಿದಂಬರಂ ಅವರು ಮಾತ್ರ ಇಂತಹ ಯಾವುದೇ ಯೋಚನೆ ಇಲ್ಲ. ಯುಪಿಎ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದಿದ್ದಾರೆ.
ಎಸ್ಪಿ, ಎಡಪಕ್ಷ ಸ್ವಾಗತ: ಇದಕ್ಕೂ ಮುನ್ನ ಮಾತನಾಡಿದ್ದ ಖುರ್ಷಿದ್, ಅಗತ್ಯವಿದ್ದರೆ ಚುನಾವಣೆಯ ಬಳಿಕ ಕಾಂಗ್ರೆಸ್ ತೃತೀಯ ರಂಗದ ಬೆಂಬಲ ಪಡೆಯಲಿದೆ ಅಥವಾ ಬೆಂಬಲ ನೀಡುವ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಎಡಪಕ್ಷ ಹಾಗೂ ಎಸ್ಪಿ ನಾಯಕರು ಸ್ವಾಗತಿಸಿದ್ದರು. ಕಾಂಗ್ರೆಸ್ ಜತೆ ಕೆಲಸ ಮಾಡಲು ನಾವು ಸಿದ್ಧ ಎಂದು ಎಸ್ಪಿ ನಾಯಕ ರಾಮ್ಗೋಪಾಲ್ ಯಾದವ್ ಹಾಗೂ ಎಡಪಕ್ಷ ನಾಯಕ ಡಿ. ರಾಜಾ ಹೇಳಿದ್ದರು. ಬಿಜೆಪಿ ಅಧಿಕಾರಕ್ಕೇರುವುದನ್ನು ತಪ್ಪಿಸಲು ಯಾವುದಕ್ಕೂ ಸಿದ್ಧ ಎಂದೂ ನುಡಿದಿದ್ದರು.
ನಮ್ಮದೇ ಸರ್ಕಾರ: ಇದೇ ವೇಳೆ, ಖುರ್ಷಿದ್, ಚೌಹಾಣ್ ಹೇಳಿಕೆಗೆ ವಿರುದ್ಧವಾಗಿ ಚಿದು ಮಾತನಾಡಿದ್ದಾರೆ. ಗೆಲ್ಲುವ ವಿಶ್ವಾಸದಿಂದಲೇ ಚುನಾವಣಾ ಕಣಕ್ಕಿಳಿದಿದ್ದೇವೆ. ಚುನಾವಣೆಯ ಬಳಿಕ ಯುಪಿಎ-3 ಅಸ್ತಿತ್ವಕ್ಕೆ ಬರುವುದು ಖಚಿತ. ಬೇರೆ ನಾಯಕರು ಏನು ಮಾತಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ.