ಪತ್ರಿಕಾಗೋಷ್ಠಿ ನಡೆಸಿ ದಾವೂದ್ ವಾಪಸ್ ತರಬಹುದೇ?: ಮೋದಿ
ಭೂಗತ ದೊರೆ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ...
ನವದೆಹಲಿ: ಭೂಗತ ದೊರೆ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ವಾಪಸ್ ತರುವ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಕಾರ್ಯವೈಖರಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಭೂಗತ ದೊರೆ ದಾವೂದ್ ನನ್ನು ಭಾರತಕ್ಕೆ ಕರೆತರಲು ಸಾಧ್ಯವೇ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ಪ್ರಶ್ನಿಸಿದ್ದಾರೆ.
ಮೋದಿ ಹೇಳಿದ್ದು
ದಾವೂದ್ ವಾಪಸ್ ಕರೆತರುವುದು ಪತ್ರಿಕೆಗಳಂಥ ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುವ ವಿಚಾರವೇ? ಲಾಡೆನ್ ಹತ್ಯೆಗೂ ಮುನ್ನ ಅಮೆರಿಕದವರೇನು ಪತ್ರಿಕಾಗೋಷ್ಠಿ ನಡೆಸಿದ್ದಾರೆಯೇ? ಈ ವಿಚಾರದಲ್ಲಿ ಶಿಂದೆ ಮಾಧ್ಯಮದ ಜತೆಗೆ ವೃಥಾ ಮಾತನಾಡುತ್ತಾರೆ. ಇದು ಬಹಿರಂಗವಾಗಿ ಚರ್ಚಿಸುವ ವಿಚಾರವಲ್ಲ. ಇಂಥ ವಿಚಾರವನ್ನು ಮಾಧ್ಯಮದ ಜತೆಗೆ ಮಾತನಾಡುವ ಕೇಂದ್ರ ಗೃಹ ಸಚಿವರಿಗೆ ಕನಿಷ್ಠ ಪ್ರೌಢಿಮೆಯೂ ಇಲ್ಲ. ಇದು ನಾಚಿಕೆಯ ವಿಚಾರ.
ಇಟಲಿ ವಿಚಾರದಲ್ಲೂ ಟೀಕೆ: ಇಟಲಿ ನೌಕಾಸೇನೆಯ ಇಬ್ಬರು ಸಿಬ್ಬಂದಿಯನ್ನು ಸುಪ್ರೀಂಕೋರ್ಟ್ ಆದೇಶದಂತೆ ಭಾರತಕ್ಕೆ ಕರೆತರಲಾಗಿದೆ. ಈ ಇಬ್ಬರು ಸಿಬ್ಬಂದಿ ಎಲ್ಲಿದ್ದಾರೆನ್ನುವ ಕುರಿತು ಸರ್ಕಾರ ಯಾಕೆ ಮೌನವಹಿಸಿದೆ? ಭಾರತೀಯ ನಾಗರಿಕನೊಬ್ಬ ಅಪಘಾತವೊಂದರಲ್ಲಿ ಭಾಗಿಯಾದರೆ ಆತನ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗುತ್ತದೆ. ದೇಶ ತೊರೆಯದಂತೆ ನೋಡಿಕೊಳ್ಳಲಾಗುತ್ತದೆ. ಆದರೆ, ಇಟಲಿಯ ನೌಕಾ ಸಿಬ್ಬಂದಿಗೆ ಈ ವಿನಾಯ್ತಿ ಯಾಕೆ?
ಮೋದಿ ತಲೆಯಲ್ಲೇನಾದರೂ ಐಡಿಯಾ ಇದ್ರೆ ಹೇಳಲಿ
ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿಕೆಗೆ ವಿತ್ತ ಸಚಿವ ಪಿ. ಚಿದಂಬರಂ ತೀಕ್ಷ್ಣ ಉತ್ತರ ನೀಡಿದ್ದಾರೆ. ದಾವೂದ್‌ಗೆ ಪಾಕಿಸ್ತಾನ ಸರ್ಕಾರವೇ ರಕ್ಷಣೆ ನೀಡುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಿದ್ದ ಮೇಲೆ ದಾವೂದ್ ವಾಪಸ್ ತರಲು ಮೋದಿ ಅವರ ತಲೆಯನ್ನೇನಾದರೂ ವಿಶೇಷ ಐಡಿಯಾ ಇದ್ದರೆ ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ ಚಿದು.
ಚಿದು ಹೇಳಿದ್ದೇನು?
* ದಾವೂದ್ ವಾಪಸ್ ತರಲು ನಾವೇನು ಮಾಡಿಲ್ಲ ಎನ್ನುವವರು ಸರ್ಕಾರವೊಂದು ಇದಕ್ಕಿಂತ ಹೆಚ್ಚಿನದನ್ನೇನು ಮಾಡಲು ಸಾಧ್ಯ ಎಂದು ಹೇಳಲಿ. ದಾವೂದ್‌ನನ್ನು ವಾಪಸ್ ತರಲು ಅರ್ಧಡಜನ್ ಬ್ಲ್ಯಾಕ್ ಕಮಾಂಡೋಗಳನ್ನು ಕಳುಹಿಸಲೇ?
* ದಾವೂದ್ ಕರಾಚಿಯಲ್ಲಿದ್ದಾನೆ. ಅಲ್ಲಿಂದ ಆತ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಓಡಾಡುತ್ತಾನೆ ಎನ್ನುವುದು ನಮಗೆ ಗೊತ್ತು. ಈತನ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಅನ್ನೂ ನೀಡಲಾಗಿದೆ. ಪಾಕಿಸ್ತಾನ ಸರ್ಕಾರವೇ ಆತನಿಗೆ ರಕ್ಷಣೆ ನೀಡಿರುವಾಗ ನಾವು ಆತತನ್ನು ಹೇಗೆ ವಾಪಸ್ ಕರೆತರಲು ಸಾಧ್ಯ? ಇದಕ್ಕೆ ಮೋದಿ ಅವರೇ ಉತ್ತರ ನೀಡಲಿ.
* ಆತನನ್ನು ಬಂಧಿಸಲು ಅವಕಾಶವಿದ್ದರೆ ಖಂಡಿತಾ ಆ ಕೆಲಸ ಮಾಡುತ್ತೇವೆ. ಪಾಕ್ ನೆಲದಲ್ಲಿ ನಾವು ಯಾವುದೇ ಗುಪ್ತ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ.