ಕಳಚಿದ ಲಾಲು- ಕೃಪಾಲ್ ದೋಸ್ತಿ ಸಾರುತ್ತಿರುವುದು ಏನನ್ನು?
ಅದು ಬರೋಬ್ಬರಿ 35 ವರ್ಷಗಳ ಸ್ನೇಹ ಸಹವಾಸ. ಮೊನ್ನೆ ಮುರಿದುಬಿತ್ತು.
ಬಿಹಾರವನ್ನು ಕಾಯ್ದೆ- ಕಾನೂನುಗಳಿಗೆ ಕಿಮ್ಮತ್ತು ಬೆಲೆಯಿಲ್ಲದ ಜಂಗಲ್ ರಾಜ್ ಎನ್ನುವಂತೆ ಪರಿವರ್ತಿಸಿ ಈ ಹಿಂದೆ ಆಳಿದ್ದ ಖ್ಯಾತ ಜೋಡಿಯನ್ನು ಹೆಸರಿಸಿ ಎಂದರೆ, ಲಾಲು ಪ್ರಸಾದ್- ರಾಬ್ರಿ ದೇವಿ ಎಂದು ಯಾರಾದರೂ ಥಟ್ಟನೇ ಹೇಳಿಯಾರು.
ಆದರೆ ಯಾವುದೇ ವ್ಯವಸ್ಥೆಯ ಮೇಲ್ನೋಟದ ಚಹರೆ ಅಷ್ಟೆಲ್ಲ ಪ್ರಕಾಶಿಸುತ್ತಿದ್ದರೆ ಅವರ ಹಿಂದಿನ ಬೆಂಬಲವೂ ಗಟ್ಟಿಯಾದದ್ದೇ ಇರಬೇಕು. ಇವರಷ್ಟು ಆ ಮುಖ ಪ್ರಸಿದ್ಧವಾಗದಿದ್ದರೂ ಸಂಘಟನೆಯಲ್ಲಿ ಛಾಪೊತ್ತಿ ಆ ಸಾಮ್ರಾಜ್ಯವನ್ನು ಪೊರೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುತ್ತದೆ. ಪಾಟಲಿಪುತ್ರದಿಂದ ಸ್ಪರ್ಧಿಸುವುದಕ್ಕೆ ಟಿಕೆಟ್ ಕೊಡಲಿಲ್ಲವೆಂದು ರಾಷ್ಟ್ರೀಯ ಜನತಾದಳವನ್ನು ತೊರೆದು ಬಿಜೆಪಿ ಸೇರಿರುವ ರಾಮ್ ಕೃಪಾಲ್ ಯಾದವ್ ಎಂಬ ವ್ಯಕ್ತಿಯನ್ನು ಇಂಥದೊಂದು ಪಟ್ಟಿಯಲ್ಲಿ ಸೇರಿಸಬಹುದು.
ರಾಮ್ ಕೃಪಾಲ್ ಯಾದವ್ ಆರ್‌ಜೆಡಿ ತೊರೆದ ಅಧ್ಯಾಯಕ್ಕೇನು ಮಹತ್ತ್ವ? ಎರಡು ಧ್ವನಿಗಳನ್ನು ಇದರಿಂದ ಧಾರಾಳವಾಗಿ ಹೆಕ್ಕಿಕೊಳ್ಳಬಹುದು. ಭಾರತದ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಅದೆಂಥ ಅಮಲನ್ನು ಹತ್ತಿಸುತ್ತಿದೆ ಎಂಬುದು ಮೊದಲ ಗಮನಾರ್ಹ ಅಂಶ. ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿ, ಅತ್ತ ಕಾಂಗ್ರೆಸ್‌ನ ಒಲವೂ ಸಿಗದೇ, ಇತ್ತ ರಾಮ್ ವಿಲಾಸ್ ಪಾಸ್ವಾನ್‌ರಂಥ ನಿರೀಕ್ಷಿತ ಮಿತ್ರನೂ ಬಿಜೆಪಿ ಜತೆ ಸಖ್ಯ ಬೆಳೆಸಿರುವ ಗಳಿಗೆಯಲ್ಲಿ ಲಾಲು ಜಾಗದಲ್ಲಿ ಮತ್ತ್ಯಾರಾದರೂ ಇದ್ದರೆ ಎಚ್ಚರಿಕೆ ಹೆಜ್ಜೆಯನ್ನು ಇಡುತ್ತಿದ್ದರು. ಮಹಾಯುದ್ಧದ ಹೊಸ್ತಿಲಲ್ಲಿ ಬಿಹಾರದಲ್ಲಿ ತನಗೆ ಉಳಿದಿರುವ ಆಪ್ತ ಬಲವನ್ನಾದರೂ ದೂರ ಮಾಡಿಕೊಳ್ಳುವುದು ಬೇಡ ಎಂದೇ ಯಾರಾದರೂ ಯೋಚಿಸುತ್ತಿದ್ದರು. ಆದರೆ ಲಾಲು ಕುಟುಂಬ ವ್ಯಾಮೋಹ ಅವೆಲ್ಲ ವಿವೇಕವನ್ನೂ ಮರೆಸಿತೇ?
ಹದಿನೇಳು ವರ್ಷಗಳಿಂದ ಆರ್‌ಜೆಡಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ್ ಕೃಪಾಲ್ ಈ ಬಾರಿ ಪಾಟಲೀಪುತ್ರದಿಂದ ಟಿಕೆಟ್ ಬಯಸಿದ್ದರು. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್‌ರಿಗಾಗಿ ಆ ಸ್ಥಾನ ಬಿಟ್ಟುಕೊಟ್ಟಿದ್ದರು. ಈ ಬಾರಿಯೂ ಟಿಕೆಟ್ ನಿರಾಕರಿಸಿ ಆ ಸ್ಥಾನವನ್ನು ತನ್ನ ಪುತ್ರಿ ಮಿಸಾ ಭಾರತಿಗೆ ನಿಗದಿಪಡಿಸಿದಾಗ ಸಹಜವಾಗಿಯೇ ಕೃಪಾಲ್ ಉರಿದುಕೊಂಡಿದ್ದಾರೆ. ಅವರ ಈ ಅಸಮಾಧಾನವನ್ನು ಬಿಜೆಪಿ ಚೆನ್ನಾಗಿ ಬಳಸಿಕೊಂಡು ತನ್ನ ಪಾಳಯಕ್ಕೆ ಸೇರಿಸಿಕೊಂಡಿದೆ. ಬಿಹಾರದಲ್ಲಿ ಯಾದವ ಮತಬ್ಯಾಂಕ್ ಅನ್ನು ಆಕರ್ಷಿಸುವ ಪ್ರಭಾವಿ ನಾಯಕರ್ಯಾರೂ ಅದಕ್ಕೆ ಇಲ್ಲವಾಗಿತ್ತು. ಕೃಪಾಲ್ ಬಿಜೆಪಿ ಸೇರುವುದರೊಂದಿಗೆ ಯಾದವ-ಮುಸ್ಲಿಂ ಮತಬ್ಯಾಂಕ್ ಬಿಜೆಪಿ ಪಾಲಿಗೆ ಒಲಿಯುವ ಸಾಧ್ಯತೆ ಗಟ್ಟಿಯಾಗಿದೆ.
ಲಾಲು ಕುಟುಂಬ ವ್ಯಾಮೋಹ ತಿಳಿದಿರುವಂಥದ್ದೇ. ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳು ಬಿಗಿಯಾದಾಗ 1997-2005ರ ಅವಧಿಯಲ್ಲಿ ಪತ್ನಿ ರಾಬ್ರಿದೇವಿಯನ್ನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿದ್ದು ತಿಳಿದಿದ್ದೇ. ಆದರೆ ರಾಜಕಾರಣವನ್ನೇ ಉಸಿರಾಡುವ ಲಾಲು, ಕಾರ್ಯತಂತ್ರಗಳನ್ನು ಹೆಣೆಯುವಲ್ಲಿ ರಾಮ್ ಕೃಪಾಲ್ ಜತೆ ಕಳೆದಿರುವಷ್ಟು ಸಮಯವನ್ನು ಮಗಳು ಮಿಸಾ ಭಾರತಿಯೊಂದಿಗಿನ ಕುಟುಂಬ ಜೀವನದಲ್ಲಿ ಕಳೆದಿರಲಿಕ್ಕಿಲ್ಲ. ಆದರೂ ಒಂದು ಹಂತದಲ್ಲಿ ತಮಗಾಗಿ ದುಡಿದವರೆಲ್ಲರಿಗಿಂತ ವಂಶದ ಕುಡಿಗಳನ್ನು ಏನಕೇನ ಮುನ್ನೆಲೆಗೆ ತರುವುದೇ ಭಾರತದ ರಾಜಕಾರಣ ಮತ್ತು ಉದ್ಯಮ ವಲಯಗಳ ಜಾಯಮಾನವಾಗಿಹೋಗಿದೆಯೇ ಎಂಬ ಪ್ರಶ್ನೆ ಸದ್ದು ಮಾಡುವುದಕ್ಕೆ ಈ ಪ್ರಕರಣ ಆಸ್ಪದ ನೀಡಿದೆ.
'ಟಿಕೆಟ್ ನೀಡಲಿಲ್ಲ ಎಂಬ ಕಾರಣವೊಂದೇ ಪಕ್ಷ ತೊರೆಯುವುದಕ್ಕೆ ಕಾರಣವಲ್ಲ. ಗೌರವಕ್ಕೆ ಹಾನಿಯಾದದ್ದು ಸಹಿಸದಾದೆ' ಎಂಬ ರಾಮ್ ಕೃಪಾಲ್ ಮಾತುಗಳಲ್ಲಿ ಈ ವಿದ್ಯಮಾನ ಏಕಾಏಕಿ ಆಗಿದ್ದಲ್ಲ ಎಂಬುದರ ಹೊಳಹು ಇದೆ. ಲಾಲು ಪ್ರಸಾದ್ ಹಿರಿಯ ಮಗ ತೇಜ್ ಪ್ರತಾಪ್ ಜತೆಗಿನ ನಿರಂತರ ಸಂಘರ್ಷ ಕೃಪಾಲ್‌ಗೆ ಸಾಕಾಗಿತ್ತು ಎನ್ನುತ್ತವೆ ಮೂಲಗಳು. ಕೃಪಾಲ್ ಮತ್ತು ಅವರ ಆಪ್ತವಲಯವನ್ನು ಬೇಕಾಬಿಟ್ಟಿ ನಡೆಸಿಕೊಂಡಿದ್ದಲ್ಲದೇ ಪಕ್ಷದ ಎಲ್ಲ ಆಂತರಿಕ ವ್ಯವಹಾರಗಳಲ್ಲೂ ತೇಜ್ ಪ್ರತಾಪ್ ಕೈಯಾಡಿಸುವುದು ಅತಿಯಾಗಿತ್ತು. ಆರ್‌ಜೆಡಿಗೆ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತ ಬಂದ ಕೃಪಾಲ್ ಇದನ್ನು ಸಹಿಸದಾದರು. 'ಕಠಿಣ ಪರಿಶ್ರಮಕ್ಕಿಂತ ಕುಟುಂಬಕ್ಕೇ ಪ್ರಾಶಸ್ತ್ಯ ಸಿಗುವ ಪಕ್ಷದಲ್ಲಿ ಕಾರ್ಯಕರ್ತರು ಹೈರಾಣಾಗುತ್ತಾರೆ' ಅಂತಾರೆ ಕೃಪಾಲ್.
ಈ ವಿದ್ಯಮಾನ ಮನದಟ್ಟು ಮಾಡಿಸುವ ಇನ್ನೊಂದು ಅಂಶ ಮೈತ್ರಿರಾಜಕಾರಣದ್ದು. ಸೆಕ್ಯುಲರ್ ಹೆಸರಿನಲ್ಲಿ ಈವರೆಗೆ ಕಾಂಗ್ರೆಸ್ ಏನೆಲ್ಲ ಸಮೀಕರಣ ಸರಿದೂಗಿಸಿತ್ತೋ, ಇನ್ನುಮುಂದೆ ಅಭಿವೃದ್ಧಿ ರಾಜಕಾರಣದ ಹೆಸರಿನಲ್ಲಿ ಬಿಜೆಪಿಯೂ ಅದನ್ನು ಸಾಧಿಸುವ ಸುಳಿವುಗಳಿವೆ. ಹೀಗಾಗಿ ಚುನಾವಣೆಯಲ್ಲಿ ಸ್ಥಾನ ಕಡಿಮೆ ಬಿದ್ದರೆ ಮೋದಿಯವರಿಗೆ ಮೈತ್ರಿಗಳು ಸಿಗದಿರಬಹುದು ಎಂಬ ವಾದ ಪೊಳ್ಳಾಗುತ್ತಿದೆ. ಮೋದಿಯನ್ನು ವೈರಸ್ ಎಂದು ಜರೆದಿದ್ದ ರಾಮ್ ಕೃಪಾಲ್ ಈಗ ಹೇಳುತ್ತಿರುವುದು:'ಗುಜರಾತ್ ಮುಸ್ಲಿಮರ ಸ್ಥಿತಿ ಬಿಹಾರದವರಿಗಿಂತ ಚೆನ್ನಾಗಿದೆ ಎಂದು ಸಚ್ಚಾರ್ ಸಮಿತಿಯ ವರದಿ ಹೇಳುತ್ತದೆ. ನರೇಂದ್ರ ಮೋದಿ ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದರೆ ಈ ಫಲಿತಾಂಶ ಸಾಧ್ಯವೇ ಇರಲಿಲ್ಲ.'
-ಚೈತನ್ಯ ಹೆಗಡೆ