ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವಾರಾಣಸಿಯಲ್ಲಿ ರೂಪಕಗಳ ಆಟ

Vishwanath S
Updated On : 5 Apr 2014, 4:29 am

ವಾರಾಣಸಿ ಎಂಬ ಪ್ರಾಚೀನತೆ ಮೈವೆತ್ತ ನಗರ ಬಿಜೆಪಿ ಪ್ರಧಾನಿ ಅಭ್ಯರ್ಥಿಯ ಉಮೇದುವಾರಿಕೆಯಿಂದ ಮೆರುಗು ಪಡೆದುಕೊಂಡಿದೆ. ನರೇಂದ್ರ ಮೋದಿ ಪಟ್ಟು ಹಿಡಿದು ವಾರಾಣಸಿಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಬಗ್ಗೆ ಈಗಾಗಲೇ ಕೆಲವು ವಿಶ್ಲೇಷಣೆಗಳಾಗಿವೆ. ಅವನ್ನೆಲ್ಲ ಇನ್ನೊಮ್ಮೆ ಎದುರಿಗಿಟ್ಟು ಮತ್ತೊಂದಿಷ್ಟು ಪ್ರಶ್ನೆಗಳನ್ನು ಹಾಕಿಕೊಂಡಾಗ ವಾರಾಣಸಿಯ ಉದರಲ್ಲಿ ಕತೆಯೊಂದು ತೆರೆದುಕೊಳ್ಳುತ್ತ, ರೂಪಕಗಳ ಆಟದ ಪುಳಕ ನಿಮ್ಮನ್ನು ತಟ್ಟುತ್ತದೆ.
'ರೆವಲ್ಯೂಷನ್ 2020, ರೆವಲ್ಯೂಷನ್ 2014'- ವಾರಾಣಸಿಯಿಂದ ಮೋದಿಯ ಉಮೇದುವಾರಿಕೆ ಖಾತ್ರಿಯಾಗುತ್ತಲೇ ಜನಪ್ರಿಯ ಆಂಗ್ಲ ಕಾದಂಬರಿಕಾರ ಚೇತನ್ ಭಗತ್ ಹೀಗೊಂದು ಟ್ವೀಟು ಕುಟ್ಟಿದರು. ಅವರ ಇತ್ತೀಚಿನ ಕಾದಂಬರಿ ರೆವಲ್ಯೂಷನ್ ಟ್ವೆಂಟಿ ಟ್ವೆಂಟಿ ಬಗ್ಗೆ ತಿಳಿದಿದ್ದವರಿಗೆ ಮಾತ್ರ ಈ ಟ್ವೀಟ್ ಅರ್ಥವಾದೀತು. ವ್ಯವಸ್ಥೆಯನ್ನು ಬದಲಿಸುತ್ತೇನೆಂದು ಹೊರಡುವ ಇಬ್ಬರು ಯುವಕರ ಪಾತ್ರಕ್ಕೆ ಅಲ್ಲಿ ವಾರಾಣಸಿಯೇ ಮೂಲನೆಲೆ. ಭಗತ್ ಕಾದಂಬರಿಗೂ ರಾಜಕೀಯ ವಿದ್ಯಮಾನಕ್ಕೂ ಸಂಬಂಧವಿಲ್ಲವಾದರೂ, ಚಿತ್ರಕತೆ ತೆರೆದುಕೊಳ್ಳುತ್ತಿರುವ ಜಾಡಿನಲ್ಲಿ ಸಾಮ್ಯವಿದೆ. ಯುವ ಆಶೋತ್ತರಗಳಿಂದ ಬದಲಾಗುತ್ತಿರುವ ಭಾರತದಲ್ಲಿ ಕೇವಲ ದೇವಾಲಯ ನಿರ್ಮಾಣವೆಂಬುದು ಈಗ ಯಾವ ಭಾವನೆಗಳನ್ನೂ ಉಕ್ಕಿಸಲಾರದು. ಹಾಗೆಂದು ಅವನ್ನೆಲ್ಲ ವಿರೋಧಿಸಿಬಿಡಬೇಕು ಎಂಬ ಇನ್ನೊಂದು 'ಅತಿ'ಯಲ್ಲೂ ಯುವಜನಾಂಗವಿಲ್ಲ. ಪ್ರಾಯೋಗಿಕ ಹಾಗೂ ಫಲಿತಾಂಶ ನೀಡುವ ಉದ್ಗಾರಗಳತ್ತ ಅವರ ಬೆರಗು. ಈ ನಿಟ್ಟಿನಲ್ಲಿ, ಗಂಗೆಯನ್ನು ಶುದ್ಧೀಕರಿಸುತ್ತೇನೆ ಎಂಬ ಘೋಷವೇ ಅವರಿಗೆ ಹೆಚ್ಚಿನ ಅರ್ಥವಂತಿಕೆ ತುಂಬಿರುವ 'ಹಿಂದುತ್ವ'ವಾಗಿ ಕಾಣುತ್ತದೆ. ದೇವಾಲಯಗಳ ನಗರಿಯಲ್ಲಿ ನಿಂತು, ಗಂಗೆಯನ್ನು ಶುದ್ಧೀಕರಿಸುವೆ ಎನ್ನುವುದು ಕೇವಲ ಆ ವಿಷಯಕ್ಕೆ ಸೀಮಿತವಾಗಿರದೇ ಇಡೀ ವ್ಯವಸ್ಥೆಯ ಕೊಳಕನ್ನು ಕೈಲಾದಷ್ಟು ಹೋಗಲಾಡಿಸುವುದಕ್ಕೆ ನೀಡುತ್ತಿರುವ ಭರವಸೆಯಂತೆ ಧ್ವನಿಸುತ್ತದೆ. ಹಿರಿ-ಕಿರಿಯ ತಲೆಮಾರುಗಳನ್ನು ಸೆಳೆಯುವ ಈ ರೂಪಕದ ಆಟವನ್ನು ಮನೋಜ್ಞವಾಗಿ ಆಡಿರುವ ಮೋದಿ, ಪ್ರಾಚೀನ ಮೌಲ್ಯಗಳ ಪರಿಣಾಮಕಾರಿ ಪುನರುತ್ಥಾನಕ್ಕೆ ಕಾದಿರುವ ಭಾರತದ ನಾಯಕತ್ವ ವಹಿಸಿಕೊಳ್ಳುವುದಕ್ಕೆ ತಾನು ಕಾತರನಾಗಿದ್ದೇನೆಂಬ ಸಂದೇಶವನ್ನು ರವಾನಿಸಿದ್ದಾರೆ.
ಹಾಗಾದರೆ ವಾರಾಣಸಿ ಮೋದಿ ಪಾಲಿಗೆ 'ಸುರಕ್ಷಿತ ಸ್ಥಾನ'ವಾ? ಉತ್ತರ: ಹಾಗೇನೂ ಹೇಳಲಾಗದು. ಹೀಗಾಗಿಯೇ ಅವರೂ ವಡೋದರಾದಲ್ಲೂ ಸ್ಪರ್ಧಿಸಿದ್ದಾರಾ? ಉತ್ತರ: ಕಾರಣ ಅದಲ್ಲ. ಮೋದಿ ಗುಜರಾತ್ ಅನ್ನು ಎಷ್ಟೇ ಸಮರ್ಥವಾಗಿ ಆಳಿರಬಹುದು, ಆದರೆ ಅದರ ಹೊರಗೆ ಏನೂ ಅಲ್ಲ ಎಂಬುದು ವಿರೋಧಿಗಳ ವಾದ. ಹೀಗಾಗಿ ಗುಜರಾತ್ ಹೊರಗೆ ನಿಂತು ಸ್ಪರ್ಧಿಸುವ ಪ್ರಕಟಣೆ ಮೊದಲು ಹೊರಬಿತ್ತು. ಈ ಉಮೇದಿಯಲ್ಲಿ ಸ್ವಂತ ನೆಲವನ್ನು ಸಂಪೂರ್ಣ ಉಪೇಕ್ಷಿಸುತ್ತಿದ್ದಾರೆ ಎಂದು ತಮ್ಮನ್ನು ಈವರೆಗೆ ಬೆಂಬಲಿಸಿದ ಜನಕ್ಕೆ ಅನ್ನಿಸಬಾರದು. ವಡೋದರಾ ಸ್ಪರ್ಧೆಯ ಇಂಗಿತ ಅಷ್ಟೆ. ಆದರಿದು, 'ವಾರಾಣಸಿಯಲ್ಲಿ ಸೋತು ಬಿಡಬಹುದು ಎಂದು ಇನ್ನೊಂದು ಸ್ಥಾನದಲ್ಲೂ ಸ್ಪರ್ಧಿಸಿದ್ದಾರೆ' ಎಂದು ಮಾಧ್ಯಮ ಟೀಕೆಗಳಿವೆಯೆಂದಾಯಿತಲ್ಲ? ಉತ್ತರ: ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಚುನಾವಣೆ ಗೆಲ್ಲಲಾಗದು ಹಾಗೂ ಅವುಗಳಿಗಿಂತ ಪರಿಣಾಮಕಾರಿಯಾಗಿ ಜನರನ್ನು ಮುಟ್ಟುವುದು ತನಗೆ ಗೊತ್ತು ಎಂಬ ವಿಶ್ವಾಸದಲ್ಲಿರುವ ಏಕೈಕ ನಾಯಕ ಮೋದಿ.
ಉತ್ತರಪ್ರದೇಶ ಅತಿಹೆಚ್ಚು ಲೋಕಸಭೆ ಸ್ಥಾನಗಳಿರುವ ರಾಜ್ಯ. ಇದಕ್ಕೆ ಹೊಂದಿಕೊಂಡಂತೆ ಇದೆ ಬಿಹಾರ. ಇವುಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಷ್ಟೂ ದೆಹಲಿ ಗದ್ದುಗೆಯ ಕನಸು ಸುಸೂತ್ರ. ಮಹಾಯುದ್ಧದ ಕಾವು ಹತ್ತಿಕೊಳ್ಳುವುದಕ್ಕೆ ಎಷ್ಟೋ ಮುಂಚೆಯೇ ತಮ್ಮ ಪರಮಾಪ್ತ ಅಮಿತ್ ಶಾ ಅವರನ್ನು ಉತ್ತರಪ್ರದೇಶದ ಉಸ್ತುವಾರಿಗೆ ಕಳುಹಿಸಿದ್ದರಲ್ಲಿ ಮೋದಿಯ ತಾಲೀಮು ಎಂಥದ್ದಾಗಿತ್ತೆಂಬುದರ ಚಿತ್ರಣ ಸಿಕ್ಕಿಬಿಡುತ್ತದೆ. ಹೀಗೆ ಲೆಕ್ಕಾಚಾರಕ್ಕೆ ನಿರ್ಣಾಯಕವಾಗಿರುವ ಉತ್ತರಪ್ರದೇಶದಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿ ಮತ್ತು ರಾಷ್ಟ್ರೀಯ ಅಧ್ಯಕ್ಷರಿಬ್ಬರೂ ಹುರಿಯಾಳಾಗುವುದು ಕಾರ್ಯಕರ್ತರಲ್ಲಿ ಅದಮ್ಯ ವಿಶ್ವಾಸ ಮತ್ತು ಅಸಾಧ್ಯ ಹುರುಪೊಂದನ್ನು ಕಟ್ಟಿಕೊಡುತ್ತದೆ.
ಟೆಂಪಲ್ ಸಿಟಿ ಎಂದು ಕರೆಸಿಕೊಂಡ ಮಾತ್ರಕ್ಕೆ ವಾರಾಣಸಿಯನ್ನು ಬಿಜೆಪಿ ಭದ್ರಕೋಟೆ ಎಂದು ಪರಿಗಣಿಸುವ ಪರಿಸ್ಥಿತಿಯಂತೂ ಇಲ್ಲ. 2009ರ ಚುನಾವಣೆಯಲ್ಲಿ ಮುರಳಿ ಮನೋಹರ ಜೋಶಿ ಗೆದ್ದಿದ್ದರೂ ಅದಕ್ಕೂ ಹಿಂದೆ ಕಾಂಗ್ರೆಸ್ ಗೆದ್ದಿತ್ತು. ಇತಿಹಾಸದಲ್ಲಿ ಸಾಕಷ್ಟು ಬಾರಿ ವಿಜಯಲಕ್ಷ್ಮಿ ಪಾಳಯ ಬದಲಿಸಿದ್ದಾಳೆ. ವಾರಾಣಸಿಯ ಜನಸಂಖ್ಯೆಯ ಶೇಕಡ 30 ಭಾಗ ಮುಸ್ಲಿಮರಿದ್ದಾರೆ. 40 ಲಕ್ಷ ಮುಸ್ಲಿಮರು, 30 ಲಕ್ಷ ಬ್ರಾಹ್ಮಣರು ಹಾಗೂ ಇಷ್ಟೇ ಸಂಖ್ಯೆಯ ವೈಶ್ಯರಿದ್ದಾರೆ ಎಂಬುದು ಒಂದು ಲೆಕ್ಕಾಚಾರ. (ಇದು ಮತಗಳ ಲೆಕ್ಕವಲ್ಲ). 2009ರಲ್ಲಿ ವಿಜೇತರಾದ ಜೋಶಿ ಶೇ. 30.52ರಷ್ಟು ಮತ ಪಡೆದಿದ್ದರೆ, ಪ್ರತಿಸ್ಪರ್ಧಿ ಬಿಎಸ್‌ಪಿಯ ಮುಕ್ತಾರ್ ಅನ್ಸಾರಿ ಶೇ. 27.94ರಷ್ಟು ಮತ ಗಳಿಸಿದ್ದರು. ಈ ಬಾರಿಯೂ ಮಾಜಿ ಮಾಫಿಯಾ ಡಾನ್ ಅನ್ಸಾರಿ ಸ್ಪರ್ಧಿಸಲಿದ್ದಾರೆ. ಉ.ಪ್ರ. ದ ಮುಸ್ಲಿಮರ ಮತ 'ಸೆಕ್ಯುಲರ್‌' ಗುಂಪುಗಳಿಗೇ ಆದರೂ ಅದು ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿಗಳಲ್ಲಿ ಹಂಚಿಹೋಗುತ್ತಿತ್ತು. ಮೋದಿ ಉಮೇದುವಾರಿಕೆ ಈ ಬಾರಿ ಒಂದೇ ಪಕ್ಷದತ್ತ ಧ್ರುವೀಕರಣಕ್ಕೆ ಕಾರಣವಾದೀತೇ? ಈ ಬಾರಿ ಮುಜಪ್ಫರಪುರದ ಕೋಮು ಹಿಂಸಾಚಾರವು ಆಡಳಿತಾರೂಢ ಎಸ್‌ಪಿ ಮೇಲೆ ಮುಸ್ಲಿಮರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಮಗೇನು ಮಾಡಿದೆ ಅಂತ ಕೇಳುವವರ ಸಂಖ್ಯೆಯೂ ಹೆಚ್ಚು. ಇವೆಲ್ಲ ಅನ್ಸಾರಿ ಪರ ಮುಸ್ಲಿಂ ಮತಗಳ ಧ್ರುವೀಕರಣಕ್ಕೆ ಕಾರಣವಾಗಬಹುದು. ಕೇಜ್ರಿವಾಲರ ಸರ್ಕಸ್ಸೂ ಮುಸ್ಲಿಂ ಮತಗಳನ್ನು ಸೆಳೆಯುವತ್ತಲಿದೆ.
ತಮ್ಮ ಎಂದಿನ ಅಭಿವೃದ್ಧಿ ಪತಾಕೆ ಪಟಪಟಿಸಿರುವ ಮೋದಿ, ತಾವು ಕೈಮಗ್ಗ ಉದ್ದಿಮೆಗೆ ಅಗತ್ಯ ಅನುಕೂಲ ಮಾಡಿಕೊಡುವ ಭರವಸೆ ಇತ್ತಿದ್ದಾರೆ. ಪ್ರಖ್ಯಾತ 'ಬನಾರಸಿ ಸೀರೆ' ನೇಯ್ಗೆಯಲ್ಲಿ ನಿರತರಾಗಿರುವವರಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯದವರೇ? ಧಾರ್ಮಿಕ ಭಾವನೆಗೆ ಮೀರಿದ ಆರ್ಥಿಕ ನೋಟ ಇವರಲ್ಲಿ ಕೆಲವರನ್ನು ಮೋದಿ ಪರ ವಾಲಿಸೀತೇ ಎಂಬುದು ಬಿಜೆಪಿ ಹೊಂದಬಹುದಾದ ದುಬಾರಿ ಕನಸು.


- ಚೈತನ್ಯ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement