ಜಸ್ವಂತ್ಗೆ ಬಿದ್ದ ಏಟು ವಸುಂಧರೆಯದು
ಬಿಜೆಪಿಯ ಚುನಾವಣಾ ಚಿತ್ರಕತೆಯುದ್ದಕ್ಕೂ ಕಾತರಗಳ ಸಾಲು. ಇಂದ್ಯಾವ ಹೊಸ ಉದ್ಘೋಷ, ಯಾರು ಒಳಗೆ- ಇನ್ಯಾರು ಹೊರಗೆ ಎಂಬ ಕೌತುಕವನ್ನು ದಿನವೂ ಇರಿಸಿಕೊಳ್ಳಬಹುದೆಂಬ ಸೂಚನೆಯನ್ನು ಅದು ಕೊಡುತ್ತಿದೆ.
ಆಡ್ವಾಣಿ ಅಧ್ಯಾಯದ ನಂತರ ಈಗ ಜಸ್ವಂತ ಸಿಂಗ್ ಆಕ್ರೋಶದ ಕೋಲಾಹಲ. ಅತ್ತ ಆಡ್ವಾಣಿ ಅವರ ಆಪ್ತ ವಲಯಕ್ಕೆ ಸೇರಿದ್ದ, ಏಳು ಬಾರಿಯ ಸಂಸದ ಹರಿನ್ ಪಾಠಕ್ಗೂ ಟಿಕೆಟ್ ಇಲ್ಲ. ಇವೆಲ್ಲ ಪ್ರಾರಂಭವಾಗುವುದಕ್ಕೂ ಮೊದಲು ಮುರಳಿ ಮನೋಹರ ಜೋಶಿ ತಮ್ಮ ಕ್ಷೇತ್ರವನ್ನು ಮೋದಿಗೆ ತೆರವುಗೊಳಿಸಿ ಗಪ್ಚುಪ್ ಎಂದು ಕಾನ್ಪುರಕ್ಕೆ ತೆರಳಬೇಕಾಯಿತು. ಇವೆಲ್ಲ ಗಮನಿಸುತ್ತಿದ್ದರೆ, ಮೋದಿ ಬ್ರಿಗೇಡ್ ಹಳಬರನ್ನೆಲ್ಲ ನಿವಾಳಿಸುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ.
ಬಿಜೆಪಿಯಲ್ಲಿ ಮೊದಲಿನಿಂದ ಇದ್ದವರಾಗಿದ್ದರು, ಹಲವು ಹುದ್ದೆಗಳನ್ನು ನಿಭಾಯಿಸಿದವರು, ವಯಸ್ಸಿನಲ್ಲಿ ಹಿರಿಯರು ಇಂಥ ಎಲ್ಲ ಭಾವನಾತ್ಮಕ ಅಂಶಗಳನ್ನು ಎದುರಿಗೆ ಇಟ್ಟುಕೊಂಡಾಗ ಇಂಥ ನಿಷ್ಠುರ ಸಂದರ್ಭಗಳೆಲ್ಲ ಒದಗಬಾರದಿತ್ತು ಎಂದು ಯಾರಾದರೂ ಅಂದುಕೊಂಡಾರು. ಯಾರು ಒಪ್ಪಿದರೂ ಬಿಟ್ಟರೂ ಬಿಜೆಪಿಯ ಹೊಸ ನಾಯಕತ್ವದ ಯೋಚನೆ ಸ್ಪಷ್ಟ. ಡೆಲಿವರ್ ಆರ್ ಪೆರಿಶ್. ಯಾರು ಫಲಿತಾಂಶಗಳನ್ನು ತಂದುಕೊಡುತ್ತಾರೋ ಅವರಿಗೆ ಆದ್ಯತೆ, ಉಳಿದವರಿಗೆ ಸ್ಸಾರಿ... ಈ ಮಟ್ಟದ ಆಕ್ರಮಣಶೀಲತೆ ಇಲ್ಲದೇ, ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಹಲವು ಹಂತಗಳಲ್ಲಿ ಲೋಹ ಪುರುಷರು ಮೃದುವಾಗಿ ಇದ್ದದ್ದೇ ಸೋಲಿಗೆ ಕಾರಣ ಎಂದು ಬಿಜೆಪಿಯ ಒಂದು ಪಾಳಯದಲ್ಲಿ ಅನಿಸಿಕೆ ಇದ್ದಿರಬಹುದು. ಹೀಗಾಗಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಈ ಬಾರಿಯ ಮುಖ್ಯ ಲಕ್ಷಣವಾದಂತಿದೆ.
ರಾಜಕೀಯ ವಲಯ ಈಗ ವಿಶ್ಲೇಷಣೆಗಿಳಿದಿರುವಂತೆ, ಜಸ್ವಂತ್ ಸಿಂಗ್ಗೆ ಬಾರ್ಮರ್ನ ಸ್ಥಾನ ತಪ್ಪಿರುವುದು 'ವಸುಂಧರಾ ವರ್ಸಸ್ ಜಸ್ವಂತ್' ಆಟದಲ್ಲಿ. ಕೆಲ ತಿಂಗಳುಗಳ ಹಿಂದೆ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಜಯ ದಾಖಲಿಸಿದ ವಸುಂಧರಾ ರಾಜೇ, ನರೇಂದ್ರ ಮೋದಿಯವರನ್ನು ವಿಶೇಷವಾಗಿ ನೆನಪಿಸಿಕೊಂಡು ಧನ್ಯವಾದ ಸಮರ್ಪಿಸಿದ್ದು ತಿಳಿದಿರಬಹುದು. ಉಳಿದ ರಾಜ್ಯಗಳ ನೇತಾರರು (ಮಧ್ಯಪ್ರದೇಶ, ಛತ್ತೀಸಗಡ) ತಮ್ಮ ವಿಧಾನಸಭೆ ಗೆಲುವಿನಲ್ಲಿ ಮೋದಿ ಅಲೆಗೆ ಅತಿ ಮಹತ್ತ್ವವನ್ನು ಕೊಡಲು ಹೋಗಲಿಲ್ಲ. ಈ ಬಾರಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ವಸುಂಧರಾ ರಾಜೆಯವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು, ಪಕ್ಷದ ಆಂತರಿಕ ಕಲಹಗಳನ್ನು ಪಕ್ಕ ಸರಿಸಿ ಗೊಂದಲ ನಿವಾರಣೆ ಮಾಡಿ, ಜಯಕ್ಕೆ ಕಾರಣವಾಯಿತು ಎಂಬುದೊಂದು ವಿಶ್ಲೇಷಣೆ. ಗೆದ್ದ ನಂತರವೂ ಮುಖ್ಯಮಂತ್ರಿಯಾಗಿ ರಾಜೇ ವಿಶ್ರಮಿಸದೇ ರಾಜಸ್ಥಾನದ ಮೂಲೆ ಮೂಲೆಗಳಲ್ಲಿ ಸಂಚರಿಸುತ್ತ, ಲೋಕಸಭೆ ಸಮರಕ್ಕೆ ಆಗಲೇ ತಯಾರಿ ಮಾಡಿದ್ದಾರೆ. ಹೀಗೆ 'ಫೋರ್ಸ್'ನಲ್ಲಿರುವ ನಾಯಕಿಯ ಬೇಡಿಕೆಗಳನ್ನು ಪುರಸ್ಕರಿಸದೇ ಜಸ್ವಂತ್ರನ್ನು ಉಳಿಸಿಕೊಳ್ಳುವುದರಲ್ಲಿ ಅಂಥ ಲಾಭವೇನೂ ಇಲ್ಲ ಎಂದು ಬಿಜೆಪಿಯ ಈಗಿನ ನಾಯಕರು ಅಂದುಕೊಂಡಿರಲಿಕ್ಕೆ ಸಾಕು. ರಾಜ್ಯದಲ್ಲಿ ತಮ್ಮ ಪಕ್ಷದ ಎದುರಾಳಿಗಳನ್ನೆಲ್ಲ ಆಗಲೇ ನಿವಾರಿಸಿಕೊಂಡು ದೃಢವಾಗಿದ್ದಾರೆ ವಸುಂಧರಾ. ಉಳಿದಿದ್ದ 'ದೊಡ್ಡ' ಹೆಸರು ಎಂದರೆ ಜಸ್ವಂತ್ ಸಿಂಗ್ ಮಾತ್ರವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಜಸ್ವಂತ್ ಸಿಂಗ್ ಮಗ ಮಾನವೇಂದ್ರ ಸಿಂಗ್ ಸಂಪುಟದ ಹೊರಗಿರುವಂತೆ ಆಗಲೇ ನೋಡಿಕೊಂಡಿದ್ದಾಗಿದೆ.
ಪಕ್ಷದ ದೃಷ್ಟಿಯಿಂದ ಜಸ್ವಂತ್ರನ್ನು ನೋಡುವುದಾದರೆ ಅವರು 'ಕಟ್ಟರ್ ಬಿಜೆಪಿಗ' ಎಂಬ ವರ್ಚಸ್ಸಿನಿಂದ ತಮ್ಮನ್ನು ಹೊರಗಿಟ್ಟುಕೊಂಡೇ ಬಂದವರು. ಜಿನ್ನಾ ವಿವಾದದಲ್ಲಿ ಬಿಜೆಪಿಯಿಂದ ಹೊರಹಾಕಲ್ಪಟ್ಟಾಗ, 'ಬಿಜೆಪಿ ಸೀಮಿತ ಚಿಂತನೆಯನ್ನು ಅಳವಡಿಸಿಕೊಂಡಿದೆ' ಎಂದೇ ಜರೆದಿದ್ದರು. ಜಸ್ವಂತ್ ಜನಸಮೂಹವನ್ನು ಸೆಳೆಯುವ ನಾಯಕರೂ ಅಲ್ಲ. ಅವರದ್ದೇ ಆದ ಕ್ಷೇತ್ರವೊಂದನ್ನು ರೂಪಿಸಿಕೊಳ್ಳುವುದರಲ್ಲಿ ವಿಫಲವಾದವರು. 1989ರಲ್ಲಿ ಜೋಧ್ಪುರದಿಂದ ಸ್ಪರ್ಧಿಸಿ ಗೆದ್ದಿದ್ದರು. 1991 ಹಾಗೂ 1996ರಲ್ಲಿ ಚಿತ್ತೋಗಢದಿಂದ. 1998ರಲ್ಲಿ ಅವರು ಸೋಲುವುದಕ್ಕೆ ಕ್ಷೇತ್ರದೊಂದಿಗೆ ಅವರು ಸಂಪರ್ಕ ಇರಿಸಿಕೊಂಡಿರಲಿಲ್ಲ ಎಂಬುದೇ ಕಾರಣವಾಗಿತ್ತು. ಗೋರ್ಖಾಲ್ಯಾಂಡ್ಗಾಗಿ ಬೇಡಿಕೆ ಇಟ್ಟಿರುವ ಗೋರ್ಖಾ ಜನಮುಕ್ತಿ ಮೋರ್ಚಾ ಬಿಜೆಪಿಯನ್ನು ಬೆಂಬಲಿಸಿದ್ದರಿಂದ 2009ರಲ್ಲಿ ಅವರು ಡಾರ್ಜಲಿಂಗ್ನಿಂದ ಗೆಲವು ಸಾಧಿಸುವುದು ಸಾಧ್ಯವಾಯಿತು. ಆದರೆ ಈ ಬಾರಿ ಜಿಜೆಎಂ ಬಿಜೆಪಿಯನ್ನೇ ಬೆಂಬಲಿಸಿದೆಯಾದರೂ, ಅಭ್ಯರ್ಥಿ ಬದಲಾದರೆ ಮಾತ್ರ ಎಂಬ ಷರತ್ತನ್ನು ಮೊದಲೇ ಇಟ್ಟಿತ್ತು. ಹೀಗಾಗುವುದಕ್ಕೂ ಜಸ್ವಂತ್ ಕ್ಷೇತ್ರದಿಂದ ದೂರ ಉಳಿದಿದ್ದೇ ಕಾರಣ ಎನ್ನಲಾಗುತ್ತಿದೆ.
ಹೀಗೆ ಜಸ್ವಂತ್- ವಸುಂಧರಾರನ್ನು ಅಳೆದು ತೂಗಿದಾಗ ಸದ್ಯದಮಟ್ಟಿಗೆ ರಿಸಲ್ಟ್ ಕೊಡುತ್ತಿರುವ ರಾಜೇ ಬೆಂಬಲಕ್ಕೆ ನಿಲ್ಲುವುದು ಬಿಜೆಪಿಗೆ ಲಾಭದಾಯಕವಾದ್ದರಿಂದ ಜಸ್ವಂತ್ ಬಂಡಾಯವು ಪಕ್ಷವನ್ನು ತೀರಾ ಏನೂ ಅಲ್ಲಾಡಿಸಿಲ್ಲ.
ನಿಜ. ಈ ಬಗೆಯ ನಿರ್ದಯಿ ಅಧಿಕಾರ ಹಸ್ತಾಂತರಗಳಲ್ಲಿ ಭಾವನಾತ್ಮಕ ಅಂಶಗಳು ಕಂಬನಿ ಹರಿಸುತ್ತವೆ. ಮೋದಿಯವರು ತಮ್ಮನ್ನು ಗುಜರಾತ್ ಗಲಭೆಯ ಕ್ಲಿಷ್ಟಕಾಲದಲ್ಲಿ ಬೆಂಬಲಿಸಿದ್ದ ಆಡ್ವಾಣಿಯವರನ್ನು ಮರೆತರೆಂಬ ಮಾತು ಬಂದಿತ್ತಲ್ಲವೇ? ಈ ಪ್ರಕರಣದಲ್ಲೂ ರಾಜೇ ಅವರ ಪ್ರಾರಂಭಿಕ ಬೆಳವಣಿಗೆಗೆ ಜಸ್ವಂತ್ ಪ್ರಮುಖಕಾರಣರಾಗಿದ್ದರೆಂಬ ಅಂಶ ಗೋಚರಿಸುತ್ತದೆ. 2003ರಲ್ಲಿ ಜಸ್ವಂತ್ ಕೇಂದ್ರದಲ್ಲಿ ವಿತ್ತ ಸಚಿವರಾಗಿದ್ದಾಗ ರಾಜಸ್ಥಾನಕ್ಕೆ ರಾಜೇ ಅವರನ್ನೇ ಒತ್ತಾಸೆಯಿಂದ ಮುಖ್ಯಮಂತ್ರಿಯಾಗಿಸಿದರು. ನಂತರ ಪೋಸ್ಟರ್ ಒಂದರಲ್ಲಿ ರಾಜೇ ಅವರನ್ನು ಹಿಂದು ದೇವತೆಯಾಗಿ ಚಿತ್ರಿಸಿರುವುದರ ವಿರುದ್ಧ ಜಸ್ವಂತ್ರ ಪತ್ನಿ ಶೀತಲ್ ಕನ್ವಾರ್ 2007ರಲ್ಲಿ ಪೊಲೀಸ್ ದೂರು ದಾಖಲಿಸುವುದರೊಂದಿಗೆ ಸಂಘರ್ಷಕ್ಕೆ ಮುನ್ನುಡಿ. ನಂತರದ ದಿನಗಳಲ್ಲಿ ತಮ್ಮ ವಿರೋಧಿ ಪಾಳಯವನ್ನು ಜಸ್ವಂತ್ ಒಂದುಗೂಡಿಸುತ್ತಿದ್ದಾರೆ ಎಂಬ ಭಾವ ರಾಜೇ ಅವರಲ್ಲಿ ಬೆಳೆಯಿತು. ಹೀಗಾಗಿ ಈಗ ಬಿಜೆಪಿ ಬಿಡುವೆನೆಂಬ ಜಸ್ವಂತ್ರನ್ನು ಅಯ್ಯೋ ಎಂದು ಸಮಾಧಾನಿಸುವವರು ವಿರಳ. ಬರ್ಮರ್ನಿಂದ ಸ್ವಂತಂತ್ರ ಅಭ್ಯರ್ಥಿಯಾಗಿ ಗೆಲ್ಲುವುದಷ್ಟೇ ಅವರು ಸೇಡು ತೀರಿಸಿಕೊಳ್ಳುವುದಕ್ಕಿರುವ ಮಾರ್ಗ.
- ಚೈತನ್ಯ ಹೆಗಡೆ