ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮರಕೋತಿಯಾಟದಲ್ಲಿ ಅತಿಏಟು ಯಾರಿಗೆ?

ಮಹಾಯುದ್ಧದ ಚಿತ್ರಕತೆ ಅರಳುತ್ತಿರುವ ಹೊತ್ತಿನಲ್ಲಿ ಕತೆಗೆ ಬಹಳ ಏರಿಳಿತ ತುಂಬಿರುವ...

Mainashree
Updated On : 5 Apr 2014, 4:12 am

ಮಹಾಯುದ್ಧದ ಚಿತ್ರಕತೆ ಅರಳುತ್ತಿರುವ ಹೊತ್ತಿನಲ್ಲಿ ಕತೆಗೆ ಬಹಳ ಏರಿಳಿತ ತುಂಬಿರುವ ವಿದ್ಯಮಾನವೆಂದರೆ ಪಾಳಯ ಬದಲು ಮಾಡುತ್ತಿರುವ ಹುರಿಯಾಳುಗಳ ಚಿತ್ರ. ಈ ಕುರಿತೇ ದಿನಕ್ಕೊಂದು ವಿವಾದ, ಅಸಮಾಧಾನಗಳು ಬಿಚ್ಚಿಕೊಳ್ಳುತ್ತಿರುವುದನ್ನು ಕಾಣಬಹುದು. 'ಟಿಕೆಟ್ ಹಂಚಿಕೆ ಕುರಿತು ಬಿಜೆಪಿಯಲ್ಲಿ ಅಸಮಾಧಾನಗಳು ಸಹಜ. ಏಕೆಂದರೆ ಈ ಬಾರಿ ಅಧಿಕಾರಕ್ಕೆ ಬರುವ ಖಚಿತ ಚಿತ್ರಣ ಇರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದಾರೆ' ಎಂಬುದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಮಾತು. ಒಂದು ಕ್ಷೇತ್ರಕ್ಕೆ ಸ್ಪರ್ಧಿಸುವ ಸಂಬಂಧ ಬಿಜೆಪಿಯಲ್ಲೇ ಹಲವು ಆಕಾಂಕ್ಷಿಗಳಿದ್ದು, ಅಂತಿಮವಾಗಿ ಒಬ್ಬರ ಹೆಸರು ಅಖೈರುಗೊಳಿಸಿದಾಗ ಇನ್ನೊಬ್ಬರು ಸಿಟ್ಟಾಗುತ್ತಾರೆ ಎಂಬ ಪರಿಸ್ಥಿತಿಯಾಗಿದ್ದರೆ ರಾಜನಾಥ್ ಅವರದ್ದು ಬರೋಬ್ಬರಿ ಮಾತು ಎನ್ನಬಹುದಿತ್ತು. ಆದರೆ ಬಂಡಾಯಗಾರರೆಲ್ಲ ಭಾರಿ ಸುದ್ದಿ ಮಾಡುವುದಕ್ಕೆ ಅವರ ಜಾಗದಲ್ಲಿ ಬೇರೆ ಪಕ್ಷದಿಂದ ಬಂದವರನ್ನು ಪರಿಗಣಿಸಲಾಗಿದೆ ಎಂಬ ಕಾರಣಕ್ಕೆ. ಜಸ್ವಂತ್ ಪ್ರಕರಣವನ್ನೇ ಗಮನಿಸಿದರೆ, ಅಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಯಿತು ಎಂಬ ಅಂಶದ ಜತೆಗೆ, ಅವರ ಜಾಗದಲ್ಲಿ ಮೊನ್ನೆಯಷ್ಟೇ ಕಾಂಗ್ರೆಸ್ ತೊರೆದು ಬಂದವರನ್ನು ನಿಲ್ಲಿಸಲಾಗಿದೆ ಎಂಬುದು ಉರಿ ಹೆಚ್ಚಿಸಿರುವ ಅಂಶ.
ಈ ಲೋಕಸಭೆ ಚುನಾವಣೆಯಲ್ಲಿ ಮರಕೋತಿಯಾಟ ಮಿತಿಮೀರಿರುವುದಂತೂ ಹೌದು. ಇದರ ಅನನ್ಯ ಮಾದರಿಗಳನ್ನು ಗಮನಿಸುವ ಆಸಕ್ತಿಯಿದ್ದರೆ ಬಿಹಾರದತ್ತ ನೋಡಬೇಕು. ಅಲ್ಲಿ ಬಿಜೆಪಿ ಮತ್ತು ಜೆಡಿಯು ದೋಸ್ತಿ ಟೂ ಬಿಟ್ಟಾಗಿನಿಂದ ಈ ಜಿಗಿಯೋ ಆಟ ತಾರಕಕ್ಕೇರಿದೆ. ಇದರ ಭಾರೀ ಪ್ರಹಾರ ತಿನ್ನುತ್ತಿರುವದು ಜೆಡಿಯು. ಇಲ್ಲಿಂದ ಹಾರುತ್ತಿರುವವರ ಸಮಸ್ಯೆ ಎಷ್ಟು ತೀವ್ರವೆಂದರೆ ಮುಖ್ಯಮಂತ್ರಿ ನಿತೀಶ್ ಕುಮಾರರು ಹೊತ್ತಲ್ಲದ ಹೊತ್ತಿನಲ್ಲಿ ಸಂಪುಟ ವಿಸ್ತರಣೆ ಮಾಡಿ ಹಲವರನ್ನು ಸಂತೈಸುವ ಕೆಲಸ ಮಾಡಬೇಕಾಯಿತು.
ಜೆಡಿಯುದ ನಿತೀಶ್ ಕುಮಾರ್ ದಶಕಗಳಿಂದ ತಮ್ಮ ಪಕ್ಷ ಕಟ್ಟುವುದರಲ್ಲಿ ಕುರ್ಮಿ ಮತ್ತು ಕೊಯ್ರಿ ಎಂಬೆರಡು ಜಾತಿಗಳನ್ನು ಸೋಷಿಯಲ್ ಎಂಜಿನಿಯರಿಂಗ್‌ನ ಭಾಗವಾಗಿರಿಸಿಕೊಂಡಿದ್ದರು. ಈ ಪಂಗಡಗಳಿಗೆ ಸೇರಿದ ನೇತಾರರನ್ನೆಲ್ಲ ತಮ್ಮತ್ತ ಸೆಳೆದುಕೊಳ್ಳುತ್ತಿರುವ ಬಿಜೆಪಿ ಮತ್ತು ಆರ್‌ಜೆಡಿಗಳು ಜೆಡಿಯುಗೆ ತಲೆಬೇನೆ ತಂದಿರಿಸಿವೆ. ನರೇಂದ್ರ ಮೋದಿಯವರ ಬಿಹಾರದ ರ್ಯಾಲಿಯೊಂದರಲ್ಲಿ ವಿಜಯ್ ಸಿಂಗ್ ಎಂಬುವವರನ್ನು ಭರ್ತಿ ಮಾಡಿಕೊಳ್ಳಲಾಯಿತು. ಇವರು ಜೆಡಿಯು ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದ ರೇಣು ಕುಮಾರಿ ಕುಶ್ವಾ ಅವರ ಪತಿ. ಈ ವಿದ್ಯಮಾನದ ಬೆನ್ನಲ್ಲೇ ರೇಣು ಕುಮಾರಿ ಸಹ ಜೆಡಿಯು ತೊರೆದರು. ಸುಶೀಲ್ ಸಿಂಗ್ ಎಂಬ ಸಂಸದ ಬಿಜೆಪಿಗೆ ಪಾಳಯ ಬದಲಿಸಿರುವುದರಿಂದ ತನ್ನ ರಜಪೂತ ಮತಬ್ಯಾಂಕ್ ಕುಸಿದುಬಿಡುವುದೇನೋ ಎಂಬ ಆತಂಕ ನಿತೀಶ್‌ರ ಪಕ್ಷಕ್ಕೆ. ಜೈ ನಾರಾಯಣ್ ನಿಶಾದ್, ಮಂಗ್ರಿಲಾಲ್ ಮಂಡಲ್, ಪೂರ್ಣಮಾಸಿ ರಾಮ್ ಈ ಮೂವರು ಮಹಾದಲಿತರೆಂದು ಕರೆಸಿಕೊಳ್ಳುವ ಪಂಗಡಕ್ಕೆ ಸೇರಿದ ಜೆಡಿಯು ಸಂಸದರು. ಇವರಲ್ಲಿ ಮಂಡಲ್ ಆರ್‌ಜೆಡಿಯನ್ನು, ನಿಶಾದ್ ಬಿಜೆಪಿಯನ್ನು ಹಾಗೂ ಪೂರ್ಣಮಾಸಿ ಕಾಂಗ್ರೆಸ್ ಅನ್ನು ಸೇರಿದ್ದಾಗಿದೆ. ಮತಬ್ಯಾಂಕ್ ಲೆಕ್ಕಾಚಾರದಲ್ಲಿ ಆರ್‌ಜೆಡಿ ತೊರೆದ ರಾಮ್‌ಕೃಪಾಲ್ ಯಾದವ್‌ರನ್ನು ಬಿಜೆಪಿ ತನ್ನಲ್ಲಿ ಸೇರಿಸಿಕೊಂಡು ಪಾಟಲಿಪುತ್ರದ ಟಿಕೆಟ್ ನೀಡಿರುವುದು ಲಾಭವಾಗಬಹುದಾದ ವಿಚಾರವೇ. ಕೃಪಾಲ್ ರೀತಿಯಲ್ಲೇ ಆರ್‌ಜೆಡಿ ತೊರೆದು ಬಿಜೆಪಿ ಸೇರಿಕೊಂಡಿರುವ ಇನ್ನೊಬ್ಬ ಯಾದವ ಮುಖಂಡನೆಂದರೆ ನವಾಲ್ ಕಿಶೋರ್ ಯಾದವ್. ಜೆಡಿಯು ಸರ್ಕಾರದಲ್ಲಿ ಮಂತ್ರಿಯಾಗಿದ್ದ ಪರ್ವೀನ್ ಅಮಾನುಲ್ಲ ಎಂಬ ಮಹಿಳಾ ಸದಸ್ಯೆ ಆಪ್‌ಗೆ ಸೇರಿಕೊಂಡಿದ್ದಾರೆ. ಲೆಸ್ಸಿ ಸಿಂಗ್ ಎಂಬುವವರೂ ಜೆಡಿಯುದಿಂದ ಟಿಕೆಟ್ ವಂಚಿತರಾದಾಗ ಪಕ್ಷ ತೊರೆಯುವುದಕ್ಕೆ ಮುಂದಾಗಿದ್ದರು. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಮಾಧಾನಿಸಲಾಗಿದೆ. ಹೀಗೆಲ್ಲ ಹೊರಹೋಗಿರುವವರ ಜಾಗದಲ್ಲಿ ಬೇರೆಯವರನ್ನು ತುಂಬಲೇಬೇಕಲ್ಲ. ಹೀಗಾಗಿ 38 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಯು ಹದಿನಾಲ್ಕು ಮಂದಿ ಹೊರಗಿನವರಿಗೆ ಟಿಕೆಟ್ ನೀಡಿದೆ. ಈವರೆಗೆ ಹೆಸರಿಸಲಾಗಿರುವ ಬಿಜೆಪಿ ಪಟ್ಟಿಯಲ್ಲಿ ಒಂಬತ್ತು ಮಂದಿ ಹೊರಗಿನವರು.
ಮರಕೋತಿಯಾಟದ ಬಗ್ಗೆ ನಿತೀಶ್ ಕುಮಾರ್ ಅವರಷ್ಟೇ ತಲೆಕೆಡಿಸಿಕೊಂಡಿರುವ ಈ ದೇಶದ ಇನ್ನೊಬ್ಬ ಮುಖ್ಯಮಂತ್ರಿ ಎಂದರೆ ಬಿಜೆಡಿಯ ನವೀನ್ ಪಟ್ನಾಯಕ್ ಅವರೇ ಆಗಿರಬಹುದೇನೋ. ಅಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆಯಾದ್ದರಿಂದ ಯಾವುದೇ ಬಂಡಾಯ ಎದುರುಹಾಕಿಕೊಳ್ಳಬಾರದೆಂಬ ಎಚ್ಚರಿಕೆ ಪಟ್ನಾಯಕ್ ಅವರದ್ದು. ಹೀಗಾಗಿ ವಿಧಾನಸಭೆ ಹಂತದಲ್ಲಿ ಬಂಡಾಯಗಾರರನ್ನೆಲ್ಲ ಹೇಗೋ ಸಮಾಧಾನಿಸಿದ್ದಾರೆ. ಟಿಕೆಟ್ ವಂಚಿತನಾದೆ ಎಂದು ಸಿಟ್ಟಾದ ಕೆಲವು ನಾಯಕರಿಗೆ ಬೇರೆ ಕ್ಷೇತ್ರಗಳಲ್ಲಿ ಅವರ ಸಂಬಂಧಿಗೆ ಟಿಕೇಟ್ ನೀಡುವ ಮೂಲಕ ಸುಗ್ನನಿ ದೇವ್ ಅಂಥವರು ತಮಗೆ ಟಿಕೆಟ್ ಸಿಗಲಿಲ್ಲ ಎಂದು ಧರಣಿ ಕುಳಿತಾಗ ಮೊದಲು ಘೋಷಿಸಿದ್ದ ಲತಿಕಾ ಪ್ರಧಾನ್ ಉಮೇದುವಾರಿಕೆ ರದ್ದುಗೊಳಿಸಿ ಇವರಿಗೇ ಟಿಕೆಟ್ ನೀಡುವ ಮೂಲಕ- ಹೀಗೆ ಹಲವು ಸರ್ಕಸ್‌ಗಳನ್ನು ಪಟ್ನಾಯಕ್ ಮಾಡಬೇಕಾಯಿತು.
ಈ ಹಿಂದೆ ಇವರ ನಾಯಕತ್ವದ ವಿರುದ್ಧ ಬಂಡೆದ್ದು ಸರ್ಕಾರ ಉರುಳಿಸುವುದಕ್ಕೆ ನೋಡಿದ್ದ ಶಾರದಾ ನಾಯಕ್ ಅಂಥವರಿಗೂ ವಿಧಾನಸಭೆ ಟಿಕೆಟ್ ನೀಡಿ, ಬಂಡಾಯ ಹೆಡೆ ಎತ್ತದಂತೆ ನಿಟ್ಟುಸಿರಿಟ್ಟಿದ್ದಾರೆ ಪಟ್ನಾಯಕ್. ಇದೇ ವೇಳೆ ಕಾಂಗ್ರೆಸ್‌ನ ಸುಮಾರು ಹತ್ತು ನೇತಾರರು ಪಕ್ಷ ತೊರೆದು ಬಿಜೆಡಿ ಸೇರಿಕೊಂಡಿರುವುದು ಮಹಾಯುದ್ಧ ಸಾಗಲಿರುವ ಜಾಡಿನ ದಿಕ್ಸೂಚಿಯೇನೋ ಎನ್ನಿಸುತ್ತಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಭುಪಿಂದರ್ ಸಿಂಗ್ ಅವರೇ ಬಿಜೆಡಿ ಸೇರಿಬಿಟ್ಟಿದ್ದಾರೆ. ಕಾಳಹಂದಿಯ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕದಿರುವುದಕ್ಕೆ ಈ ಕ್ರಮವಂತೆ.
ಉಳಿದಂತೆ ಹರ್ಯಾಣದ ಸೋನೆಪತ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ್ ಕೌಶಿಕ್ ಕಾಂಗ್ರೆಸ್ ತೊರೆದು ಬಂದಿರುವವರು. ಇದೀಗ ಕಾಂಗ್ರೆಸ್‌ನಲ್ಲಿ ವಿಲೀನವಾಗಿರುವ ಹರ್ಯಾಣ ವಿಕಾಸ್ ಪಕ್ಷದ ಆರ್. ಕೆ. ಸೈನಿ, ಕುರುಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ.
ಬಿಜೆಪಿ ಸೇರಿದಂತೆ ಯಾವ ಪಕ್ಷಗಳೂ ನಾವು ಹೊಸಮುಖಕ್ಕೆ ಮಣೆ ಹಾಕಿದ್ದೇವೆ ಎನ್ನುವಂತಿಲ್ಲ. ಏಕೆಂದರೆ ಬದಲಿ ಅಭ್ಯರ್ಥಿಗಳಲ್ಲಿ ಹೆಚ್ಚಿನವರೆಲ್ಲ ಪಕ್ಷದ ಮಟ್ಟಿಗೆ ಮಾತ್ರ ಹೊಸಬರಷ್ಟೆ, ರಾಜಕಾರಣಕ್ಕಲ್ಲ.

- ಚೈತನ್ಯ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement