ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವಡೋದರದಲ್ಲಿ ಹೀಗೊಂದು 'ವಿನಮ್ರ' ಸಮರ!

ವಾರಾಣಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನಿಂದ...

Mainashree
Updated On : 5 Apr 2014, 4:07 am

ವಾರಾಣಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನಿಂದ ಹುರಿಯಾಳಾಗುವವರು ಯಾರು ಎಂಬ ಚರ್ಚೆ ಇನ್ನೂ ಜಾರಿಯಲ್ಲಿದೆ. ಮೋದಿಯ ಕಟ್ಟರ್ ಟೀಕಾಕಾರ ದಿಗ್ವಿಜಯ್ ಸಿಂಗ್ ಅವರ ಹೆಸರು ಆಗೀಗ ಪ್ರಸ್ತಾಪವಾಗುತ್ತ, ಭವಿಷ್ಯತ್ತಿನ ವಾಗ್ಯುದ್ಧದ ಸೂಚನೆಗಳನ್ನು ಕೊಡುತ್ತಿದೆ. ಆದರೆ ಮೋದಿ ಸ್ಪರ್ಧಿಸಿರುವ ಇನ್ನೊಂದು ಸ್ಥಾನವಾದ ವಡೋದರದ ವಿಷಯದಲ್ಲಿ ಕಾಂಗ್ರೆಸ್ ತೀರ ಸಸ್ಪೆನ್ಸ್ ಹುಟ್ಟುಹಾಕುವುದಕ್ಕೇನೂ ಹೋಗದೇ ಮಧುಸೂದನ ಮಿಸ್ತ್ರಿ ಅವರನ್ನು ಕಣಕ್ಕಿಳಿಸಿದೆ. ಮೋದಿಗೆ ಹೋಲಿಸಿದರೆ ಮಿಸ್ತ್ರಿ ಅಂಥ ಮಾತುಗಾರರೇನೂ ಅಲ್ಲವಾದ್ದರಿಂದ ಮಾತಿನ ಭರಾಟೆಗಳಿಲ್ಲದ ಒನ್‌ಮ್ಯಾನ್ ಶೋ ಇದಾಗಬಹುದು. ಆದರೆ, ತಾರಾ ವರ್ಚಸ್ಸನ್ನು ಪಕ್ಕಕ್ಕಿಟ್ಟು ನೋಡಿದರೆ ಮೌಲ್ಯದ ನೆಲೆಯಲ್ಲಿ ಮಿಸ್ತ್ರಿಯವರು ಮೋದಿಗೆ ತಕ್ಕ ಪ್ರತಿಸ್ಪರ್ಧಿಯೇ ಆಗುತ್ತಾರೆ. ಅದು ಹೇಗೆ ಎಂದಿರಾ? ನರೇಂದ್ರ ಮೋದಿಯವರಿಗೆ ಇರುವ ಸ್ಟಾರ್‌ಗಿರಿಯ ಅರ್ಧದಷ್ಟು ಚಮಕೂ ಇವರಿಗಿಲ್ಲ ಎಂಬುದು ನಿಜವಾದರೂ ಈ ಇಬ್ಬರೂ ಪ್ರತಿಸ್ಪರ್ಧಿಗಳು ಬೆಳೆದು ಬಂದಿರುವ ದಾರಿಯಲ್ಲಿ ಬಹಳ ಸಾಮ್ಯಗಳಿವೆ.
'ಕಾಂಗ್ರೆಸ್‌ನ ಆಂತರಿಕ ಚುನಾವಣೆಯಲ್ಲಿ ನರೇಂದ್ರ ರಾವತ್ ಅವರಿಗೆ ವಡೋದರ ಒಲಿದಿತ್ತು. ಆದರೆ ಅವರ ಬದಲು ಮಿಸ್ತ್ರಿಯವರನ್ನು ಕಣಕ್ಕೆ ನಿಲ್ಲಿಸುವ ಮೂಲಕ ದಲಿತ ರಾವತ್‌ಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ' ಎಂದು ಚಾಣಾಕ್ಷ್ಯ ಮೋದಿ ಏಟೊಂದನ್ನು ನೀಡಿದ್ದಾರೆ. 'ಪ್ರೈಮರಿ ಮೂಲಕ ವಡೋದರ ಕ್ಷೇತ್ರಕ್ಕೆ ರಾವತ್ ಅವರನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ಅಲ್ಲಿ ನರೇಂದ್ರ ಮೋದಿ ನಿಲ್ಲುವ ಘೋಷಣೆ ಆಗಿರಲಿಲ್ಲ. ವಾರಾಣಸಿ ನಂತರ ಅಹಮದಾಬಾದ್‌ನಲ್ಲಿ ಮೋದಿ ನಿಲ್ಲುವ ನಿರೀಕ್ಷೆ ಇತ್ತು. ಅವರು ವಡೋದರದಲ್ಲಿ ನಿಂತಿದ್ದರಿಂದ ನಾವು ಅಭ್ಯರ್ಥಿ ಬದಲಿಸಬೇಕಾಗಿ ಬಂತು' ಎಂಬುದು ಕಾಂಗ್ರೆಸ್‌ನ ಸಮರ್ಥನೆ.
ಮೋದಿಯವರ ಈ 'ದಲಿತ್ ಕಾರ್ಡ್‌' ಪ್ರಯೋಗದ ಸಾಧುತ್ವದ ಪ್ರಶ್ನೆಗಳು ಹಾಗಿರಲಿ. ಆದರೆ ರಾವತ್ ಬದಲು ಯಾರೋ 'ಪ್ರತಿಷ್ಠಿತ' ಅಭ್ಯರ್ಥಿಯನ್ನೇನೂ ಕಾಂಗ್ರೆಸ್ ನಿಲ್ಲಿಸಿಲ್ಲ. ಮಧುಸೂದನ ಮಿಸ್ತ್ರಿ ಉಮೇದುವಾರಿಕೆಯ ಪ್ರಸ್ತುತತೆಯನ್ನು 'ದಲಿತ್ ಕಾರ್ಡ್‌'ನ ಒಂದೇಟಿಗೆ ಪಕ್ಕಕ್ಕೆ ಸರಿಸುವುದಕ್ಕೂ ಮುಂಚೆ ಕೆಲ ಯೋಗ್ಯತೆಗಳನ್ನು ಪರಿಶೀಲಿಸಬೇಕಾಗುತ್ತದೆ. ನರೇಂದ್ರ ಮೋದಿ ಅವರಂತೆಯೇ ಮಧುಸೂದನ ಮಿಸ್ತ್ರಿಯವರೂ 'ಒಬಿಸಿ' ವರ್ಗದಿಂದ ಬಂದವರು. ಅಧಿಕಾರದ ಗಾದಿಗೆ ಏರುವುದಕ್ಕೆ ರಾಜಕಾರಣದ ಕೌಟುಂಬಿಕ ಹಿನ್ನೆಲೆ ಇಲ್ಲವೇ ಹಣಬಲ ಕಡ್ಡಾಯ ಎಂದೇನೂ ಇಲ್ಲ ಎಂಬ ಆಶಾವಾದವನ್ನು ಹೊಂದುವುದಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. 'ಚಹಾ ಮಾರುತ್ತಿದ್ದ ಹುಡುಗ ಪ್ರಧಾನಿಯಾಗಲಿದ್ದಾನೆ ಎಂಬುದನ್ನು ಕಾಂಗ್ರೆಸ್ ಸಹಿಸಿಕೊಳ್ಳುತ್ತಿಲ್ಲ' ಎಂಬ ಮಾತುಗಳ ಮೂಲಕ ತಮ್ಮ 'ವಿನಮ್ರ' ಮೂಲವನ್ನು ಹಾಗೂ ಎದುರಾಳಿ ರಾಹುಲ್‌ರ 'ಪ್ರತಿಷ್ಠಿತ' ಬೇರುಗಳನ್ನೂ ಜನರಿಗೆ ಮನದಟ್ಟು ಮಾಡಿಸುವುದಕ್ಕೆ ಮೋದಿ ಯತ್ನಿಸಿದ್ದಾರೆ. 'ಮೋದಿ ಚಹಾ ಮಾರಿದರೆ, ನಾನು ಗಾರೆ ಕೆಲಸ ಮಾಡಿಕೊಂಡು ಮೇಲೆ ಬಂದವನು' ಅಂತಾರೆ ವಡೋದರದ ಪ್ರತಿಸ್ಪರ್ಧಿ ಮಧುಸೂದನ ಮಿಸ್ತ್ರಿ. ಇದಕ್ಕೆ ಮೋದಿ ಪ್ರತ್ಯಸ್ತ್ರ ಹೂಡುವುದು ಕಷ್ಟ. ಏಕೆಂದರೆ, ಮೋದಿಯ ಅಮ್ಮ ಹೀರಾಬೆನ್ ಇವರನ್ನು ಬೆಳೆಸುವುದಕ್ಕೆ ಎಲ್ಲರ ಮನೆಗಳಲ್ಲಿ ಪಾತ್ರೆ ತೊಳೆದು ಕಷ್ಟಪಟ್ಟಿದ್ದರೆ, ಮಿಸ್ತ್ರಿಯವರನ್ನು ಬೆಳೆಸಿದ ಅವರ ಅಜ್ಜಿ ತರಕಾರಿ ಮಾರಿಕೊಂಡಿದ್ದವರು. ಅಧಿಕಾರದ ಸವಿ ಉಣ್ಣುವುದಕ್ಕೂ ಮುಂಚೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾಕಾರ್ಯಗಳಲ್ಲಿ ಭಾಗಿಯಾಗಿ, ಗುಜರಾತ್ ಸೇರಿದಂತೆ ಹಲವು ಪ್ರದೇಶಗಳಲ್ಲಿ, ಗ್ರಾಮೀಣ ಭಾರತದಲ್ಲಿ ಜನರ ನಡುವೆ ಕೆಲಸ ಮಾಡಿದ್ದ ಶ್ರೇಯಸ್ಸು ಮೋದಿಯವರಿಗಿದೆ. ಇತ್ತ, ಮಿಸ್ತ್ರಿಯವರೂ ಬುಡಕಟ್ಟು ವರ್ಗಗಳ ನಡುವೆ ಸಾಮಾಜಿಕ ಸೇವಾಕಾರ್ಯಗಳನ್ನು ಕೈಗೊಂಡವರು. ಈ ನಿಟ್ಟಿನಲ್ಲಿ ದಿಶಾ (ಡಿವಲಪಿಂಗ್ ಇನಿಶಿಯೇಟಿವ್ಸ್ ಫಾರ್ ಸೋಷಿಯಲ್ ಆ್ಯಂಡ್ ಹ್ಯೂಮನ್ ಆ್ಯಕ್ಷನ್) ಎಂಬ ಸ್ವಯಂಸೇವಾ ಸಂಸ್ಥೆ ಹುಟ್ಟುಹಾಕಿದವರು ಅವರು. ಇವರು ಕ್ರೈಸ್ತ ಸಂಘಟನೆಗಳ ಜತೆ ಸೇರಿಕೊಂಡು ಅವರ ಹಿತಾಸಕ್ತಿಗೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಆಗಾಗ ಕೇಳಿಬರುತ್ತದೆ. ಮಧುಸೂದನ ಮಿಸ್ತ್ರಿ ಅವರು ಬುಡಕಟ್ಟು ವರ್ಗಗಳ ಮಧ್ಯೆ ಕೆಲಸ ಮಾಡಿದ್ದು ಆರೆಸ್ಸೆಸ್ ಸದಸ್ಯರಾಗಿ ಎಂದು ಪ್ರತಿಪಾದಿಸುವವರಿದ್ದಾರೆ. ಆದರೆ ಮಿಸ್ತ್ರಿ ಇದನ್ನು ಅಲ್ಲಗೆಳೆಯುತ್ತಾರೆ. ವಿಕಿಪೀಡಿಯಾ ನೀಡುವ ಮಾಹಿತಿಯಲ್ಲೂ ಅವರು ಆರೆಸ್ಸೆಸ್ ಸದಸ್ಯರಾಗಿದ್ದರು ಎಂದಿದೆ. ಯಾಕೀ ಗೊಂದಲ ಎಂದು ತಡಕಿದರೆ, ರೀಢಿಪ್ ಡಾಟ್‌ಕಾಮ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಆ ಕತೆಯನ್ನು ಮಿಸ್ತ್ರಿಯವರು ಹೀಗೆ ಬಿಚ್ಚಿಟ್ಟಿದ್ದಾರೆ- ಅದು 1987ರ ಅವಧಿ. ಬಿಜೆಪಿಯ ನೇತಾರ ಶಂಕರಸಿನ್ಹ ವಘೇಲ ಅವರು ಗೋಧ್ರಾವನ್ನು ಹಾದು ಹೋಗುತ್ತಿದ್ದರು. ಮಾರ್ಗಮಧ್ಯೆ ಬುಡಕಟ್ಟು ಮಂದಿಯ ಸಮಾವೇಶ ನಡೆಯುತ್ತಿತ್ತಾದ್ದರಿಂದ ಅವರ ಕಾರು ಬಹಳ ಹೊತ್ತು ನಿಲ್ಲಬೇಕಾಯಿತು. ಆ ಸಮಾವೇಶವನ್ನು ಸಂಘಟಿಸಿದ್ದವರು ಮಿಸ್ತ್ರಿಯವರೇ. ಈ ಬಗ್ಗೆ ಚಕಿತಗೊಂಡ ವಘೇಲ ಅವರು ಈ ಬುಡಕಟ್ಟು ಜನರ ಹಕ್ಕೊತ್ತಾಯಗಳನ್ನು ತಿಳಿದುಕೊಳ್ಳುವುದಕ್ಕೆ ಇನ್ನೊಬ್ಬ ನೇತಾರ ಸೂರ್ಯಕಾಂತ ಆಚಾರ್ಯರನ್ನು ಮಿಸ್ತ್ರಿಯವರ ಬಳಿ ಕಳುಹಿಸಿಕೊಟ್ಟರು. ಆ ಅರಿವಿನ ತಳಹದಿಯಲ್ಲಿ ಬಿಜೆಪಿ-ಆರೆಸ್ಸೆಸ್ ಜೋಡಿಯು ಆ ವರ್ಗದ ಜನರ ಪರ ಕೆಲಸ ಮಾಡುವುದಕ್ಕೆ ಸಹಾಯಕವಾಗುತ್ತದೆ ಎಂಬ ಯೋಚನೆ ಅಲ್ಲಿತ್ತು. ಮಿಸ್ತ್ರಿ- ಆಚಾರ್ಯರ ನಡುವೆ ಮೂರು ತಾಸುಗಳ ವಿಚಾರ ವಿನಿಮಯ ನಡೆಯಿತು. 1994ರ ಚುನಾವಣೆಯಲ್ಲಿ ಮಿಸ್ತ್ರಿ ಪ್ರತಿಪಾದಿಸಿದ ಬುಡಕಟ್ಟು ಕಲ್ಯಾಣದ ಅಂಶಗಳನ್ನೆಲ್ಲ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿತಲ್ಲದೇ, ಅವರನ್ನು ಪಕ್ಷಕ್ಕೆ ಸೇರಿಕೊಳ್ಳುವಂತೆಯೂ ಆಹ್ವಾನಿಸಿತ್ತಂತೆ. ಮಿಸ್ತ್ರಿ ಅದನ್ನು ನಿರಾಕರಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಬಿಜೆಪಿಯನ್ನು ತೊರೆದ ವಘೇಲ, ರಾಷ್ಟ್ರೀಯ ಜನತಾ ಪಾರ್ಟಿ ಸ್ಥಾಪಿಸಿದಾಗ ಮಿಸ್ತ್ರಿ ಅದರ ಅಧ್ಯಕ್ಷರಾದರು. ನಂತರ ಆ ಪಕ್ಷವು ಕಾಂಗ್ರೆಸ್‌ನಲ್ಲಿ ವಿಲೀನವಾಯಿತು. ಆಗ ಮೊದಲ ಬಾರಿಗೆ 2002ರಲ್ಲಿ ಸಬರಕಾಂತ ಲೋಕಸಭೆ ಕ್ಷೇತ್ರಕ್ಕೆ ನಡೆದ ಮರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮಿಸ್ತ್ರಿ, 2004ರ ಸಾರ್ವತ್ರಿಕ ಚುನಾವಣೆಯಲ್ಲೂ ಗೆದ್ದರು. 2009ರ ಚುನಾವಣೆಯಲ್ಲಿ ಸೋಲು ಕಂಡರಾದರೂ, ಕಾಂಗ್ರೆಸ್‌ನಲ್ಲಿ ಪ್ರಭಾವಿ ಸ್ಥಾನವೇ. ರಾಹುಲ್‌ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಅವರು, ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲೂ ವಿಶೇಷ ಪಾತ್ರ ವಹಿಸಿದ್ದಾರೆ.
---------
ಬಡ ಕುಟುಂಬದಲ್ಲಿ ಜನಿಸಿದ ಮಿಸ್ತ್ರಿಯವರ ಬಾಲ್ಯ ಕಳೆದಿದ್ದು ಅಹಮದಾಬಾದ್‌ನಲ್ಲಿ. ಇವರ ತಂದೆ ಒಂದು ದಿನ ಮನೆಬಿಟ್ಟು ಹೋದವರು ವಾಪಸು ಬರಲಿಲ್ಲವಂತೆ. ಅಮ್ಮ ಇನ್ನೊಂದು ಮದುವೆಯಾದರು. ಇವರ ದೇಖರೇಖೆ ನೋಡಿಕೊಂಡಿದ್ದು ಸಂಬಂಧಿಕರು. ಅವರ ಅಜ್ಜ ಗಾರೆ ಕೆಲಸದವರು. ಬಾಲ್ಯದಲ್ಲೇ ತಾವು ಹಣಗಳಿಕೆಗಾಗಿ ಕಟ್ಟಡ ಕಾಮಗಾರಿಗಳಲ್ಲಿ ದುಡಿದಿದ್ದಾಗಿ ಸಂದರ್ಶನವೊಂದರಲ್ಲಿ ಅವರು ನೆನಪಿಸಿಕೊಂಡಿದ್ದಾರೆ. ಮನೆಯಿಂದ ಶಾಲೆಗೆ ಹೋಗಿಬರುವುದೆಂದರೆ ಒಟ್ಟೂ ಹದಿನೈದು ಕಿಲೋಮೀಟರ್‌ಗಳೇ ಆಗುತ್ತಿದ್ದವು. ಹಲವು ಸ್ನೇಹಿತರು ಪುಸ್ತಕ ತೆಗೆಸಿಕೊಟ್ಟು, ಶುಲ್ಕ ತುಂಬಿ ಅವರ ಓದಿಗೆ ನೆರವಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಮೇಸ್ತ್ರಿ, ಲೆಕ್ಕಿಗ, ಗುಮಾಸ್ತ ಹೀಗೆ ಹಲವು ಕಸುಬುಗಳನ್ನು ಮಾಡುತ್ತ ಅಹಮದಾಬಾದ್‌ನಲ್ಲಿ ಬಿಎ ಮುಗಿಸಿದ ಅವರು, ವಡೋದರದಲ್ಲಿ ಭೂಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಸ್ನೇಹಿತರ ಮನೆಯಲ್ಲಿ ಅಡುಗೆ ಮಾಡಿಕೊಟ್ಟು ವಸತಿ ಸಮಸ್ಯೆ ನಿವಾರಿಸಿಕೊಂಡರಂತೆ. 1970ರಲ್ಲಿ ಅಹಮದಾಬಾದ್‌ನಲ್ಲಿ ಉಪನ್ಯಾಸಕರ ಕೆಲಸ ಸಿಕ್ಕಿತು. 'ಅಭಿವೃದ್ಧಿ ಅಧ್ಯಯನ'ಕ್ಕಾಗಿ ಆಕ್ಸ್‌ಫರ್ಡ್‌ನಿಂದ ವಿದ್ಯಾರ್ಥಿವೇತನ ದೊರೆತು ವರ್ಷದ ಮಟ್ಟಿಗೆ ಇಂಗ್ಲೆಂಡ್‌ನ ರಸ್ಕಿನ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವಂತಾಗಿದ್ದು ಇವರ ಸಾಮಾಜಿಕ ವ್ಯಾಪ್ತಿಯನ್ನು ಹೆಚ್ಚಿಸಿತು.
---------
'ಮೋದಿ ವಿರುದ್ಧ ಸ್ಪರ್ಧಿಸಬೇಕೆಂಬ ಆಕ್ರೋಶವೊಂದು ಲಾಗಾಯ್ತಿನಿಂದ ನನ್ನ ಎದೆಯಲ್ಲಿತ್ತು. ಈಗ ಅವಕಾಶ ಸಿಕ್ಕಿದೆ. ಮೋದಿ ಅಲೆ ಇದೆ ಎಂದಾದರೆ ಕರ್ನಾಟಕ ವಿದಾನಸಭೆ ಚುನಾವಣೆ ಗೆಲ್ಲುವುದು ಬಿಜೆಪಿಗೇಕೆ ಸಾಧ್ಯವಾಗಿಲ್ಲ? ಹಣದ ಸಹಾಯದಿಂದ ಮೋದಿ ಇಮೇಜ್ ಕಟ್ಟಿಕೊಂಡಿದ್ದಾರೆ ಅಷ್ಟೆ. ಅವರನ್ನು ಸೋಲಿಸುವುದಕ್ಕೆ ಕಾಂಗ್ರೆಸ್ ಮಾತ್ರವಲ್ಲದೇ ರಾಜಕೀಯವಾಗಿ ತಟಸ್ಥರಾಗಿರುವ ಹಲವರು ನನಗೆ ಸಹಕರಿಸಲಿದ್ದಾರೆ' ಎಂದೆಲ್ಲ ಹೇಳುತ್ತ ಮಿಸ್ತ್ರಿ, ಮೋದಿ ವಿರುದ್ಧ ತೊಡೆ ತಟ್ಟಿದ್ದಾರೆ.
------
ಮೋದಿಯೇ ಇರಲಿ, ಮಿಸ್ತ್ರಿಯೇ ಆಗಿರಲಿ. ಏನೂ ಇಲ್ಲವಾಗಿದ್ದ ವಿನಮ್ರ ಬೇರುಗಳಿಂದ ಬಂದವರು ಭಾರತದ ರಾಜಕೀಯ ಅಖಾಡವನ್ನು ರೂಪಿಸುತ್ತಾರೆ ಎಂದಾದರೆ ಅದು ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ ಅಲ್ಲದೇ ಇನ್ನೇನು? ಹಾಗೆಂದೇ ಇವರಿಬ್ಬರ ಕುಸ್ತಿಯನ್ನು ಸಂಭ್ರಮಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement