ಬಿಜೆಪಿಗೆ ಮರಳಲ್ಲ್ಲ: ಜಸ್ವಂತ್
ನವದೆಹಲಿ: ಬಿಜೆಪಿಯ ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್ ಅವರು ಮತ್ತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಈಗ 'ಏಕವ್ಯಕ್ತಿ ನಾಯಕತ್ವ'ದ ಪಕ್ಷವಾಗಿದೆ. ವಾಜಪೇಯಿಯವರ ಕಾಲದಲ್ಲೂ ಇಂತಹ ನಾಯಕತ್ವವನ್ನು ಪಕ್ಷ ಹೊಂದಿರಲಿಲ್ಲ ಎಂದಿದ್ದಾರೆ ಸಿಂಗ್. ಇದೇ ವೇಳೆ, ಯಾವುದೇ ಕಾರಣಕ್ಕೂ ಮತ್ತೆ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ, ಜತೆಗೆ ಹೊಸ ಪಕ್ಷವನ್ನೂ ಸ್ಥಾಪಿಸಲ್ಲ ಎಂದು ಜಸ್ವಂತ್ ಹೇಳಿದ್ದಾರೆ. ಆದರೆ, ರಾಷ್ಟ್ರೀಯ ಹಿತಾಸಕ್ತಿಯ ವಿಚಾರ ಬಂದಾಗ ಎನ್ಡಿಎ, ಕಾಂಗ್ರೆಸ್, ತೃತೀಯ ರಂಗಕ್ಕೂ ಬೆಂಬಲ ನೀಡಲು ಸಿದ್ಧ ಎಂದಿದ್ದಾರೆ. ಇದೇ ವೇಳೆ, ಬೇಹುಗಾರಿಕೆ ಹಗರಣಕ್ಕೆ ಸಂಬಂಧಿಸಿ ಯುಪಿಎ ಸರ್ಕಾರ ತನಿಖೆಗೆ ಆದೇಶಿಸಿರುವುದಕ್ಕೆ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯ ಕ್ರಮವಲ್ಲ ಎಂದು ಅವರು ತಿಳಿಸಿದ್ದಾರೆ.
ಅಬು ಅಜ್ಮಿ ಮತ್ತೆ ತಲೆಹರಟೆ
ಮುಂಬೈ: ಸಮಾಜವಾದಿ ಪಕ್ಷಕ್ಕೆ ಮತ ಹಾಕದವರು ಮುಸ್ಲಿಮರೇ ಅಲ್ಲ ಎಂದು ಹೇಳಿ ಗುರುವಾರವಷ್ಟೇ ವಿವಾದ ಸೃಷ್ಟಿಸಿದ್ದ ಎಸ್ಪಿ ನಾಯಕ ಅಬು ಅಜ್ಮಿ, ಶುಕ್ರವಾರ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. 'ನೈಜ ಮುಸ್ಲಿಮರು' ಎಂದಿಗೂ ಬಿಜೆಪಿಗೆ ಮತ ಹಾಕಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಶಹನವಾಜ್ ಹುಸೇನ್, 'ಅಜ್ಮಿಯವರು ಏಕೆ ಮುಸ್ಲಿಮರ ಪೋಪ್ನಂತೆ ವರ್ತಿಸುತ್ತಿದ್ದಾರೆ' ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ಅಜ್ಮಿ ಅವರ 'ಮುಸ್ಲಿಮರೇ ಅಲ್ಲ' ಹೇಳಿಕೆಯನ್ನು ವಿರೋಧಿಸಿರುವ ಕಾಂಗ್ರೆಸ್, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.
ಮೋದಿಗೆ '56 ಇಂಚಿನ ಹೊಟ್ಟೆ'
ಬಹ್ರೈಚ್: ಭಯರಹಿತ ಹಾಗೂ ಬಲಿಷ್ಠ ನಾಯಕತ್ವಕ್ಕೆ ನನ್ನಂತೆ '56 ಇಂಚಿನ ಎದೆ' ಇರಬೇಕು ಎಂಬ ನರೇಂದ್ರ ಮೋದಿ ಅವರ ಹೇಳಿಕೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ. ಮೋದಿ ಅವರು ತಪ್ಪು ತಿಳಿದುಕೊಂಡಿದ್ದಾರೆ. ಅವರಿಗಿರುವುದು '56 ಇಂಚಿನ ಎದೆ'ಯಲ್ಲ, ಬದಲಾಗಿ '56 ಇಂಚಿನ ಹೊಟ್ಟೆ' ಎಂದಿದ್ದಾರೆ. ಜತೆಗೆ ನಾಯಕನಾದವರಿಗೆ ವಿಶಾಲ ಹೃದಯ ಇರಬೇಕೇ ಹೊರತು ಎದೆಯಿದ್ದರೆ ಸಾಲದು ಎಂದಿದ್ದಾರೆ ಅಖಿಲೇಶ್. ಅಲ್ಲದೇ ಮೋದಿ ಅವರು ಬಹುದೊಡ್ಡ ಸುಳ್ಳ ಎಂದೂ ಅಖಿಲೇಶ್ ಹೇಳಿದ್ದಾರೆ.
ಸೋನಿಯಾ ರ್ಯಾಲಿಗೆ ಜನವೇ ಇಲ್ಲ
ಗುಂಟೂರು: ಆಂಧ್ರ ವಿಭಜನೆ ನಿರ್ಧಾರದಿಂದ ಸೀಮಾಂಧ್ರದ ಜನರಲ್ಲಿ ಎದ್ದಿರುವ ಆಕ್ರೋಶವು ಶುಕ್ರವಾರ ನಡೆದ ಸೋನಿಯಾ ರ್ಯಾಲಿಯಲ್ಲಿ ಪ್ರತಿಬಿಂಬಿಸಿತು. ಆಂಧ್ರದ ಗುಂಟೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರ್ಯಾಲಿನಡೆದರೂ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲೇ ಇಲ್ಲ. ಕೇವಲ 7 ಸಾವಿರದಷ್ಟು ಮಂದಿ ಮಾತ್ರವೇ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ, ಸೋನಿಯಾರ ಭಾಷಣದ ವೇಳೆ ಎಂದಿನ ಚಪ್ಪಾಳೆ, ಘೋಷಣೆಗಳು ಕೇಳಿಬರಲೇ ಇಲ್ಲ. ತಮ್ಮ ಭಾಷಣದಲ್ಲಿ ಅವರು ಸೀಮಾಂಧ್ರ ಜನರ ಕೋಪವನ್ನು ತಣಿಸಲು ಭಾರಿ ಪ್ರಯತ್ನ ನಡೆಸಿದರು. ಜತೆಗೆ ಬಿಜೆಪಿ-ಟಿಡಿಪಿ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಮೆರಿಕ ಮಾದರಿ ಚರ್ಚೆಗೆ ಒಲವು
ಪಿಥೋರಾಗಡ: ಪ್ರಧಾನಿ ಅಭ್ಯರ್ಥಿಗಳ ನಡುವೆ ಅಮೆರಿಕ ಮಾದರಿ ಸಾರ್ವಜನಿಕ ಚರ್ಚೆ ನಡೆಯುವುದಕ್ಕೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಒಲವು ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದ ಪಿಥೋರಾಗಡದಲ್ಲಿ ಶುಕ್ರವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ವಿವಿಧ ರಾಜಕೀಯ ಪಕ್ಷಗಳು ರ್ಯಾಲಿ ನಡೆಸುವ ಬದಲಾಗಿ, ಪ್ರಧಾನಿ ಅಭ್ಯರ್ಥಿಗಳ ನಡುವೆ ಚರ್ಚೆಗೂ ಚುನಾವಣಾ ಆಯೋಗ ಅವಕಾಶ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಲೋಕಸಭಾ ಚುನಾವಣೆಯಿಂದಲೇ ಈ ವ್ಯವಸ್ಥೆ ಜಾರಿಯಾಗಿದ್ದರೆ ಭಾರತೀಯ ಪ್ರಜಾಸತ್ತೆಯು ಬಲಿಷ್ಠಗೊಳ್ಳುತ್ತಿತ್ತು ಎಂದೂ ಅವರು ಹೇಳಿದ್ದಾರೆ.
ಸರ್ಕಾರ ರಚಿಸಲು ಕೈ ಕಸರತ್ತು
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ದೊರೆಯದಿದ್ದರೆ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಹಾಗೂ ಸಿಪಿಐ ಜತೆಗೂಡಿ ಸರ್ಕಾರ ರಚಿಸುವುದಾಗಿ ಕಾಂಗ್ರೆಸ್ ಹೇಳಿದೆ. ಒಟ್ಟಾರೆ ತೆಲಂಗಾಣದಲ್ಲಿ ಮೊದಲ ಸರ್ಕಾರವನ್ನು ರಚಿಸಿಯೇ ಸಿದ್ಧ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಪೊನ್ನಾಲ ಲಕ್ಷ್ಮಯ್ಯ ತಿಳಿಸಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ನಮಗೇ ಬಹುಮತ ಸಿಗುವುದು ಖಚಿತ ಎಂದು ಟಿಆರ್ಎಸ್ ಹೇಳಿಕೊಂಡಿದೆ. ಈ ನಡುವೆ, ಕೇಂದ್ರದಲ್ಲಿ ನಮಗೆ ಎನ್ಡಿಎ, ಯುಪಿಎ ಮಾತ್ರವೇ ಆಯ್ಕೆಯಲ್ಲ, ಅವಕಾಶ ಸಿಕ್ಕಿದರೆ ತೃತೀಯ ರಂಗಕ್ಕೂ ಬೆಂಬಲ ನೀಡುವೆವು ಎಂದೂ ಟಿಆರ್ಎಸ್ ತಿಳಿಸಿದೆ.