ಕತ್ತರಿ ಪ್ರಯೋಗಿಸಿಲ್ಲ ಎಂದ ಸರ್ಕಾರ ತುರ್ತು ಪರಿಸ್ಥಿತಿಯ ನೆನಪು: ಮೋದಿ
ಕೇಂದ್ರ ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೀಡಿದ...
ನವದೆಹಲಿ/ಅಹಮದಾಬಾದ್: ಕೇಂದ್ರ ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೀಡಿದ ಸಂದರ್ಶನಕ್ಕೆ ಕತ್ತರಿ ಪ್ರಯೋಗ ಮಾಡಿದ ವಿವಾದ ಇನ್ನೂ ನಿಂತಿಲ್ಲ. ಸರ್ಕಾರಿ ಚಾನೆಲ್ ವೃತ್ತಿಪರತೆ ಕಾಪಾಡಲು ಒದ್ದಾಡುತ್ತಿದೆ ಎಂದು ನರೇಂದ್ರ ಮೋದಿ ಶನಿವಾರ ಟ್ವೀಟ್ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಪ್ರಸಾರ ಭಾರತಿ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಸ್ಯಾಮ್ ಪಿತ್ರೋಡಾ ನೇತೃತ್ವದ ಸಮಿತಿ ಸ್ವಾಯತ್ತೆ ನೀಡುವ ಬಗ್ಗೆ ಶಿಫಾರಸು ಮಾಡಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಎಂದು ಸ್ಪಷ್ಟನೆ ನೀಡಿದೆ.
ತುರ್ತು ಪರಿಸ್ಥಿತಿ ನೆನಪು
ತಮ್ಮ ಸಂದರ್ಶನಕ್ಕೆ ಕತ್ತರಿ ಪ್ರಯೋಗ ಮಾಡಿರುವುದಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪತ್ರಕರ್ತರಿಗೆ ಶುಭ ಹಾರೈಸಿರುವ ಮೋದಿ 'ಸರ್ಕಾರಿ ಸ್ವಾಮ್ಯದ ದೂರದರ್ಶನ ವೃತ್ತಿಪರತೆ ಕಾಯ್ದುಕೊಳ್ಳಲು ಹೋರಾಟ ನಡೆಸುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ. ಇದಲ್ಲದೆ ಮತ್ತೊಂದು ಟ್ವೀಟ್ ಮಾಡಿರುವ ಮೋದಿ 'ತುರ್ತು ಪರಿಸ್ಥಿತಿ ಜಾರಿಯಾಗಿದ್ದ ಸಂದರ್ಭದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಕೂಡ ಧಕ್ಕೆ ಉಂಟಾಗಿತ್ತು. ಇದು ನಮ್ಮ ದೇಶದ ಸ್ವಾತಂತ್ರ್ಯದ ಮೇಲೆ ಕಪ್ಪುಚುಕ್ಕೆ. ಪತ್ರಕರ್ತ ಮಿತ್ರರಿಗೆಲ್ಲ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶ ಯುಗಳು. ಅದನ್ನು ನಾವು ಕಾಪಾಡಿಕೊಂಡು ಬರಬೇಕಿದೆ' ಎಂದಿದ್ದಾರೆ.
ಹಸ್ತಕ್ಷೇಪ ಮಾಡಿಲ್ಲ
ಸಂದರ್ಶನ ವಿವಾದಕ್ಕೆ ಮೌನ ಮುರಿದಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಮನೀಷ್ ತಿವಾರಿ ಪ್ರಸಾರ ಭಾರತಿಯ ಕರ್ತವ್ಯದಲ್ಲಿ ಹಸ್ತಕ್ಷೇಪ ನಡೆಸಿಲ್ಲ ಎಂದು ಹೇಳಿದ್ದಾರೆ. ಪ್ರಸಾರ ಭಾರತಿಗೆ ಸಂಸತ್ತೇ ಸ್ವಾಯತ್ತೆ ನೀಡಿದೆ ಎಂದಿದ್ದಾರೆ. ತಾವು ಅಧಿಕಾರ ವಹಿಸಿಕೊಂಡ ದಿನದಿಂದಲೂ ಇನ್ನೂ ಹೆಚ್ಚಿನ ಸ್ವಾಯತ್ತೆ ನೀಡಲು ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ತಮ್ಮ ಪ್ರಯತ್ನದಿಂದಲೇ ಸ್ಯಾಮ್ ಪಿತ್ರೋಡಾ ನೇತೃತ್ವದ ಸಮಿತಿ ರಚನೆಯಾಯಿತು. ಫೆಬ್ರವರಿಯಲ್ಲಿ ಅದು ವರದಿ ಸಲ್ಲಿಸಿದೆ. ಸರ್ಕಾರ ಅದನ್ನು ಪರಿಶೀಲಿಸುತ್ತಿದೆ ಎಂದಿದ್ದಾರೆ ಮನೀಶ್ ತಿವಾರಿ. ಇನ್ನೂ ಹೆಚ್ಚಿನ ಸ್ವಾಯತ್ತೆ ನೀಡುವ ವಿಚಾರದ ಬಗ್ಗೆ ಚಿಂತನೆ ನಡೆದಿದೆ ಎಂದಿದ್ದಾರೆ.
ತನಿಖೆಯ ನಿರ್ಧಾರ
ಮೋದಿ ಅವರ ಸಂದರ್ಶನಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ ಎಂಬ ಆರೋಪಗಳಿಂದ ಕಂಗೆಟ್ಟು ಹೋಗಿರುವ ದೂರದರ್ಶನದ ಆಡಳಿತ ಮಂಡಳಿ ತನಿಖೆಗೆ ಮುಂದಾಗಿದೆ. ಈ ಬಗ್ಗೆ ಸೋಮವಾರ ಪ್ರಸಾರ ಭಾರತಿ ಮಂಡಳಿ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ತನಿಖೆ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜವಾಹರ್ ಸರ್ಕಾರ್ ಶನಿವಾರ ತಿಳಿಸಿದ್ದಾರೆ.
ಪ್ರಸಾರ ಭಾರತಿ ಎನ್ನುವುದು ಕಳೆದ ಎಂಟು ವರ್ಷಗಳಲ್ಲಿ ಕಾಂಗ್ರೆಸ್ ಪ್ರಚಾರ ಭಾರತಿಯಾಗಿ ಪರಿವರ್ತನೆಯಾಗಿದೆ. ದೂರದರ್ಶನ ಗುಜರಾತ್ ಮುಖ್ಯಮಂತ್ರಿಗೆ ಬಹಿಷ್ಕಾರ ಹಾಕಿತ್ತು. ಚುನಾವಣೆ ಘೋಷಣೆಯಾಗುವುದಕ್ಕೆ ಮೊದಲ 100 ದಿನ ದೂರದರ್ಶನ ಕಾಂಗ್ರೆಸ್ ನಾಯಕರಿಗೆ ಮತ್ತು ಮೋದಿಗೆ ಎಷ್ಟು ಪ್ರಚಾರ ನೀಡಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.
- ಎಂ.ವೆಂಕಯ್ಯ ನಾಯ್ಡು,
ಬಿಜೆಪಿ ನಾಯಕ
ಬಿಜೆಪಿ ಆರೋಪಿಸುವಂತೆ
ಸಂದರ್ಶನ ವಿವಾದ ದೊಡ್ಡ ವಿಚಾರವೇನಲ್ಲ. ನೀವು (ಮೋದಿ) ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯುತ್ತೀರಿ. ಆ ಬಗ್ಗೆ ಯಾಕೆ ನೀವು ಮೌನವಾಗಿದ್ದೀರಿ. ಸಂದರ್ಶನ ನಡೆಸುವುದು, ಪ್ರಸಾರ ಮಾಡುವುದು ಮಾಧ್ಯಮ ಸಂಸ್ಥೆಯ ಹಕ್ಕು.
- ರಶೀದ್ ಅಳ್ವಿ,
ಕಾಂಗ್ರೆಸ್ ನಾಯಕ