ತಾಯಿ-ಮಗನಿಂದ ದೇಶ ಹಾಳು: ಮೋದಿ
ಉತ್ತರಾಖಂಡದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಅಮೇಠಿಯಲ್ಲಿ...
ನವದೆಹಲಿ: ಉತ್ತರಾಖಂಡದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಅಮೇಠಿಯಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈ ವೇಳೆ ಇಬ್ಬರು ನಾಯಕರೂ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.
ನರೇಂದ್ರ ಮೋದಿ ಹೇಳಿದ್ದೇನು?
- ವಿದೇಶಗಳಲ್ಲಿ ಇಟ್ಟಿರುವ ಕಪ್ಪು ಹಣ ವಾಪಸ್ ತರಬೇಕಾದರೆ ದೆಹಲಿಯಲ್ಲಿ ಕೂತಿರುವ ಲೂಟಿಕೋರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು.
- ತಾಯಿ ಮತ್ತು ಮಗ(ಸೋನಿಯಾ- ರಾಹುಲ್) ದೇಶವನ್ನೇ ನಾಶ ಮಾಡಿದ್ದಾರೆ. ಇಷ್ಟಾದರೂ ಅವರಿಗೆ ಈ ಕುರಿತು ಚಿಂತೆ ಇಲ್ಲ. ಜನ ಎಲ್ಲವನ್ನೂ ಮರೆತುಬಿಡುತ್ತಾರೆ ಎನ್ನುವ ಕಲ್ಪನೆಯಲ್ಲಿ ಅವರಿದ್ದಾರೆ.
- ತಾಯಿ- ಮಗ ಜನರನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ. ಮೊದಲು ಕೈಮುಗಿಯುತ್ತಾ ನಿಮ್ಮ ಮುಂದೆ ಬರುತ್ತಾರೆ. ನಂತರ ಅವರ ನೈಜ ಆಟ ತೋರಿಸುತ್ತಾರೆ.
- ಯುಪಿಎ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶ ರಿವರ್ಸ್‌ಗೇರ್‌ನಲ್ಲಿ ಓಡುತ್ತಿದೆ. ದೇಶವನ್ನು ಸರಿದಾರಿಗೆ ತರಬೇಕಾದರೆ ಪ್ರವಾಸೋದ್ಯಮ, ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.
- ಈ ಚುನಾವಣೆ ತಾಯಿ ಮತ್ತು ಮಗ ಹಾಗೂ ಚಾಯ್‌ವಾಲಾನ ನಡುವಿನ ಸ್ಪರ್ಧೆ. ಒಂದು ಕಡೆ ನಾಮ್‌ದಾರ್(ಗಾಂಧಿ ಕುಟುಂಬದವರು) ಇದ್ದರೆ ಇನ್ನೊಂದು ಕಡೆ ನನ್ನಂಥ ಕಾಮ್‌ದಾರ್ ಇದ್ದಾನೆ.
ಅವರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದವರಾದರೆ, ನಾನು ಟೀ ಮಾರಿ ಈ ಮಟ್ಟಕ್ಕೆ ಬೆಳೆದವನು.
ರಾಹುಲ್ ಗಾಂಧಿ ಹೇಳಿದ್ದೇನು?
- ಅಷ್ಟೊಂದು ದೊಡ್ಡ ಕಟೌಟ್‌ಗಳು, ಪೋಸ್ಟರ್‌ಗಳಿಗೆ ಬಿಜೆಪಿಗೆ ಹಣ ಎಲ್ಲಿಂದ ಬರುತ್ತಿದೆ? ಅದು ಮೋದಿಯ ಹಣವೇ?
- ಬಿಜೆಪಿ ಸರ್ಕಾರ ಎರಡು- ಮೂರು ಕಾರ್ಪೊರೇಟ್ ಕಂಪನಿಗಳಿಗಾಗಿ ಕೆಲಸ ಮಾಡುತ್ತಿದೆ. ಆ ಕಂಪನಿಗಳು ಪಕ್ಷಕ್ಕೆ ದೊಡ್ಡಮಟ್ಟದ ದೇಣಿಗೆ ನೀಡುತ್ತಿವೆ.
- ಉದ್ಯೋಗ ಖಾತ್ರಿ, ಆಹಾರದ ಹಕ್ಕಿನ ಮೂಲಕ ಬಡವರಿಗೆ ಯಾಕೆ
- ಉಚಿತ ಹಣ ನೀಡುತ್ತೀರಿ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ಬಡವರಿಗೆ ಸುಖಾಸುಮ್ಮನೆ ಹಣ ನೀಡಲಾಗುತ್ತಿಲ್ಲ. ಕೆಲಸ ಮಾಡುತ್ತಾರೆ ದುಡ್ಡು ಪಡೆಯುತ್ತಾರೆ. ಸರ್ಕಾರದಿಂದ ಉಚಿತವಾಗಿ ಹಣ ನೀಡುತ್ತಿರುವುದು ಅದಾನಿಗೆ ಮಾತ್ರ.
- ಮೋದಿ ಅವರು 26 ಸಾವಿರ ಕೋಟಿ ಮೌಲ್ಯದ ವಿದ್ಯುತ್ ಹಾಗೂ 15 ಸಾವಿರ ಕೋಟಿ ಮೌಲ್ಯದ ಭೂಮಿಯನ್ನು ಉದ್ಯಮಿಯೊಬ್ಬರಿಗೆ ನೀಡಿದ್ದಾರೆ. ಉದ್ಯೋಗಖಾತ್ರಿ ಯೋಜನೆಯಡಿ ಪ್ರತಿವರ್ಷ ದೇಶದ ಬಡವರಿಗೆ ಕಾಂಗ್ರೆಸ್
- ನೀಡುತ್ತಿರುವ ಹಣಕ್ಕಿಂತಲೂ ಈ ಮೊತ್ತ ದೊಡ್ಡದು.
- ನಾನು ಕಾರ್ಪೊರೇಟರ್‌ಗಳ ವಿರೋಧಿಯಲ್ಲ. ಆದರೆ, ಅವರಿಗೆ ನೀತಿ, ನಿಯಮಾವಳಿಯಂತೆ ಸೌಲಭ್ಯಗಳನ್ನು ಕಲ್ಪಿಸಬೇಕು. ಗುಜರಾತ್‌ನಲ್ಲಿ ಸೌಲಭ್ಯಗಳನ್ನು ಪಡೆಯುತ್ತಿರುವುದು ಬಡವರಲ್ಲ, ಬದಲಾಗಿ ಅದಾನಿ.
- ನಾವು ಎಟಿಎಂ ಅನ್ನು ಬಡವರಿಗೆ ಹಂಚಬೇಕೆಂದು ಬಯಸಿದರೆ ಅವರು ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಉದ್ದೇಶ ಹೊಂದಿದ್ದಾರೆ.