ಮೋದಿ ಜತೆಗೆ ಕೆಲಸ ಮಾಡಲು ಸಿದ್ಧ: ಪಾಕ್
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸೇರಿದಂತೆ ಯಾವುದೇ ಸರ್ಕಾರವನ್ನು...
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸೇರಿದಂತೆ ಯಾವುದೇ ಸರ್ಕಾರವನ್ನು ಭಾರತದ ಮತದಾರರು ಅಧಿಕಾರಕ್ಕೆ ತಂದರೂ ಅದರ ಜತೆಗೆ ಕೆಲಸ ಮಾಡಲು ಸಿದ್ಧ ಎಂದು ಪಾಕ್ ಹೇಳಿದೆ.
ಕಾಶ್ಮೀರವು ಪಾಕಿಸ್ತಾನದ ಕಂಠದ ನರ ಎಂದು ಪಾಕ್ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಹೇಳಿದ ಬೆನ್ನಲ್ಲೇ ಈ ಹೇಳಿಕೆ ಬಿಡುಗಡೆಯಾಗಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ವಿವಾದವನ್ನು ಎರಡೂ ದೇಶಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವುದು ನಮ್ಮ ನಿಲುವು. ಆದರೆ, ಚುನಾವಣೆ ವೇಳೆಗೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವ ಹೇಳಿಕೆ ಗಡಿಯಾಚೆಯಿಂದ ಬಂದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ಪಾಕ್‌ನಿಂದ ಬಂದೇ ಬರುತ್ತದೆ ಎಂದು ಪ್ರಧಾನಿ ನವಾಜ್ ಷರೀಫ್ ಅವರ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ. ಈ ಮೂಲಕ ಅವರು ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಾಜಪೇಯಿ ಅವಧಿಯಲ್ಲಿ...: ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಭಾರತ ಮತ್ತು ಪಾಕ್ ನಡುವಿನ ಸಂಬಂಧ ಸುಧಾರಿಸಿತ್ತು. ಲಾಹೋರ್ ಮತ್ತು ದೆಹಲಿ ನಡುವೆ ನೇರ ಬಸ್ ಸಂಚಾರವನ್ನು ಅವರು ಆರಂಭಿಸಿದ್ದರು ಎಂಬುದನ್ನು ಅಜೀಜ್ ನೆನಪಿಸಿಕೊಂಡಿದ್ದಾರೆ. ಭಾರತದ ಜತೆಗೆ ಶಾಂತಿ ಕಾಯ್ದುಕೊಳ್ಳುವುದು ನವಾಜ್ ಷರೀಫ್ ಅವರ ಚುನಾವಣಾ ಘೋಷಣೆಯಾಗಿದೆ. ಪ್ರಧಾನಿಯಾದ ಕೂಡಲೇ ಷರೀಫ್ ಈ ವಿಚಾರಕ್ಕೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಪ್ರಧಾನಿ ಮನಮೋಹನ ಸಿಂಗ್ ಸರ್ಕಾರದ ಜತೆಗೆ ಈ ವಿಚಾರಕ್ಕೆ ಸಂಬಂಧಿಸಿ ಉತ್ತಮ ಆರಂಭ ಸಿಕ್ಕಿತ್ತು. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ನಾವು ಆ ಮಾತುಕತೆಯನ್ನು ಪುನರಾರಂಭಿಸಲು ಎದುರು ನೋಡುತ್ತಿದ್ದೇವೆ ಎಂದು ಅಜೀಜ್ ತಿಳಿಸಿದ್ದಾರೆ.