ಅಸ್ಸಾಂ ದೊಂಬಿ ರಾಜಕೀಯ
ಅಸ್ಸಾಂನ 'ನರಮೇಧ' ರಾಜಕೀಯಕ್ಕೆ ಇನ್ನೊಂದಿಷ್ಟು ವಾದ ವಿವಾದಗಳು ಸೇರ್ಪಡೆಯಾಗಿವೆ...
ನವದೆಹಲಿ/ಸಾಲ್ಬರಿ: ಅಸ್ಸಾಂನ 'ನರಮೇಧ' ರಾಜಕೀಯಕ್ಕೆ ಇನ್ನೊಂದಿಷ್ಟು ವಾದ ವಿವಾದಗಳು ಸೇರ್ಪಡೆಯಾಗಿವೆ.
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ, ಹಿಂಸಾಚಾರಕ್ಕೆ ಬೋಡೋ ಉಗ್ರರೇ ಕಾರಣ ಎಂದು ನವದೆಹಲಿಯಲ್ಲಿ ಹೇಳಿದ್ದರೂ ಕೂಡ, ಕಾಂಗ್ರೆಸ್‌ನ ವಕ್ತಾರ ಮೀಮ್ ಅಫ್ಜಲ್ ಗಲಭೆಗೆ ಬಿಜೆಪಿಯೇ ಕಾರಣ ಎಂದಿದ್ದಾರೆ. ಈ ಮೂಲಕ ರಾಜಕೀಯ ಜಿದ್ದಾಜಿದ್ದಿ ಇನ್ನಷ್ಟು ಹೆಚ್ಚಲು ಕಾರಣವಾಗಿದ್ದಾರೆ.
ಗುಂಪೊಂದರ ಕೃತ್ಯ: ಇದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರ ಹೇಳಿಕೆ. ಗಲಭೆ ಸಂಬಂಧ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೋಮುವಾದ ಸೃಷ್ಟಿಸುವ ಮೂಲಕ ಸಮಾಜದಲ್ಲಿ ಶಾಂತಿ ಕೆಡಿಸುವ ಉದ್ದೇಶದಿಂದ ಬೋಡೋ ಉಗ್ರರು ಈ ಕೆಲಸ ಮಾಡುತ್ತಿದ್ದಾರೆ ಎಂದು ಹೆಸರೆತ್ತದೇ ಆರೋಪಿಸಿದ್ದಾರೆ. ಅಸ್ಸಾಂನಲ್ಲಿ ತಳಹದಿ ಕಳೆದುಕೊಳ್ಳುತ್ತಿರುವ ಬೋಡೋ ಉಗ್ರರು ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುವ ಉದ್ದೇಶದಿಂದಲೇ ಇಂಥ ಹೀನ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯೇ ಕಾರಣ: ಅಸ್ಸಾಂ ಕೋಮು ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂಬುದು ಕಾಂಗ್ರೆಸ್‌ನ ನೇರ ಆರೋಪ. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪ್ರಚೋದನಾತ್ಮಕ ಭಾಷಣದಿಂದಲೇ ಈ ಹಿಂಸಾಚಾರ ನಡೆಯಿತು ಎಂದು ಪಕ್ಷದ ವಕ್ತಾರ ಮೀಮ್ ಅಫ್ಜಲ್ ಆರೋಪಿಸಿದ್ದಾರೆ.
ಬಿಜೆಪಿ ಕಿಡಿ: ಕಾಂಗ್ರೆಸ್‌ನ ಮೀಮ್ ಅಫ್ಜಲ್ ಹೇಳಿಕೆಗೆ ಬಿಜೆಪಿ ವಕ್ತಾರ ಎಂ.ಜೆ. ಅಕ್ಬರ್ ತೀವ್ರ ಕಿಡಿಕಾರಿದ್ದಾರೆ. ಕಾಂಗ್ರೆಸ್ ಒಡೆದು ಆಳುವ ನೀತಿಯಿಂದಲೇ ದೇಶಾದ್ಯಂತ ಇಂಥ ಅದೆಷ್ಟೋ ಹಿಂಸಾಚಾರಗಳು ಸಂಭವಿಸಿವೆ ಎಂದಿದ್ದಾರೆ. ಅಸ್ಸಾಂನಲ್ಲಿ ದೀರ್ಘಕಾಲದಿಂದ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಹಿಂಸಾಚಾರ ತಡೆಯಬಹುದಿತ್ತಲ್ಲವೇ ಎಂದು ಪ್ರಶ್ನಿಸಿರುವ ಅವರು, ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಅದು ಅಲ್ಪಸಂಖ್ಯಾತರನ್ನು ನೆನಪಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
3 ಬೋಡೋ ಉಗ್ರರ ಹತ್ಯೆ
ಭದ್ರತಾ ಪಡೆಗಳ ಗುಂಡಿನ ದಾಳಿಗೆ ಮೂವರು ಬೋಡೋ ಉಗ್ರರು ಹತ್ಯೆಗೀಡಾಗಿದ್ದಾರೆ. ಇದರ ಜೊತೆಗೆ ಹಿಂಸಾಚಾರ ಪೀಡಿತ ಸ್ಥಳದಲ್ಲಿ ಮತ್ತೆ ಮೂರು ಶವಗಳು ಸಿಕ್ಕಿದ್ದು, ಸಾವಿನ ಸಂಖ್ಯೆ 34ಕ್ಕೇರಿದೆ. ಉದಲ್ಗುರಿ ಜಿಲ್ಲೆಯ ಬಕ್ಸಲ್ ಗ್ರಾಮದ ಬಳಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ.