ಜಾತಿ ರಾಜಕಾರಣದಿಂದ ಬಿಹಾರ ನಿರ್ನಾಮ
ಜಾತಿ ಆಧಾರಿತ ರಾಜಕಾರಣ ಮಾಡುತ್ತಿರುವುದಕ್ಕಾಗಿ ತಮ್ಮ ಪಕ್ಷದ ರಾಷ್ಟ್ರೀಯ...
ಮುಜಾಪ್ಫರ್‌ಪುರ: ಜಾತಿ ಆಧಾರಿತ ರಾಜಕಾರಣ ಮಾಡುತ್ತಿರುವುದಕ್ಕಾಗಿ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ತರಾಟೆಗೆ ತೆಗೆದುಕೊಂಡಿರುವುದರಿಂದ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.
ಲೋಕಸಭೆ ಚುನಾವಣೆ ಕೊನೆಗೊಳ್ಳಲು ಎರಡು ಹಂತದ ಮತದಾನ ಬಾಕಿ ಇರುವಾಗ ನಿತೀಶ್‌ರನ್ನು ತರಾಟೆಗೆ ತೆಗೆದುಕೊಂಡಿರುವ ಸಂಯುಕ್ತ ಜನತಾದಳ ವರಿಷ್ಠ ಶರದ್ ಯಾದವ್, 'ಲಾಲೂ ಪ್ರಸಾದ್ ಯಾದವ್ ಅವರಂತೆಯೇ ಜಾತಿ ಆಧಾರಿತ ರಾಜಕಾರಣದ ಮೂಲಕ ನಿತೀಶ್ ಬಿಹಾರವನ್ನು ನಿರ್ನಾಮ ಮಾಡಿದ್ದಾರೆ' ಎಂದು ಟೀಕಿಸಿದರು. ಭಾನುವಾರ ಇಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಯಾದವ್, 'ನಾವು ಒಳ್ಳೆಯ ವ್ಯಕ್ತಿಗಳಾಗಲು ಪ್ರಯತ್ನಿಸಬೇಕೇ ವಿನಾ ಒಳ್ಳೆಯ ರಾಜಕಾರಣಿಯಾಗಲು ಅಲ್ಲ' ಎಂದು ಹೇಳಿದರು.
ನಂತರ ಕೆಲವೇ ಸಮಯದಲ್ಲಿ ರಾಗ ಬದಲಿಸಿದ ಅವರು, 'ನಾನು ಜಾತೀಯತೆ ವಿರುದ್ಧ ಮಾತನಾಡಿದ್ದೇನೆಯೇ ವಿನಾ ನಿತೀಶ್ ವಿರುದ್ಧ ಅಲ್ಲ. ಜಾತಿ ಆಧಾರಿತ ರಾಜಕಾರಣ ಕೊನೆಗೊಳಿಸಲು ನಿತೀಶ್ ಪ್ರಯತ್ನಿಸಿದ್ದಾರೆ ಎನ್ನುವುದು ನನ್ನ ಮಾತಿನ ಅರ್ಥ. ಅದನ್ನು ತಪ್ಪಾಗಿ ಭಾವಿಸಲಾಗಿದೆ. ನಾನು, ನಿತೀಶ್ ಸೇರಿದಂತೆ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ' ಎಂದು ಸಮಜಾಯಿಷಿ ನೀಡಿದರು.