ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪ್ರಿಯಾಂಕಾ ಟಿಆರ್‌ಪಿಗಷ್ಟೇ

ಪ್ರಿಯಾಂಕಾ ಗಾಂಧಿಯಿಂದ ಟಿವಿ ವಾಹಿನಿಗಳ ಟಿಆರ್‌ಪಿ ಹೆಚ್ಚಬಹುದೇ ವಿನಾ ಕಾಂಗ್ರೆಸ್ ಪಕ್ಷದ...

Vishwanath S
Updated On : 5 May 2014, 1:51 am

ನವದೆಹಲಿ: ಪ್ರಿಯಾಂಕಾ ಗಾಂಧಿಯಿಂದ ಟಿವಿ ವಾಹಿನಿಗಳ ಟಿಆರ್‌ಪಿ ಹೆಚ್ಚಬಹುದೇ ವಿನಾ ಕಾಂಗ್ರೆಸ್ ಪಕ್ಷದ ಹಣೆಬರಹ ಬದಲಾಗದು ಎಂದು ನರೇಂದ್ರ ಮೋದಿ ಆಪ್ತ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಅಮಿತ್ ಶಾ ಲೇವಡಿ ಮಾಡಿದ್ದಾರೆ. ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶಾ, ಪ್ರಿಯಾಂಕಾ ಪ್ರಚಾರದಿಂದ ಕಾಂಗ್ರೆಸ್‌ಗೆ ಲಾಭವೇನೂ ಆಗದು ಎಂದು ಅಭಿಪ್ರಾಯಪಟ್ಟರು. 'ಆಕೆ ಹಿಂದೆಯೂ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಗಳಲ್ಲೂ ಪ್ರಚಾರ ಮಾಡುತ್ತಾರೆ. ಆಕೆ ತನ್ನ ಅಮ್ಮ, ಅಣ್ಣನಿಗಾಗಿ ಪ್ರಚಾರ ಮಾಡುವುದರಿಂದ ನಮಗೇನೂ ಚಿಂತೆ ಇಲ್ಲ' ಎಂದರು.

ಮೋದಿ ಪ್ರಕರಣ ವರ್ಗಾಯಿಸಿ
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ದಾಖಲಾಗಿರುವ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ತಿಪ್ಪೆ ಸಾರಿಸಲು ಗುಜರಾತ್ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ರಕರಣವನ್ನು ರಾಜ್ಯದ ಹೊರಗಡೆ ವರ್ಗಾಯಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. 'ಆಯೋಗದ ಸೂಚನೆಯಂತೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರ ಮೇಲೆ ಗುಜರಾತ್ ಮುಖ್ಯಮಂತ್ರಿಯಾಗಿರುವ ಮೋದಿ ಪ್ರಭಾವ ಬೀರುವುದು ನಿಶ್ಚಿತ. ಹೀಗಾಗಿ ಪ್ರಕರಣವನ್ನು ರಾಜ್ಯದಿಂದ ಹೊರಗಡೆ ವರ್ಗಾಯಿಸಬೇಕು ಅಥವಾ ರಾಜ್ಯದ ಹೊರಗಡೆ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಬೇಕು' ಎಂದು ಕಾಂಗ್ರೆಸ್ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಿತ್ತಲ್ ಒತ್ತಾಯಿಸಿದ್ದಾರೆ.

ವ್ಯವಸ್ಥೆ ಸರಿಪಡಿಸುವುದೇ ಆದ್ಯತೆ
ನವದೆಹಲಿ: ಸಂಸ್ಥೆಯ ವ್ಯವಸ್ಥೆಯನ್ನು ಸರಿಪಡಿಸುವುದು ನಮ್ಮ ಆದ್ಯತೆ. ಕಳೆದ 2 ವರ್ಷಗಳಿಂದಲೂ ನಾನು ಮತ್ತು ನಮ್ಮ ತಂಡ ಈ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಇಂತಹುದೊಂದು ಮಾತು ಕೇಳಿಬಂದಿದ್ದು ಪ್ರಸಾರ ಭಾರತಿ ಸಿಇಓ ಜವಾಹರ್ ಸಿರ್ಕಾರ್ ಅವರಿಂದ. ದೂರದರ್ಶನದಲ್ಲಿ ಪ್ರಸಾರವಾದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಂದರ್ಶನ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಸಿರ್ಕಾರ್ ಈ ಮಾತುಗಳನ್ನಾಡಿದ್ದಾರೆ. ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋದ ಸ್ವಾಯತ್ತತೆಯ ವಿಚಾರವನ್ನು ಸರ್ಕಾರವೇ ನಿರ್ಧರಿಸಬೇಕು. ವ್ಯವಸ್ಥೆ ಸರಿಪಡಿಸಲು ನಾವು 2 ವರ್ಷದಿಂದಲೂ ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ ಸಿರ್ಕಾರ್.

ನಮ್ಮ ಕೊಲೆಗೆ ಸಂಚು: ಲಾಲು
ಪಟನಾ: ಪ್ರಚಾರ ಮುಗಿಸಿ ವಾಪಸ್ ಬರುತ್ತಿದ್ದಾಗ ತಪಾಸಣೆಗಾಗಿ ಪೊಲೀಸರು ವಾಹನವನ್ನು ತಡೆದಿದ್ದು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಕೋಪಕ್ಕೆ ಕಾರಣವಾಗಿದೆ. ಇದು ನಮ್ಮನ್ನು ತಡೆಯಲು ಕೋಮುವಾದಿ ಶಕ್ತಿಗಳು ನಡೆಸಿರುವ ಸಂಚು ಎಂದು ಲಾಲು ಆರೋಪಿಸಿದ್ದಾರೆ. ಇದೇ ವೇಳೆ, ಲಾಲು ಪತ್ನಿ ರಾಬ್ರಿ ದೇವಿ ಅವರು ನನ್ನ ಜೀವಕ್ಕೆ ಅಪಾಯವಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಚಾರದ ಸ್ಥಳದಿಂದಲೂ ಕಪ್ಪು ಕಾರೊಂದು ನಮ್ಮನ್ನು ಹಿಂಬಾಲಿಸುತ್ತಾ ಬಂದಿತ್ತು. ಅದಕ್ಕೆ ನಂಬರ್‌ಪ್ಲೇಟ್ ಕೂಡ ಇರಲಿಲ್ಲ. ಜತೆಗೆ ಮಹಿಳಾ ಪೊಲೀಸ್ ಸಿಬ್ಬಂದಿಯೂ ಇರಲಿಲ್ಲ. ನಮ್ಮನ್ನು ಕೊಲ್ಲಲೆಂದೇ ಯಾರೋ ಮಾಡಿದ ಸಂಚಿದು ಎಂಬುವುದು ಲಾಲು ಆರೋಪ.

ನೀತಿ ಸಂಹಿತೆ: ಬೇಣಿ ನಿರಾಳ
ಬಲರಾಂಪುರ: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿರುವ ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ ನಿರಾಳರಾಗಿದ್ದಾರೆ. ಮೋದಿ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಬೇಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಲರಾಂಪುರ ಜಿಲ್ಲಾ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಸ್ಥಳೀಯ ಕೋರ್ಟ್ ವಜಾ ಮಾಡಿದೆ. ಪ್ರಕರಣದಲ್ಲಿ  ತಪ್ಪು ಸೆಕ್ಷನ್‌ಗಳನ್ನು ಹಾಕಲಾಗಿದೆ ಎಂದು ಕೋರ್ಟ್ ಹೇಳಿದೆ.

ಧೈರ್ಯವಿದ್ದರೆ ಮುಟ್ಟಿ ನೋಡಲಿ
ರಾಣಾಘಾಟ್: 'ಧೈರ್ಯವಿದ್ದರೆ ಮೋದಿಯವರು ಪಶ್ಚಿಮ ಬಂಗಾಳದ ಒಬ್ಬ ವ್ಯಕ್ತಿಯನ್ನಾದರೂ ಮುಟ್ಟಿನೋಡಲಿ, ನಾನು ಇಡೀ ದೆಹಲಿಯನ್ನೇ ಅಲ್ಲಾಡಿಸುತ್ತೇನೆ'. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮೋದಿಗೆ ಹಾಕಿದ ಸವಾಲಿದು. ಮತಬ್ಯಾಂಕ್ ರಾಜಕೀಯಕ್ಕಾಗಿ ಬಾಂಗ್ಲಾ ನುಸುಳುಕೋರರನ್ನು ದೇಶದೊಳಕ್ಕೆ ಬರಲು ಅವಕಾಶ ನೀಡಲಾಗಿದೆ. ಅಂಥವರನ್ನು ಇಲ್ಲಿಂದ ಓಡಿಸಬೇಕು ಎಂದು ಮೋದಿ ಅವರು ರ್ಯಾಲಿಯಲ್ಲಿ ನುಡಿದಿದ್ದರು. ಇದಕ್ಕೆ ಭಾನುವಾರ ಪ್ರತಿಕ್ರಿಯಿಸಿದ ಮಮತಾ, ಮೋದಿ ಧೈರ್ಯವಿದ್ದರೆ ಬಂಗಾಳದ ಒಬ್ಬರನ್ನಾದರೂ ಮುಟ್ಟಲಿ ನೋಡೋಣ ಎಂದಿದ್ದಾರೆ.

ಅಮಿತ್ ಶಾ ಹೊಸ ವಿವಾದ
ಅಜಂಗಡ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಹೊಸ ವಿವಾದ ಸೃಷ್ಟಿಸಿದ್ದಾರೆ. ಅಜಂಗಡದಲ್ಲಿ ಭಾನುವಾರ ಮಾತನಾಡಿದ ಶಾ, 'ಅಜಂಗಡ ಭಯೋತ್ಪಾದಕರ ನೆಲೆ' ಎಂದಿದ್ದಾರೆ. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಸ್ಪಿ, ಕೂಡಲೇ ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement