8ರ ಆಟ ಪ್ರತಿಷ್ಠೆಯ ಸೆಣಸಾಟ
ಲೋಕಸಭೆಗೆ ನಡೆಯಲಿರುವ ಎಂಟನೇ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ನ...
ಲೋಕಸಭೆಗೆ ನಡೆಯಲಿರುವ ಎಂಟನೇ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ನ ವಂಶಪಾರಂಪರ್ಯ ರಾಜಕೀಯದ ಪಾಲಿಗೆ ಅಗ್ನಿಪರೀಕ್ಷೆ ಕಾದಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಮತ್ತು ಆಮ್ ಆದ್ಮಿ ಪಕ್ಷದ ಕುಮಾರ್ ವಿಶ್ವಾಸ್ ಪ್ರಬಲ ಸ್ಪರ್ಧೆ ನೀಡಲಿದ್ದಾರೆ.
ರಾಹುಲ್ ಗಾಂಧಿ, ಸ್ಮೃತಿ ಇರಾನಿ, ಕುಮಾರ್ ವಿಶ್ವಾಸ್
ಕ್ಷೇತ್ರ: ಅಮೇಠಿ (ಉ.ಪ್ರ.)
ಅಮೇಠಿ ಹಿಂದಿನಿಂದಲೂ ನೆಹರೂ ಗಾಂಧಿ ಕುಟುಂಬದ ಪಾಲಿಗೆ ಭದ್ರಕೋಟೆಯಾಗಿಯೇ ಉಳಿದಿದೆ. ಆದರೆ, ಈ ಬಾರಿ ಪರಿಸ್ಥಿತಿ ಬೇರೆಯೇ ಇದೆ. ಕಾಂಗ್ರೆಸ್ನ ವಂಶಾಡಳಿತದ ಕುಡಿ ರಾಹುಲ್ ಗಾಂಧಿ ಅಮೇಠಿಯಲ್ಲಿ ಪ್ರಬಲ ಪೈಪೋಟಿ ಎದುರಿಸಲಿದ್ದಾರೆ. ಬಿಜೆಪಿಯ ಸ್ಟಾರ್ ಕ್ಯಾಂಪೇನರ್, ನಟಿ ಸ್ಮೃತಿ ಇರಾನಿ ಹಾಗೂ ಆಪ್ ಅಭ್ಯರ್ಥಿ ಕುಮಾರ್ ವಿಶ್ವಾಸ್ ರಾಹುಲ್ಗೆ ಸ್ಪರ್ಧೆಯೊಡ್ಡಲಿದ್ದಾರೆ. ರಾಹುಲ್ ಅವರು ಪಕ್ಷದ ಪರ ದೇಶಾದ್ಯಂತ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಸಹೋದರನ ಪರ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಸ್ಮೃತಿ ಇರಾನಿ ಕಳೆದೆರಡು ವಾರಗಳಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದರಷ್ಟೆ ನಿಮಗೆ ವಿದ್ಯುತ್, ನೀರು ಸಿಗುತ್ತದೆ ಎನ್ನುತ್ತಿದ್ದಾರೆ. ಇನ್ನು ವಿಶ್ವಾಸ್ ನಾಮಪತ್ರ ಸಲ್ಲಿಸುವ ಮೊದಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಒಟ್ಟು ಮತದಾರರು 14,31,787
ರೇಣುಕಾ ರಾವತ್- ರಮೇಶ್ ಪೋಖ್ರಿಯಾಲ್
ಕ್ಷೇತ್ರ: ಹರಿದ್ವಾರ
ಉತ್ತರಾಖಂಡದ ಹರಿದ್ವಾರದಲ್ಲಿ ಈ ಬಾರಿ ನಡೆಯುತ್ತಿರುವುದು ಬಿಗ್ಫೈಟ್. ಹೆಸರಿಗೆ ಸಿಎಂ ಹರೀಶ್ ರಾವತ್ ಪತ್ನಿ ರೇಣುಕಾ ರಾವತ್ ಮತ್ತು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ರಮೇಶ್ ಪೋಖ್ರಿಯಾಲ್ ನಡುವೆ ನಡೆಯುತ್ತಿರುವಂತೆ ಕಾಣುತ್ತಿರಬಹುದು. ಆದರೆ, ಈ ಕ್ಷೇತ್ರದಲ್ಲಿ ನಿಜವಾಗಿ ನಡೆಯುತ್ತಿರುವುದು ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಕದನ. ರಾವತ್ ಕಳೆದ ಬಾರಿ ಈ ಕ್ಷೇತ್ರವನ್ನೇ ಪ್ರತಿನಿಧಿಸುತ್ತಿದ್ದರು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈ ಚುನಾವಣೆಯಲ್ಲಿ ಅವರು ತಮ್ಮ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ. ಆದರೆ, ತಾವೇ ಸ್ಪರ್ಧಿಸುತ್ತಿರುವಂತೆ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲೇ ಪ್ರಚಾರ ನಡೆಸುತ್ತಿದ್ದರೂ ಪ್ರತಿ ದಿನ ಕ್ಷೇತ್ರಕ್ಕೆ ವಾಪಸ್ ಆಗುವ ರೀತಿ ವೇಳಾಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯನ್ನು ತಾತ್ಕಾಲಿಕವಾಗಿ ಹರಿದ್ವಾರಕ್ಕೆ ವರ್ಗಾಯಿಸಿಕೊಂಡಿದ್ದಾರೆ. ರಾವತ್ ಪುತ್ರಿ ಅನುಪಮಾ ಕೂಡ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ರಮೇಶ್ ಪುತ್ರಿ ಕೂಡ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಒಟ್ಟು ಮತದಾರರು 1,637,000
ಲವ್ಲಿ ಆನಂದ್, ರಮಾದೇವಿ
ಕ್ಷೇತ್ರ: ಶೆಹೋಹರ್
ಬಿಹಾರದ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಎರಡು ಹೆಣ್ಣುಮಕ್ಕಳ ನಡುವಿನ ಕದನ. ಲವ್ಲಿ ಅವರ ಪತಿ ಆನಂದ್ ಮೋಹನ್ ಸಿಂಗ್ ಅವರು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನು ರಮಾದೇವಿ ಪತಿ, ಮಾಜಿ ಸಚಿವ ಬ್ರಿಜ್ ಬಿಹಾರಿ ಅವರು ಗ್ಯಾಂಗ್ವಾರ್ವೊಂದರಲ್ಲಿ ಮೃತಪಟ್ಟಿದ್ದಾರೆ. ಇಬ್ಬರ ಗಂಡಂದಿರೂ ಕ್ಷೇತ್ರದಲ್ಲಿ ಹೊಡೆದಾಟದಿಂದಾಗಿಯೇ ಹೆಸರು ಮಾಡಿದವರು. ಆರ್ಜೆಡಿಯನ್ನು ಪ್ರತಿನಿಧಿಸುತ್ತಿದ್ದ ರಮಾದೇವಿ ಅವರು ಈ ಬಾರಿ ಮೋದಿ ಅಲೆ ಇರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ಒಟ್ಟು ಮತದಾರರು 11,39,537
ಬಿ.ಸಿ. ಖಂಡೂರಿ, ಹರಕ್ ಸಿಂಗ್ ರಾವತ್
ಕ್ಷೇತ್ರ: ಗರ್ವಾಲ್
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ನಿವೃತ್ತ ಮೇಜರ್ ಜನರಲ್ ಕೂಡ ಆಗಿರುವ ಖಂಡೂರಿ ಅವರು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದವರು. ಖಂಡೂರಿ ಅವರಿಗೆ ಸರಿಯಾಗಿ ಠಕ್ಕರ್ ನೀಡಬೇಕಿದ್ದ ಯಾವುದೇ ಅಭ್ಯರ್ಥಿ ಕ್ಷೇತ್ರದಲ್ಲಿಲ್ಲ. ಕಾಂಗ್ರೆಸ್ನಿಂದ ಸ್ಪರ್ಧಿಸಬೇಕಿದ್ದ ಅಭ್ಯರ್ಥಿ ಬಿಜೆಪಿಯತ್ತ ಹೆಜ್ಜೆ ಹಾಕಿದ್ದರು. ಇದರಿಂದ ಕಾಂಗ್ರೆಸ್ ಅಳೆದೂ ತೂಗಿ ಕೃಷಿ ಸಚಿವ ಹರಕ್ ಸಿಂಗ್ ರಾವತ್ರನ್ನು ಕಣಕ್ಕಳಿಸಿದೆ. ರಜಪೂತ ಸಮುದಾಯದ ಜನ ಹರಕ್ಸಿಂಗ್ ಕೈ ಹಿಡಿಯುವ ವಿಶ್ವಾಸ ಕಾಂಗ್ರೆಸ್ಗಿದೆ.
ಒಟ್ಟು ಮತದಾರರು 12,69,000
ಬಾಬುಲ್ ಸುಪ್ರಿಯೋ, ಡೋಲಾ ಸೇನ್, ಬಿ.ಜಿ. ಚೌಧರಿ
ಕ್ಷೇತ್ರ: ಅಸ್ನಸೋಲ್(ಪಶ್ಚಿಮ ಬಂಗಾಳ)
ಪಶ್ಚಿಮ ಬಂಗಾಳದ ಈ ಕೈಗಾರಿಕಾ ನಗರದಿಂದ ಬಿಜೆಪಿಯು ಬಾಲಿವುಡ್ ಗಾಯಕ ಬಾಬುಲ್ ಸುಪ್ರಿಯೋ ಅವರನ್ನು ಕಣಕ್ಕಿಳಿಸಿದ್ದರೆ ತೃಣಮೂಲ ಕಾಂಗ್ರೆಸ್ ಡೋಲಾ ಸೇನ್ರನ್ನು ಸ್ಪರ್ಧೆಗಳಿಸಿದೆ. ಸಿಪಿಎಂ ಅಭ್ಯರ್ಥಿ ಚೌಧರಿ ಅವರು ಮಾವೋವಾದಿಗಳ ಪರ ಒಲವು ಹೊಂದಿದವರಾಗಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಚೌಧರಿ ಅವರು ಕೃಷಿ ಸಚಿವರಾಗಿದ್ದವರು. ಸ್ಥಳೀಯರು ಎನ್ನುವುದು ಅವರ ಹೆಚ್ಚುಗಾರಿಕೆ. ಇನ್ನು ಡೋಲಾ ಮತ್ತು ಬಾಬುಲ್ ಅವರು ಕ್ಷೇತ್ರದಿಂದ ಹೊರಗಿನವರಾಗಿದ್ದಾರೆ.
ಒಟ್ಟು ಮತದಾರರು 14,57,168