ಶಾಸಕರು ಎಣಿಕೆ ಏಜೆಂಟರಾಗುವಂತಿಲ್ಲ
ಭೋಪಾಲ: ಶಾಸಕರು, ಸಂಸದರು, ಮಹಾಪೌರ ಮತ್ತು ಪಂಚಾಯಿತಿ ಸದಸ್ಯರು ಮತ ಎಣಿಕೆ ಏಜೆಂಟರಾಗುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದೆ. ರಕ್ಷಣೆ ದೊರಕಲಿ ಅಥವಾ ದೊರಕದಿರಲಿ, ಕೇಂದ್ರ, ರಾಜ್ಯ ಮತ್ತು ಜಿಲ್ಲಾಡಳಿತದವರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ನ್ಯಾಯಯುತ ಮತ್ತು ಶಾಂತಿಯುತ ಮತ ಎಣಿಕೆ ನಡೆಯಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ರಕ್ಷಣೆಯಿಲ್ಲದ ಸಂಸದ ಅಥವಾ ಶಾಸಕರನ್ನು ಮತ ಎಣಿಕೆ ಏಜೆಂಟರಾಗಿ ನಿಯೋಜಿಸುವ ಕುರಿತು ಗೊಂದಲವಿತ್ತು. ಪುದುಚೇರಿಯ ಮುಖ್ಯ ಚುನಾವಣಾಧಿಕಾರಿ ಈ ಬಗ್ಗೆ ಸ್ಪಷ್ಟನೆ ಕೋರಿ ಆಯೋಗದ ಮೊರೆ ಹೋಗಿದ್ದರು. ಈ ಹಿಂದೆ ಅನಾಹುತ ಸಂಭವಿಸಬಾರದೆಂದು ರಕ್ಷಣೆ ಪಡೆದ ವ್ಯಕ್ತಿಯನ್ನು ಎಣಿಕೆ ಏಜೆಂಟರಾಗಿ ನೇಮಿಸುತ್ತಿರಲಿಲ್ಲ.
ಗುಜರಾತ್ ಸಿಎಂ ಪಟ್ಟಕ್ಕೆ ಶುರು ಪೈಪೋಟಿ
ಅಹಮದಾಬಾದ್: ಒಂದೆಡೆ ಮೋದಿ ಅವರು ಪ್ರಧಾನಿ ಹುದ್ದೆಯತ್ತ ಕಣ್ಣಿಟ್ಟಿದ್ದರೆ, ಮತ್ತೊಂದೆಡೆ ಗುಜರಾತ್ ಮುಖ್ಯಮಂತ್ರಿ ಪಟ್ಟಕ್ಕೆ ಪೈಪೋಟಿ ಆರಂಭವಾಗಿದೆ. ಮೋದಿ ಅವರು ಪ್ರಧಾನಿಯಾದರೆ ತೆರವಾಗಲಿರುವ ಮುಖ್ಯಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ತವಕ ಈಗ ಅಲ್ಲಿನ ನಾಯಕರಲ್ಲಿ ಕಾಣುತ್ತಿದೆ. ಆನಂದಿಬೆನ್ ಪಟೇಲ್, ಮೋದಿ ಸರ್ಕಾರದ ಹಿರಿಯ ಸಚಿವ ನಿತಿನ್ ಪಟೇಲ್, ಮೋದಿ ಆಪ್ತ ಅಮಿತ್ ಶಾ ಕೂಡ ಈ ರೇಸ್‌ನಲ್ಲಿದ್ದಾರೆ. ಇವರಲ್ಲದೆ ಸಚಿರವಾದ ಸೌರಭ್ ಪಟೇಲ್, ಪಕ್ಷದ ನಾಯಕ ಪುರುಷೋತ್ತಮ್ ರೂಪಾಲ ಅವರೂ ಸಿಎಂ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೆ ಸಿಎಂ ಪಟ್ಟ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೆ.
ಬಾಬಾ ರಾಮದೇವ್ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಬಂದ್
ಹುಬ್ಬಳ್ಳಿ: ಯೋಗ ಗುರು ಬಾಬಾ ರಾಮದೇವ್ ಹೇಳಿಕೆ ಖಂಡಿಸಿ ದಲಿತ ಸಂಘ- ಸಂಸ್ಥೆಗಳ ಮಹಾಮಂಡಳದಿಂದ ಸೋಮವಾರ ಹುಬ್ಬಳ್ಳಿ ಬಂದ್ ನಡೆಸಲಾಯಿತು. ಬಂದ್ ಲೆಕ್ಕಿಸದೆ ತೆರೆದುಕೊಂಡಿದ್ದ ಮಳಿಗೆಗಳನ್ನು ಬಂದ್ ಮಾಡಿಸಲು ಕಾರ್ಯಕರ್ತರು ಮುಂದಾದ ಹಿನ್ನೆಲೆಯಲ್ಲಿ ಕೆಲವೆಡೆ ಮಾತಿನ ಚಕಿಮಕಿ ನಡೆಯಿತು. ಕೆಲವು ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ಮೂಲಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಬೆಳಗ್ಗೆ ಕೆಲವು ಕಾಲ ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ಕಂಡು ಬಂದಿತ್ತಾದರೂ 9.30ರ ನಂತರ, ಕಾರ್ಯಕರ್ತರ ಒತ್ತಾಸೆ ಮೇರೆಗೆ ಸಾರಿಗೆ ಸಂಸ್ಥೆ ಬಸ್‌ಗಳು ಡಿಪೋದಲ್ಲೇ ನಿಲ್ಲುವಂತಾಯಿತು. ಆಟೋ ರಿಕ್ಷಾಗಳ ಸೇವೆಯನ್ನೂ ಮೊಟಕುಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು.