ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೋದಿಯದು ದ್ವಿಮುಖ ನೀತಿ

ಉತ್ತರ ಪ್ರದೇಶ ಮತ್ತು ಬಿಹಾರ ಕುರಿತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ...

Vishwanath S
Updated On : 7 May 2014, 12:44 pm

ಮಿರ್ಜಾಪುರ (ಉ.ಪ್ರ): ಉತ್ತರ ಪ್ರದೇಶ ಮತ್ತು ಬಿಹಾರ ಕುರಿತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕೊನೆಹಂತದ ಚುನಾವಣೆಗೆ ಕೆಲವೇ ದಿನಗಳಿರುವಾಗ ಮೋದಿ ವಿರುದ್ಧ ನೇರ ವಾಗ್ಬಾಣಗಳನ್ನು ರಾಹುಲ್ ಪ್ರಯೋಗಿಸುತ್ತಿದ್ದಾರೆ. ಮಂಗಳವಾರ ಇಲ್ಲಿ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, 'ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದ ಅಭಿವೃದ್ಧಿಗೆ ಬದ್ಧ ಎಂದು ಮೋದಿ ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರನ್ನು ದ್ವೇಷಿಸುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ. ಇದು ದ್ವಿಮುಖ ನೀತಿ ಅಲ್ಲವೆ' ಎಂದು ಪ್ರಶ್ನಿಸಿದರು.
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿವೆ. ಉತ್ತರ ಭಾರತೀಯರು ಅಲ್ಲಿ ಸುಲಭವಾಗಿ ಉದ್ಯೋಗ ಗಿಟ್ಟಿಸಬಹುದು. ಆದರೆ ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ, ಬಿಜೆಪಿಗಳು ಉತ್ತರ ಭಾರತೀಯರನ್ನು ಹೊರದಬ್ಬುತ್ತವೆ ಎಂದು ಆರೋಪಿಸಿದರು.
'ಚುನಾವಣೆಗೆ ಆರು ತಿಂಗಳಿರುವಾಗ ಈ ಪಕ್ಷಗಳು ದೊಂಬಿಗಳನ್ನು ಹುಟ್ಟುಹಾಕುತ್ತವೆ. ಜನ ತಮ್ಮತಮ್ಮಲ್ಲೇ ಕಾದಾಡುವಂತೆ ಮಾಡುತ್ತವೆ. ಚುನಾವಣೆಗಳಲ್ಲಿ ವಿದ್ಯುತ್, ನೀರಾವರಿ, ನಿರುದ್ಯೋಗ ಇತ್ಯಾದಿ ವಿಚಾರಗಳನ್ನು ಈ ಪಕ್ಷಗಳು ಪ್ರಸ್ತಾಪಿಸುವುದೇ ಇಲ್ಲ' ಎಂದು ಟೀಕಿಸಿದರು. ಮಂಗಳೂರು ಪಬ್ ದಾಳಿ ಮತ್ತು ಗುಜರಾತ್ ಬೇಹುಗಾರಿಕೆಗಳನ್ನು ಪ್ರಸ್ತಾಪಿಸಿದ ರಾಹುಲ್, ಬಲಪಂಥೀಯರಿಗೆ ಮಹಿಳೆಯರ ಬಗ್ಗೆ ಗೌರವ ಇಲ್ಲ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement