ಅನು'ಮೋದಿ'ಸಿದ ಕಾರ್ಯತಂತ್ರಗಳು
ಬಿಜೆಪಿ ಇನ್ನೂರೆಂಬತ್ತು ಸ್ಥಾನಗಳ ಗಡಿ ದಾಟಿದ್ದು ಪವಾಡವಲ್ಲ. ಅದರ ಹಿಂದೆ ನಾಯಕ ಮೋದಿಯ ಪರಿಶ್ರಮವಿದೆ, ತಂತ್ರಗಳಿವೆ. ಬಿಜೆಪಿಯ ಬೇರ್ಯಾವ ನಾಯಕನೂ ಓಡಾಡಿರದಷ್ಟು ಅವರು ಓಡಾಡಿದ್ದಾರೆ, ಮಾತಾಡಿದ್ದಾರೆ. ಅವರ ಕೆಲಸದ ಅಗಾಧತೆ, ಕಾರ್ಯತಂತ್ರಗಳನ್ನು ಒಮ್ಮೆ ಅವಲೋಕಿಸೋಣ.
400 ರ್ಯಾಲಿಗಳು: 2013ರಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಂದಿನಿಂದ ಇಂದಿನವರೆಗೆ ಅವರು 400 ರ್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಪ್ರಚಾರದ ಸಂದರ್ಭ ಯಾವುದೇ ರಾಜ್ಯದಲ್ಲೂ 2 ದಿನಕ್ಕಿಂತ ಹೆಚ್ಚು ನಿಂತಿಲ್ಲ. ದೇಶದ ಎಂಟೂ ದಿಕ್ಕುಗಳನ್ನು ಸುತ್ತಿದ್ದಾರೆ. ರ್ಯಾಲಿಗಳೆಲ್ಲ ತುಂಬಿ ತುಳುಕುತ್ತಿದ್ದವು ಎಂಬುದನ್ನು ಬೇರೆ ಹೇಳಬೇಕಿಲ್ಲ.
ಚಾಯ್ ಪೆ ಚರ್ಚಾ: ಮಣಿಶಂಕರ್ ಅಯ್ಯರ್ ಅವರ 'ಚಾಯ್‌ವಾಲಾ' ಎಂಬ ಟೀಕೆಯನ್ನೇ ಕಾಂಗ್ರೆಸ್‌ಗೆ ತಿರುಮಂತ್ರವಾಗಿಸಿದರು ಮೋದಿ. ದೇಶಾದ್ಯಂತ ಟೀ ಕುಡಿಯುತ್ತ ಚರ್ಚೆ ನಡೆಸುವ ಈ ಐಡಿಯಾ ಈ ಬಾರಿಯ ಹೊಸ, ಸೃಜನಶೀಲ ತಂತ್ರವಾಗಿತ್ತು.
ಟ್ವಿಟರ್: ಟ್ವಿಟರ್‌ನಲ್ಲಿ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮೋದಿ, ಪ್ರತಿಹಂತದಲ್ಲೂ ಅದನ್ನು ಪ್ರಚಾರದ ತಂತ್ರವಾಗಿ ರೂಪಿಸಿದರು. ಗೆದ್ದದ್ದು ಖಾತರಿಯಾದ ಮೇಲೂ 'ಭಾರತ ಗೆದ್ದಿದೆ' ಎಂದು ಟ್ವೀಟಿಸಿದರು. ಅದು ಅತ್ಯಧಿಕ ಶೇರ್ ಆದ ಟ್ವೀಟ್ ಎನಿಸಿಕೊಂಡಿತು.
ಕಾಂಗ್ರೆಸ್ ಲೇವಡಿ: ಯುಪಿಎಯ ಹತ್ತು ವರ್ಷದ ಬೇಜವಾಬ್ದಾರಿ ಆಡಳಿತ, ರಾಹುಲ್‌ರ ಅಪ್ರಬುದ್ಧತೆ, ಸೋನಿಯಾ ಆಡಳಿತ ಮತ್ತು ಮನಮೋಹನರ ಮೌನ- ಎಲ್ಲವೂ ಮೋದಿಯವರ ಲೇವಡಿಯ ಅಸ್ತ್ರಗಳಾದವು. ಮೋದಿ ಭಾಷಣಕ್ಕೆ ರಂಗು ತುಂಬಿದವು.
ಹೋಲೋಗ್ರಾಮ್‌ಗಳು: ತಾನು ಇಲ್ಲದ ಪ್ರದೇಶದಲ್ಲೂ ಅಸ್ತಿತ್ವದಲ್ಲಿರಲು, 3ಡಿ ಪ್ರಚಾರವನ್ನು ಮೋದಿ ಹಮ್ಮಿಕೊಂಡರು. ಅದರ ಮೂಲಕ ತಾನು ಆಧುನಿಕತೆಯನ್ನು ಯಶಸ್ವಿಯಾಗಿ ನಿಭಾಯಿಸಬಲ್ಲೆ ಎಂಬ ಸಂದೇಶ ರವಾನಿಸಿದರು. ಪ್ರಚಾರದ ಕೊನೆಯ ತಿಂಗಳಲ್ಲಿ, ಈ ವ್ಯಕ್ತಿ ಟಿವಿ ಸಂದರ್ಶನ ನೀಡುವುದಿಲ್ಲ ಎಂಬ ಆರೋಪ ಧ್ವಂಸವಾಗುವಂತೆ ಸಂದರ್ಶನಗಳನ್ನು ನೀಡಿದರು.