ಸೋಲು ಸವಾಲು
ರಾಹುಲ್ ಗಾಂಧಿ ಕಾಂಗ್ರೆಸ್ ಅನ್ನು ಮುನ್ನಡೆಸಲು ಅಸಮರ್ಥರಾ?
ಅವರ ನಾಯಕತ್ವ ಪರಿಣಾಮಕಾರಿಯಾಗಿಲ್ಲವೆಂದಾದರೆ ಪಕ್ಷದ ಚುಕ್ಕಾಣಿಯನ್ನು ಯಾರ ಕೈಗೊಪ್ಪಿಸಬೇಕು? ಪಕ್ಷದೊಳಗಿನ ಒಂದು ವರ್ಗದ ಆಗ್ರಹದಂತೆ ಪ್ರಿಯಾಂಕಾ ಗಾಂಧಿ ಅವರಿಗೇ ಪಕ್ಷದ ನಾಯಕತ್ವ ವಹಿಸಬೇಕಾ? ಅಥವಾ ಗಾಂಧಿ ಕುಟುಂಬದಿಂದ ಹೊರತಾದ ವ್ಯಕ್ತಿಯೊಬ್ಬರಿಗೆ ಈ ಹೊಣೆಗಾರಿಕೆ ನೀಡಬೇಕಾ?
- ಹೀನಾಯ ಸೋಲಿನ ಬಳಿಕ ಕಾಂಗ್ರೆಸ್‌ನಲ್ಲಿ ಹುಟ್ಟಿಕೊಳ್ಳಬಹುದಾದ ಪ್ರಶ್ನೆಗಳಿವು. ಇದೇ ಮೊದಲ ಬಾರಿಗೆ 50ರ ಗಡಿದಾಟಲೂ ಪಕ್ಷ ಒದ್ದಾಟ ನಡೆಸಿದೆ. ಇದು ಗಾಂಧಿ ಕುಟುಂಬದ ಅದರಲ್ಲೂ ರಾಹುಲ್ ನಾಯಕತ್ವದ ಪಾಲಿಗೆ ಅತಿ ದೊಡ್ಡ ಹಿನ್ನಡೆ. ರಾಹುಲ್ ಗಾಂಧಿ ಕೈಗೆ ಪಕ್ಷದ ಚುಕ್ಕಾಣಿ ನೀಡಿದಾಗಲೇ ಪಕ್ಷದ ಅನೇಕ ಹಿರಿಯ ಮುಖಂಡರು ಒಳಗೊಳಗೇ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಹುಲ್ ಅವರೊಬ್ಬ ಎಳಸು ನಾಯಕ ಎಂದಿದ್ದರು. ಈಗ ಪಕ್ಷ ಹೀನಾಯ ಸೋಲು ಕಂಡ ಬಳಿಕ ಈ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಕಾಂಗ್ರೆಸ್‌ನೊಳಗಿನ ಒಂದು ವರ್ಗ ಗಾಂಧಿ ಕುಟುಂಬದ ನಾಯಕತ್ವದ ಕುರಿತು ಅಸಮಾಧಾನ ವ್ಯಕ್ತಪಡಿಸಿದರೂ ಅಚ್ಚರಿ ಇಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ನ ಐತಿಹಾಸಿಕ ಸೋಲಿನ ಹಿಂದೆ ಪ್ರಮುಖ ಪಾತ್ರವಹಿಸಿರುವಾಗ ಎಲ್ಲವನ್ನೂ ರಾಹುಲ್ ಒಬ್ಬರ ತಲೆಗೆ ಕಟ್ಟುವುದು ಸರಿಯಲ್ಲ ನಿಜ. ಆದರೂ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ ರಾಹುಲ್ ಅವರೇ ಎಲ್ಲ ಹೊಣೆ ಹೊರುವುದು ಅನಿವಾರ್ಯ.