ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪ್ರತಿಷ್ಠಿತ ಕ್ಷೇತ್ರಗಳ ಫಲಿತಾಂಶ

Vishwanath S
Updated On : 18 May 2014, 12:35 pm

ಬೆಂಗಳೂರು ದಕ್ಷಿಣ
ಬಿಜೆಪಿಯ ಅನಂತಕುಮಾರ್ ತಮ್ಮ ಸಂಸದ ಸ್ಥಾನವನ್ನು ಈ ಬಾರಿಯೂ ಉಳಿಸಿಕೊಂಡಿದ್ದಾರೆ. ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರು ಮೋದಿ ಅಲೆಗೆ ಶರಣಾಗಿದ್ದಾರೆ. ಈ ಜಯ, ಅನಂತ್ ಅವರ 6ನೇ ಗೆಲವು.

ಶಿವಮೊಗ್ಗ
ಲೋಕಸಭೆಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಿ.ಎಸ್. ಯಡಿಯೂರಪ್ಪ ಇಲ್ಲಿ ಜಯಪಡೆದಿದ್ದಾರೆ. ಕೆಜೆಪಿ ಸ್ಥಾಪಿಸಿ, ಆನಂತರ ಆ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದ ಕಾರಣಕ್ಕೆ ಅವರ ಗೆಲವು ಪ್ರತಿಷ್ಠೆಯ ವಿಚಾರವಾಗಿತ್ತು.  ಅವರ ಪ್ರತಿಸ್ಪರ್ಧಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಗೆಲವು ಕಾಣಲಿಲ್ಲ.

ಕಾನ್ಪುರ (ಉತ್ತರ ಪ್ರದೇಶ)
ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಶ್ರೀಪ್ರಕಾಶ್ ಜೈಸ್ವಾಲ್ ಕ್ಷೇತ್ರದಿಂದ ಸತತ ಗೆಲವು ಸಾಧಿಸಿದ್ದರು. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಈ ಬಾರಿ ಬಿಜೆಪಿ ಪಾಲಾಗಿದೆ. ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಇಲ್ಲಿ ಜಯ ಸಾಧಿಸಿದ್ದಾರೆ.


ಲಖನೌ (ಉತ್ತರ ಪ್ರದೇಶ)
ಬಿಜೆಪಿ ವರಿಷ್ಠ ಅಟಲ್ ಬಿಹಾರಿ ವಾಜಪೇಯಿ ಐದು ಬಾರಿ ಸಂಸದರಾಗಿದ್ದ ಕ್ಷೇತ್ರವಿದು. ಕಳೆದ ಚುನಾವಣೆಯಲ್ಲಿ, ಬಿಜೆಪಿ ನಾಯಕ ಲಾಲ್‌ಜಿ ಟಂಡನ್ ಇಲ್ಲಿ ಜಯ ಗಳಿಸಿದ್ದರು. ಈ ಬಾರಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್  ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ಸೋಲು ಕಂಡಿದ್ದಾರೆ.


ವಡೋದರಾ (ಗುಜರಾತ್)
ಈ ಕ್ಷೇತ್ರ ರಾಷ್ಟ್ರವ್ಯಾಪಿ ಪ್ರಸಿದ್ಧಿಯಾಗಿದ್ದು ಮೋದಿಯಿಂದ. ಫಲಿತಾಂಶ ಪ್ರತ್ಯೇಕವಾಗಿ ಹೇಳಬೇಕಿಲ್ಲ. 1998ರಿಂದ 2014ರವರೆಗೆ ಈ ಕ್ಷೇತ್ರ ಬಿಜೆಪಿಯ ಹಿಡಿತದಲ್ಲೇ ಇತ್ತು. ಈ ಬಾರಿಯೂ ಅದು ಮುಂದುವರಿದಿದೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಸೋಲು ಕಂಡಿದ್ದಾರೆ.

ಪಾಟಲಿಪುತ್ರ (ಬಿಹಾರ)
ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪುತ್ರಿ ಮಿಶಾ ಭಾರತಿ, ಬಿಜೆಪಿ ಅಭ್ಯರ್ಥಿ ರಾಮ್ ಕೃಪಾಲ್ ಯಾದವ್ ವಿರುದ್ಧ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರ ಪ್ರತಿಷ್ಠಿತ ಎನಿಸಿಕೊಂಡಿತ್ತು. ಟಿಕೆಟ್ ಸಿಗದ್ದಕ್ಕೆ ಮುನಿಸಿಕೊಂಡು ಹೊರಬಂದಿದ್ದ ಆರ್‌ಜೆಡಿ ನಾಯಕ ಕೃಪಾಲ್,   ಬಿಜೆಪಿ ವತಿಯಿಂದ ಗೆದ್ದಿದ್ದಾರೆ.

ಫತೇಪುರ್ ಸಿಕ್ರಿ (ಉ.ಪ್ರದೇಶ)
ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್‌ಸಿಂಗ್ ಇದೇ ಮೊದಲ ಬಾರಿಗೆ ನೇರ ಚುನಾವಣೆಗೆ ಸ್ಪರ್ಧಿಸಿದ್ದರು. ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದಿಂದ ಮೊದಲ ಬಾರಿಗೆ ನೇರ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಂಡುಕೊಂಡಿದ್ದ ಅವರು, ಬಿಜೆಪಿಯ ಬಾಬುಲಾಲ್ ವಿರುದ್ಧ ಸೋಲು ಕಂಡಿದ್ದಾರೆ.

ಬಾರ್ಮರ್ (ರಾಜಸ್ಥಾನ)
ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಪ್ರತಿಷ್ಠೆಯ ಕ್ಷೇತ್ರವಾಗಿದ್ದ ಇಲ್ಲಿ ಅವರದ್ದೇ ಪಕ್ಷದ (ಬಿಜೆಪಿ) ಕರ್ನಲ್ ಸೋನಾ ರಾಮ್ ಜಯಗಳಿಸಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಸ್ವಂತ್ ಸಿಂಗ್ ಇಲ್ಲಿ ಸೋಲಿನ ರುಚಿ ಕಾಣಬೇಕಾಯ್ತು.

ಮಾಧೆಪುರ (ಬಿಹಾರ)
ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ ಕಡಿದು ಬಿದ್ದ ನಂತರ ಮೊದಲ ಚುನಾವಣೆ ಇದಾಗಿದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಬಂದಿತ್ತು. ಜೆಡಿಯು ಅಧ್ಯಕ್ಷ ಶರದ್ ಯಾದವ್ ಸ್ಪರ್ಧಿಸಿದ್ದ ಈ ಕ್ಷೇತ್ರದಲ್ಲಿ ಆರ್‌ಜೆಡಿಯ ರಾಜೇಶ್ ರಂಜನ್ (ಪಪ್ಪು ಯಾದವ್) ಗೆಲವು ಸಾಧಿಸಿದ್ದಾರೆ.  

 ಪಟನಾ ಸಹಿಬ್(ಬಿಹಾರ)
ಕೇಂದ್ರದ ಮಾಜಿ ಸಚಿವ ಶತ್ರುಘ್ನ ಸಿನ್ಹಾ, ಇಲ್ಲಿ ಪುನರಾಯ್ಕೆಯಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಾಲಿವುಡ್ ನಟ ಶೇಖರ್ ಸುಮನ್ ವಿರುದ್ಧ ಗೆದ್ದಿದ್ದ ಅವರು, ಈ ಬಾರಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕುನಾಲ್ ಸಿಂಗ್ ವಿರುದ್ಧ ಜಯಗಳಿಸಿದ್ದಾರೆ.

ಗಾಜಿಯಾಬಾದ್ (ಉತ್ತರ ಪ್ರದೇಶ)
ಭೂಸೇನೆಯ ನಿವೃತ್ತ ಮುಖ್ಯಸ್ಥ ಜ.ವಿ.ಕೆ. ಸಿಂಗ್ ಬಿಜೆಪಿಗೆ ಸೇರಿದ ಬಳಿಕ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರಿಂದ ಈ ಕ್ಷೇತ್ರ ಹೆಚ್ಚು ಪ್ರಚಾರ ಪಡೆಯಿತು. ಕಾಂಗ್ರೆಸ್‌ನ ರಾಜ್‌ಬಬ್ಬರ್ ಮತ್ತು ಆಮ್ ಆದ್ಮಿ ಪಕ್ಷದ ಶಾಜಿಯಾ ಇಲ್ಮಿ ಅವರು ಸಿಂಗ್ ಅವರಿಗೆ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದರು.  ಸಿಂಗ್, ಇಲ್ಲಿ ಜಯಗಳಿಸುವಲ್ಲಿಸಫಲರಾದರು.

 ಸುಲ್ತಾನ್‌ಪುರ (ಉತ್ತರ ಪ್ರದೇಶ)
ಕಳೆದ ಬಾರಿ ಫಿಲಿಬಿಟ್‌ನಿಂದ ಸ್ಪರ್ಧಿಸಿದ್ದ ಮನೇಕಾ ಗಾಂಧಿ ಪುತ್ರ ವರುಣ್ ಗಾಂಧಿ ಈ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವನ್ನು ಕಳೆದ ಬಾರಿ ಪ್ರತಿನಿಧಿಸಿದ್ದು ಮನೇಕಾ. ಬಿಜೆಪಿ ಅಲೆಯಿರುವ ಈ ಕ್ಷೇತ್ರದಿಂದ ವರುಣ್ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ ಎಂಬ ಲೆಕ್ಕಾಚಾರ ನಿಜವಾಗಿದೆ. ಕಾಂಗ್ರೆಸ್ ಈ ಕ್ಷೇತ್ರದಿಂದ ಅಮಿತಾ ಸಿಂಗ್‌ರನ್ನು ಕಣಕ್ಕಿಳಿಸಿತ್ತು.

ವಾರಾಣಸಿ (ಉತ್ತರ ಪ್ರದೇಶ)
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಆಪ್ ನಾಯಕ ಅರವಿಂದ ಕೇಜ್ರಿವಾಲ್ ನಡುವಿನ ಜಿದ್ದಾಜಿದ್ದಿ ಕದನದಿಂದಾಗಿ ಈ ಕ್ಷೇತ್ರ ಇಡೀ ದೇಶದ ಗಮನ ಸೆಳೆಯಿತು. ಇವರಿಬ್ಬರ ಜೊತೆ ಕಾಂಗ್ರೆಸ್ ನಾಯಕ ಅಜಯ್ ರಾಯ್ ಕೂಡಾ ಸ್ಪರ್ಧಿಸಿದ್ದರಿಂದ, ಇದು ತ್ರಿಕೋನ ಕದನ ಎನಿಸಿತ್ತು. ರಂಪಾಟಗಳ ನಡುನೆ ಇಲ್ಲಿ ಮೋದಿ....

ಚಾಂದ್‌ನಿಚೌಕ್ (ದೆಹಲಿ)
1957ರಿಂದಲೂ ಈ ಕ್ಷೇತ್ರ ಮಹತ್ವ ಪಡೆದಿದೆ.  2004ರಿಂದ ಕಾಂಗ್ರೆಸ್‌ನ ಕಪಿಲ್ ಸಿಬಲ್ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಈ ಬಾರಿಯೂ ಅವರು ಕಾಂಗ್ರೆಸ್ ಪರ ಕಣಕ್ಕಿಳಿದಿದ್ದರು. ಬಿಜೆಪಿಯ ಡಾ. ಹರ್ಷವರ್ಧನ್ ಇಲ್ಲಿ ಜಯ ಗಳಿಸಿದ್ದಾರೆ. ಆಪ್‌ನಿಂದ ಪತ್ರಕರ್ತ ಅಶುತೋಷ್ ಕೃಷ್ಣ ಕಣಕ್ಕೆ ಇಳಿದಿದ್ದೂ ಈ ಕ್ಷೇತ್ರದ ಪ್ರತಿಷ್ಠೆಗೆ ಮತ್ತೊಂದು ಕಾರಣ.  

 ನಾಗ್ಪುರ (ಮಹಾರಾಷ್ಟ್ರ)
ಬಿಜೆಪಿಯ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಸ್ಪರ್ಧಿಸುತ್ತಿದ್ದ ಕಾರಣಕ್ಕೆ ಈ ಕ್ಷೇತ್ರ ಕುತೂಹಲ ಮೂಡಿಸಿತ್ತು. ಗಡ್ಕರಿ ಅವರಿಗಿದು ಮೊದಲ ಲೋಕಸಭಾ ಚುನಾವಣೆ. ಅವರ ವಿರುದ್ಧ ಕಾಂಗ್ರೆಸ್‌ನಿಂದ ವಿಲಾಸ್ ಮುಟ್ಟೆಂವರ್, ಆಮ್ ಆದ್ಮಿ ಪಕ್ಷದಿಂದ ಅಂಜಲಿ ದಮಾಲಿಯಾ ಕಣಕ್ಕಿಳಿದಿದ್ದರು. ನಿಜವಾದ ಪೈಪೋಟಿ ಇದಿದ್ದು ವಿಲಾಸ್ ಮತ್ತು ಗಡ್ಕರಿ ನಡುವೆ.
ಕೊನೆಗೂ ಗಡ್ಕರಿ ಇಲ್ಲಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಜಂಗಡ (ಉತ್ತರ ಪ್ರದೇಶ)
ಉತ್ತರ ಪ್ರದೇಶದ ಮಾಜಿ ಸಿಎಂ, ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಇಲ್ಲಿ ಜಯಗಳಿಸಿದ್ದಾರೆ. ಮತ್ತೊಂದು ಕ್ಷೇತ್ರ ಮೈನ್‌ಪುರಿಯಲ್ಲೂ ಅವರು ವಿಜಯ ಸಾಧಿಸಿದ್ದಾರೆ.  ವಾರಾಣಸಿಯಲ್ಲಿ ಮೋದಿ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಯಾದವ ಮತಗಳನ್ನು ಹಿಡಿದಿಡಲು, ಮೋದಿ ಅಲೆಯನ್ನು ರಾಜ್ಯದ ಇತರೆ ಭಾಗಕ್ಕೆ ವ್ಯಾಪಿಸದಂತೆ ತಡೆಯಲು ಮುಲಾಯಂ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಬಿಜೆಪಿಯ ರಮಾಕಾಂತ್ ಯಾದವ್ ಸೋತಿದ್ದಾರೆ.

ಅಮೇಠಿ (ಉತ್ತರ ಪ್ರದೇಶ)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಕ್ಷೇತ್ರ ಇದು. ಬಿಜೆಪಿ ಪರವಾಗಿ, ಟಿವಿ ನಟಿ, ಸ್ಮೃತಿ ಇರಾನಿ ಸ್ಪರ್ಧಿಸಿದ್ದರು. ಇನ್ನು ಆಪ್‌ನಿಂದ ಕುಮಾರ್ ವಿಶ್ವಾಸ್ ಸ್ಪರ್ಧಿಸಿದ್ದರು. ಉತ್ತರಪ್ರದೇಶದ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದರೂ ರಾಹುಲ್, ಸ್ಮೃತಿ, ಕುಮಾರ್ ಅವರಿಂದ ತೀವ್ರ ಸ್ಪರ್ಧೆ ಎದುರಿಸಿದ್ದರು. ಆದರೂ, ರಾಹುಲ್ ಅವರೇ ಇಲ್ಲಿ ಪುನಃ ಜಯಗಳಿಸಿದ್ದಾರೆ.

ಅಮೃತಸರ (ಪಂಜಾಬ್)
ಕ್ರಿಕೆಟಿಗ, ಬಿಜೆಪಿ ಮುಖಂಡ ನವಜೋತ್ ಸಿಂಗ್ ಸಿಧು ಸತತ 3 ಬಾರಿ ಹ್ಯಾಟ್ರಿಕ್ ಗೆಲವು ಸಾಧಿಸಿದ ಕ್ಷೇತ್ರ ಇದು. ಈ ಬಾರಿ ವರಿಷ್ಠರ ಸೂಚನೆಯಂತೆ ಕ್ಷೇತ್ರವನ್ನು ತಮ್ಮ ರಾಜಕೀಯ ಗುರು ಅರುಣ್ ಜೇಟ್ಲಿ ಅವರಿಗೆ ಬಿಟ್ಟುಕೊಟ್ಟಿದ್ದರು. ಇದೇ ಮೊದಲ ಬಾರಿಗೆ ಸಂಸತ್ ಚುನಾವಣೆಗೆ ನಿಂತಿದ್ದ ಹಿರಿಯ ಮುಖಂಡ ಅರುಣ್ ಜೇಟ್ಲಿ, ಅವರು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಅವರ ವಿರುದ್ಧ ಸೋಲು ಕಂಡಿದ್ದಾರೆ.

ರಾಯ್‌ಬರೇಲಿ (ಉತ್ತರ ಪ್ರದೇಶ)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷೇತ್ರ. ಕಳೆದ ಬಾರಿ ಈ ಕ್ಷೇತ್ರದಿಂದ ಸೋನಿಯಾ 3.50 ಲಕ್ಷಕ್ಕಿಂತಲೂ ಹೆಚ್ಚು ಮತಗಳಿಂದ ಗೆಲವು ಸಾಧಿಸಿದ್ದರು. ಈ ಬಾರಿಯೂ ಸೋನಿಯಾ ಭಾರಿ ಅಂತರದ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಇಲ್ಲಿ ಸೋನಿಯಾಗೆ ಈ ಬಾರಿಯೂ ಸರಿಯಾದ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಬಿಜೆಪಿ ಕೊನೇ ಕ್ಷಣದಲ್ಲಿ ಅಜಯ್ ಅಗರ್‌ವಾಲ್‌ರನ್ನು ಕಣಕ್ಕಿಳಿಸಿದ್ದರೂ ಇದರಿಂದ ಸೋನಿಯಾ ಗೆಲುವಿಗೆ ಬ್ರೇಕ್ ಹಾಕಲು ಆಗಲಿಲ್ಲ.

ನಾಂದೇಡ್ (ಮಹಾರಾಷ್ಟ್ರ)
ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ (ಕಾಂಗ್ರೆಸ್) ಸ್ಪರ್ಧಿಸುತ್ತಿರುವ ಕ್ಷೇತ್ರ. ಆದರ್ಶ ಹೌಸಿಂಗ್ ಹಗರಣದಲ್ಲಿ ಕಳಂಕಿತ ಎನ್ನುವ ಆರೋಪ ಇದ್ದರೂ ಚವಾಣ್ ಗೆಲ್ಲುವ ಸಾಮರ್ಥ್ಯವನ್ನು ಆಧರಿಸಿ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತ್ತು. ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿದ್ದರೂ ಚವಾಣ್‌ರಿಗೆ ನಿಜವಾದ ಸ್ಪರ್ಧೆ ಬಿಜೆಪಿಯ ಡಿ.ಬಿ. ಪಾಟೀಲ್‌ರಿಂದ ಎದುರಾಗಿತ್ತು. ನಿರೀಕ್ಷೆಯಂತೆ, ಚವಾಣ್ ಅವರೇ ಜಯ ಗಳಿಸಿದ್ದಾರೆ.

ನೀಲಗಿರಿ (ತಮಿಳುನಾಡು)
ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲವು ಸಾಧಿಸಿದ್ದ ಡಿಎಂಕೆಯ ಎ. ರಾಜಾ ಈ ಬಾರಿ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಿಜೆಪಿಯ ಗುರುಮೂರ್ತಿ ನಾಮಪತ್ರ ವಜಾಗೊಂಡಿರುವುದು ರಾಜಾ ಅವರ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿತ್ತು. ಎಐಎಡಿಎಂಕೆಯಿಂದ ಸಿ. ಗೋಪಾಲಕೃಷ್ಣನ್, ಕಾಂಗ್ರೆಸ್‌ನಿಂದ ಪಿ.ಗಾಂಧಿ ಸ್ಪರ್ಧಿಸಿದ್ದರು. ಅಂತಿಮವಾಗಿ, ಗೋಪಾಲಕೃಷ್ಣನ್ ಅವರಿಗೆ 'ಜಯ' ಲಭಿಸಿದೆ.

ಸಾರನ್ (ಬಿಹಾರ)
ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ ಹಾಗೂ ಬಿಜೆಪಿಯಿಂದ ರಾಜೀವ್ ಪ್ರತಾಪ್ ರೂಡಿ ಕ್ಷೇತ್ರದಲ್ಲಿ ಪ್ರಮುಖ ಸ್ಪರ್ಧಿಗಳಾಗಿದ್ದರು. 2009ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಾಲೂ, ರೂಡಿ ಅವರನ್ನು 50 ಸಾವಿರ ಮತಗಳಿಂದ ಮಣಿಸಿದ್ದರು. ರೂಡಿ ಅವರು ಜಯಗಳಿಸುವ ಮೂಲಕ, ಆರ್‌ಜೆಡಿ ಜಯದ ಮುನ್ನಡೆಗೆ ಬ್ರೇಕ್ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement