ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಹಲೋ 'ಪ್ರೈಂ' ಮಿಸ್ಟರ್ ಹೌ ಡು ಯು ಡೂ...

Rashmi Kasaragodu
Updated On : 18 May 2014, 1:38 am

ನವದೆಹಲಿ: ಶಕ್ತನಾದರೆ ನೆಂಟರೆಲ್ಲಾ ಹಿತರು, ಅಶಕ್ತನಾದರೆ ನೋಡಲವರೇ ವೈರಿಗಳು ಎಂಬ ದಾಸವಾಣಿ ನೆನಪಿಸುವಂತೆ, ಅಮೆರಿಕ ನಡೆದುಕೊಳ್ಳುತ್ತಿದೆ. ಭಾರತದಲ್ಲಿ ನರೇಂದ್ರ ಮೇದಿ ತಮ್ಮ ಹಾಗೂ ತಮ್ಮ ಪಕ್ಷದ ಅಭೂತಪೂರ್ವ ಗೆಲವಿನೊಂದಿಗೆ ಪ್ರಧಾನಿಪಟ್ಟದ ಸನಿಹಕ್ಕೆ ಬಂದು ನಿಂತಿದ್ದಾರೆ. ಮೋದಿ ಕಡೆಗೆ ತನ್ನೆರಡೂ ತೋಳುಗಳನ್ನು ಚಾಚಿರುವ ಅದು, ಬಾಹುಬಂಧನಕ್ಕಾಗಿ ಹಾತೊರೆಯುತ್ತಿದೆ.
ಅಮೆರಿಕವಷ್ಟೇ ಅಲ್ಲ, ಮೋದಿ ಅಂದ್ರೆ ಅಷ್ಟಕ್ಕಷ್ಟೇ ಅನ್ನುತ್ತಿದ್ದ ಬ್ರಿಟನ್, ಪಾಕಿಸ್ತಾನ ಸೇರಿದಂತೆ ಬಾಂಗ್ಲಾದೇಶ, ಆಫ್ಘಾನಿಸ್ತಾನ, ಶ್ರೀಲಂಕಾ, ಸಿಂಗಾಪುರ, ನೇಪಾಳ, ಇಸ್ರೇಲ್ ದೇಶಗಳು ಮೋದಿ ಅವರಿಗೆ ಶುಭಾಷಯ ಹೇಳುತ್ತಾ, 'ನಮ್ಮ ದೇಶಕ್ಕೊಮ್ಮೆ ಬನ್ನಿ' ಅಂತ ಆಹ್ವಾನ ನೀಡಿವೆ. ಆದರೆ, ಮೋದಿ ಮಾತ್ರ ನಗುಮೊಗದಿಂದ ಈ ಶುಭಹಾರೈಕೆಗಳನ್ನು ಸ್ವಾಗತಿಸಿದ್ದಾರೆ. ಹತ್ತು ವರ್ಷಗಳ ಹಿಂದಿನ ಮಾತು. 2004ರ ಗುಜರಾತ್ ದಂಗೆ ಬಳಿಕ ಸಿಟ್ಟಿಗೆದ್ದಿದ್ದ ಅಮೆರಿಕ, ಮೋದಿಯನ್ನು ಅಕ್ಷರಶಃ ದ್ವೇಷಿಸತೊಡಿಗಿತ್ತು. ಅಂದಿನಿಂದ ಇತ್ತೀಚಿನವರೆಗೂ ಅದು ಮೋದಿಗೆ ತನ್ನ ದೇಶಕ್ಕೆ ಕಾಲಿಡಲು ಅನುಮತಿ ನೀಡುವುದಿಲ್ಲ ಎಂಬ ನಿಲುವನ್ನೇ ಹೊಂದಿತ್ತು.
ಆದರೆ, ಯಾವಾಗ ಬಿಜೆಪಿ ಪಕ್ಷ 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿತೋ, ಅಲ್ಲಿಂದ ಅಮೆರಿಕಕ್ಕೂ ಕುತೂಹಲ ಕೆರಳಿತು. ಚುನಾವಣೆ ಹತ್ತಿರವಾಗುತ್ತಿದ್ದಂತೆ, ಭಾರತದ ಉದ್ದಗಲಕ್ಕೂ ಹಬ್ಬುತ್ತಿದ್ದ ಮೋದಿ ಮೇನಿಯಾವನ್ನು ಸೂಕ್ಷ್ಮವಾಗಿ ಗಮನಿಸಿದ ಅಮೆರಿಕಕ್ಕೆ ಅದೇನೆನ್ನಿಸಿತೋ ಏನೋ, ಚುನಾವಣೆಗೂ ಮುನ್ನ ತನ್ನ ರಾಯಭಾರಿಯೊಬ್ಬರನ್ನು ಮೋದಿ ಅವರಲ್ಲಿಗೆ ಕಳುಹಿಸಿ ವೀಸಾ ನೀಡುವ ಕುರಿತಾಗಿ ಮರುಚಿಂತನೆ ನಡೆಸಲು ಪ್ರಯತ್ನಿಸಿತು. ಅಷ್ಟಕ್ಕೂ ಅಮೆರಿಕಕ್ಕೆ ಧುತ್ತೆಂದು ಇಂಥ ಆಲೋಚನೆ ಹೊಳೆದಿದ್ದಾದರೂ ಹೇಗೆ ಮತ್ತು ಏಕೆ? ಇದಕ್ಕೆ ಉತ್ತರ, ಇತ್ತೀಚೆಗಷ್ಟೇ ದೇವಯಾನಿ ಪ್ರಕರಣದಲ್ಲಿ ಭಾರತದೊಂದಿಗೆ ಮುಖ ಕಿವುಚಿಕೊಂಡಿರುವ ಅಮೆರಿಕಕ್ಕೆ, ಈಗ ತನ್ನ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭಿಸಲು ಸುವರ್ಣಾವಕಾಶ ಬಂದಿದೆ. ಮೋದಿಗೆ ವೀಸಾ ನೀಡಿದರೆ, ಗುಜರಾತ್ ಗಲಭೆಯಲ್ಲಿ ಹತ್ಯೆಯಾದವರಿಗೆ ಅಪಮಾನ ಮಾಡಿದಂತೆ ಎನ್ನುವ ಮಾತುಗಳ ನಡುವೆಯೂ, 'ಅದು ಅವತ್ತಿನ ಕಥೆ. ಇದು (ವೀಸಾ ನೀಡುವಿಕೆ) ಇವತ್ತಿನ ಕಥೆ' ಎನ್ನುತ್ತಿದೆ ಅಮೆರಿಕ.  ಹೀಗೆ, ಮೋದಿ ಸ್ತುತಿ ಅಮೆರಿಕಕ್ಕಷ್ಟೇ ಸೀಮಿತವಾಗಿಲ್ಲ. ಅದು, ವಿಶ್ವವ್ಯಾಪಿಯಾಗಿದೆ. ಮೋದಿ ಹೆಸರು ಕೇಳಿದರೆ ಬುಸುಗುಡುತ್ತಿದ್ದ, 'ಮೋದಿ ಪಿಎಂ ಆಗಿಬಿಟ್ರೆ ಏನು ಗತಿ ಕಾದಿದೆಯೋ...?' ಅಂತೆಲ್ಲಾ ಒಳಗೊಳಗೇ ದುಗುಡ ತುಂಬಿಕೊಂಡಿದ್ದ ಪಾಕಿಸ್ತಾನ ಸಹ ಮೋದಿ ಅವರಿಗೆ ಶುಭಾಷಯ ಹೇಳಿ, ತನ್ನ ದೇಶಕ್ಕೆ ಆಹ್ವಾನ ನೀಡಿದೆ.
ಕಾಲದ ಮಹಿಮೆ ಅಂದ್ರೆ ಇದೇ...? ಬರೀ ಹತ್ತು ವರ್ಷಗಳ ಹಿಂದಿದ್ದ ಚಿತ್ರಣ ಇಂದು ಸಂಪೂರ್ಣವಾಗಿ ಬದಲಾಗಿದೆ.... ಅಲ್ಲಲ್ಲ... ತಿರುಗಾಮುರುಗ ಆಗಿದೆ. ಮೋದಿಗೆ ಎಲ್ಲೆಲ್ಲೂ ಜಯಕಾರ ಸಲ್ಲುತ್ತಿದೆ. ವಿಶ್ವಮಟ್ಟದಲ್ಲಿ ಭಾರತ ಮತ್ತೆ ವಿಜಂೃಭಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.


ಭಾರತ- ಬ್ರಿಟನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮೋದಿ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆ.
ಟಿ ಡೇವಿಡ್ ಕೆಮೆರೂನ್,
ಬ್ರಿಟನ್ ಪ್ರಧಾನಿ


ಈ ಅಭೂತಪೂರ್ವ ಜಯ, ನಿಮ್ಮ ವ್ಯಕ್ತಿತ್ವ ಹಾಗೂ ದೂರದರ್ಶಿತ್ವಕ್ಕೆ ಸಿಕ್ಕ ಪ್ರತ್ಯಕ್ಷ ಸಾಕ್ಷ್ಯ.
ಟಿ  ಶೇಕ್ ಹಸೀನಾ,
ಬಾಂಗ್ಲಾ ಪ್ರಧಾನಿ


'ಚಡ್ಡಿ' ದೋಸ್ತ್
ಮೋದಿ ಅವರು ಇಂದು ಈ ಮಟ್ಟಕ್ಕೆ ತಲುಪಲು ಪಕ್ಷದ ಒಳಗಿಂದಷ್ಟೇ ಅಲ್ಲ, ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್‌ನಲ್ಲೂ ಹಲವು ಮುಖಂಡರು ನೆರವು ನೀಡಿದ್ದಾರೆ. ಆ ಮುಖಂಡರ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.


ಸುರೇಶ್ ಭಯ್ಯಾಜಿ ಜೋಶಿ
ಆರೆಸ್ಸೆಸ್‌ನಲ್ಲಿ ನಂ.2 ಮುಖಂಡ. ಮಹಾರಾಷ್ಟ್ರ ಮೂಲದ ಈ ಬ್ರಾಹ್ಮಣ ಮುಖಂಡ ಪ್ರಧಾನಿ ಹುದ್ದೆಗೆ ಆರೆಸ್ಸೆಸ್‌ನ ಬೆಂಬಲ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು.


ಕೃಷ್ಣಾ ಗೋಪಾಲ್
ಆರೆಸ್ಸೆಸ್‌ನಲ್ಲಿ ಮೋದಿ ಪರವಾಗಿ ಕೆಲಸ ಮಾಡುವ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡವರು. ಮೋದಿ ವಿರುದ್ಧ ಆರೆಸ್ಸೆಸ್‌ನೊಳಗೆ ಹೆಚ್ಚಿನ ಒಲವು ಮೂಡುವಂತೆ ನೋಡಿಕೊಂಡವರು.


ದತ್ತಾತ್ರೇಯ ಹೊಸಬಾಳೆ
ಕರ್ನಾಟಕ ಮೂಲದ ತಂತ್ರಜ್ಞಾನ ಪ್ರೇಮಿ ಪ್ರಚಾರಕ. ಮೋದಿ ಅವರಿಗೆ ಆರೆಸ್ಸೆಸ್‌ನ ಹೊರಗಿನಿಂದಲೂ ಬೆಂಬಲ ವ್ಯಕ್ತವಾಗುವಂತೆ ನೋಡಿಕೊಂಡವರು.



ವಿ. ಸತೀಶ್
ಗುಜರಾತ್‌ನಲ್ಲಿ ಸಂಘದ ಚಟುವಟಿಕೆಗಳ ಮೇಲ್ವಿಚಾರಕ. ಮೋದಿ ಮತ್ತು ಆರೆಸ್ಸೆಸ್ ನಡುವೆ ಸೃಷ್ಟಿಯಾಗಿದ್ದ ಗೋಡೆಯನ್ನು ಕೆಡವಿದವರು.

ಸುರೇಶ್ ಸೋನಿ
ಬಿಜೆಪಿ ಜತೆಗೆ ಸಮನ್ವಯಕಾರನಾಗಿ ಕೆಲಸ ಮಾಡುವ ಹೊಣೆ ಹೊತ್ತವರು ಸೋನಿ. ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡುವಾಗ ಬಿಜೆಪಿಯ ಹಿರಿಯ ಮುಖಂಡರಲ್ಲಿ ಎದ್ದಿದ್ದ ಅಸಮಾಧಾನಕ್ಕೆ ಕಡಿವಾಣ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಇವರ ವಿರುದ್ಧ ಅನೇಕ ಬಿಜೆಪಿ ಹಿರಿಯ ಮುಖಂಡರು ಮೋಹನ್ ಭಾಗವತ್ ಅವರಿಗೆ ದೂರು ನೀಡಿದ್ದೂ ಇದೆ. ಇವರನ್ನು ಸಮನ್ವಯಕಾರನ ಹುದ್ದೆಯಿಂದ ಕಿತ್ತುಹಾಕುವಂತೆ ಸೂಚಿಸಿದ್ದೂ ಇದೆ.



ಬಗಯ್ಯ ಪ್ರಚಾರಕ
ಆಂಧ್ರ ಮೂಲದ ಈ ಪ್ರಚಾರಕ ಕೆಲವು ಬೆಳವಣಿಗೆಗಳಿಗೆ ಸೈದ್ಧಾಂತಿಕ ಬೆಂಬಲ ನೀಡಿದವರು.



ಬಜರಂಗಿಲಾಲ್ ಗುಪ್ತಾ
ಪೋಷಕ
ಮೋದಿಯ ಆತ್ಮೀಯರು. ದೆಹಲಿ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಮಾಡಿದವರು.

ಮೋಹನ್ ಭಾಗವತ್ ಆರೆಸ್ಸೆಸ್ ಮುಖ್ಯಸ್ಥ
ಮೋದಿ ಅವರು ಭಾಗವತ್ ಅವರ ತಂದೆ ಮಧುಕರ್ ರಾವ್ ಅವರನ್ನು ತಮ್ಮ ಮೆಂಟರ್ ಎಂದೇ ಪರಿಗಣಿಸಿದವರು. ಸಂಜಯ್ ಜೋಶಿ ವಿಚಾರಕ್ಕೆ ಸಂಬಂಧಿಸಿ ಮೋದಿ ಮತ್ತು ಭಾಗವತ್ ಅವರ ಸಂಬಂಧ ಹಳಸಿತ್ತು. 2012ರಲ್ಲಿ ಭಾಗವತ್ ಮತ್ತು ಮೋದಿ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿದವು. ಆ ಬಳಿಕ ಭಾಗವತ್ ಅವರೇ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಮೋದಿ ಅವರೇ ಯೋಗ್ಯ ಆಯ್ಕೆ ಎಂದು ಬಿಂಬಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement