ಹೈದರಾಬಾದ್ನಂತೆ ಸೀಮಾಂಧ್ರ ರಾಜಧಾನಿ ಅಭಿವೃದ್ಧಿ: ನಾಯ್ಡು
ಹೈದರಾಬಾದ್: ತಾವೇ ಸೀಮಾಂಧ್ರದ ಮೊದಲ ಮುಖ್ಯಮಂತ್ರಿ ಎಂದಿರುವ ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ಹೈದರಾಬಾದ್ ಮಾದರಿಯಲ್ಲೇ ಹೊಸ ರಾಜ್ಯದ ರಾಜಧಾನಿಯನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ. 'ಹೈದರಾಬಾದ್ ಅನ್ನು ಅಭಿವೃದ್ಧಿಪಡಿಸಿದ್ದೇನೆ, ಸೈಬರಾಬಾದ್ ಅನ್ನೂ ಅಭಿವೃದ್ಧಿಪಡಿಸಿದ್ದೇನೆ. ಅದು ಜನರಿಗೂ ಗೊತ್ತು. ಸೀಮಾಂಧ್ರದ ರಾಜಧಾನಿ ಯಾವುದಾಗಬೇಕು ಎನ್ನುವ ವಿಚಾರದಲ್ಲಿ ರಾಜ್ಯದ ಜನರ ಅಭಿಪ್ರಾಯ ಪಡೆದು ಮುಂದುವರಿಯುವೆ ಮತ್ತು ಹೈದರಾಬಾದ್ ಮಾದರಿಯಲ್ಲೇ ಅದನ್ನು ಅಭಿವೃದ್ಧಿಪಡಿಸುವೆ' ಎಂದು ನಾಯ್ಡು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉಭಯ ರಾಜ್ಯಗಳ ಅಭಿವೃದ್ಧಿಗೂ ಶ್ರಮಿಸುವುದಾಗಿ ಹೇಳಿಕೊಂಡರು. ಮೋದಿ ಜತೆಗಿನ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ, 'ನಮ್ಮದು ಸಮರ್ಥ ಜೋಡಿ. ನನ್ನಂತೆಯೇ ಮೋದಿ ಕೂಡ ಅಭಿವೃದ್ಧಿಗಾಗಿ ತುಡಿಯುವ ಮನುಷ್ಯ. ನಮ್ಮಿಬ್ಬರ ಆದ್ಯತೆಯೂ ಅಭಿವೃದ್ಧಿ, ರಾಜಕಾರಣ ನಂತರ' ಎಂದು ಹೇಳಿದರು.