ಮರ್ಯಾದಾ ಹತ್ಯೆ (ಸಂಗ್ರಹ ಚಿತ್ರ) 
ರಾಜ್ಯ

ಮರ್ಯಾದಾ ಹತ್ಯೆ ತಡೆಗೆ ಕಠಿಣ ಕಾನೂನು: 'ಇವ ನಮ್ಮವ ಇವ ನಮ್ಮವ' ಮಸೂದೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

'ಇವ ನಮ್ಮವ ಇವ ನಮ್ಮವ' ಮಸೂದೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.

ಬೆಂಗಳೂರು: ಮರ್ಯಾದಾ ಹತ್ಯೆಗಳನ್ನು ತಡೆಯಲು ಮತ್ತು ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಹೊಸ ಮಸೂದೆಯೊಂದಕ್ಕೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

'ಇವ ನಮ್ಮವ ಇವ ನಮ್ಮವ' ಮಸೂದೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.

ಈ ಮಸೂದೆ ಮೂಲಕ ವ್ಯಕ್ತಿಗಳಿಗೆ ತಮ್ಮ ಇಚ್ಛೆಯಂತೆ ವಿವಾಹವಾಗುವ ಸ್ವಾತಂತ್ರ್ಯವನ್ನು ಖಾತ್ರಿ ಪಡಿಸುವುದು, ಜಾತಿ ಆಧಾರಿತ ಅಪರಾಧಗಳನ್ನು ತಡೆಯುವುದು, ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಪ್ಪಿಸುವುದು ಮತ್ತು ಅಂತರ್ಜಾತಿ ವಿವಾಹಗಳಿಗೆ ಗೌರವ ನೀಡುವ ವ್ಯವಸ್ಥೆ ರೂಪಿಸುವ ಉದ್ದೇಶವನ್ನು ಹೊಂದಲಾಗಿದೆ. ಜೊತೆಗೆ ಅಂತರ್ಜಾತಿ ವಿವಾಹಗಳನ್ನು ನೆರವೇರಿಸಲು 'ಇವ ನಮ್ಮವ ಇವ ನಮ್ಮವ ವೇದಿಕೆ' ಸ್ಥಾಪಿಸಲು ಮಸೂದೆಯಲ್ಲಿ ನಿಯಮ ರೂಪಿಸಲಾಗಿದೆ.

ರಾಜ್ಯದಲ್ಲಿ ಇನ್ನೂ ಜಾತಿ ಆಧಾರಿತ ಭೇದಭಾವ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಮುಂದುವರಿದಿದೆ. ಅಂತರ್ಜಾತಿ ವಿವಾಹ ಮಾಡಿಕೊಂಡವರ ಮೇಲೆ ಹಲ್ಲೆ, ಬೆದರಿಕೆ, ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ, ಕೊಲೆ, ಕಿರುಕುಳ ಮತ್ತು ಮಾನಸಿಕ ಹಿಂಸೆ ಪ್ರಕರಣಗಳು ಮರ್ಯಾದೆಯ ಹೆಸರಿನಲ್ಲಿ ವರದಿಯಾಗುತ್ತಿವೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಈ ರೀತಿಯ ಕೃತ್ಯಗಳು ಭಾರತದ ಸಂವಿಧಾನದ ಅನುಚ್ಛೇದ 14, 15, 19 ಮತ್ತು 21 ನೀಡುವ ಸಮಾನತೆ, ಸ್ವಾತಂತ್ರ್ಯ, ಮಾನವ ಗೌರವ ಮತ್ತು ವೈಯಕ್ತಿಕ ಸ್ವಾಯತ್ತತೆಗೆ ವಿರುದ್ಧವಾಗಿವೆ ಎಂದು ಮಸೂದೆ ವಿವರಿಸುತ್ತದೆ.

ಪ್ರಸ್ತುತ ಅನ್ವಯವಾಗುವ ಭಾರತೀಯ ನ್ಯಾಯ ಸಂಹಿತಾ, 2023 ಮತ್ತು ಇತರ ಸಾಮಾನ್ಯ ಕಾನೂನುಗಳು ಕೊಲೆ, ಹಲ್ಲೆ ಅಥವಾ ಕ್ರಿಮಿನಲ್ ಬೆದರಿಕೆಯಂತಹ ಅಪರಾಧಗಳಿಗೆ ಶಿಕ್ಷೆಯನ್ನು ಒದಗಿಸುತ್ತವೆಯಾದರೂ, ಜಾತಿ ಆಧಾರಿತ ಸಾಮಾಜಿಕ ಕಲ್ಪನೆಯಿಂದ ಪ್ರೇರಿತವಾದ ಅಪರಾಧಗಳನ್ನು ಸಮಗ್ರವಾಗಿ ಪರಿಹರಿಸಲು ಅವು ಅಸಮರ್ಪಕವಾಗಿವೆ.

ವಿಶೇಷವಾದ ಕಾನೂನು ಇಲ್ಲದ ಕಾರಣ ಅಪರಾಧಿಗಳು ಕಠಿಣ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದು, ಪೀಡಿತರು ಅಥವಾ ಬದುಕುಳಿದವರು ಸಮರ್ಪಕ ಪರಿಹಾರ ಮತ್ತು ಪುನರ್ವಸತಿಯನ್ನು ಪಡೆಯುವುದರಲ್ಲಿ ವಿಫಲರಾಗುತ್ತಿದ್ದಾರೆ. ಈ ಉದ್ದೇಶಿದಿಂದ ಮಸೂದೆ ತರಲಾಗುತ್ತಿದೆ.

ಈ ಹೊಸ ಮಸೂದೆ ಪ್ರಕಾರ, ಪ್ರತಿ ವ್ಯಕ್ತಿಗೆ ತನ್ನ ಆಯ್ಕೆಯ ವ್ಯಕ್ತಿಯ ಜೊತೆ ವಿವಾಹ ಆಗುವ ಸ್ವಾತಂತ್ರ್ಯ ಇರಲಿದೆ.‌ ಕುಟುಂಬ ಸದಸ್ಯರು, ಪೋಷಕರಿಂದ ಯಾವುದೇ ಅಡೆತಡೆ ಇಲ್ಲದೆ ವಿವಾಹವಾಗುವ ಹಕ್ಕು ಹೊಂದಿರಲಿದೆ. ವಯಸ್ಕ ಗಂಡು ಹೆಣ್ಣು ಒಪ್ಪಿ ಮದುವೆಯಾಗುವುದಾದರೆ ಅದಕ್ಕೆ ಯಾವುದೇ ವ್ಯಕ್ತಿಯ, ಪೋಷಕರ, ಕುಟುಂಬ ಸದಸ್ಯರ ಅನುಮತಿ ಬೇಕಾಗಿಲ್ಲ. ಇದಕ್ಕೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ.

ಯಾವುದೇ ಜಾತಿಯ ಹೆಣ್ಣು, ಗಂಡು ಮದುವೆಯಾಗಲು ಬಯಸಿದಲ್ಲಿ ಆ ಇಬ್ಬರು ವ್ಯಕ್ತಿಗಳು ತಮ್ಮ ವಯಸ್ಸು, ಒಟ್ಟಾಗಿರುವ ಇಚ್ಛೆ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್​​ಗೆ ಮೌಖಿಕ ಅಥವಾ ಲಿಖಿತವಾಗಿ ಡಿಕ್ಲರೇಷನ್ ಕೊಡಬೇಕು. ಆ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ರವಾನಿಸಬೇಕು. ಅಂಥ ಗಂಡು ಹೆಣ್ಣುಗಳ ಮೇಲೆ ಪೊಲೀಸರು, ಕುಟುಂಬಸ್ಥರು, ಪೋಷಕರು, ಯಾವುದೇ ಅಧಿಕಾರಿಗಳು, ಮೂರನೇ ವ್ಯಕ್ತಿ ಯಾವುದೇ ಕ್ರಮ ಕೈಗೊಳ್ಳುವ ಹಾಗಿಲ್ಲ. ಈ ಡಿಕ್ಲರೇಷನ್ ಪೂರ್ಷಷರತ್ತು ಆಗಿರುವುದಿಲ್ಲ.

ಜಾತಿ, ಸಂಸ್ಕೃತಿ, ಸಂಪ್ರದಾಯ, ಗೌರವದಂತಹ ಹೆಸರಲ್ಲಿ ಯಾವುದೇ ವ್ಯಕ್ತಿ ಕೃತ್ಯಗಳನ್ನು ನಡೆಸುವ ಹಾಗಿಲ್ಲ. ಯುವಕರ ವಿರುದ್ಧ ಗೌರವ ಹತ್ಯೆಗಳಂತಹ ಅಪರಾಧಗಳು ಈ ಕಾನೂನಿನಲ್ಲಿ ನಿಷೇಧವಾಗಿದೆ. ಈ ಸಂಬಂಧ ವಿವಾಹಿತ ಅಥವ ಪ್ರೇಮಿಗಳಿಗೆ ಸಂಬಂಧಿಕರು, ಸ್ನೇಹಿತರ ಕೊಲೆ, ದೈಹಿಕ‌ ಹಲ್ಲೆ ಮಾಡುವುದು ಮರ್ಯಾದಾ ಅಪರಾಧ ಎಂದು ಪರಿಗಣಿಸಲಾಗುವುದು. ಅಂತರ ಜಾತಿ ವಿವಾಹವಾಗುವ ಅಥವ ವಿವಾಹಿತರಿಗೆ ಕಿರುಕುಳ, ಬೇರ್ಪಡಿಸಲು ಯತ್ನಿಸುವುದು ಅಪರಾಧವಾಗಿರಲಿದೆ.

ಜೋಡಿಗಳು ಅಥವಾ ಅವರಿಗೆ ಸಂಬಂಧಿಸಿದ ವ್ಯಕ್ತಿಗಳ ಅಪಹರಣ ಮಾಡುವುದು, ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ಹಾಕುವುದು, ಬಲವಂತವಾಗಿ ಜೋಡಿಗಳು, ಅವರ ಕುಟುಂಬಸ್ಥರು, ಸಂಬಂಧಿಕರನ್ನು ಗ್ರಾಮ, ಮನೆ, ಪ್ರದೇಶಗಳಿಂದ ತೆರವು, ಸ್ಥಳಾಂತರ ಮಾಡುವುದು ಅಪರಾಧವಾಗಿರಲಿದೆ. ಅಂತಹ ಜೋಡಿಗಳ ವಿರುದ್ಧ ತಿಥಿ, ಅಂತ್ಯಕ್ರಿಯೆ ಮಾಡುವಂತಹ ಕೃತ್ಯಗಳು, ಮದುವೆಯಾದ ಜೋಡಿಗಳನ್ನು ಅಣ್ಣ, ತಂಗಿ ಎಂದು ಬಲವಂತವಾಗಿ ಘೋಷಿಸುವುದು, ಒತ್ತಡ ಹಾಕುವುದು, ಅವರ ಆಸ್ತಿ ಹಕ್ಕುಗಳಲ್ಲಿ ಮಧ್ಯ ಪ್ರವೇಶ ಮಾಡುವುದು, ಜೋಡಿಯನ್ನು ಮನೆಯಲ್ಲಿ ಬಂಧಿ ಮಾಡುವುದು, ಜೋಡಿಗಳನ್ನು ಕೆಲಸದಿಂದ ತೆಗೆದು ಹಾಕಿಸುವುದು, ದ್ವೇಷ ಹರಡುವುದು ಅಥವಾ ಮಾನಹಾನಿ ಮಾಡುವುದನ್ನು ಅಪರಾಧವಾಗಿ ಪರಿಗಣಿಸಲಾಗುವುದು.

ಜೋಡಿಗಳ ಮರ್ಯಾದೆ ಹತ್ಯೆ ಮಾಡಿದರೆ ಕನಿಷ್ಠ ಐದು ವರ್ಷದ ಶಿಕ್ಷೆಗೊಳಗಾಗಲಿದ್ದಾರೆ. ಗಂಭೀರವಾಗಿ ಹಲ್ಲೆ, ಗಾಯ ಮಾಡಿದರೆ ಕನಿಷ್ಠ 3 ವರ್ಷ ಜೈಲು ಹಾಗೂ ಮೂರು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಸಣ್ಣಪುಟ್ಟ ಹಲ್ಲೆ ಮಾಡಿದರೆ ಕನಿಷ್ಠ ಎರಡು ವರ್ಷಗಳ ಕಠಿಣ ಸೆರೆಮನೆವಾಸ ಹಾಗೂ ಎರಡು ಲಕ್ಷ ರೂ.ವರೆಗಿನ ದಂಡ ವಿಧಿಸಬಹುದಾಗಿದೆ.

ಯಾವುದೇ ವ್ಯಕ್ತಿ ಜೋಡಿಗಳು ಮತ್ತು ಅವರ ಬೆಂಬಲಿಗರು, ಸ್ನೇಹಿತರು, ಸಂಬಂಧಿಕರಿಗೆ ಬೆದರಿಕೆ ಹಾಕಿದರೆ 3 ವರ್ಷದಿಂದ 5 ವರ್ಷದವರೆಗೆ ಸೆರೆಮನೆವಾಸ ಹಾಗೂ 2 ಲಕ್ಷದ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಈ ವಿಧೇಯಕದಲ್ಲಿ ಪಿತೂರಿ, ಸಾಕ್ಷ್ಯ ನಾಶ, ನೇರ ಅಥವಾ ಪರೋಕ್ಷವಾಗಿ ಅಪರಾಧ ಕೃತ್ಯಸಲ್ಲಿ ಭಾಗಿಯಾದರೆ ಶಿಕ್ಷೆಗೆ ಗುರಿಯಾಗಲಿದ್ದಾನೆ. ಹೊಸ ಕಾನೂನಿನಡಿ ಈ ಅಪರಾಧಗಳು ಜಾಮೀನು ರಹಿತ ಪ್ರಕರಣಗಳಾಗಿರಲಿವೆ.

ಜೀವ ಬೆದರಿಕೆ ಇರುವ ದಂಪತಿಗೆ ಪೊಲೀಸ್‌ ರಕ್ಷಣೆ, ಸುರಕ್ಷಿತ ಆಶ್ರಯ ನೀಡಲಾಗುವುದು. ವಿವಾಹದ ಆಮಿಷವೊಡ್ಡಿ, ಜಾತಿಯ ಕಾರಣ ನೀಡಿ ವಂಚಿಸಿದರೆ ಅದನ್ನು 'ಅತ್ಯಾಚಾರ' ಎಂದು ಪರಿಗಣಿಸಲಾಗುವುದು. ಅಂತರ್ಜಾತಿ/ಪ್ರೇಮ ವಿವಾಹಗಳನ್ನು ವಿರೋಧಿಸಿ ಪಂಚಾಯಿತಿ ಅಥವಾ ಗುಂಪು ಸೇರುವುದು ನಿಷಿದ್ಧವಾಗಿದೆ.

ಮದುವೆಯ ಭರವಸೆ ನೀಡಿ, ಯುವತಿ ಜೊತೆ ಲೈಂಗಿಕ ಸಂಪರ್ಕ ನಡೆಸಿ, ಬಳಿಕ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಅಂತಹ ಪ್ರಕರಣವನ್ನು ಅತ್ಯಾಚಾರ ಎಂದು ಪರಿಗಣಿಸಲು ವಿಧೇಯಕದಲ್ಲಿ ಕಾನೂನು ರೂಪಿಸಲಾಗಿದೆ. ಮನೆಯವರ ಒತ್ತಡ ಅಥವಾ ಇತರೆ ಜಾತಿ ಆಧಾರಿತ ಕಾರಣ ಸೇರಿ ಜಾತಿ ಆಧಾರಿತ ಯಾವುದೇ ನೆಪ ನೀಡಿ ಮದುವೆ ನಿರಾಕರಿಸಿದರೂ 5 ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ ಜೀವಾವಧಿವರೆಗೆ ವಿಸ್ತರಿಸಬಹುದಾದ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಜಾತಿ ಕಾರಣಕ್ಕಾಗಿ ಮದುವೆ ನಿರಾಕರಿಸುತ್ತಿಲ್ಲ ಎನ್ನುವುದಾದರೆ ಅದನ್ನು ಸಾಬೀತುಪಡಿಸಬೇಕು. ಇನ್ನು ಯುವತಿಯು ಬೇರೆ ಒತ್ತಡಗಳಿಗೆ ಮದುವೆ ನಿರಾಕರಿಸಿದರೆ ಈ ನಿಯಮ ಅನ್ವಯ ಆಗುವುದಿಲ್ಲ.

ಸಚಿವ ಸಂಪುಟದ ಇತರ ಪ್ರಮುಖ ನಿರ್ಧಾರಗಳು

  • ಅನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ 75 ಎಕರೆ ಪ್ರದೇಶದಲ್ಲಿ ರೂ.813 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಅನುಮೋದನೆ.

  • ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಹೊಸ ಜಾಹೀರಾತು ನೀತಿಗೆ ಒಪ್ಪಿಗೆ.

  • ಮೈಶುಗರ್ ಕಾರ್ಖಾನೆಯ ದುರಸ್ತಿ ಮತ್ತು 5,000 ಟಿಸಿಡಿ ಸಾಮರ್ಥ್ಯದ ಯಂತ್ರೋಪಕರಣಗಳ ಸ್ಥಾಪನೆಗೆ ರೂ.60 ಕೋಟಿ.

  • ಮಂಡ್ಯ ಕ್ಷೇತ್ರದ ನಾಲ್ಕು ಕಾವೇರಿ ಕಾಲುವೆಗಳ ವಿತರಣಾ ಮತ್ತು ಪಿಕಪ್ ಕಾಲುವೆಗಳ ಆಧುನೀಕರಣಕ್ಕೆ ರೂ.100 ಕೋಟಿ.

  • 76 ಮೌಲಾನಾ ಅಜಾದ್ ಇಂಗ್ಲಿಷ್ ಮಾದರಿ ಶಾಲೆಗಳು ಮತ್ತು 41 ಉರ್ದು ಮಾಧ್ಯಮ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಲು ರೂ.683.33 ಕೋಟಿ ಅನುಮೋದನೆ.

  • ಬಜೆಟ್‌ನಲ್ಲಿ ಘೋಷಿಸಿದ್ದಂತೆ 600 ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆಗೆ ಒಪ್ಪಿಗೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾಕ್‌ನಲ್ಲಿ ಅಮೆರಿಕಾದ KC-135 ಸೇನಾ ವಿಮಾನ ಪತನ; ರಕ್ಷಣಾ ಕಾರ್ಯಾಚರಣೆ ಆರಂಭ

ಆಪರೇಷನ್‌ ಕಮಲದ ಆತಂಕ: ಅಸ್ಸಾಂ ಕಾಂಗ್ರೆಸ್‌ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌; ಅಖಾಡಕ್ಕಿಳಿದ ಡಿಕೆ ಶಿವಕುಮಾರ್

ಯುಗಾದಿ ಹಬ್ಬಕ್ಕೆ ಬಮೂಲ್ ನಿಂದ ಭರ್ಜರಿ ಗಿಫ್ಟ್: ಪ್ರತಿ ಲೀಟರ್ ಗೆ 1 ರೂ.ನಂತೆ ಹಾಲು ಉತ್ಪಾದಕರಿಗೆ ಬೋನಸ್; ಡಿ.ಕೆ. ಸುರೇಶ್

'ಕುಮಾರಸ್ವಾಮಿಯನ್ನು ಮೋದಿ- ಶಾ CM ಮಾಡ್ತಾರಂತೆ, ನಿಮ್ಮ ಹಣೆಬರಹ ಏನು? ಹಗಲುಗನಸು ಕಾಣಬೇಡಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಗೆ ಅಧಿಕಾರ'

ಕೇಂದ್ರದ ಮೇಲೆ ಆರೋಪ ಮಾಡಿ ವೈಫಲ್ಯ ಮರೆಮಾಚುವ ಯತ್ನ, ಜನಸೇವೆ ಸುವರ್ಣಾವಕಾಶ ಕಳೆದುಕೊಂಡ ಸಿದ್ದರಾಮಯ್ಯ: ವಿಜಯೇಂದ್ರ ವಾಗ್ದಾಳಿ

SCROLL FOR NEXT