ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಿನ್ನೋಟ 2015

ಉಪಹಾರ್ ಬೆಂಕಿ ದುರಂತ: ಅನ್ಸಾಲ್ ಸಹೋದರರಿಗೆ ಭಾರಿ ದಂಡ

1997ರಲ್ಲಿ ಉಪಹಾರ ಚಿತ್ರಮಂದಿರದಲ್ಲಿ ನಡೆದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಚಿತ್ರಮಂದಿರದ ಮಾಲೀಕರಾದ ಅನ್ಸಾಲ್ ಸಹೋದರರಿಗೆ ಬರೊಬ್ಬರಿ 60 ಕೋಟಿ ದಂಡ...

ಉಪಹಾರ್ ದುರಂತ (ಸಂಗ್ರಹ ಚಿತ್ರ)
Srinivasa Murthy VN
Updated On : 22 Dec 2015, 5:29 am

ಈ ಪ್ರಕರಣ ಕೂಡ ಹಳೆಯ ಪ್ರಕರಣವೇ ಆದರೂ, ಪ್ರಕರಣ ಸಂಬಂಧ ತೀರ್ಪು ಹೊರಬಿದ್ದಿದ್ದು 2015ರಲ್ಲಿ. 1997ರಲ್ಲಿ ಉಪಹಾರ ಚಿತ್ರಮಂದಿರದಲ್ಲಿ ನಡೆದ ಅಗ್ನಿ ದುರಂತ ಪ್ರಕರಣಕ್ಕೆ  ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಚಿತ್ರಮಂದಿರದ ಮಾಲೀಕರಾದ ಅನ್ಸಾಲ್ ಸಹೋದರರಿಗೆ ಬರೊಬ್ಬರಿ 60 ಕೋಟಿ ದಂಡವಿಧಿಸಿತ್ತು.

1997 ಜೂನ್ 13ರಂದು ಉಪಹಾರ್ ಚಿತ್ರ ಮಂದಿರದಲ್ಲಿ ನಡೆದ ಅಗ್ನಿ ದುರಂತದಲ್ಲಿ 59 ಮಂದಿ ಸಾವನ್ನಪ್ಪಿ, 100 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಚಿತ್ರಮಂದಿರದಲ್ಲಿ ಅಗ್ನಿ ನಿಯಂತ್ರಕ ಸಾಧನಗಳಿಲ್ಲದೇ ಇದ್ದುದರಿಂದ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಯಿತು ಎಂದು ನ್ಯಾಯಾಲಯದಲ್ಲಿ ಆರೋಪಿಸಲಾಗಿತ್ತು. ಸುಮಾರು ಹದಿನೈದು ವರ್ಷಗಳ ಹಿಂದೆ ದಕ್ಷಿಣ ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಬೆಂಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 19ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಅನ್ಸಾಲ್ ಸಹೋದರರ ನಿರ್ಲಕ್ಷ್ಯತೆ ಕಾಣುತ್ತಿದೆಯಾದರೂ ಅವರು ಜೈಲಿಗೆ ಹೋಗುವ ಅವಶ್ಯಕತೆ ಇಲ್ಲ. 60 ಕೋಟಿ ದಂಡ ಪಾವತಿ ಮಾಡಬೇಕು ಎಂದು ಹೇಳಿತ್ತು. ಆ ಮೂಲಕ ಅನ್ಸಾಲ್ ಸಹೋದರರಿಗೆ ಭಾರಿ ದಂಡವನ್ನೇ ವಿಧಿಸಿದೆ. ಅಲ್ಲದೆ ಈ ದಂಡವನ್ನು ಇನ್ನು 3 ತಿಂಗಳೊಳಗೆ ಪಾವತಿಸುವಂತೆ ಆದೇಶ ಹೊರಡಿಸಿತ್ತು.

ದೇಶ ಕಂಡ ಅತ್ಯಂತ ಭೀಕರ ದುರಂತಗಳಲ್ಲಿ ಉಪಹಾರ್ ದುರಂತ ಕೂಡ ಒಂದು ಎನ್ನಲಾಗುತ್ತದೆ. ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಸಮೀಪವಿರುವ ಉಪಹಾರ್ ಚಿತ್ರಮಂದಿರದಲ್ಲಿ 1997 ಜೂನ್ 13ರಂದು "ಬಾರ್ಡರ್" ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಅಗ್ನಿ ಅಕಸ್ಮಿಕದಿಂದಾಗಿ ಸುಮಾರು 59 ಮಂದಿ ಅಸುನೀಗಿದ್ದರು. ಅಲ್ಲದೆ ಘಟನೆಯಲ್ಲಿ ಉಸಿರುಗಟ್ಟಿ ಮತ್ತು ಕಾಲ್ತುಳಿತದಿಂದಾಗಿ ಸುಮಾರು 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಚಿತ್ರಮಂದಿರದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇರದ ಕಾರಣದಿಂದಲೇ ದುರಂತ ಸಂಭವಿಸಿದೆ ಎಂದು ಆರೋಪಿಸಿ ಉಪಹಾರ್ ಚಿತ್ರಮಂದಿರ ಮಾಲೀಕರಾದ ಅನ್ಸಾಲ್ ಸಹೋದರರ ವಿರುದ್ಧ ಗಾಯಾಳುಗಳ ಮತ್ತು ಮೃತರ ಸಂಬಂಧಿಕರು ದಾವೆ ಸಲ್ಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಮೃತರ ಮತ್ತು ಗಾಯಾಳುಗಳ ಸಂಬಂಧಿಕರಿಗೆ 25 ಕೋಟಿ ರು. ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ ದೆಹಲಿ ನ್ಯಾಯಾಲಯ ಹೇರಿದ ದಂಡದ ಮೊತ್ತ ಹೆಚ್ಚಾಯಿತು ಎಂದು ಅನ್ಸಾಲ್ ಸಹೋದರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement