ದೇಶ

ಮಹಾಬಲಿಪುರಂನಲ್ಲಿ ದಕ್ಷಿಣ ಭಾರತದ ಸಂಸ್ಕೃತಿ ಅನಾವರಣ; ಮೆಚ್ಚಿದ ಚೀನಾ ಅಧ್ಯಕ್ಷ ಕ್ಸಿ

Srinivasamurthy VN

ಚೆನ್ನೈ: ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದಕ್ಷಿಣ ಭಾರತದ ಸಂಸ್ಕೃತಿಗೆ ಮಾರುಹೋಗಿದ್ದು, ಮಹಾಬಲಿಪುರಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೆಚ್ಚಿದ್ದಾರೆ.

ಇಂದು ಸಂಜೆ ಮಹಾಬಲಿಪುರಂಗೆ ಅಗಮಿಸಿದ ಕ್ಸಿ ಜಿನ್ ಪಿಂಗ್ ರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಬಳಿಕ ಉಭಯ ನಾಯಕರು ಮಹಾಬಲಿಪುರಂ ಇತಿಹಾಸ ಪ್ರಸಿದ್ಧ ದೇಗುಲಗಳಿಗೆ ತೆರಳಿ ಅಲ್ಲಿನ ದೇಗುಲಗಳ ಕೆತ್ತನೆಗಳನ್ನು ವೀಕ್ಷಿಸಿದರು. ಇಲ್ಲಿನ ಕರಾವಳಿ ತೀರದಲ್ಲಿರುವ ವಿಶ್ವಪಾರಂಪರಿಕ ಸ್ಥಳಗಳಲ್ಲಿ ಒಂದಾದ ದೇಗುಲದಲ್ಲಿ ಕ್ಸಿ ಜಿನ್ ಪಿಂಗ್ ಅವರಿಗಾಗಿಯೇ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಈ ವೇಳೆ ತಮಿಳುನಾಡಿನ ಸಂಸ್ಕೃತಿಕ ಕಲಾ ತಂಡಗಳು ದ್ರಾವಿಡ ಸಂಸ್ಕೃತಿಯನ್ನು ಸಾರುವ ಕಲಾ ಪ್ರದರ್ಶನಗಳನ್ನು ನೀಡಿದರು. ಪ್ರಮುಖವಾಗಿ ದಕ್ಷಿಣ ಭಾರತದ ಖ್ಯಾತ ನೃತ್ಯ ಮಾದರಿ ಯಕ್ಷಗಾನಕ್ಕೆ ಚೀನಾ ಅಧ್ಯಕ್ಷರು ಚಪ್ಪಾಳೆ ತಟ್ಟಿ ತಮ್ಮ ಸಂತೋಷ ಹಂಚಿಕೊಂಡರು. ಪಕ್ಕದಲ್ಲೇ ಕುಳಿತಿದ್ದ ಪ್ರಧಾನಿ ಮೋದಿ ಕ್ಸಿ ಜಿನ್ ಪಿಂಗ್ ಅವರಿಗೆ ಈ ನೃತ್ಯದ ಕುರಿತು ಮಾಹಿತಿ ನೀಡಿದರು.

ಯುನೆಸ್ಕೋದಿಂದ ಸಂರಕ್ಷಿತ ಪಾರಂಪರಿಕ ತಾಣ ಎಂದು ಗುರುತಿಸಲ್ಪಟ್ಟಿರುವ ಸಮುದ್ರದ ತಟದಲ್ಲಿರುವ ಪಲ್ಲವ ವಾಸ್ತುಶಿಲ್ಪ ಮೇಳೈಸಿರುವ ಮಹಾಬಲಿಪುರಂನ ದೇಗುಲ ಸಮುಚ್ಛಯದ ಶೋರ್​ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಕಲಾಕ್ಷೇತ್ರ ಫೌಂಡೇಶನ್​ನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ತಮಿಳುನಾಡಿನಲ್ಲಿ ಹುಟ್ಟಿದ ಭರತನಾಟ್ಯ ಪ್ರದರ್ಶನದೊಂದಿಗೆ ಆರಂಭಗೊಂಡು, ನೆರೆಯ ಕೇರಳದ ಕಥಕ್ಕಳಿಯೊಂದಿಗೆ ಕಾರ್ಯಕ್ರಮ ಮುಂದುವರಿಯಿತು.

ಅಂದಾಜು 30 ನಿಮಿಷ ನಡೆದ ಕಾರ್ಯಕ್ರಮದ ಕೊನೆಯಲ್ಲಿ ಮಹಾತ್ಮ ಗಾಂಧಿ ಅವರನ್ನು ಸ್ಮರಿಸುತ್ತಾ, ಶಾಂತಿಯ ಆಶಯವನ್ನು ವ್ಯಕ್ತಪಡಿಸಲಾಯಿತು. ರಘುಪತಿ ರಾಘವ ರಾಜಾರಾಂ ಹಾಡಿನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಚೀನಾದ ಅಧ್ಯಕ್ಷರು ಕುತೂಹಲದದಿಂದ ಕಾರ್ಯಕ್ರಮ ವೀಕ್ಷಿಸಿದರೆ, ಪ್ರಧಾನಿ ಮೋದಿ ತಾಳ ಹಾಕುತ್ತಾ, ಸಂಗೀತದ ಮಾಧುರ್ಯಕ್ಕೆ ತಲೆದೂಗುತ್ತಾ ಕಾರ್ಯಕ್ರಮವನ್ನು ಆಸ್ವಾದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನಿ ಮೋದಿ ತಂಜಾವೂರ್​ನ ಚಿತ್ರವನ್ನು ಜಿನ್​ಪಿಂಗ್​ಗೆ ಉಡುಗೊರೆಯಾಗಿ ಕೊಟ್ಟರು. 

SCROLL FOR NEXT