ದೇಶ

ಸೂರ್ಯನತ್ತ ಆದಿತ್ಯಾ ಎಲ್1 ನೌಕೆ: ಏನಿದು ಲ್ಯಾಗ್ರೇಂಜ್ ಪಾಯಿಂಟ್? ಅದರ ಉಪಯೋಗವೇನು?

Srinivasamurthy VN

ನವದೆಹಲಿ: ಸೂರ್ಯನತ್ತ ದಾಪುಗಾಲಿರಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಆದಿತ್ಯಾ ಎಲ್ 1 ಸೂರ್ಯನತ್ತದ ತನ್ನ ಪಯಣವನ್ನು ಮುಂದುವರೆಸಿದ್ದು, ಇಂದು ಮಾರ್ಗ ಮಧ್ಯೆಯೇ ತನ್ನದೇ ಸೆಲ್ಫಿ ತೆಗೆದುಕೊಂಡು ಎಲ್ 1 ಪಾಯಿಂಟ್ ನತ್ತ ತನ್ನ ಪಯಣ ಮುಂದುವರೆಸಿದೆ. ಇಷ್ಟಕ್ಕೂ ಏನಿದು ಎಲ್ 1 ಅಥವಾ ಲ್ಯಾಗ್ರೇಂಜ್ ಪಾಯಿಂಟ್? ಅದರ ಉಪಯೋಗವೇನು? ಇಲ್ಲಿದೆ ಮಾಹಿತಿ.

ಎಲ್ ಒನ್ ಎಂಬುದು ಲ್ಯಾಗ್ರೇಂಜ್ ಪಾಯಿಂಟ್ ಒನ್ ಎಂಬ ಬಿಂದುವನ್ನು ಪ್ರತಿನಿಧಿಸುತ್ತದೆ. ಈ ಬಿಂದು ಸೂರ್ಯ ಮತ್ತು ಭೂಮಿಯ ನಡುವಿನ ಬಿಂದುವಾಗಿದ್ದು, ಭಾರತದ ಬಾಹ್ಯಾಕಾಶ ನೌಕೆ ಆದಿತ್ಯಾ ಎಲ್1 ಇದನ್ನು ತನ್ನ ಗುರಿಯಾಗಿಸಿಕೊಂಡಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಪ್ರಕಾರ, ಲ್ಯಾಗ್ರೇಂಜ್ ಬಿಂದುವಿನಲ್ಲಿ ಸೂರ್ಯ ಮತ್ತು ಭೂಮಿಯಂತಹ ಎರಡು ಬೃಹತ್ ಕಾಯಗಳ ಗುರುತ್ವಾಕರ್ಷಣಾ ಬಲ ಒಂದನ್ನೊಂದು ಸಮಾನವಾಗುತ್ತದೆ.

ಆ ಮೂಲಕ ಬಾಹ್ಯಾಕಾಶ ನೌಕೆ ಸತತವಾಗಿ ಚಲಿಸುವ ಅವಶ್ಯಕತೆಯಿಲ್ಲದೆ, ಒಂದೇ ಸ್ಥಾನದಲ್ಲಿ ಸ್ಥಿರವಾಗಿ ಉಳಿಯಲು ಸಾಧ್ಯವಾಗುತ್ತದೆ. ಒಂದು ಬಾರಿ ಆದಿತ್ಯ ಎಲ್ ಒನ್ ತನ್ನ ನಿಲುಗಡೆಯ ಸ್ಥಾನವನ್ನು ತಲುಪಿದರೆ, ಅದು ಭೂಮಿಯ ವೇಗದಲ್ಲೇ ಸೂರ್ಯನಿಗೆ ಪರಿಭ್ರಮಣೆ ನಡೆಸಲು ಸಾಧ್ಯವಾಗುತ್ತದೆ. ಆ ಮೂಲಕ ಉಪಗ್ರಹಕ್ಕೆ ತನ್ನ ಕಾರ್ಯಾಚರಣೆಗೆ ಸಾಕಷ್ಟು ಕಡಿಮೆ ಇಂಧನ ಸಾಕಾಗುತ್ತದೆ.

4 ತಿಂಗಳ ಕಾಲ ಪ್ರಯಾಣ
ಆದಿತ್ಯ ಎಲ್​1 ಬಾಹ್ಯಾಕಾಶ ನೌಕೆ 15 ಲಕ್ಷ ಕಿಲೋಮೀಟರ್ (ಅಥವಾ 932,000 ಮೈಲಿ) ಪ್ರಯಾಣ ಬೆಳೆಸಲಿದೆ. ಆದರೆ, ಇದು ಸೂರ್ಯ ಮತ್ತು ಭೂಮಿಯ ನಡುವಿನ ಅಂತರದ ಕೇವಲ 1% ಅಷ್ಟೇ ಆಗಿರಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಕಾರ, ಆದಿತ್ಯ ಎಲ್1 ಈ ದೂರವನ್ನು ಕ್ರಮಿಸಲು ನಾಲ್ಕು ತಿಂಗಳ ಕಾಲ ಪ್ರಯಾಣಿಸಲಿದೆ. ಸೌರಮಂಡಲದ ಅತಿದೊಡ್ಡ ಕಾಯವಾದ ಸೂರ್ಯನ ಅನ್ವೇಷಣೆ ನಡೆಸಲಿರುವ ಈ ಯೋಜನೆಗೆ, ಸೂರ್ಯನಿಗೆ ಸಂಸ್ಕೃತದ ಹೆಸರಾದ 'ಆದಿತ್ಯ' ಎಂದು ಹೆಸರಿಡಲಾಗಿದೆ.

ಎಲ್ 1 ಗೆ ನೌಕೆ, ಭಾರತ ಜಗತ್ತಿನ 4ನೇ ರಾಷ್ಟ್ರ
ಇಸ್ರೋದ ಆದಿತ್ಯಾ ಎಲ್ 1 ನೌಕೆಯು ಯಶಸ್ವಿಯಾಗಿ ಎಲ್ 1 ಪಾಯಿಂಟ್ ಗೆ ಸೇರಿದರೆ, ಆಗ ಭಾರತ ಈ ಎಲ್ 1 ಪಾಯಿಂಟ್ ನಲ್ಲಿ ನೌಕೆ ಸೇರಿಸಿದ ಜಗತ್ತಿನ 4ನೇ ರಾಷ್ಟ್ರ ಎಂಬ ಕೀರ್ತಿಗೆ ಭಾಜನವಾಗಲಿದೆ. ಇದಕ್ಕೂ ಮೊದಲು ಅಮೆರಿಕ, ಯೂರೋಪ್ ಮತ್ತು ಚೀನಾ ದೇಶಗಳು ಈ ಎಲ್ 1 ಪಾಯಿಂಟ್ ನಲ್ಲಿ ಬಾಹ್ಯಾಕಾಶ ನೌಕೆಯನ್ನು ಸೇರಿಸಿದ್ದವು.

ಏಳು ಪೆಲೋಡ್ ಗಳು
ಒಟ್ಟೂ ಏಳು ಪರಿಕರ (ಪೇಲೋಡ್) ಗಳನ್ನು ಹೊತ್ತೊಯ್ಯುವ ಆದಿತ್ಯ ಎಲ್ ಒನ್ ನೌಕೆ, ಎಲೆಕ್ಟ್ರೊಮ್ಯಾಗ್ನೆಟಿಕ್, ಪಾರ್ಟಿಕಲ್ ಮತ್ತು ಕಾಂತೀಯ ಶೋಧಕಗಳನ್ನು ಉಪಯೋಗಿಸಿಕೊಂಡು ಸೂರ್ಯನ ಮೂರೂ ಪದರಗಳ ಅಧ್ಯಯನ ನಡೆಸಲಿದೆ. ಮುಖ್ಯವಾಗಿ, ಈ ಹಿಂದೆ ಪ್ರಸ್ತಾಪಿಸಿದ, 1859ರ ವಿದ್ಯಮಾನಕ್ಕೆ ಕಾರಣವಾದ ಕೊರೊನಾ ವಲಯದ ವಿದ್ಯುತ್ಕಾಂತೀಯ ಅಲೆಗಳ ಮಹಾಸ್ಫೋಟದ ರಹಸ್ಯ ವಿಶ್ಲೇಷಿಸುವ ಪ್ರಯತ್ನ ಆದಿತ್ಯ ಎಲ್ ಒನ್ ಕಾರ್ಯಯೋಜನೆಯಲ್ಲಿದೆ. ಕೊರೊನಾದ ತೀವ್ರ ಉಷ್ಣತೆ ಏಕಾಗಿ ಸಂಭವಿಸುತ್ತದೆ. 

ಅಲ್ಲಿನ ಉಷ್ಣ ಅಲೆಗಳ ಸೂಸುವಿಕೆಯಲ್ಲಿ ಹಠಾತ್ ಏರಿಳಿತಗಳು ಆಗುತ್ತಿರೋದೇಕೆ, ಒಟ್ಟಾರೆ ಬಾಹ್ಯಾಕಾಶದ ತಾಪಮಾನ ವ್ಯತ್ಯಾಸಗಳನ್ನು ಈ ಚಟುವಟಿಕೆಗಳು ಪ್ರಭಾವಿಸುವ ರೀತಿ ಎಂಥಾದ್ದು ಅನ್ನೋದನ್ನೆಲ್ಲ ಆದಿತ್ಯ ಎಲ್ ಒನ್ ನೌಕೆ ಅಧ್ಯಯನ ಮಾಡಲಿದೆ.

SCROLL FOR NEXT