ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕೊಬ್ಬು ಎಂದು ಹೀಯಾಳಿಸುವಂತಿಲ್ಲ!

Srinivasa Murthy VN
Updated On : 30 Apr 2013, 1:16 am

ಯಾರಾದರೂ ನಮ್ಮ ಮಾತು ಕೇಳದಿದ್ದಾಗ ಅಥವಾ ಉದ್ಧಟತನ ತೋರಿಸಿದಾಗ 'ಎಷ್ಟು ಕೊಬ್ಬು ನೋಡು' ಎಂದುಕೊಳ್ಳುತ್ತೇವೆ. ನಮ್ಮ ಪಿತ್ಥವೂ ನೆತ್ತಿಗೇರಿದ್ದರೆ 'ಕೊಬ್ಬು ತೋರಿಸಬೇಡ' ಎಂದು ಬೈಯ್ಯುತ್ತೇವೆ. ನಮ್ಮ ದೃಷ್ಟಿಕೋನದಲ್ಲಿ ಕೊಬ್ಬು ಒಳ್ಳೆಯದಲ್ಲ! ಕೊಬ್ಬು ಅನೇಕ ಕಾಯಿಲೆಗಳ, ಆರೋಗ್ಯ ಸಮಸ್ಯೆಗಳ ಮೂಲ ಎನ್ನುವುದು ನಿರಾಕರಿಸಲಾಗದ ಸತ್ಯವಂತೂ ಹೌದು. ಹೀಗಾಗಿಯೇ ಕೊಬ್ಬಿನ ಬಗ್ಗೆ ಒಂಥರಾ ಅಸಡ್ಡೆಯ ಧೋರಣೆ. ಒಳ್ಳೆಯ ಕೊಬ್ಬೂ ಇದೆ ಎನ್ನುವುದು ಮಾತ್ರ ನಮಗೆ ತಿಳಿದೇ ಇಲ್ಲ. ಕೊಬ್ಬಿನ ವಿಷಯವೂ ಬಹಳ ಕುತೂಹಲಕಾರಿ.
ಆಶ್ಚರ್ಯ ಪಡಬೇಡಿ. ಹೇಗೆ ನಮ್ಮ ದೇಹದಲ್ಲಿ ಆಕ್ಸಿಡೆಂಡ್‌ಗಳೆಂಬ ವಿಷಾಣುಗಳು, ಅವನ್ನು ಹತ್ತಿಕ್ಕಲು ಆ್ಯಂಟಿಆಕ್ಸಿಡೆಂಟ್‌ಗಳೆಂಬ ಪ್ರತಿರೋಧಕಗಳೂ ಇವೆಯೊ, ಅದೇರೀತಿ ಕೊಬ್ಬಿನಲ್ಲೂ ಒಳ್ಳೆಯ ಕೊಬ್ಬು, ಕೆಟ್ಟ ಕೊಬ್ಬು ಇವೆ. ಕೊಬ್ಬಿನ ಅಂಶ ಕೋಶಗಳ ಮೇಲೆ ಭಾರಿ ಹಿಡಿತ ಸಾಧಿಸುತ್ತದೆ ಎನ್ನುವುದು ಗೊತ್ತಿರುವ ಸಂಗತಿಯೇ. ಕಾಯಿಲೆಗೆ ಕಾರಣವಾಗುವ ಸಂಗತಿಗಳನ್ನು ಉತ್ತೇಜಿಸಬೇಕೊ, ನಿರ್ನಾಮ ಮಾಡಬೇಕೊ ಎನ್ನುವುದನ್ನು ನಿರ್ಧರಿಸುವುದರಲ್ಲಿ ಕೊಬ್ಬಿನದೂ ಮುಖ್ಯ ಪಾತ್ರವೇ. ಕೊಬ್ಬು ದೇಹದೊಳಕ್ಕೆ ಪ್ರವೇಶಿಸಿದಾಗ ನಡೆಯುವ ಜೈವಿಕ ಪ್ರಕ್ರಿಯೆ ಅದನ್ನು ನಿರ್ಧರಿಸುತ್ತದೆ. ಅಂದರೆ ನಾವು ಯಾವ ರೀತಿಯ ಕೊಬ್ಬನ್ನು ದೇಹಕ್ಕೆ ಪೂರೈಸುತ್ತೇವೆಯೊ ಅದಕ್ಕೆ ಅನುಗುಣವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ವಿಜ್ಞಾನಿಗಳು ಒಂದು ಸಂಶೋಧನೆಗೆ ಮುಂದಾದರು. ರಕ್ತ ಹೆಪ್ಪುಗಟ್ಟುವುದು, ಉರಿ ಮೊದಲಾದ ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಜೈವಿಕ ಪ್ರಕ್ರಿಯೆ ಯಾವುದು ಎನ್ನುವುದನ್ನು ಪತ್ತೆ ಮಾಡುವುದು ಅವರ ಉದ್ದೇಶವಾಗಿತ್ತು. ಆಗ ಕಂಡುಬಂದದ್ದು ಏನೆಂದರೆ ಪ್ರೊಸ್ಟಾಗ್ಲಾಂಡಿನ್ಸ್, ಥ್ರೊಂಬೋಕ್ಸೇನ್, ಲ್ಯುಕೊಟ್ರೈನ್‌ಗಳೆಂಬ ಹಾರ್ಮೋನ್ ರೀತಿಯ ವಸ್ತುಗಳು (ಇವುಗಳನ್ನು ಒಟ್ಟಾಗಿ ಈಕೊಸನೈಡ್ಸ್ ಎನ್ನುತ್ತಾರೆ) ಇಂಥ ತೊಂದರೆಗಳನ್ನು ಹುಟ್ಟಿ ಹಾಕುತ್ತವೆ ಮತ್ತು ಈ ಈಕೊಸನೈಡ್ಸ್‌ಗಳ ಮೂಲ ನಮ್ಮ ಆಹಾರದಲ್ಲಿರುವ ಕೊಬ್ಬಿನಂಶದ ಆಮ್ಲಗಳು ಎನ್ನುವ ಸಂಗತಿ.
ಕೆಲವು ಬಗೆಯ ಕೊಬ್ಬುಗಳು ರಕ್ತ ಹೆಪ್ಪುಗಟ್ಟುವಿಕೆ, ತಲೆನೋವು, ಉರಿ, ನೋವು, ರಕ್ತನಾಳಗಳ ಸಂಕೋಚನ, ಉಗ್ರ ಸ್ವರೂಪದ ಗಡ್ಡೆಗಳಿಗೆ ಕಾರಣವಾಗುವ ಹಾರ್ಮೋನುಗಳ ಸ್ರವಿಕೆಗೆ ಕಾರಣವಾಗುವುದೂ ಕೊಬ್ಬು. ಅದಕ್ಕೆ ವಿರುದ್ಧವಾಗಿ ರಕ್ತ ಹೆಪ್ಪುಗಟ್ಟದಂತೆ ತಡೆಯುವ, ಸಂದು ನೋವುಗಳನ್ನು ಕಡಿಮೆ ಮಾಡುವ, ಕ್ಯಾನ್ಸರ್‌ಗೆ ಕಾರಣವಾಗುವ ಕೋಶಗಳನ್ನು ನಿರ್ನಾಮಗೊಳಿಸುವ ತಾಕತ್ತು ಇರುವುದು ಕೂಡ ಕೊಬ್ಬಿಗೇ. ಫ್ಯಾಟ್ ಫಾರ್ಮಕೊಲಜಿ ಎನ್ನುವುದು ಬಹಳ ಸಂಕೀರ್ಣ ವಿಷಯ. ಇದು ಕಿಣ್ವಗಳನ್ನೂ ಒಳಗೊಂಡಿರುತ್ತದೆ. ಕೊಬ್ಬಿನಿಂದಾಗಿ ಅನೇಕ ಬದಲಾವಣೆಯ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಕೊಬ್ಬಿನ ಆಹಾರ ಸೇವನೆಯಲ್ಲಿ ಸಮತೋಲನ ಸಾಧಿಸುವುದನ್ನು ಕಲಿತುಕೊಂಡರೆ ಗೆದ್ದಂತೆ!
ಒಂದು ಕಿವಿಮಾತು ಹೇಳುತ್ತೇನೆ. ಈ ಸರಣಿಯನ್ನು ಓದುತ್ತ ಗೊಂದಲಕ್ಕೆ ಒಳಗಾಗಬಾರದು. ನಿಮ್ಮ ದೇಹ ಪ್ರಕೃತಿ, ಆರೋಗ್ಯ ತೊಂದರೆಗಳನ್ನು ಆಧರಿಸಿ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement