ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಾವೆಲ್ಲ ಅಣ್ಣತಮ್ಮಂದಿರೇ ಅಲ್ಲವೆ?!

Srinivasa Murthy VN
Updated On : 12 Aug 2013, 2:27 am

ಸ್ವಾಮಿ ವಿವೇಕಾನಂದರು ಕಾಕ್ರಿಘಾಟ್‌ನಿಂದ ಕಾಲ್ನಡಿಗೆಯಲ್ಲಿ ಅಲ್ಮೋರದತ್ತ ಸಾಗುತ್ತಿದ್ದಾಗ ವಿಪರೀತ ದಣಿವಾಯಿತು. ಹೊಟ್ಟೆ ಚುರುಗುಡುತ್ತಿತ್ತು. ಇನ್ನು ಒಂದು ಹೆಜ್ಜೆಯನ್ನೂ ಇಡಲು ಸಾಧ್ಯವಿಲ್ಲದಂತಾಗಿ ಹಸ್ತೆ ಬದಿಯಲ್ಲಿ ಹಾಗೆಯೇ ನೆಲದ ಮೇಲೆ ಒರಗಿಕೊಂಡರು.
ಅಲ್ಲೊಂದು ಮುಸಲ್ಮಾನರ ಸ್ಮಶಾನವಿತ್ತು. ಅಲ್ಲಿಯ ಕಾವಲುಗಾರ ಇವರನ್ನು ನೋಡಿ ಗುಡಿಸಲಿನಿಂದ ಒಂದು ಸೌತೆಕಾಯಿಯನ್ನು ತಂದುಕೊಟ್ಟ. ಆದರೆ ಸ್ವಾಮೀಜಿ ಅದನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳಲೂ ಆಗದಷ್ಟು ಬಳಲಿದ್ದರು. 'ನನಗೆ ಎದ್ದು ತಿನ್ನಲು ಶಕ್ತಿಯಿಲ್ಲ, ನೀನೇ ಅದನ್ನು ಬಾಯಿಗೆ ಹಾಕು' ಎಂದರು. ಆಗ ಆ ಫಕೀರ, 'ಸ್ವಾಮಿ, ನಾನೊಬ್ಬ ಮುಸಲ್ಮಾನ' ಎಂದ. ಸ್ವಾಮೀಜಿ ನಕ್ಕು 'ಪರವಾಗಿಲ್ಲ, ನಾವೆಲ್ಲ ಅಣ್ಣತಮ್ಮಂದಿರೇ ಅಲ್ಲವೆ?' ಎಂದು ಒತ್ತಾಯಪಡಿಸಿದಾಗ ಆತ ಸೌತೆಕಾಯಿ ತಿನ್ನಿಸಿದ. ಸ್ವಲ್ಪ ಹೊತ್ತಿಗೆ ಸ್ವಾಮೀಜಿ ಚೇತರಿಸಿಕೊಂಡರು. ಮುಂದೆ ಈ ಘಟನೆಯನ್ನು ನೆನಪಿಸಿಕೊಂಡು 'ನನಗೆ ಅಷ್ಟೊಂದು ಆಯಾಸ ಹಿಂದೆಂದೂ ಆಗಿರಲಿಲ್ಲ. ಆತ ನಿಜಕ್ಕೂ ನನಗೆ ಜೀವದಾನ ಮಾಡಿದ' ಎಂದು ಹೇಳುತ್ತಿದ್ದರು.
ಇದಾದ ಏಳು ವರ್ಷಗಳ ಬಳಿಕ ವಿವೇಕಾನಂದರು ಭಾರತಕ್ಕೆ ಮರಳಿದ ಮೇಲೆ ಆಲ್ಮೋರದ ಜನ ಅವರಿಗೆ ಸಮಾರಂಭ ಏರ್ಪಡಿಸಿದ್ದರು. ಆ ಸಮಾರಂಭದಲ್ಲಿ ಆ ಫಕೀರನನ್ನು ನೋಡಿದ ಸ್ವಾಮೀಜಿ ಅವನನ್ನು ಆ ಗುಂಪಿನಲ್ಲೂ ಗುರುತಿಸಿ ಕರೆಸಿ ತಮ್ಮ ಸುತ್ತ ಇದ್ದವರಿಗೆಲ್ಲ 'ನನ್ನ ಜೀವವನ್ನು ಉಳಿಸಿದವನು' ಎಂದು ಆ ಘಟನೆಯನ್ನು ವಿವರಿಸಿದರು. ಅವನ ಉಪಕಾರವನ್ನು ಸ್ಮರಿಸಿ ಕೃತಜ್ಞತೆಯ ಕುರುಹಾಗಿ ಒಂದಿಷ್ಟು ಹಣವನ್ನು ಕೊಡಿಸಿದರು. ಆ ಫಕೀರ ಸ್ವಾಮೀಜಿಗೆ ಸೌತೆಕಾಯಿ ತಿನ್ನಿಸಿದ ಸ್ಥಳದಲ್ಲೇ ಇಂದು ವಿವೇಕಾನಂದರ ಹೆಸರಿನಲ್ಲಿ ಸತ್ರವೊಂದನ್ನು ಕಟ್ಟಿದ್ದಾರೆ!

-ಆನಂದ ಎಸ್.ಎನ್.
 anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement