ಭಕ್ತಿ ಬುತ್ತಿ
ಪಳಗಿದವರಷ್ಟೇ ಮಾಡಬಹುದಾದ 'ಬುತ್ತಿ ಪೂಜೆ'ಯ ಕೈಚಳಕಕ್ಕೆ ಪ್ರಸಿದ್ಧರಾದವರು ಮುನವಳ್ಳಿಯ ಶ್ರೀಶೈಲಸ್ವಾಮಿ ಸಂಭಾಳಮಠ.
ದೇವರ ಆರಾಧನೆಯ ವಿಶಿಷ್ಟ ಬಗೆಗಳು ನಮ್ಮ ದೇಶದಲ್ಲಿವೆ. ಅದರಲ್ಲಿ ಶ್ರಾವಣ ಮಾಸ, ಕಾರ್ತಿಕ ಮಾಸ, ಶಿವರಾತ್ರಿಯಂಥ ಸಂದರ್ಭಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ 'ಬುತ್ತಿ ಪೂಜೆ' ಒಂದು.
ಇದು ಎಲ್ಲರೂ ಮಾಡಬಹುದಾದ ಕೆಲಸವಲ್ಲ. ಪಳಗಿದವರಷ್ಟೇ ಮಾಡಬಹುದಾದ್ದು. ಇಂಥ ಪೂಜೆಗೆ ಪ್ರಸಿದ್ಧರಾದವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯ ಶ್ರೀಶೈಲಸ್ವಾಮಿ ಸಂಭಾಳಮಠ.
ಶ್ರೀಶೈಲಸ್ವಾಮಿ ಓದಿದ್ದು ಕೇವಲ ಎರಡನೆಯ ತರಗತಿ. ಬಾಲ್ಯದಿಂದಲೂ ಕಿತ್ತು ತಿನ್ನುವ ಬಡತನ. ತಂದೆಗೆ ಕಲಾಕುಸುರಿ ಕೆಲಸದಲ್ಲಿ ಸಹಾಯ ಮಾಡುತ್ತ ಬೆಳೆದರು. ಈಗ ಸುಮಾರು 70 ವರ್ಷ. ಪ್ರತಿವರ್ಷವೂ ಮಣ್ಣೆತ್ತಿನ ಅಮವಾಸ್ಯೆ ವೇಳೆ ಗಣೇಶ ಮೂರ್ತಿ ತಯಾರಿಕೆಯಲ್ಲಿ ತಲ್ಲೀನರಾಗುತ್ತಾರೆ. ಗೌರಿ ಹಬ್ಬದ ವೇಳೆ ಗೌರಿ ಮೂರ್ತಿ, ಹೋಳಿ ಹಬ್ಬಕ್ಕೆ ರತಿ-ಮನ್ಮಥ. ಮೊಹರಂ ಕಾಲಕ್ಕೆ ಹೆಜ್ಜೆ ಮೇಳದವರಿಗೆ ಹೂಗುಚ್ಛಗಳು. ಮದುವೆ ಸಮಾರಂಭಕ್ಕೆ ಬಾಸಿಂಗಗಳು. ಶ್ರಾವಣ ಮಾಸದಲ್ಲಿ ದೇವಾಲಯಗಳಲ್ಲಿ ನಡೆಯುವ ಬುತ್ತಿ ಪೂಜೆಯಲ್ಲಿ ಇವರು ಎತ್ತಿದ ಕೈ.
ಬುತ್ತಿ ಪೂಜೆಯ ಇವರ ಚಾಕಚಕ್ಯತೆ ಅದ್ಭುತವಾದದ್ದು. ರಾತ್ರಿಯಿಡೀ ತಮ್ಮ ಮಗನೊಂದಿಗೆ ನಿದ್ರೆಗೆಟ್ಟು ಕಾಯಕಗೈಯುತ್ತಾರೆ. ಬೆಳಗಿನ ಜಾವ ಮಡಿಯಿಂದ ಅಕ್ಕಿಯನ್ನು ಚೆನ್ನಾಗಿ ಕುದಿಸಿ ಅನ್ನ ಮಾಡಿಕೊಂಡು ದೇವರಿಗೆ ಮೊದಲು ಪೂಜೆ ಸಲ್ಲಿಸಿ ನಂತರ ಶುಭ್ರವಾದ ಬಿಳಿಯ ವಸ್ತ್ರದಲ್ಲಿ ಆ ಅನ್ನವನ್ನು ಹಾಕಿ, ಮೊಸರು ಸೇರಿಸಿ ಬೇಕಾಗುವ ರೀತಿ ಹದ ಮಾಡಿಕೊಳ್ಳುವರು. ಅದನ್ನು ಚೆನ್ನಾಗಿ ಮಿದ್ದಿ, ಮೂರ್ತಿಗೆ ಅಂಟಿಸಲು ಅನುಕೂಲವಾಗುವಂತೆ ಮಾಡುವರು. ಬೆಳಗಾಗುವ ಹೊತ್ತಿಗೆ ಮೂರ್ತಿಗೆ ವಿಶಿಷ್ಟ ರೂಪ ನೀಡಿ ವಿವಿಧ ಬಣ್ಣದ ಬೇಗಡೆಗಳನ್ನು ಅಂಟಿಸಿ ಹೊಸ ರೂಪ ನೀಡುವರು. ನಂತರ ಅರ್ಚನೆಯ ಜೊತೆಗೆ ಮಂಗಳಾರತಿ ಮಾಡಿ ಎಲ್ಲರಿಗೂ ನೈವೇದ್ಯ ನೀಡುತ್ತಾರೆ. ಮುನವಳ್ಳಿ ಅಷ್ಟೇ ಅಲ್ಲ, ಸುತ್ತಮುತ್ತಲಿನ ಗ್ರಾಮಗಳಲ್ಲೂ ಬುತ್ತಿ ಪೂಜೆ ಮಾಡಿಕೊಡುತ್ತಾರೆ.
ಬುತ್ತಿ ಪೂಜೆ ನಿಜಕ್ಕೂ ಕಠಿಣವಾದುದು. ಇದಕ್ಕೆ ಮೆದುವಾಗಿ ಅನ್ನವಾಗುವ ಅಕ್ಕಿ ಅವಶ್ಯಕ. ಜೊತೆಗೆ ಅದನ್ನು ಉಜ್ಜಿ ಮೆದುವಾಗಿಸುವಲ್ಲಿ, ಅಂಟಿಸುವಲ್ಲಿ ಸಾಕಷ್ಟು ಅನುಭವ, ಕೈಚಳಕ ಬೇಕು. ಸ್ವಲ್ಪ ಹದ ತಪ್ಪಿದರೆ ಪೂಜೆಗೆ ತೊಂದರೆ. ಇಂಥ ಶ್ರದ್ಧಾಭಾವದ ಬದುಕು ಸಾಗಿಸುತ್ತಿರುವ ಸಂಭಾಳಮಠರನ್ನು ಇತ್ತೀಚೆಗೆ ಸವದತ್ತಿ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
- ವೈ.ಬಿ.ಕಡಕೋಳ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.