ಸಮಯಕ್ಕೆ ತಕ್ಕಂತೆ ಮೌಲ್ಯವೂ ಬದಲಾಗುತ್ತದೆ
ಇತ್ತೀಚೆಗೆ ಉಕ್ಕಿನ ಉದ್ಯಮದಲ್ಲಿರುವ ಕಂಪನಿಯೊಂದು ಅತಿ ಶೀಘ್ರ ಸಮಯದಲ್ಲೇ ಬಂಡವಾಳ ಒಂದು ಬಿಲಿಯನ್ ಮೀರಿದ್ದಕ್ಕಾಗಿ ಹೆಸರು ಮಾಡಿತು. ಆ ಕಂಪನಿಯ ಮಾಲಿಕರೆನಿಸಿಕೊಂಡವರು ಜಗತ್ತಿನ ಶ್ರೀಮಂತರಲ್ಲೊಬ್ಬರು ಎಂದೆನಿಸಿಕೊಂಡರು. ಸ್ವಲ್ಪ ಸಮಯದಲ್ಲಿ ಇದ್ದಕ್ಕಿದ್ದಂತೆ ಜಗತ್ತಿನಾದ್ಯಂತ ಉಕ್ಕಿನ ಉದ್ಯಮ ಇಳಿಮುಖ ಕಂಡಿತು. ಉಕ್ಕಿನ ಬೇಡಿಕೆ ಕಡಿಮೆಯಾದದ್ದು ಇದಕ್ಕೆ ಕಾರಣವಾದರೂ ಇಲ್ಲಸಲ್ಲದ ಸಂಬಂಧ ಕಲ್ಪಿಸಿದ್ದುದರಿಂದ ಮಾರುಕಟ್ಟೆಯಲ್ಲಿ ಆ ಕಂಪನಿಯ ಷೇರಿನ ದರ ಕೆಲವೇ ದಿನಗಳಲ್ಲಿ ನಲವತ್ತು ಪ್ರತಿಶತ ಕಡಿಮೆಯಾಯಿತು. ಕೂಡಲೇ ಆ ಉದ್ಯಮಿಯ ಹೆಸರು ಶ್ರೀಮಂತರ ಪಟ್ಟಿಯಿಂದ ಮಾಯವಾಯಿತು. ಅಷ್ಟೇ ಅಲ್ಲ, ಆ ಕಂಪನಿಗೆ ನಲವತ್ತು ಮಿಲಿಯನ್ ನಷ್ಟವಾಯಿತು. ವಾಸ್ತವಿಕತೆ ಎಂದರೆ ಕಂಪನಿಯ ಮಾಲೀಕ ಒಂದೇ ಒಂದು ಪೈಸೆಯನ್ನು ಕಳೆದುಕೊಳ್ಳಲಿಲ್ಲ, ಯಾವುದೇ ಆಸ್ತಿಯನ್ನೂ ಕಳೆದುಕೊಳ್ಳಲಿಲ್ಲ. ಬದಲಾದದ್ದು ಎಂದರೆ ಮಾರುಕಟ್ಟೆಯಲ್ಲಿ ಕಂಪನಿಯ ಬಂಡವಾಳದ ಮೌಲ್ಯ, ಉದ್ಯಮಿಯ ಶ್ರೀಮಂತಿಕೆ ಮತ್ತು ಬಹುಶಃ ಆತನ ಮನಃಶಾಂತಿ.
ಕ್ರೈಸಿಸ್ ಅಥವಾ ಕುತ್ತಿನ ಸಮಯದಲ್ಲಿ ಜಗತ್ತಿನ ಒಟ್ಟು ಮೌಲ್ಯವೆಷ್ಟು? ಇದನ್ನು ಕೂಡ ಸ್ಥಳ, ಸಮಯ ಯಾ ಸಂದರ್ಭಕ್ಕೆ ಒಳಪಟ್ಟೇ ನಿರ್ಣಯಿಸಲಾಗುತ್ತದೆ. ಚಕ್ರವರ್ತಿ ಅಲೆಕ್ಸಾಂಡರ್ ದಿ ಗ್ರೇಟ್‌ನ ಒಂದು ಕಥೆಯಿದೆ. ಒಮ್ಮೆ ಅಲೆಕ್ಸಾಂಡರ್ ಭಾರತದ ಮರುಭೂಮಿಯ ಬಿರುಗಾಳಿಯಲ್ಲಿ ದಾರಿ ತಪ್ಪಿ ಕಳೆದು ಹೋಗುತ್ತಾನೆ. ಅವನಲ್ಲಿರುವ ಆಹಾರ, ಧಾನ್ಯ, ನೀರು ಎಲ್ಲವೂ ಮುಗಿದು ಹೋಗುತ್ತದೆ. ಆತನ ಬಹುತೇಕ ಸೈನಿಕರು ಸಾವನ್ನಪ್ಪುತ್ತಾರೆ, ಇನ್ನುಳಿದವರು ಚದುರಿ ಹೋಗುತ್ತಾರೆ. ಒಬ್ಬನೇ ಇರುವ ಆತ ಆ ಮರುಭೂಮಿಯಲ್ಲಿ ಆಯಾಸಗೊಂಡು ನೀರಿಗಾಗಿ ಪರದಾಡುತ್ತಾನೆ. ಆ ಸಂದರ್ಭದಲ್ಲಿ ಆತನಿಗೆ ನೀರನ್ನು ಹೊಂದಿದ ಊರಿಂದ ಊರಿಗೆ ಅಲೆದಾಡುವ ಆಧ್ಯಾತ್ಮಿಕ ಗುರುವೊಬ್ಬ ಇದಿರಾಗುತ್ತಾನೆ. ಅಲೆಕ್ಸಾಂಡರ್ ತನ್ನ ರಾಜ ಠೀವಿಯಿಂದಲೇ ಗುರುವಿನಲ್ಲಿ ನೀರು ಕೇಳುತ್ತಾನೆ. ನೀರು ಕೊಡಲು ಒಪ್ಪದ ಗುರುವಿಗೆ ಅಲೆಕ್ಸಾಂಡರ್ ತಾನೊಬ್ಬ ಚಕ್ರವರ್ತಿ ಎಂದು ತನ್ನ ಪರಿಚಯವನ್ನು ಹೇಳಿಕೊಂಡರೂ ಗುರುವು ನೀರು ಕೊಡಲು ಒಪ್ಪುವುದಿಲ್ಲ. ತನ್ನ ಬದುಕಿನ ಪ್ರಶ್ನೆಯಾಗಿರುವುದರಿಂದ ಅಲೆಕ್ಸಾಂಡರ್ ಚಕ್ರವರ್ತಿ ಒಂದು ಲೋಟ ನೀರಿಗಾಗಿ ತನ್ನ ಸಂಪೂರ್ಣ ರಾಜ್ಯವನ್ನೇ ಕೊಡುವುದಾಗಿ ಹೇಳಿದಾಗ, ಗುರುವು ಉತ್ತರಿಸುತ್ತಾನೆ, 'ನೀನು ಯಾರೇ ಆದರೂ, ನಿನ್ನ ಬಳಿ ಎಷ್ಟೇ ದೊಡ್ಡದಾದ ರಾಜ್ಯವಿದ್ದರೂ ಏನು ಪ್ರಯೋಜನ? ನಿನ್ನ ಜೀವನದ ಇಷ್ಟೆಲ್ಲ ಗುದ್ದಾಟಕ್ಕೆ ಬೆಲೆ ಏನು? ಈ ಕ್ಷಣದಲ್ಲಿ ನೀನು ಜೀವನಪೂರ್ತಿ ಗಳಿಸಿದ್ದೆಲ್ಲ ಒಂದು ಲೋಟ ನೀರಿಗೆ ಸಮ. ಅಷ್ಟೇ ಅಲ್ಲ, ಇದುವರೆಗೆ ನೀನು ಕಷ್ಟಪಟ್ಟು ಗಳಿಸಿದ್ದರ ಮೌಲ್ಯವನ್ನು ನಿರ್ಧರಿಸುವವನು, ಬೆಲೆ ಕಟ್ಟುವವನು ನೀನಲ್ಲ, ನಾನು ಎಂದಾಯಿತು. ನಿನ್ನ ಸರ್ವಸ್ವವನ್ನೂ ನಾನು ಅರ್ಧ ಲೋಟ ನೀರು ಕೊಟ್ಟು ಕೊಂಡುಕೊಳ್ಳಬಹುದು ಎಂದಾದರೆ, ಈ ಕ್ಷಣದಲ್ಲಿ ನಿನಗಿಂತ ನಾನು ಶ್ರೀಮಂತ ಎಂದಾಯಿತಲ್ಲ. ಅಲ್ಲದೇ, ನಾನಾದರೂ ನಿನಗೆ ನೀರನ್ನು ಯಾಕೆ ಕೊಡಬೇಕು? ಈ ಮರುಭೂಮಿಯಲ್ಲಿ ನೀರಿನ ಅವಶ್ಯಕತೆ ನಿನ್ನಷ್ಟೇ ನನಗೂ ಇದೆ. ನನ್ನ ಜೀವವೂ ನಿನ್ನ ಜೀವದಷ್ಟೇ ಮೌಲ್ಯಯುತವಾದದ್ದು' ನಂತರ ಗುರುವು ಆತನಿಂದ ಏನನ್ನೂ ಪಡೆಯದೇ ನೀರು ಕೊಡುತ್ತಾನೆ. ಗುರುವು ಅಲೆಕ್ಸಾಂಡರ್‌ನ ಅಹಂಕಾರವನ್ನು ಘಾಸಿಗೊಳಿಸುವುದಕ್ಕಾಗಿ ಈ ರೀತಿ ಹೇಳುತ್ತಾನೆ. ಹೀಗೆ ಕಥೆ ಮುಂದುವರಿಯುತ್ತದೆ. ಆದರೂ ಆ ಕ್ಷಣದಲ್ಲಿ ಅಲೆಕ್ಸಾಂಡರ್ ಜೀವನ ಪೂರ್ತಿ ಕಷ್ಟಪಟ್ಟು ಕಲೆ ಹಾಕಿದ ಸರ್ವಸ್ವವೂ ಒಂದು ಲೋಟ ನೀರಿಗೆ ಸಮನಾಯಿತು. ಯಾವುದೇ ವಸ್ತುವಿನ ಮೌಲ್ಯ ಆಯಾ ಸಮಯಕ್ಕೆ ಸಂಬಂಧಪಟ್ಟು ಮಾತ್ರ. ಸಮಯ ಬದಲಾದಂತೆ ಅದರ ಮೌಲ್ಯವೂ ಬದಲಾಗುತ್ತದೆ.
(ಮುಂದುವರಿಯುತ್ತದೆ)
-ಕಿರಣ ಉಪಾದ್ಯಾಯ