ಸತ್ಯಸಾಧಕರಿಗೆ ದೇವರೇ ರಕ್ಷಕ!
ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶಪರ್ಯಟನೆ ಮಾಡುವಾಗ ಅನುಭವಿಸಿದ ಕಷ್ಟ, ನೋವು, ಸಂಕಟಗಳು ಅಸಂಖ್ಯ. ಆದರೆ ಯಾವುದಕ್ಕೂ ಹಿಂದೆಗೆಯದೆ ಗುರುಭಕ್ತಿಯಿಂದ ಮುನ್ನಡೆದರು. ಇದು ಸಾಧಕರ ಮಾರ್ಗ. ವಿವೇಕಾನಂದರಲ್ಲಿ ಕಾಣುವುದು ನಿಸ್ವಾರ್ಥ ಭಕ್ತಿ.
ಹೃಷಿಕೇಶದಲ್ಲಿ ಕುಟೀರವೊಂದನ್ನು ಕಟ್ಟಿಕೊಂಡು ತಪಸ್ಸಾಧನೆಯಲ್ಲಿ ತೊಡಗಲು ನಿರ್ಧರಿಸಿದ್ದರು. ಆದರೆ ಸಾಧನೆಯಲ್ಲಿ ನಿರತರಾಗುವ ಮೊದಲೇ ತೀವ್ರ ಜ್ವರ, ಗಂಟಲು ನೋವಿನಿಂದ ಹಾಸಿಗೆಹಿಡಿದರು. ಔಷಧೋಪಚಾರ ಮಾಡಿದರೂ ಪ್ರಯೋಜನವಾಗಲಿಲ್ಲ. ಸ್ವಾಮೀಜಿ ದಿನದಿಂದ ದಿನಕ್ಕೆ ನಿಶ್ಯಕ್ತರಾಗುತ್ತಿದ್ದರು. ದೇಹದ ಪರಿಸ್ಥಿತಿ ಹದಗೆಡುತ್ತಾ ಬರುತ್ತಿದೆ. ಸುತ್ತ 30 ಮೈಲಿಗಳವರೆಗೆ ಯಾವುದೇ ವೈದ್ಯಕೀಯ ಸೌಲಭ್ಯ ದೊರಕುವುದಿಲ್ಲ. ಗುರುಭಾಯಿಗಳು ದುಃಖೋದ್ವೇಗದಿಂದ ಚಡಪಡಿಸುತ್ತಾ ಅವರ ಎದೆ, ಕೈ ಕಾಲುಗಳನ್ನು ಉಜ್ಜಿ ಬಿಸಿಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಎಲ್ಲವೂ ವ್ಯರ್ಥವಾಗತೊಡಗಿತು.
ಆಗ ಅಪರಿಚಿತ ಸಾಧುವೊಬ್ಬ ಸನ್ಯಾಸಿಗಳ ಅಳುವಿಗೆ ಕಾರಣವನ್ನು ತಿಳಿದು, ತನ್ನ ಜೋಳಿಗೆಯಿಂದ ಆ ಸಾಧುಬೇರಿನ ಪುಡಿ ಮತ್ತು ಜೇನುತುಪ್ಪವನ್ನು ತೆಗೆದು ಎರಡನ್ನೂ ಬೆರೆಸಿ ಸ್ವಾಮೀಜಿ ಬಾಯೊಳಗೆ ಬಲವಂತವಾಗಿ ಹಾಕಿದ. ಔಷಧ ಪವಾಡವೆಂಬಂತೆ ಕೆಲಸ ಮಾಡಿತು. ಕೆಲ ನಿಮಿಷಗಳಲ್ಲೇ ಅವರ ದೇಹ ಬೆಚ್ಚಗಾಯಿತು. ನಾಡಿಬಡಿತ ಹೆಚ್ಚಾಯಿತು. ಸ್ವಲ್ಪ ಹೊತ್ತಿಗೆಲ್ಲ ಸ್ವಾಮೀಜಿ ಕಣ್ತೆರೆದು ನೋಡಿ, ಮಾತನಾಡಲು ಪ್ರಯತ್ನಿಸಿದರು. 'ಏನೂ ಹೆದರಬೇಡಿ, ಧೈರ್ಯವಾಗಿರಿ. ನಾನು ಸಾಯಲಾರೆ!' ಎಂದರು ಸ್ವಾಮೀಜಿ. ಗುರುಭಾಯಿಗಳಿಗೆ ಜೀವಬಂದಂತಾಯಿತು. ಹೀಗೆ ಸತ್ಯಧರ್ಮ ಮಾರ್ಗದಲ್ಲಿ ನಡೆಯುವವರನ್ನು ದೈವ ಎಂದಿಗೂ ಕೈಬಿಡದು.
-ಆನಂದ ಎಸ್.ಎನ್.
anandsn193@gmail.com