ಕಳೆದುಕೊಳ್ಳುವುದು ಬದುಕನ್ನಲ್ಲ
ಈ ಸಂಬಂಧಗಳಿವೆಯಲ್ಲಾ, ಅದೊಂದು ರೀತಿಯಲ್ಲಿ ತೆಂಗಿನ ಕಾಯಿಯಿದ್ದಂತೆ. ಮೇಲುನೋಟಕ್ಕೆ ಅಳೆಯಲು ಸಾಧ್ಯವೇ ಇಲ್ಲ. ಗಾತ್ರ ದೊಡ್ಡದಿದೆ ಎಂದುಕೊಂಡು ಖರೀದಿಸಿದರೆ ಒಳಗಿನ ತಿರುಳು ತೆಳ್ಳಗಿರುತ್ತದೆ. ಬಣ್ಣದಲ್ಲಿ ತುಸು ಕಂದಾಗಿದೆ, ಬೆಳೆದಿರಬಹುದು ಎಂದುಕೊಂಡರೆ ನೀರೆಲ್ಲಾ ಆರಿ, ಒಣಗಿದ ಕೊಬ್ಬರಿಯಾಗಿರುವ ಸಾಧ್ಯತೆ ಇರುತ್ತದೆ. ಅಲುಗಿಸಿ ನೋಡಿ ನೀರಾಡುತ್ತಿರುವುದನ್ನು ಖಚಿತಪಡಿಸಿಕೊಂಡು ತೆಗೆದುಕೊಂಡು ಹೋಗಿ ಒಡೆದರೆ ಕೊಳೆತು ಹೋಗಿರುತ್ತದೆ. ಹೊರಗಿನಿಂದ ಏನೊಂದನ್ನೂ ನಿರ್ಧರಿಸಲೂ ಆಗುವುದೇ ಇಲ್ಲ. ಗಟ್ಟಿಯಾದ ಚಿಪ್ಪಿನೊಳಗೆ ಏನು ಬೇಕಿದ್ದರೂ ಅಡಗಿರಬಹುದು. ಮೇಲಿನಿಂದ ಮಾತ್ರ ಗಟ್ಟಿಯಾಗಿದ್ದರೆ ಸಾಲದು, ಒಳಗಿನ ತಿರುಳು ದಪ್ಪಗಿರಬೇಕು. ನೀರು ಪೂರ್ತಿ ಬತ್ತಿರಲೂ ಬಾರದು. ಕೇವಲ ನೀರಷ್ಟೇ ಇದ್ದರೂ ಪ್ರಯೋಜನವಿಲ್ಲ. ಹೀಗೆ ತೆಂಗಿನ ಕಾಯಿಯ ಖರೀದಿಯಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಎಲ್ಲ ಬಾರಿ ಉತ್ತಮವಾದುದನ್ನೇ ಮನೆಗೆ ಒಯ್ಯುತ್ತೇವೆ ಎಂಬುದು ಖಚಿತವಿಲ್ಲ. ಹಾಗೆಯೇ ಮನುಷ್ಯ ಸಂಬಂಧಗಳು ಸಹ.
ಮೇಲ್ನೋಟಕ್ಕೆ ಚಂದಕ್ಕೆ ಕಾಣುವವರು, ಒಳ್ಳೆಯ ವರ್ತನೆಯವರೆಂದು ಅಂದುಕೊಳ್ಳುವವರೆಲ್ಲಾ ಹಾಗೆಯೇ ಇರಬೇಕೆಂದೇನೂ ಇಲ್ಲ. ಎಷ್ಟೇ ಪರೀಕ್ಷಿಸಿ ನೋಡಿ ಸಂಬಂಧಗಳನ್ನು ಬೆಳೆಸಿದರೂ ಒಮ್ಮೊಮ್ಮೆ ನಮ್ಮ ಅದೃಷ್ಟ ಖುಲ್ಲಾ ಆಗಿರುತ್ತದೆ. ನಮಗೆ ಎಲ್ಲೋ, ಯಾರೋ ಪರಿಚಯವಾಗುತ್ತಾರೆ, ಇನ್ನೆಲ್ಲೋ ಗೆಳೆಯರಾಗುತ್ತಾರೆ. ಮತ್ತೆಲ್ಲೋ ಸಂಬಂಧಗಳು ಬೆಸೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲೆಲ್ಲಾ ಬಹುಶಃ ಹೆಚ್ಚಿನ ಪರೀಕ್ಷೆಗೆ ಹೋಗುವುದೂ ಇಲ್ಲ.
ಬಹುಶಃ ನಮಗೆ ಹತ್ತಿರವಾದವರನ್ನು ಸೀಳಿಯೋ, ಒಳ ಹೊಕ್ಕೋ, ಟಾರ್ಚ್ ಲೈಟ್ ಹಾಕಿಯೋ ನೋಡಲೂ ಆಗುವುದಿಲ್ಲ. ಇಲ್ಲವೇ ಅವರನ್ನು ವೈದ್ಯರ ಬಳಿಯೋ, ಭವಿಷ್ಯಕಾರರ ಹತ್ತಿರವೋ ಕರೆದುಕೊಂಡು ಹೋಗಿ ಇವರು ಹೇಗಿದ್ದಾರೆ ಎಂದು ಅಭಿಪ್ರಾಯ ಕೇಳಿ ಸಂಬಂಧ ಬೆಳೆಸಲು ಸಾಧ್ಯವೂ ಇಲ್ಲ. ಒಮ್ಮೊಮ್ಮೆ ಕಿಲುಬು ಬಂದು ಬಿಡುತ್ತದೆ. ಅದರಲ್ಲಿ ಯಾರ ತಪ್ಪೂ ಇರುವುದಿಲ್ಲ. ಕೆಟ್ಟು ಹೋದ ಕಾಯಿಯನ್ನು ಬದಲಿಸಬಹುದು. ಸಂಬಂಧಗಳನ್ನು ಬದಲಿಸಲಿಕ್ಕಾಗುವುದಿಲ್ಲ. ಸಾಧ್ಯವಾದಷ್ಟು ಅದನ್ನು ಹೇಗಿದೆಯೋ ಹಾಗೆಯೇ ಸ್ವೀಕರಿಸುವ ಪ್ರಯತ್ನ ಮಾಡಬೇಕು. ಮನುಷ್ಯರಾಗಿ ಅದು ಕರ್ತವ್ಯ.ಸಾಧ್ಯವೇ ಇಲ್ಲವೆಂಬಷ್ಟು ಹದಗೆಟ್ಟು ಹೋಗಿದ್ದ ಪಕ್ಷದಲ್ಲಿ ಕೆಟ್ಟು ಹೋದ ಕಾಯನ್ನು ಕಸದ ಬುಟ್ಟಿಗೆ ಹೇಗೆ ಬಿಸಾಡುತ್ತೇವೋ ಹಾಗೆಯೇ ಅಂಥ ಸಂಬಂಧದಿಂದ ಹೊರ ಬಂದುಬಿಡಬೇಕಾಗುತ್ತದೆ. ಅದೃಷ್ಟ ಅಷ್ಟೇ ಎಂದುಕೊಂಡು ಮರೆತುಬಿಡಿ. ಏಕೆಂದರೆ ಕೆಟ್ಟು ಹೋದದ್ದರ ದುರ್ವಾಸನೆ ಬದುಕಿನುದ್ದಕ್ಕೂ ಬರುವುದು ಬೇಡ. ಕಳೆದುಕೊಳ್ಳುವುದು ಸಂಬಂಧವನ್ನಷ್ಟೇ, ಬದುಕನ್ನಲ್ಲ ಎಂಬುದು ನೆನೆಪಿರಲಿ. <
-ಸಹನೆ