ಭಾರತದ ರಹಸ್ಯ ಸಂಘಟನೆಯಲ್ಲಿ
ಭಾರತವು ಬಹುಜನಸಂಖ್ಯೆಯ ದೇಶ. ಇಲ್ಲಿ ಮಾನವ ಸಂಪನ್ಮೂಲಕ್ಕೆ ಕೊರತೆಯಿಲ್ಲ. ಆದರೆ ಭಾರತೀಯರನ್ನು ಸಂಘಟಿಸಿ ದೇಶದ ಅಭಿವೃದ್ಧಿಗಾಗಿ ದುಡಿಯುವಂತೆ ಕಾರ್ಯಯೋಜನೆ ರೂಪಿಸುವ ನಾಯಕರ ಕೊರತೆಯಿದೆ. ಸ್ವಾರ್ಥ, ಸ್ವಜನಪಕ್ಷಪಾತ, ಸ್ವಪ್ರತಿಷ್ಠೆ, ದುಂದುಗಾರಿಕೆ, ಭ್ರಷ್ಟಾಚಾರಗಳಿಂದ ಮುಕ್ತರಾದ ನಾಯಕರು ಹಳ್ಳಿಹಳ್ಳಿಗಳಲ್ಲಿ ಉದಯಿಸಬೇಕಾಗಿದೆ. ಜನರನ್ನು ಒಂದು ಧ್ಯೇಯದಡಿ ಸಂಘಟಿಸುವ, ಅವರ ಶಕ್ತಿಸಾಮರ್ಥ್ಯಗಳನ್ನು ದೇಶದಅಭಿವೃದ್ಧಿಗೆ ವ್ಯಯಿಸುವ, ಸಮಾನತೆಯನ್ನು ಹಿಗ್ಗಿಸಿ ಸಾಮಾಜಿಕ ನ್ಯಾಯದಡಿಯಲ್ಲಿ ಪ್ರಜಾಪ್ರಭುತ್ವವನ್ನು ಸಕ್ರಿಯಗೊಳಿಸುವ ಹಾಗೂ ಯುವಪೀಳಿಗೆಯನ್ನು ದೇಶದ ಏಳಿಗೆಗೆ ಕಟಿಬದ್ಧಗೊಳಿಸುವಂತಹ ಶಿಕ್ಷಣವನ್ನು ಒದಗಿಸುವ ಕಾರ್ಯಯೋಜನೆಗಳನ್ನು ರೂಪಿಸಿ ದಿಲ್ಲಿಯ ದರ್ಬಾರಿಗಿಂತ ಗಲ್ಲಿಗಲ್ಲಿಗಳ ಉದ್ಧಾರಸೂತ್ರಕ್ಕೆ ತಮ್ಮ ಜೀವಮಾನವನ್ನು ಅರ್ಪಿಸುವ ನಾಯಕರು, ಸಂಘಟಕರು, ವ್ಯವಸ್ಥಾಪಕರು, ನಿರ್ವಾಹಕರು ಬೇಕಾಗಿದ್ದಾರೆ.
'ಸರಿಯಾದ ಸಂಘಟನೆಯಿಲ್ಲದೆ ಯಾವ ಘನಕಾರ್ಯವನ್ನೂ ಸಾಧಿಸಲಾರೆವು. ನಾವು ನಮ್ಮ ಸ್ವಾರ್ಥವನ್ನು ತ್ಯಾಗ ಮಾಡಲು ಕಲಿತಾಗ, ನಮ್ಮ ವೈಯಕ್ತಿಕ ಆಶೋತ್ತರಗಳನ್ನು ಮೀರಿ ವಿಶಾಲ ಭಾರತದ ಹಿತದ ಕಡೆಗೆ ಗಮನಹರಿಸಬಲ್ಲವರಾದಾಗ ನಾವೂ ಪ್ರಜಾಪ್ರಭುತ್ವ ತತ್ತ್ವದ ಮೇಲೆ ಕಾರ್ಯನಿರ್ವಹಿಸಲು ಸಾಧ್ಯವಾಗಬಹುದು. ಆದರೆ ಸಮಸ್ತ ಸದಸ್ಯರ ಅಭಿಪ್ರಾಯ ಹಾಗೂ ಸಮ್ಮತಿಯ ಮೇರೆಗೆ ನಡೆದುಕೊಳ್ಳಬೇಕು. ನಾಯಕನ ಯೋಗ್ಯತೆ ಗೊತ್ತಾಗುವುದು ವಿಭಿನ್ನ ಸ್ವಭಾವಗಳ ಜನರನ್ನು ಅವರಲ್ಲಿರುವ ಸಮಾನ ಗುಣಗಳ ಆಧಾರದ ಮೇಲೆ ಒಂದುಗೂಡಿಸುವ ಕಾರ್ಯದಲ್ಲಿ. ಇದು ತಾನಾಗಿಯೇ ಬರಬೇಕಾಗುತ್ತದೆ.' <
-ಆನಂದ ಎಸ್.ಎನ್.