ಜೀರಿಗೆಯದ್ದು ಸಾಮಾನ್ಯವಾಗಿ ತಿಳಿಹಳದಿ ಅಥವಾ ಕಂದು ಬಣ್ಣ. ಜಗತ್ತಿನ ಎಲ್ಲ ಕಡೆಯೂ ಹೀಗೆಯೇ. ಆದರೆ, ಇರಾನ್ ಒಂದನ್ನು ಬಿಟ್ಟು. ಹಾಗಾದರೆ, ಇರಾನ್ ಬೆಳೆಯುವ ಜೀರಿಗೆಗೆ ಯಾವ ಬಣ್ಣ?
ಹಸಿರು! ಹೌದು, ಹಸಿರು ಜೀರಿಗೆಯನ್ನು ಹೆಚ್ಚು ಪ್ರಮಾಣದಲ್ಲಿ ಅದು ರಫ್ತು ಮಾಡುತ್ತದೆ. ಬಹುಶಃ ನಮ್ಮ ಮಾರುಕಟ್ಟೆಯಲ್ಲಿ ನೀವು ಅಪರೂಪವಾಗಿ ಈ ಜೀರಿಗೆಯನ್ನು ನೋಡಿರಬಹುದು. ಇರಾನ್ ಪ್ರತಿವರ್ಷ 8,000- 50,000 ಟನ್ ಹಸಿರು ಜೀರಿಗೆಯನ್ನು ರಫ್ತು ಮಾಡುತ್ತದೆ. ಜೀರಿಗೆ ಬೆಳೆಯುವ ಪ್ರಮುಖ ರಾಷ್ಟ್ರಗಳು ಮೊರಾಕ್ಕೊ, ಭಾರತ, ಚೀನಾ, ದಕ್ಷಿಣ ರಷ್ಯಾ, ಇಂಡೋನೇಷ್ಯಾ, ಜಪಾನ್ ಮತ್ತು ಟರ್ಕಿ.
ಭಾರತದಲ್ಲೂ ಬಹುತೇಕ ರಾಜ್ಯಗಳಲ್ಲಿ ಜೀರಿಗೆ ಬೆಳೆಯುತ್ತಾರೆ. ವಿಷಾದದ ವಿಚಾರವೆಂದರೆ, ಇಲ್ಲಿನ ಜೀರಿಗೆ ನಮಗೇ ಸಾಲುತ್ತಿಲ್ಲ. ಬೇರೆ ದೇಶಗಳಿಂದ ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಈ ಮಣ್ಣಿಗೆ ಖಂಡಿತವಾಗಿಯೂ ಉತ್ಕೃಷ್ಟ ಜೀರಿಗೆ ಬೆಳೆಯುವ ಸಾಮರ್ಥ್ಯವಿದೆ. ಆದರೆ, ಅದನ್ನು ನಿರ್ವಹಿಸುವ ತಾಕತ್ತು ನಮ್ಮ ಸಂಶೋಧಕರಿಗೆ ಇಲ್ಲ ಎನ್ನುವುದನ್ನು ನಾನಿಲ್ಲಿ ಬೇಸರದಿಂದ ಹೇಳುತ್ತಿದ್ದೇನೆ. ಇಲ್ಲಿನ ಜೀರಿಗೆ ಬೆಳೆಗೆ ರೋಗ ತಗುಲುವುದೇ ಹೆಚ್ಚು. ರೋಗನಿರೋಧಕ ತಳಿಗಳ ಸೃಷ್ಟಿಗೆ ನಮ್ಮ ವಿಜ್ಞಾನಿಗಳು ಅಷ್ಟೇನೂ ಪ್ರಯತ್ನ ಸುರಿಯಲಿಲ್ಲ. ಒಂದು ವೇಳೆ ಆಸಕ್ತಿ ವಹಿಸಿದ್ದೇ ಆಗಿದ್ದಿದ್ದರೆ ಕೋಟ್ಯಂತರ ರುಪಾಯಿ ವಿದೇಶಿ ವಿನಿಮಯ ಪೋಲಾಗುವುದನ್ನು ತಪ್ಪಿಸಬಹುದಿತ್ತು. ಆ ಕಾಲ ಯಾವಾಗ ಬರುತ್ತದೋ?
ಹೋಗಲಿ ಬಿಡಿ... ಇನ್ನು ಜೀರಿಗೆಯ ಸಂಯೋಜನೆಯ ವಿಚಾರಕ್ಕೆ ಬರೋಣ. ತೇವಾಂಶ ಶೇ.6.2, ಸಸಾರಜನಕ ಪದಾರ್ಥ ಶೇ.16.7, ಜಿಡ್ಡು ಶೇ.23.8, ನಾರು ಶೇ.9.1, ಶರ್ಕರ ಪದಾರ್ಥಗಳು ಶೇ.35.5, ಖನಿಜಾಂಶ ಶೇ.7.7, ಕ್ಯಾಲ್ಷಿಯಂ ಶೇ.0.99, ರಂಜಕ ಶೇ.0.99, ಕಬ್ಬಿಣ ಶೇ.0.048, ಸೋಡಿಯಂ ಶೇ.0.16, ಪೋಟ್ಯಾಷಿಯಂ ಶೇ.2 ಇದೆ. ವಾಣಿಜ್ಯ ದೃಷ್ಟಿಯಿಂದ ಭಾರತದಲ್ಲಿ 30 ಮಾದರಿಯ ಜೀರಿಗೆಗಳನ್ನು ಗುರುತಿಸಲಾಗಿದೆ.
ಒಣಗಿದ ಜೀರಿಗೆಯನ್ನು ಪುಡಿ ಮಾಡಿ ಕೂಡಲೇ ಭಟ್ಟಿಗೆ ಹಾಕುವುದರಿಂದ ಶೇ.2.5- 4.5ರಷ್ಟು ತಿಳಿಹಳದಿ ಅಥವಾ ಬಣ್ಣವಿಲ್ಲದ ಬೆಲೆಬಾಳುವ ತೈಲ ಸಿಗುತ್ತದೆ. ಅದನ್ನು ಸ್ವಲ್ಪ ಸಮಯ ಹಾಗೆಯೇ ಇಟ್ಟರೆ ಬಣ್ಣ ಗಾಢವಾಗುತ್ತದೆ. ತೈಲದ ಇಳುವರಿಯು ಬೀಜದ ದರ್ಜೆ ಮತ್ತು ಅದನ್ನು ಕೂಡಿಟ್ಟ ಕಾಲವನ್ನು ಅವಲಂಬಿಸಿದೆ. ಅಂದಹಾಗೆ, ಈ ತೈಲಕ್ಕೂ ಕಲಬೆರಕೆಯ ಭೂತ ಅಂಟಿಕೊಂಡಿದೆ. ಕೃತಕ ಕ್ಯುಮಿನಾಲ್ಡಿಹೈಡ್ ಅನ್ನು ತೈಲಕ್ಕೆ ಬೆರೆಸಲಾಗುತ್ತದೆ. ಇದನ್ನು ವಿಶ್ಲೇಷಣೆಯ ಮೂಲಕ ಕಂಡುಹಿಡಿಯುವುದು ಕಷ್ಟ. ದೃಕ್ ಪರ್ಯಾಯ ಮಾತ್ರ ಸ್ವಲ್ಪ ಹೆಚ್ಚುತ್ತದೆ. ಚಂಚಲ ತೈಲವಲ್ಲದೆ ಬೀಜದಲ್ಲಿ ಸುಮಾರು ಶೇ.10 ಹಸಿರು- ಕಂದು, ಬಣ್ಣದ ಗಾಢ ವಾಸನೆಯ ಎಣ್ಣೆ ಇರುತ್ತದೆ. ಇದು ಒಣಗುವ ಎಣ್ಣೆಗಳ ಜಾತಿಗೆ ಸೇರಿರುತ್ತದೆ. ಇದರ ಅಯೋಡಿನ್ ವ್ಯಾಲ್ಯು 92.
-ಡಾ. ಪಿ. ಸದಾನಂದ ಮೈಯ್ಯ
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)
-sadananda.maiya@gmail.com