ಒನ್ಲಿ ಕಾಮ!
ಗುಂಪುಕಟ್ಟಿಕೊಂಡು ಡೊಳ್ಳು, ತಮಟೆ, ಗುಮಟೆ ಬಾರಿಸುತ್ತ ಹೊಕ್ಯಾ ಹೊಕ್ಯಾ ಎಂದು ಕೂಗುತ್ತಾ ಮನೆ ಮನೆಗೆ ಬರುವ ಇವರ ಪರಿಯೇ ಒಂದು ಹಬ್ಬ.
ಹುಲಿ ವೇಷ, ಗರುಡನ ವೇಷ, ಕೃಷ್ಣನ ವೇಷ, ಬೇಡರ ವೇಷ... ಹೀಗೆ ಸಂದರ್ಭಕ್ಕನುಗುಣವಾಗಿ ವಿವಿಧ ವೇಷ ಪ್ರದರ್ಶಿಸುವ ಕಲೆಗಳು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿವೆ. ಹಾಗೆ ನಮ್ಮೂರಿನಲ್ಲಿ ಹೋಳಿ ಹುಣ್ಣಿಮೆಯ ಮರುದಿನ ಅಂದ್ರೆ ಪಾಲ್ಗುಣ ಕೃಷ್ಣ ಪ್ರತಿಪದೆಯಂದು ಕಾಮ ದಹನದ ಪ್ರಯುಕ್ತ ಕಾಮನ ವೇಷ ಧರಿಸಿ ಮನೆ ಮನೆಗೆ ಬಂದು ದುಡ್ಡು, ಅಕ್ಕಿ, ತೆಂಗಿನಕಾಯಿ, ಎಣ್ಣೆ ವಸೂಲಿ ಮಾಡಿಕೊಂಡು ಹೋಗುವುದು ಗೊತ್ತೇ ಇದೆ.
ಹಾಗೆಯೇ ಇನ್ನೊಂದು ಯಕ್ಷ ವಿದ್ಯೆ ಇದೆ. ಕಾಮ! ಆ ಯಕ್ಷಧಾರಿಯ ಮುಖಕ್ಕೆ ವಿಚಿತ್ರ ಬಣ್ಣ ಬಳಿಯಲಾಗಿರುತ್ತೆ. ವಿಕಾರ ಭಯ ಹುಟ್ಟಿಸುವ ಮುಖವಾಡ. ಕೈಯಲ್ಲಿ ಕತ್ತಿ. ಆ ದಿನ ಯಾರೊಬ್ಬರ ಮನೆಯಲ್ಲೂ ಹುಡುಗರು ಹೊರಗೆ ಬರೋದೇ ಇಲ್ಲ. ಮನೆಯಲ್ಲಿ ನಿಂತು, ನೆರೆಮನೆಯಲ್ಲಿ ಕಾಮ ಕುಣಿಯುವುದನ್ನು ನೋಡಿ ತನ್ನ ಮನೆಗೆ ಬರುವಾಗ ಮುಂದಿನ ಮನೆಗೆ ಹೋಗಿ ನೋಡುವುದು ಅಥವಾ ಮನೆಯ ಅಟ್ಟದ ಮೇಲೇರಿ ಕಿಟಕಿಯಲ್ಲಿ ಇಣುಕಿ ನೋಡುವುದು ಹುಡುಗರ ಆಟ. ಆ ದಿನ ಶಾಲೆಗಳಿಗೆ ಅಘೋಷಿತ ರಜೆ.
ಗುಂಪುಕಟ್ಟಿಕೊಂಡು ಡೊಳ್ಳು, ತಮಟೆ, ಗುಮಟೆ ಬಾರಿಸುತ್ತ ಹೊಕ್ಯಾ ಹೊಕ್ಯಾ ಎಂದು ಕೂಗುತ್ತಾ ಮನೆ ಮನೆಗೆ ಬರುವ ಇವರ ಪರಿಯೇ ಒಂದು ಹಬ್ಬ. ಬ್ರಿಟಿಷರ ಕಾಲದಲ್ಲೇ ಸರಕಾರದಿಂದ ಗುರುತಿಸಲ್ಪಟ್ಟು ಮಾನ್ಯತೆ ಪಡೆದಿದ್ದಾರಿವರು. ಸರಕಾರಿ ಕಾಮ, ಎತ್ತಿನ ಕೊರಳಿಗೆ ಕಟ್ಟುವ ಗಂಟೆ ಕಟ್ಟಿಕೊಂಡು ತಾಳಕ್ಕೆ ತಕ್ಕಂತೆ ಕುಣಿಯುತ್ತ ಬರುವ ಹೆಬ್ಲೆ ಕಾಮ, ಭಯ ಹುಟ್ಟಿಸುವ ದೇಶಭಂಡಾರಿ ಕಾಮ, ದಿನದ ಕೊನೆಯಲ್ಲಿ ಬರುವ ಬೇಟೆ ಕಾಮ. ಹೀಗೆ ದಿನದಲ್ಲಿ 10-12 ಪಂಗಡ ಬರುವ ಇವರ ಆ ದಿನದ ವಹಿವಾಟು 50-60 ಸಾವಿರ ರುಪಾಯಿ. ಹೊನ್ನಾವರ ತಾಲೂಕಿನ ಕೆಕ್ಕಾರು ಗ್ರಾಮಕ್ಕೆ ಬರುವ ಮಾರ್ಚ್ 28ರಂದು ಬಂದ್ರೆ ನೀವೂ ನೋಡ್ಬಹುದು.
-ಕೆಕ್ಕಾರ ಎಸ್.ಎ. ಭಟ್ಟ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.