ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೋಮಿ ವೈದ್ಯ

ಮೂರು ತಿಂಗಳ ಅವಧಿಯಲ್ಲಿ ಒಂದೇ ವ್ಯಕ್ತಿಯನ್ನು ಹುಡುಕಿಕೊಂಡು...

Srinivasa Murthy VN
Updated On : 12 Mar 2013, 6:07 am

ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೋಪಥಿ ಕಾರ್ಯಕಾರಿಣಿ ಸದಸ್ಯತ್ವ, ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷ ಸ್ಥಾನ... ಇವು ಮೂರು ತಿಂಗಳ ಅವಧಿಯಲ್ಲಿ ಒಂದೇ ವ್ಯಕ್ತಿಯನ್ನು ಹುಡುಕಿಕೊಂಡು ಬಂದಿರುವ ಗೌರವಗಳು.

1975ರ ಆಗಸ್ಟ್. ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯಿಂದ ಬೆಂಗಳೂರಿಗೆ ಬಂದಿಳಿದ ಆ ಯುವಕನ ಕೈಯ್ಯಲ್ಲಿ ಕಾಸಿರಲಿಲ್ಲ. ಮಹಾನಗರದಲ್ಲಿ ಪರಿಚಿತರೂ ಇರಲಿಲ್ಲ. ಏನು ಮಾಡಬೇಕು ಎನ್ನುವ ಸ್ಪಷ್ಟ ಕಲ್ಪನೆಯೂ ಇರಲಿಲ್ಲ. 'ಏನಾದರೂ ಆಗು. ಆದರೆ ಬೇರೆಯವರ ಕೈ ಕೆಳಗೆ ದುಡಿಯಬೇಡ. ಸ್ವತಂತ್ರವಾಗಿ ಸಾಧನೆ ಮಾಡು' ಎಂದು ಅಪ್ಪ ಹೇಳಿದ್ದ ಮಾತು ಮಾತ್ರ ಮನಸ್ಸಿನಲ್ಲಿ ಭದ್ರವಾಗಿ ಕೂತಿತ್ತು. ಯಾರ ಹಂಗೂ ಇರಬಾರದು ಎಂದರೆ ಒಂದೋ ವೈದ್ಯನಾಗಬೇಕು ಅಥವಾ ವಕೀಲನಾಗಬೇಕು. ಯಾವುದನ್ನು ಆಯ್ದುಕೊಂಡರೂ ಓದು ಮುಗಿಸಲು ಸಿಕ್ಕಾಪಟ್ಟೆ ದುಡ್ಡು ಬೇಕು. ಹೀಗೇ ಯೋಚಿಸುತ್ತಿದ್ದಾಗ ಅರಿವಿಗೆ ದಕ್ಕಿದ್ದು ಕಡಿಮೆ ಖರ್ಚಿನ ಕೋರ್ಸ್ 'ಹೋಮಿಯೋಪಥಿ' ಎನ್ನುವುದು.

ಬೆಳವಾಡಿ ತಿಪ್ಪೇಸ್ವಾಮಿ(ಬಿ.ಟಿ) ರುದ್ರೇಶ್ 'ಡಾಕ್ಟರ್' ಆದದ್ದು ಹೀಗೆ. ಅನಿವಾರ್ಯವಾಗಿ ಹೋಮಿಯೋಪಥಿ ಅಪ್ಪಿಕೊಂಡರೂ ಇವತ್ತು ಈ ವೈದ್ಯಪದ್ಧತಿಯಲ್ಲಿ ನಾಡಿನ ದೊಡ್ಡ ಹೆಸರು. 40ಕ್ಕೂ ಅಧಿಕ ರಾಷ್ಟ್ರಗಳ ವೈದ್ಯರಿಗೆ ಲೈವ್ ಚಾಟ್ ಮೂಲಕ ಮಾರ್ಗದರ್ಶನ ನೀಡುವವರು. ಅದಕ್ಕೆ ಕಾರಣ ಒಪ್ಪಿಕೊಂಡಿದ್ದನ್ನೇ ತನ್ನ ಧರ್ಮ, ಕರ್ಮ ಎಂದು ಪ್ರೀತಿಸುವ ಪರಿ; ಪರಿಶ್ರಮ ಶ್ರದ್ಧೆ; ಮತ್ತು ಅವರಿಗಿರುವ ಸಾಮಾಜಿಕ ಕಳಕಳಿ.

ಬೆಂಗಳೂರು ಡಿವಿಜಿ ರಸ್ತೆಯ ಪುಟ್ಟ ಅಶ್ವಿನಿ ಹೋಮಿಯೋ ಕ್ಲಿನಿಕ್ನಲ್ಲಿ ಡಾ.ಬಿ.ಟಿ. ರುದ್ರೇಶ್ ಭೇಟಿಗಾಗಿ ನಿತ್ಯ 150-200 ಮಂದಿ ಕಾದು ಕೂತಿರುತ್ತಾರೆ. ಅವರಲ್ಲಿ ಬಡವರು, ಶ್ರೀಮಂತರು, ಗಣ್ಯರು, ಸೆಲೆಬ್ರಿಟಿಗಳು ಎಲ್ಲರೂ ಇರುತ್ತಾರೆ. ಕನಿಷ್ಠ ಎರಡು ತಿಂಗಳು ಮೊದಲು ರುದ್ರೇಶ್ ಭೇಟಿಗೆ ಸಮಯ ನಿಗದಿಪಡಿಸಿಕೊಳ್ಳಬೇಕು.

ಬೇರೆ ವೈದ್ಯರಿಗಿಂತ ರುದ್ರೇಶ್ ಭಿನ್ನವಾಗಿ ನಿಲ್ಲುವುದಾದರೂ ಏಕೆ? ಅವರಿಂದಲೇ ಮದ್ದು ಪಡೆಯಲು ಜನ ಏಕೆ ಹಾತೊರೆಯುತ್ತಾರೆ? ರೋಗಿಗಳಿಗೆ ಇವರು ಬರಿ ನೋವು ನೀಗುವ ವೈದ್ಯರಲ್ಲ. ಆತ್ಮೀಯ ಸ್ನೇಹಿತ, ಆಪ್ತ ಸಲಹೆಗಾರ, ಒಳ್ಳೆಯ ಮಾರ್ಗದರ್ಶಕ. ವ್ಯಕ್ತಿಯ ದೇಹ, ಬುದ್ಧಿ, ಮನಸ್ಸು ಎಲ್ಲವನ್ನೂ ಸಮಗ್ರವಾಗಿ ನೋಡುವ; ಕಾಯಿಲೆ ನಿವಾರಣೆ ಜತೆಗೆ ಚಾರಿತ್ರ್ಯವಂತರ ನಿರ್ಮಾಣವೂ ಆಗಬೇಕು ಎನ್ನುವ ಹೋಮಿಯೋಪಥಿಗೆ ಬೇಕಿರುವುದೂ ಇಂಥ ವೈದ್ಯರೇ.

'ಹೋಮಿಯೋಪಥಿಯ ಮಿತಿ ಎಂದರೆ ವೈದ್ಯನೇ. ಸೋಲು ವೈದ್ಯನದೇ ಹೊರತು ಹೋಮಿಯೋಪಥಿ ಪದ್ಧತಿಯದಲ್ಲ' ಎನ್ನುವುದನ್ನು ಅರಿತು ನಡೆಯುತ್ತಿರುವವರು ಅವರು. ಹೀಗಾಗಿಯೇ ರಾಷ್ಟ್ರದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಹೋಮಿಯೋಪಥಿಗೆ ಹೊಸ ದಿಕ್ಕು ತೋರಿಸಲು ಅವರಿಂದ ಸಾಧ್ಯವಾದದ್ದು. 'ನನಗೆ ಏನು ಗೊತ್ತಿಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ' ಎನ್ನುವ ಭಾವ ಅವರನ್ನು 'ಅಶ್ವಿನಿ ವೈದ್ಯ'ನ ಸಾಲಿಗೆ ನಿಲ್ಲಿಸಿದ್ದು. ಹೋಮಿಯೋಪಥಿಯಲ್ಲಿ ಎಂ.ಡಿ ಪದವಿ ಪಡೆದ ಬಳಿಕ ರುದ್ರೇಶ್ ಮುಂಬೈನ ಆಲೋಪಥಿ ಆಸ್ಪತ್ರೆಯೊಂದರಲ್ಲಿ ಎರಡು ವರ್ಷ ದುಡಿದರು. ನಂತರ ಅಶ್ವಿನಿ ಹೋಮಿಯೋ ಕ್ಲಿನಿಕ್ನ ಡಾ.ಎ.ವಿ. ಕೃಷ್ಣಮೂರ್ತಿ ಬಳಿ ಸೇರಿಕೊಂಡರು.

32 ವರ್ಷಗಳ ಪ್ರಾಕ್ಟೀಸ್ ನಲ್ಲಿ 15 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಶೀತದಿಂದ ಕ್ಯಾನ್ಸರ್ವರೆಗೆ ಎಲ್ಲ ಬಗೆಯ ವ್ಯಾಧಿಗಳಿಗೆ ಅವರಲ್ಲಿ ಮದ್ದುಂಟು. ವಿಶೇಷವಾಗಿ ಹೆಸರು ತಂದುಕೊಟ್ಟದ್ದು ಸಂತಾನ ಭಾಗ್ಯವಿಲ್ಲದವರಿಗೆ ತಾಯ್ತನದ ಸುಖ ಸಿಗುವಂತೆ ಮಾಡಿದ್ದು.
ಸುಮಾರು 2 ಸಾವಿರ ಸ್ತ್ರೀಯರಿಗೆ ಮಾತೃತ್ವ, ಆ ಮೂಲಕ ಹೆಣ್ತನ ಇವರ ಚಿಕಿತ್ಸೆಯಿಂದ ಸಿಕ್ಕಿದೆ. 'ಇದು ಗರ್ಭ ಧರಿಸಿದವರು ಬಂದು ನೀಡಿದ ಮಾಹಿತಿ. 'ನನ್ನ ಅಂದಾಜಿನಂತೆ ನಮ್ಮ ಚಿಕಿತ್ಸೆಯ ಪ್ರಯೋಜನ ಪಡೆದವರು ಸಂಖ್ಯೆ ಇದರ ದುಪ್ಪಟ್ಟು. ಬೇಸರ ಎಂದರೆ ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ ನಮ್ಮಲ್ಲಿಗೆ ಬರುವವರು, ಮಕ್ಕಳಾದ ನಂತರ ನಮಗೆ ಮಾಹಿತಿಯನ್ನೇ ನೀಡುವುದಿಲ್ಲ. ದಯಮಾಡಿ ನಮ್ಮಲ್ಲಿ ಬಂದು ಹೇಳಿದರೆ ದಾಖಲಾಗುತ್ತದೆ' ಎನ್ನುತ್ತಾರೆ ರುದ್ರೇಶ್. 'ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನಿಲ್ಲ. ಬೇರೆ ಕಾಯಿಲೆಗಳಿಗೆ ಔಷಧ ಪಡೆದವರು ಇತರರ ಬಳಿ ಹೇಳಿಕೊಳ್ಳುವುದಿಲ್ಲ. ಸಂತಾನ ಎನ್ನುವುದು ಸಾಮಾಜಿಕ ಸ್ಥಾನಮಾನ, ಪ್ರತಿಷ್ಠೆ. ಆದ್ದರಿಂದ ಅದು ಎಲ್ಲರಿಗೂ ಗೊತ್ತಾಗುತ್ತದೆ ಅಷ್ಟೆ' ಎನ್ನುವುದು ಅವರ ವಿನೀತ ಭಾವ.

ಬೆಂಗಳೂರಿಗೆ ಕಾಲಿಡುವಾಗ 'ವಾಟ್' ಅಂಥ ಕೇಳಿದರೆ 'ವಾಟ್ ಅಂದ್ರೆ ಏನು' ಅಂಥ ಕೇಳುತ್ತಿದ್ದವರು ಮೂರು ವರ್ಷ ಇಂಗ್ಲಿಷ್ ದಿನಪತ್ರಿಕೆಗೆ ಅಂಕಣ ಬರೆದರು. ಹಲವು ಕನ್ನಡ ದೈನಿಕಗಳಲ್ಲೂ ಲೇಖನಗಳು ಪ್ರಕಟವಾದವು. ಭಾಗವಹಿಸಿದ ಟಿ.ವಿ ಕಾರ್ಯಕ್ರಮಗಳು ನೂರಾರು. 'ನೋವು ನೀಗುವ ಕಾಯಕದಲ್ಲಿ ಕಂಡ ಬದುಕು' (ಆರು ಮುದ್ರಣ), 'ಹೋಮಿಯೋಪಥಿ- ದಿ ಹೀಲಿಂಗ್ ಟಚ್', 'ವೈದ್ಯನ ಹತ್ತು ಮುಖಗಳು', 'ಬಡವರ ಬಾದಾಮಿ ಹೋಮಿಯೋಪಥಿ' ಅವರ ಕೃತಿಗಳು. ಹೋಮಿಯೋಪಥಿಯಲ್ಲಿ ತಾವು ಪಡೆದಿರುವ ಜ್ಞಾನ, ಅನುಭವಗಳನ್ನು ರಾಜ್ಯದ ಎಲ್ಲ 12 ಸಾವಿರ ಹೋಮಿಯೋಪಥಿ ವೈದ್ಯರಿಗೆ ಹಂಚಬೇಕು ಎನ್ನುವ ಆಸೆ ಅವರಲ್ಲಿದೆ. 'ಆಲೋಪಥಿ ವೈದ್ಯರಾಗಿದ್ದರೂ ರುದ್ರೇಶ್ ಇಷ್ಟೇ ಎತ್ತರಕ್ಕೆ ಏರುತ್ತಿದ್ದರು' ಎಂದು ಡಾ.ಸಿ.ಆರ್. ಚಂದ್ರಶೇಖರ್ ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಕಾಣುವುದಿಲ್ಲ.

ಡಾ.ಬಿ.ಟಿ. ರುದ್ರೇಶ್ ಮಾಧ್ಯಮಗಳಲ್ಲಿ, ಸಾಮಾಜಿಕ ವೇದಿಕೆಗಳಲ್ಲಿ ಬಹಳ ಕಾಣಿಸಿಕೊಳ್ಳುತ್ತಾರೆ ಎನ್ನುವ ಸಣ್ಣದೊಂದು ಆಕ್ಷೇಪವೂ ಕೆಲವರಲ್ಲಿದೆ. ಅದಕ್ಕೆ ರುದ್ರೇಶ್ ಹೇಳುವುದಿಷ್ಟು, "ಕಟ್ಟಿಯುಂ ಏನೋ ಪೊಸ ಬಾಸಿಗಂ, ಮುಡಿವ ಭೋಗಿಗಳಿಲ್ಲದೆ ಬಾಡಿ ಹೋಗುದೆ' ಎನ್ನುವ ಆತಂಕ ಕವಿ ಜನ್ನನಿಗೇ ಇತ್ತು. ನಾನು ಮಾಡಿದ್ದು ಜನರಿಗೆ ತಲುಪಲಿ ಎಂದು ನಾನು ಹಂಬಲಿಯುವುದು ತಪ್ಪೇ?."
ಅಶ್ವಿನಿ ಕ್ಲಿನಿಕ್ ದೂರವಾಣಿ: (080) 26797575.

ಆರೋಗ್ಯದ ಹೊಸ ವ್ಯಾಖ್ಯೆ
ಆರೋಗ್ಯ ಎನ್ನುವ ಪದಕ್ಕಿಂತ ಸ್ವಾಸ್ಥ್ಯ ಎಂದು ಬಳಸುವುದು ಒಳ್ಳೆಯದು. ಆಧುನಿಕ ನೆಮ್ಮದಿ ಇಲ್ಲದವನು, ನಿಂತಲ್ಲಿ ನಿಲ್ಲದವನು, ಸದಾ ಚಡಪಡಿಸುವವನು, ಈಗಿರುವುದರಲ್ಲಿ ತೃಪ್ತನಾಗದೆ ಸದಾ ಏನಾದರೂ ಒಂದು ಆಗಲೇಬೇಕೆಂದು ಚಡಪಡಿಸುವವನೂ ಆಗಿದ್ದಾನೆ. ಅದೇ ಅವನನ್ನು ಅಸುಖಿಯಾಗಿಸಿದೆ. ಕ್ಷಣಕ್ಷಣವೂ ತಲ್ಲಣಕ್ಕೆ ಒಳಗಾಗಿಸಿದೆ. ಪರಿತಪಿಸುವಂತೆ ಮಾಡಿದೆ. ಇದು ಸಮಸ್ಯೆಯ ಮೂಲ. ಇದನ್ನು ಸರಿಪಡಿಸಿದರೆ ಸ್ವಾಸ್ಥ್ಯ ತಾನಾಗಿಯೇ ಬರುತ್ತದೆ.
- ಡಾ.ಬಿ.ಟಿ. ರುದ್ರೇಶ್

ವೈದ್ಯನ ಹತ್ತು ಮುಖ
ಡಾ.ಬಿ.ಟಿ. ರುದ್ರೇಶ್ ಒಳ್ಳೆಯ ವೈದ್ಯರಷ್ಟೇ ಅಲ್ಲ. ಉತ್ತಮ ವಾಗ್ಮಿ, ಬರಹಗಾರ ಕೂಡ. ನಿತ್ಯ ರಾತ್ರಿ ಏನಾದರೂ ಓದದೇ ಮಲಗುವ ಅಭ್ಯಾಸವಿಲ್ಲ. ಮಧ್ಯಾಹ್ನ 2 ಗಂಟೆಗೆ ಕ್ಲಿನಿಕ್ಗೆ ಬಂದರೆ ಮನೆಗೆ ಹೋಗುವಾಗ ಮಧ್ಯರಾತ್ರಿ. ಊಟ ಮುಗಿಸುವಾಗ ಗಂಟೆ ಒಂದಾಗಿರುತ್ತದೆ. ಆಮೇಲೆ ಎರಡು ತಾಸು ಓದು. ಕನ್ನಡ, ಇಂಗ್ಲಿಷ್ನ ಯಾವ ಸಾಹಿತ್ಯ ಪ್ರಕಾರದ ಕೃತಿಯಾದರೂ ಆದೀತು. ಬೆಳಗ್ಗೆ 8ಕ್ಕೆ ಎದ್ದು ಎರಡು ಕಿ.ಮೀ ನಡಿಗೆ, ಐದು ದಿನಪತ್ರಿಕೆಗಳ ಓದು. 'ವೈದ್ಯರು ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ವೃತ್ತಿಗೆ ಸಹಾಯಕ. ಏಕೆಂದರೆ ವೈದ್ಯ ಸೂಕ್ಷ್ಮ ಪ್ರಜ್ಞೆಯುಳ್ಳವನಾಗಿರಬೇಕು ಮತ್ತು ಪತ್ತೇದಾರನೂ ಆಗಿರಬೇಕು. ಅದಕ್ಕೆ ದೈನಂದಿನ ಆಗುಹೋಗುಗಳ ಅರಿವಿದ್ದರೆ ಉತ್ತಮ' ಎನ್ನುವುದು ಅನುಭವದ ಮಾತು.

ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಲೇ ಕಾರಂತ, ಕುವೆಂಪು, ಭೈರಪ್ಪನವರನ್ನು ಓದಿಕೊಂಡಿದ್ದರು. ಆಗ ಓದಿದ ಈ ಮೂವರ ಕೃತಿಗಳೇ ತಮ್ಮನ್ನು ಮನುಷ್ಯರನ್ನಾಗಿಸಿದವು ಎಂದು ಹೇಳಿಕೊಳ್ಳುತ್ತಾರೆ. ಸ್ಯಾಮ್ಯುಯೆಲ್ಸ್ ಸ್ಮೈಲ್ಸ್ನ 'ಸೆಲ್ಫ್ ಹೆಲ್ಪ್', 'ಕ್ಯಾರೆಕ್ಟರ್', 'ಥ್ರಿಫ್ಟ್'; ಡೇಲ್ ಕಾರ್ನಿಗಿಯ 'ಮ್ಯಾನ್ ದಿ ಅನ್ನೌನ್' ಕೃತಿಗಳೂ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿವೆ.
ಒಳ್ಳೆಯ ಕಾಫಿ ಮತ್ತು ರುಚಿಕಟ್ಟಾದ ಆಹಾರ ಇಷ್ಟ. ಅದಕ್ಕಾಗಿ ಕೆಲವೊಮ್ಮೆ 10-15 ಕಿ.ಮೀ ದೂರ ಹೋಗುವುದೂ ಉಂಟು. ಮುಖೇಶ್, ಮಹಮದ್ ರಫಿ ಮತ್ತು ಲತಾ ಮಂಗೇಶ್ಕರ್ ಹಾಡುಗಳ ಸಿ.ಡಿಗಳ ದೊಡ್ಡ ಸಂಗ್ರಹವೇ ಇದೆ.

'ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷರಿಗೆ ಸರ್ಕಾರ ರಾಜ್ಯ ಸಚಿವನ ಸ್ಥಾನಮಾನ ನೀಡಲು ನಿರ್ಧರಿಸಿದೆ. ಕಾರು ಹೊರತುಪಡಿಸಿ ಬೇರಾವುದೇ ಸೌಲಭ್ಯ ಪಡೆಯುವುದಿಲ್ಲ. ಸಾಂಕೇತಿಕವಾಗಿ ಮಾಸಿಕ ಒಂದು ರುಪಾಯಿ ಗೌರವಧನ ಅಷ್ಟೇ ಪಡೆಯುವೆ' ಎನ್ನುತ್ತಾರೆ ರುದ್ರೇಶ್.

- ರಾಜೇಶ ಮುಂಡಿಗೇಸರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments