ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಡ ಪ್ರೆಸಿಡೆಂಟು!

ಲೇಸರ್ ಲೈಟ್ ಬಿಟ್ಟು ಹುಡುಕಿದರೂ ನಮ್ಮಲ್ಲೊಬ್ಬ ಜೋಸ್ ಮುಜಿಕರಂಥ ವ್ಯಕ್ತಿ ಸಿಕ್ಕಲ್ಲ.

Srinivasa Murthy VN
Updated On : 3 May 2013, 3:22 am

ಲೇಸರ್ ಲೈಟ್ ಬಿಟ್ಟು ಹುಡುಕಿದರೂ ನಮ್ಮಲ್ಲೊಬ್ಬ ಜೋಸ್ ಮುಜಿಕರಂಥ ವ್ಯಕ್ತಿ ಸಿಕ್ಕಲ್ಲ. ಆದರೂ, ಕೆಲವು ಪ್ರಾಮಾಣಿಕರಿದ್ದಾರೆ. ಇನ್ನಿರುವುದು ಇಪ್ಪತ್ನಾಲ್ಕು ಗಂಟೆ. ಅಂಥವರನ್ನು ಗುರುತಿಸಿ ಅಮೂಲ್ಯ ಮತ ಅವರಿಗೇ ನೀಡೋಣ.

ರಾಷ್ಟ್ರಾಧ್ಯಕ್ಷರು ಇದೇ ರಸ್ತೇಲಿ ಬರ್ತಿದ್ದಾರಂತೆ! ಉರುಗ್ವೆಯ ರಾಜಧಾನಿ ಮಾಂಟೆವಿಡಿಯೋದಲ್ಲಿ ಯಾರಾದರೂ ಹೀಗೆ ಹೇಳಿಬಿಟ್ಟರೆ ಜನರಿಗೆ ಟ್ರಾಫಿಕ್ನ ತಲೆಬಿಸಿ ತಟ್ಟದು. ಬರ್ರನೆ ಬರುವ ನೂರಾರು ಕಾರುಗಳ ಮಧ್ಯೆ 'ಎಸ್ಎಓ 1653' ನಂಬರಿನ ಆ ಡಬ್ಬ ಕಾರಿಗೆ ಸಣ್ಣ ಜಾಗ ಸಾಕು. ರಾಷ್ಟ್ರಾಧ್ಯಕ್ಷರ ಕಾರಾದರೂ ಸೈಡು ಬಿಡಬೇಕೆಂದು ರೂಲ್ಸು ಹೇಳಲು, ಜೇಬು ತುಂಬುವಷ್ಟು ಫೈನು ಜಡಿಯಲು ಅಲ್ಲಿ ಪೊಲೀಸರ ಅಗತ್ಯವಿಲ್ಲ. 'ಟೊಂಯ್ ಟೊಂಯ್' ಅಂತ ಆ ಕಾರನ್ನು ಹಿಂಬಾಲಿಸಿ ಪ್ರೆಸಿಡೆಂಟಿನ ಆಗಮನವನ್ನು ರಂಗೇರಿಸಲು ಅಲ್ಲಿ ಸಾಲು ಸಾಲು ಸರ್ಕಾರಿ ಕಾರುಗಳ ಪೆರೇಡೂ ಇರೋದಿಲ್ಲ.
ಉರುಗ್ವೆಯ ಜೋಸ್ ಮುಜಿಕ ವಿಶ್ವದ ಅತಿ ಬಡ ರಾಷ್ಟ್ರಾಧ್ಯಕ್ಷ. ನಾಡಿದ್ದು ಮೇ 20 ಬಂದರೆ ಅವರಿಗೆ ತುಂಬೋದು ಎಪ್ಪತ್ತೆಂಟು ವರ್ಷ. ನಾವಂದುಕೊಂಡಹಾಗೆ ಉರುಗ್ವೆ ದಟ್ಟ ದರಿದ್ರ ದೇಶವೇನಲ್ಲ. ಅತಿ ಶ್ರೀಮಂತ ದೇಶಗಳಲ್ಲಿ ಅದಕ್ಕೆ 60ನೇ ಸ್ಥಾನ. ಅಂದರೆ, ಕೆಲವು ಕ್ಷೇತ್ರಗಳಲ್ಲಿ ನಮಗಿಂತ ಮೇಲು. ಪ್ರೆಸಿಡೆಂಟು ಎನ್ನುವ ಕಾರಣಕ್ಕೆ ಮುಜಿಕಗೆ ಸಾಕಷ್ಟು ಸ್ಯಾಲರಿ ಕೊಟ್ಟಿದೆ ಆ ದೇಶ. ಝೆಡ್ ಲೆವೆಲ್ಗೆ ಸಮನಾಗಿ ರಕ್ಷಣೆ ಒದಗಿಸಿದೆ. ಆದರೂ, ಮುಜಿಕ ಇವೆಲ್ಲವನ್ನೂ ಮುಲಾಜಿಲ್ಲದೆ ಮೂಲೆ ತಳ್ಳಿದ್ದಾರೆ.

ಬಡವನಾಗಿಯೇ ಇರುವೆ...
ಉರುಗ್ವೆಯಂಥ ದೇಶಗಳಲ್ಲಿ ಐದು ವರ್ಷ ಪ್ರೆಸಿಡೆಂಟಾದರೂ ಸಾಕು. ಕರಪ್ಷನ್ ಇಲ್ಲದೆಯೂ ಎರಡು ಪೀಳಿಗೆಗೆ ಸಾಲುವಷ್ಟು ಹಣವನ್ನು ಖಜಾನೆಗೆ ತುಂಬಿಸಿಕೊಳ್ಳಬಹುದು. ಇಷ್ಟಾದರೂ ಮುಜಿಕಗೆ ಬರುವ 7 ಲಕ್ಷ ರು.ನ ಸಂಬಳದ ಮೇಲೆ ಮೋಹ ಬೆಳೆದಿಲ್ಲ. ಶೇ.95 ಭಾಗದ ಸ್ಯಾಲರಿ ಬಡವರಿಗೆ ದಾನದ ರೂಪದಲ್ಲಿ ಹೋಗುತ್ತದೆ.

ಸೇವೆ ಬೇಡವೇ ಬೇಡ!
ಹೆಂಡತಿಯ ಮನೆಯಲ್ಲೂ ಅವರಿಗೆ ಆಳುಗಳಿಲ್ಲ. ಆ ಫಾರ್ಮ್ ಹೌಸಿನ ಪಕ್ಕದಲ್ಲಿ ಮೂರ್ನಾಲ್ಕು ಎಕರೆ ಜಮೀನುಂಟು. ಮುಜಿಕ ಬೆಳಗ್ಗೆ 5 ಗಂಟೆಗೆ ಮುಖ ತೊಳೆದು, ಹೊಲದಲ್ಲಿ ಕೃಷಿ ಮಾಡತೊಡಗುತ್ತಾರೆ. ಮನೆಗೆ ಅಗತ್ಯವಾದ ತರಕಾರಿ ಅಲ್ಲಿಯೇ ಬೆಳೆಯುತ್ತದೆ. ಕ್ವಿಂಟಲ್ಗಟ್ಟಲೆ ಬೆಳೆದ ಸೊಯಾಬೀನ್ನಿಂದ ಸಿಕ್ಕ ಕಾಸಿನಲ್ಲಿ ಪತ್ನಿಗೊಂದು ಜೊತೆ ಬಟ್ಟೆ ತಂದುಕೊಟ್ಟು ಸ್ಮೈಲು ಕೊಡ್ತಾರೆ. ನಾಲ್ಕು ದಿಕ್ಕಿನಲ್ಲಿ ಜೇನು ಸಾಕಿದ್ದಾರೆ. ಇವೆಲ್ಲದರ ಆರೈಕೆ ಮುಗಿದ ಮೇಲೆ ಸಮಯ 7 ಗಂಟೆಯಾಯ್ತು ಅಂದ್ರೆ ಮುಜಿಕಗೆ 'ದೇಶದ ಕೆಲಸ' ನೆನಪಾಗುತ್ತೆ.

ಸರಳತನ ಹೇಗೆ ಬಂತು?
1960-70ರಲ್ಲಿ ಉರುಗ್ವೆಯ ಗೆರಿಲ್ಲಾ ಪಡೆಯಲ್ಲಿ ಮುಜಿಕ ಹೆಸರು ಅತಿಮುಖ್ಯವಾಗಿತ್ತು. ಕ್ಯೂಬಾದ ಕ್ರಾಂತಿಯಿಂದ ಪ್ರೇರಣೆಗೊಂಡು ದೇಶದಲ್ಲೊಂದು ಬದಲಾವಣೆ ತರುವ ಕನಸನ್ನು ಅಲ್ಲಿಂದಲೇ ಪೋಷಿಸಿದರು. 1985ರಲ್ಲಿ ಉರುಗ್ವೆಯಲ್ಲಿ ಪ್ರಜಾಪ್ರಭುತ್ವ ರಚನೆಯಾದಾಗ 14 ವರ್ಷದ ಜೈಲುವಾಸ ಅವರ ಬದುಕನ್ನೇ ಬದಲಿಸಿತು. ಆಗ ಸರಳುಗಳ ಹಿಂದೆ ಕಲಿತದ್ದು ಸರಳತೆಯ ಪಾಠ. 'ಮನುಷ್ಯ ಎಷ್ಟು ಸಿಂಪಲ್ ಆಗಿರಬೇಕೆಂದು ಜೈಲು ಹೇಳಿಕೊಡುತ್ತದೆ' ಎಂಬ ಅವರ ಮಾತು ಇಂದಿಗೂ ತೂಗುತ್ತದೆ. ಜೈಲಿನ ಲೈಫ್ಸ್ಟೈಲೇ ಪ್ರೆಸಿಡೆಂಟಾದ ಮೇಲೂ ಮುಂದುವರಿದಿದೆ.

ಇವೆಲ್ಲ ಹೇಳಿದ್ದು ಯಾಕಂದ್ರೆ...

ನಾಳೆಯೇ ಮತದಾನ. ಇಷ್ಟು ದಿನ ನಡೆದ ಕೋಟಿಗಟ್ಟಲೆ ಹಣದ ಹೋಮ ಯಾವ ಲೋಕಕಲ್ಯಾಣಕ್ಕೂ ಕಾರಣವಾಗಿಲ್ಲ. ಲೇಸರ್ ಲೈಟ್ ಬಿಟ್ಟು ಹುಡುಕಿದರೂ, ಯಾವ ಜೋಯಿಸರ ಬಳಿ ಖಣಿ ಕೇಳಿದರೂ ನಮ್ಮಲ್ಲೊಬ್ಬ ಜೋಸ್ ಮುಜಿಕರಂಥ ವ್ಯಕ್ತಿ ಸಿಕ್ಕಲ್ಲ. ನಮ್ಮವರು ಜೈಲಿಗೆ ಹೋಗಿಬಂದರೂ ಸರಳತೆಯ ಪಾಠ ಕಲಿಯೋರಲ್ಲ. ಹಾಗೆ ಕಲಿಯುವವರಿದ್ದರೆ ನಮ್ಮ ರಾಜಕಾರಣದಲ್ಲೂ ಸಾವಿರ ಮಂದಿ ಮುಜಿಕಗಳಿರುತ್ತಿದ್ದರು!
ಆದರೂ, ಕೆಲವು ಪ್ರಾಮಾಣಿಕರಿದ್ದಾರೆ. ಅವರ ಮೂಗಿಗೂ ಲಂಚದ ವಾಸನೆ ವಾಕರಿಕೆ ತರಿಸಬಹುದು. ಇನ್ನಿರುವುದು ಇಪ್ಪತ್ನಾಲ್ಕು ಗಂಟೆ. ಅಂಥವರನ್ನು ಗುರುತಿಸಿ ಅಮೂಲ್ಯ ಮತ ಅವರಿಗೇ ನೀಡೋಣ. ಏನೇ ಅನ್ನಿ... ಬೆರಳಿಗಂಟುವ ಮಸಿ, ದೇಶಕ್ಕಂಟುವ ಮಸಿಯಾಗಬಾರದಷ್ಟೇ.

ರಕ್ಷಣೆ ಬೇಡ
ಉಗ್ರರ ಕಾಟ ಉರುಗ್ವೆಯಲ್ಲೂ ಉಂಟು. ಗಾಂಧಿಗೆ ಗುಂಡಿಟ್ಟ ಗೂಂಡಾಗಳಂತೆ ಅಲ್ಲಿಯೂ ನೂರಾರಿದ್ದಾರೆ. ಅದೆಲ್ಲ ಗೊತ್ತಿದ್ದೂ ಮುಜಿಕ ಸರ್ಕಾರಿ ರಕ್ಷಣೆ ಪಡೆಯೋದಿಲ್ಲ. ಬುಲೆಟ್ ಪ್ರೂಫ್ ಧರಿಸೋದಿಲ್ಲ. ಇಬ್ಬರು ಪೊಲೀಸರು ನೆಪಕ್ಕಷ್ಟೇ ಸ್ವಲ್ಪ ಹೊತ್ತು ರಕ್ಷಣೆ ಕೊಟ್ಟು ಹೋಗುತ್ತಾರೆ. ಉಳಿದಂತೆ ಅವರನ್ನು ಕಾಯೋದು ಮೂರು ಕಾಲಿನ ನಾಯಿ! 'ಸಾಕಿದ ನಾಯಿಯೇ ನನಗೆ ಸೆಕ್ಯುರಿಟಿ' ಎನ್ನುವ ಮುಜಿಕ ಅದಕ್ಕೆ ಹಾಕುವ ಬಿಸ್ಕೇಟಿಗೆ ಖರ್ಚು ಮಾಡೋದೂ ಸ್ವಂತ ದುಡ್ಡನ್ನೇ.

ರಾಷ್ಟ್ರಾಧ್ಯಕ್ಷ ಅಂದಮೇಲೆ ಸರ್ಕಾರಿ ಬಂಗಲೆ ಇದ್ದೇ ಇರುತ್ತೆ. ಆದರೆ, ಮುಜಿಕ 2010ರಿಂದ ಇಲ್ಲಿಯ ತನಕ ಒಂದು ದಿನವೂ ಸರ್ಕಾರಿ ಬಂಗಲೆಯ ಎಸಿ ಸುಖವನ್ನು ಅನುಭವಿಸಿದವರಲ್ಲ. ಇರುವುದಕ್ಕೆ ಸ್ವಂತ ಮನೆಯೇ ಇಲ್ಲದ ಮುಜಿಕಗೆ ಆಶ್ರಯ ನೀಡಿರುವುದು ಹೆಂಡತಿಯ ಮನೆ!

-ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement