ಭಾರತದ ಪರಂಪರೆ ಮತ್ತು ಭಾರತೀಯ
ಭಾರತದ ಇತಿಹಾಸವೆಂದರೆ ಭಾರತೀಯರ ಗುಣ ಸ್ವಭಾವಗಳ ಚರಿತ್ರೆಯೇ ಆಗಿದೆ. ಭಾರತೀಯರು ತೋರಿದ ಶೌರ್ಯ-ಸಾಹಸಗಳು, ಭಕ್ತಿ-ನಿಷ್ಠೆಗಳು, ಪ್ರೀತಿ-ಔದಾರ್ಯಗಳು ಶಿಲಾಬರಹಗಳಲ್ಲಿ, ತಾಮ್ರಪಟಗಳಲ್ಲಿ, ಪುರಾಣ ಕತೆಗಳಲ್ಲಿ ಹಾಗೂ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತವೆ. ಅಂತಹ ಉನ್ನತ ಪೀಳಿಗೆಗೆ ಸೇರಿದ ಇಂದಿನ ಭಾರತೀಯರ ಗುಣಸ್ವಭಾವಗಳಲ್ಲಿ ಕೆಚ್ಚೆದೆಯ ಸಾಹಸ, ಶ್ರದ್ಧಾಭಕ್ತಿಯ ವಿಧೇಯತೆ, ಔದಾರ್ಯದ ಸಮರ್ಪಣೆ, ನಿಃಸ್ವಾರ್ಥ ಪ್ರೇಮ ಇವುಗಳನ್ನು ಕಾಣಲಾಗುತ್ತಿಲ್ಲ.ಆದ್ದರಿಂದ ಭವ್ಯ ಭಾರತದ ಸಾಕಾರಮೂರ್ತಿಗಳಾಗಿ ಭಾರತೀಯರು ಇಂದು ಮಾನವ ನಿರ್ಮಾಣ ಮತ್ತು ದೇಶ ನಿರ್ಮಾಣಕ್ಕೆ ಪಣತೊಡಬೇಕು; ರೈತರಂತೆ ದುಡಿಯುವ, ಯೋಧರಂತೆ ಹೋರಾಡುವ ದಾರ್ಢ್ಯತೆಯನ್ನು ತಳೆಯಬೇಕು.
ವ್ಯಕ್ತಿ ಮತ್ತು ರಾಷ್ಟ್ರದ ಪುರೋಭಿವೃದ್ಧಿಗೆ ಸಾಹಸ, ಶಾಂತಿ, ಉನ್ನತ ಧ್ಯೇಯ, ಅನಂತ ಶಕ್ತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಂಪೂರ್ಣ ವಿಧೇಯತೆ ಅವಶ್ಯಕ. ಭಾರತೀಯರ ಜಾಯಮಾನಕ್ಕೆ ಅಂಟಿಕೊಂಡಿರುವ ಗುಲಾಮರಿಗೆ ಸಹಜವಾದ ಅಸೂಯೆ ಮತ್ತು ಮಾತ್ಸರ್ಯವನ್ನು ತೊಲಗಿಸಿ, ಮಹತ್ಕಾರ್ಯಕ್ಕೆ ನಿಮ್ಮನ್ನು ನೀವು ಅರ್ಪಿಸಿಕೊಳ್ಳಿ. ಯಾರನ್ನೂ ದೂರಬೇಡಿ. ಹೃದಯ ತೆರೆದಿರಲಿ. ಮುಂದಾಳಾಗಿ ನಿಂತರೂ ಸೇವಕರಾಗಿ ದುಡಿಯಿರಿ. ಎಲ್ಲಕ್ಕಿಂತ ಪರಿಶುದ್ಧರಾಗಿ, ನಿಷ್ಠಾವಂತರಾಗಿ. ನಿಮ್ಮ ಭವಿಷ್ಯದಲ್ಲಿ ನಂಬಿಕೆಯಿಡಿ. ನಿಮಗಿಂದು ಬೇಕಾಗಿರುವುದು ಜೀವನ ಸಂಗ್ರಾಮದಲ್ಲಿ ಹೋರಾಡುತ್ತಿರುವ ಯೋಧನ ಕೆಚ್ಚೆದೆಯ ಭಾವ. <
-ಆನಂದ ಎಸ್.ಎನ್.